ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ʼನಲ್ಲಿ ವಿಧಾನ ಪರಿಷತ್‌ಗೆ ನಾಮನಿರ್ದೇಶನಗೊಳ್ಳಲು ಯಾರು ಶುದ್ಧ ನಡವಳಿಕೆಯುಳ್ಳ ವ್ಯಕ್ತಿಗಳು ಇಲ್ಲವೇ ? ಎಂದು ಜೆಡಿಎಸ್ ತೀಕ್ಷ್ಣವಾಗಿ ಪ್ರಶ್ನಿಸಿದೆ.
ಕರ್ನಾಟಕ ಕಾಂಗ್ರೆಸ್ ಸರ್ಕಾರ ವಿಧಾನ ಪರಿಷತ್ತಿನ 4 ಸದಸ್ಯ ಸ್ಥಾನಗಳಿಗೆ ನಾಮನಿರ್ದೇಶನಕ್ಕೆ ಶಿಫಾರಸ್ಸು ಮಾಡುತ್ತಿರುವ ವ್ಯಕ್ತಿಗಳ ವಿರುದ್ಧ ಹಲವು ಗಂಭೀರ ಆರೋಪಗಳು ಕೇಳಿ ಬರುತ್ತಿವೆ.
ಪರಿಷತ್ ಪಟ್ಟಿಯಲ್ಲಿರುವ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ವಿರುದ್ಧವೂ ಗೌರವಾನ್ವಿತ ರಾಜ್ಯಪಾಲರಿಗೆ ದೂರು ಸಲ್ಲಿಸಲಾಗಿದೆ.
ತುಮಕೂರಿನಲ್ಲಿ ವರದಿಗಾರರಾಗಿದ್ದ ವೇಳೆ ದಿನೇಶ್ ಅಮಿನ್ ಮಟ್ಟು ಪ್ರಭಾವ ಬಳಸಿ ಕಾನೂನು ಬಾಹಿರವಾಗಿ ನಿವೇಶನ ಪಡೆದಿದ್ದು, ಇದಕ್ಕೆ ಸುಳ್ಳು ನಿವಾಸಿ ಪತ್ರ ಸಲ್ಲಿಸಿ ಅಕ್ರಮ ಎಸಗಿದ್ದಾರೆ.
ಕಾಂಗ್ರೆಸ್ ಸರ್ಕಾರದ ಸಾಧನೆಗಳ ಪ್ರಚಾರ ಪಡಿಸಲು ‘ದಿ ಪಾಲಿಸಿ ಫ್ರಂಟ್‘ ಎಂಬ ನೋಂದಣಿಯಾಗದ ಬೇನಾಮಿ ಸಂಸ್ಥೆಗೆ ವಾರ್ಷಿಕ 7.20 ಕೊಟಿ ರೂ. ಗುತ್ತಿಗೆ (ಪಾರದರ್ಶಕ ಕಾಯ್ದೆ ವಿನಾಯಿತಿ) ಕೊಡಿಸಿರುವ ಆರೋಪ, ಸೇರಿದಂತೆ ದಿನೇಶ್ ಅಮಿನ್ ಮಟ್ಟು ವಿರುದ್ಧ ಒಟ್ಟು 3 ಅಕ್ರಮಗಳ ಕುರಿತು ರಾಜ್ಯಪಾಲರಿಗೆ ದೂರು ನೀಡಲಾಗಿದೆ ಎಂದು ಜೆಡಿಎಸ್ ತಿಳಿಸಿದೆ.
ಸಿಎಂ ಸಿದ್ದರಾಮಯ್ಯ ಅವರೇ, ನಿಮ್ಮ ಹೊಗಳು ಭಟ್ಟರು, ಹಿಂಬಾಲಕರು, ಅಶುದ್ಧ ಹಸ್ತರನ್ನು ಬಿಟ್ಟು “ಶುದ್ಧ ಹಸ್ತ”ರನ್ನು ಮೇಲ್ಮನೆಗೆ ನಾಮನಿರ್ದೇಶನ ಮಾಡಿ ಎಂದು ಜೆಡಿಎಸ್ ತಾಕೀತು ಮಾಡಿದೆ.