ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಒಕ್ಕಲಿಗರ ಸಂಘದ ನೂತನ ಅಧ್ಯಕ್ಷರಾಗಿ ಬಿ.ಕೆಂಚಪ್ಪ ಗೌಡರು ಆಯ್ಕೆಯಾಗಿದ್ದಾರೆ.
ರಾಜ್ಯ ಒಕ್ಕಲಿಗರ ಸಂಘದ ಪದಾಧಿಕಾರಿಗಳ ಆಯ್ಕೆಗೆ ಸಂಬಂಧಿಸಿದಂತೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಿ.ಕೆಂಚಪ್ಪ ಗೌಡ, ಉಪಾಧ್ಯಕ್ಷರಾಗಿ ಎಲ್ . ಶ್ರೀನಿವಾಸ್, ಡಾ.ಕೆ.ವಿ.ರೇಣುಕಾಪ್ರಸಾದ್, ಪ್ರಧಾನ ಕಾರ್ಯದರ್ಶಿಯಾಗಿ ಟಿ.ಕೋನಪ್ಪರೆಡ್ಡಿ, ಖಜಾಂಚಿಯಾಗಿ ಎನ್.ಬಾಲಕೃಷ್ಣ ಹಾಗೂ ಸಹಾಯಕ ಕಾರ್ಯದರ್ಶಿಯಾಗಿ ಆರ್.ಹನುಮಂತರಾಯಪ್ಪ ಅವರು ಚುನಾಯಿತರಾಗಿದ್ದಾರೆ ಎಂದು ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೆಂಚಪ್ಪಗೌಡರ ನೇತೃತ್ವದ ರಾಜ್ಯ ಒಕ್ಕಲಿಗರ ಸಂಘ ಮತ್ತೆ ಅಧಿಕಾರಕ್ಕೆ ಬರಲು ಪ್ರಮುಖ ಕಾರಣ ಒಕ್ಕಲಿಗ ಸಂಘದ ನಿರ್ದೇಶಕರಾದ ಬೇತೂರು ಜೆ. ರಾಜು ಹಾಗೂ ಇವರ ತಂಡ ತೆರೆ ಮರೆಯಲ್ಲಿ ಸಾಕಷ್ಟು ಕೆಲಸ ಮಾಡಿದ್ದರಿಂದಾಗಿ ಕೆಂಚಪ್ಪ ಗೌಡರು ಮತ್ತೆ ಅಧಿಕಾರ ಹಿಡಿದಿದ್ದಾರೆ. ಈ ಕಾರ್ಯಕ್ಕಾಗಿ ಜೆ ರಾಜು ಮತ್ತು ಅವರ ತಂಡದವರನ್ನು ಕೆಂಚಪ್ಪ ಗೌಡರು ಅಭಿನಂದಿಸಿದ್ದಾರೆ.
ಅಧ್ಯಕ್ಷ ಗಾದಿಗಾಗಿ ನಡೆದ ಕಾರ್ಯಾಚರಣೆ-
ರಾಜ್ಯ ಒಕ್ಕಲಿಗರ ಸಂಘಕ್ಕೆ ಕಳೆದ ಮೂರು ವರ್ಷದಲ್ಲಿ 4ನೇ ಬಾರಿ ಅಧ್ಯಕ್ಷರು ಬದಲಾಗಿದ್ದಾರೆ. ಕೆ.ಆರ್.ರಸ್ತೆಯ ಸಂಘದ ಕೇಂದ್ರ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆಯಾದರು.
ಸಂಘದ ಚುನಾವಣೆಯಲ್ಲಿ ಡಿಸಿಎಂ ಡಿಕೆಶಿ ಬೆಂಬಲಿತ ಕೆಂಚಪ್ಪಗೌಡ 21 ಸದಸ್ಯರ ಮೂಲಕ ಅಧ್ಯಕ್ಷರಾಗಿ ಆಯ್ಕೆಯಾದರೆ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬೆಂಬಲಿತ ಡಾ.ಅಂಜಿನಪ್ಪಗೆ 14 ಸದಸ್ಯರು ಬೆಂಬಲ ವ್ಯಕ್ತಪಡಿಸಿದ್ದರು.
ಶಾಸಕ ಸಿ.ಎನ್.ಬಾಲಕೃಷ್ಣ ಸಂಘದ ಹಾಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. 2021ರ ಡಿ.15ರಂದು ಸಂಘದ 35 ನಿರ್ದೇಶಕರ ಆಯ್ಕೆಗೆ ಚುನಾವಣೆ ನಡೆಯಿತು. 2022ರ ಜ.5ರಂದು ಸಂಘದ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆದಿತ್ತು. ಈ ವೇಳೆ ಸಂಘದ ಆಧ್ಯಕ್ಷ ಸ್ಥಾನಕ್ಕೆ ಬಾಲಕೃಷ್ಣ ಮತ್ತು ಕೆಂಚಪ್ಪಗೌಡ ಬಣಗಳ ನಡುವೆ ತೀವ್ರ ಪೈಪೋಟಿ ಏರ್ಪಟಿತ್ತು. ಅಂತಿಮವಾಗಿ 19 ಮತ ಪಡೆದ ಬಾಲಕೃಷ್ಣ ಬಣ ಅಧಿಕಾರಕ್ಕೇರಿತು. ಮೊದಲ ಬಾರಿ ಅಧ್ಯಕ್ಷರಾಗಿ ಶಾಸಕ ಸಿ.ಎನ್.ಬಾಲಕೃಷ್ಣ ಒಂದೂವರೆ ವರ್ಷ ಕಾಲ ಕಾರ್ಯನಿರ್ವಹಿಸಿದ್ದನ್ನು ಸ್ಮರಿಸಬಹುದಾಗಿದೆ.
ಅನಿರೀಕ್ಷಿತ ಬೆಳವಣಿಗೆಯಲ್ಲಿ ಸಂಘದ ಅಧ್ಯಕ್ಷ ವಿರುದ್ಧ ಅವಿಶ್ವಾಸ ಮಂಡನೆ ಮಂಡಿಸಿದ್ದ ಬಿ. ಕೆಂಚಪ್ಪಗೌಡ ಬಣ, ಸಿಟಿ ಸಿವಿಲ್ ಕೋರ್ಟ್ಗೆ ಹೋಗಿದ್ದರು. ಕಾನೂನಿನ ಪ್ರಕಾರ ಪದಾಧಿಕಾರಿಗಳ ಆಯ್ಕೆಗೆ ಸಿಟಿ ಸಿವಿಲ್ ಕೋರ್ಟ್ ತೀರ್ಪು ನೀಡಿತ್ತು. ಅದರಂತೆ, ನೂತನ ಅಧ್ಯಕ್ಷ, ಎರಡು ಉಪಾಧ್ಯಕ್ಷ ಹುದ್ದೆ, ಖಜಾಂಚಿ, ಕಾರ್ಯದರ್ಶಿ ಮತ್ತು ಉಪ ಕಾರ್ಯದರ್ಶಿ ಹುದ್ದೆಗೆ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆದಿತ್ತು.
ಇದರಲ್ಲಿ ಕೆಂಚಪ್ಪಗೌಡ ಬಣ ಗೆಲುವಿನ ನಗೆ ಬೀರಿತ್ತು. ಅಧಿಕಾರದ ಆಸೆಗಾಗಿ ಮತ್ತೆ ಕಿತ್ತಾಟ ನಡೆದು ಆರ್. ಹನುಮಂತರಾಯಪ್ಪ 3ನೇ ಬಾರಿ ಅಧ್ಯಕ್ಷರಾದರು. ಅವರು ಅನಿರೀಕ್ಷಿತ ಬೆಳವಣಿಗೆಯಲ್ಲಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಬೇಕಾಯಿತು. 4ನೇ ಬಾರಿ ಸಿ.ಎನ್.ಬಾಲಕೃಷ್ಣ ಸಂಘಕ್ಕೆ ಅಧ್ಯಕ್ಷರಾದರು. ಕೆಲ ತಿಂಗಳ ಕಾಲ ಅಧಿಕಾರ ನಡೆಸಿದರು. ಈ ವೇಳೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ರ್ನಿಣಯ ಮಂಡಿಸಿ ನಡೆದ ಪದಾಧಿಕಾರಿಗಳ ಆಯ್ಕೆ ಚುನಾವಣೆಯಲ್ಲಿ ಬಿ. ಕೆಂಚಪ್ಪಗೌಡ ಸಂಘಕ್ಕೆ ಮತ್ತೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.