ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮಕ್ಕಳಲ್ಲಿ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾವನ್ನು ಪರಿಣಾಮಕಾರಿಯಾಗಿ ಬೆಳೆಸುವುದರಿಂದ ಭವಿಷ್ಯದ ಶಿಕ್ಷಣಕ್ಕೆ ಸಹಕಾರಿಯಾಗುತ್ತದೆ ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು.
ನಗರದ ಡಯಟ್‌ನಲ್ಲಿ ಎಫ್.ಎಲ್.ಎನ್ ನಲ್ಲಿ ಶೇ.೧೦೦ ರಷ್ಟು ಪ್ರಗತಿ ಸಾಧಿಸಿದ ಚಿತ್ರದುರ್ಗ ತಾಲೂಕಿನ ಶಾಲಾ ಶಿಕ್ಷಕರಿಗೆ ಈಚೆಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಿ ಮಾತನಾಡಿದ ಅವರು ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಓದು, ಬರಹ ಸಾಮರ್ಥ್ಯ ಬೆಳೆಸಿ ಭಾಷಾ ಕೌಶಲಗಳಲ್ಲಿ ಸಾಮರ್ಥ್ಯ ಹೆಚ್ಚಿಸಬೇಕು.
ಇದರಿಂದ ಉನ್ನತ ಶಿಕ್ಷಣ ಪಡೆಯಲು ಸುಲಭವಾಗುತ್ತದೆ ಎಂದರು. ಶಿಕ್ಷಕರಿಗೆ ಪ್ರೇರಣೆ ನೀಡಲು ಬುನಾದಿ ಸಾಕ್ಷರತೆ, ಸಂಖ್ಯಾಜ್ಞಾನದಲ್ಲಿ ೧೦೦ ರಷ್ಟು ಸಾಧನೆ ಮಾಡಿರುವ ಪ್ರತಿ ತಾಲೂಕಿನಿಂದ ೫ ಶಾಲೆಗಳನ್ನು ಆಯ್ಕೆ ಮಾಡಿದ್ದು ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಲಾಗುತ್ತಿದೆ. ಪ್ರತಿ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಯ ಎಲ್ಲಾ ತಾಲೂಕಿನಿಂದ ಸಾಧನೆ ಮಾಡಿರುವ ಶಾಲೆಗಳನ್ನು ಗುರುತಿಸಿ ಡಯಟ್ ವತಿಯಿಂದ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು ಎಂದರು.
ಹಿರಿಯ ಉಪನ್ಯಾಸಕಿ ಎಚ್.ಗಿರಿಜ, ಉಪನ್ಯಾಸಕರಾದ ಯು.ಸಿದ್ದೇಶಿ, ಎಸ್.ಬಸವರಾಜು, ಬಿ.ಆರ್.ಸಿ ತಿಪ್ಪೇರುದ್ರಪ್ಪ, ಶ್ರೀನಿವಾಸ್, ಬಿ.ಆರ್.ಪಿ ಖಲಂದರ್, ಸಿ.ಆರ್.ಪಿ ವರಲಕ್ಷ್ಮಿ, ಹಲಗಪ್ಪನ ಹಟ್ಟಿ ಮತ್ತು ಕೆಳಗಳಹಟ್ಟಿ ಸ.ಕಿ.ಪ್ರಾ.ಶಾಲೆ ಸಿಂಗಾಪುರ ಮತ್ತು ಮಲ್ಲಾಪುರ ಸ.ಹಿ.ಪ್ರಾ.ಶಾಲೆ ಶಿಕ್ಷಕರು ಇದ್ದರು.