ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ನಟ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ‘ಕಾಂತಾರ-1′ ಚಿತ್ರತಂಡಕ್ಕೆ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಲೇ ಇವೆ.
ಕಳೆದ 2 ದಿನಗಳ ಹಿಂದೆ ಸಹ ಕಲಾವಿದ ವಿಜು ವಿಕೆ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಬೆನ್ನಲ್ಲೇ ಇದೀಗ ಚಿತ್ರೀಕರಣದ ವೇಳೆ ಶನಿವಾರ ದೋಣಿ ಮಗುಚಿ ಬಿದ್ದ ಘಟನೆ ಸಂಭವಿಸಿದೆ.
ಶಿವಮೊಗ್ಗ ಜಿಲ್ಲೆಯ ಮಾಸ್ತಿಕಟ್ಟೆಯ ಮಾಣಿ ಜಲಾಶಯದಲ್ಲಿ ಕಾಂತಾರ-1 ಚಿತ್ರದ ಕೊನೆ ಹಂತದ ಚಿತ್ರೀಕರಣ ಶನಿವಾರ ನಡೆಯುತ್ತಿತ್ತು. ಈ ವೇಳೆ ರಿಷಬ್ ಶೆಟ್ಟಿ ಸೇರಿ 30 ಜನ ಕಲಾವಿದರಿದ್ದ ದೋಣಿ ಇದ್ದಕ್ಕಿದ್ದಂತೆ ಮಗುಚಿ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕಲಾವಿದರು, ತಂತ್ರಜ್ಞರು ಎಲ್ಲರೂ ಈಜಿ ದಡ ಸೇರಿದ್ದಾರೆ ಎನ್ನಲಾಗಿದೆ.
ಬೋಟ್‌ನಲ್ಲಿದ್ದ ಚಿತ್ರ ತಂಡದವರು ಬಚಾವಾದರೂ ಕ್ಯಾಮೆರಾ ಇನ್ನಿತರೆ ಸೆಟ್ ಪ್ರಾಪರ್ಟಿಗಳು ನೀರು ಪಾಲಾಗಿದೆ ಎನ್ನಲಾಗಿದೆ.
ದೋಣಿ ಮುಗುಚಿದ ಘಟನೆ ಬೆನ್ನಲ್ಲೇ ಚಿತ್ರೀಕರಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಸಲಾಗಿದೆ. ಒಂದರ ಹಿಂದೆ ಒಂದರಂತೆ ಘಟನೆ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಚಿತ್ರತಂಡ ಇದೀಗ ಭಯಭೀತಗೊಂಡಿದೆ.
ನಟ, ನಿರ್ದೇಶಕ ರಿಷಬ್ ಶೆಟ್ಟಿಗೆ ಮಂಗಳೂರಿನ ಕದ್ರಿ ಬಾರೆಬೈಲ್ ಪಂಜುರ್ಲಿ ದೈವ ಈ ಹಿಂದೆ ಎಚ್ಚರಿಕೆ ನೀಡಿತ್ತು. ಅದರ ಬೆನ್ನಲ್ಲೇ ಮತ್ತಷ್ಟು ಅವಘಡಗಳ ಸಂಭವಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ನೋಟಿಸ್: ಚಾಪ್ಟರ್-1 ಕಾಂತಾರ ಶೂಟಿಂಗ್ ವೇಳೆ ಸಾಲು ಸಾಲು ಅವಘಡಗಳು ಸಂಭವಿಸುತ್ತಿದ್ದು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ಚಿತ್ರತಂಡಕ್ಕೆ ನೊಟೀಸ್ ನೀಡಲು ಮುಂದಾಗಿದೆ ಎನ್ನಲಾಗಿದೆ.
ಚಿತ್ರತಂಡ, ಶೂಟಿಂಗ್ಗೆ ಎಲ್ಲ ರೀತಿಯ ಪರವಾನಗಿಗಳನ್ನು ತೆಗೆದುಕೊಂಡಿದೆಯೇ, ಚಿತ್ರೀಕರಣದ ವೇಳೆ ಅಗತ್ಯ ಭದ್ರತಾ ಎಚ್ಚರಿಕೆಗಳನ್ನು ವಹಿಸಿದೆಯೇ ಎಂದು ಪರೀಕ್ಷಿಸಲು ಶಿವಮೊಗ್ಗ ಜಿಲ್ಲಾಧಿಕಾರಿ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.