ಚಂದ್ರವಳ್ಳಿ ನ್ಯೂಸ್, ಮಂಡ್ಯ:
ಅಬಕಾರಿ ಇಲಾಖೆಯಲ್ಲಿ ಲಂಚದ ಸದ್ದು ಕೇಳಿ ಬರುತ್ತಿದೆ. ಪ್ರಸ್ತುತ CL7 ಲೈಸೆನ್ಸ್ ನೀಡಲು 60 ಲಕ್ಷ ಲಂಚಕ್ಕೆ ಬೇಡಿಕೆಯಿಟ್ಟ ಗಂಭೀರ ಆರೋಪ ಮಂಡ್ಯ ಅಬಕಾರಿ ಇಲಾಖೆಯ ಅಬಕಾರಿ ಡಿಸಿ ವಿರುದ್ಧ ಕೇಳಿ ಬಂದಿದೆ.
ಮಂಡ್ಯ ಅಬಕಾರಿ ಡಿಸಿ ಆಗಿರುವ ನಾಗಾಶಯನ ಸದಾ ಒಂದಿಲ್ಲೊಂದು ವಿವಾದಗಳಿಂದ ಸುದ್ದಿಯಾಗುತ್ತಲೆ ಇರುತ್ತಾರೆದೆ. ಚಿತ್ರದುರ್ಗ ಅಬಕಾರಿ ಡಿಸಿ ಆಗಿದ್ದ ಸಂದರ್ಭದಲ್ಲೂ ಹಲವು ಆರೋಪಿಗಳು ಇವರ ವಿರುದ್ಧ ಕೇಳಿ ಬಂದಿದ್ದವು. ಮಂಡ್ಯದ ಅಬಕಾರಿ ಜಿಲ್ಲಾ ಅಧಿಕಾರಿ ನಾಗಾಶಯನ ಅವರು CL7 ಲೈಸೆನ್ಸ್ ನೀಡಲು 60 ಲಕ್ಷ ಲಂಚಕ್ಕೆ ಬೇಡಿಕೆಯಿಟ್ಟ ಆರೋಪ ಎದುರಿಸುತ್ತಿದ್ದು ಕೆಆರ್ ಪೇಟೆಯ ಸುಂದರ್ ಎಂಬುವವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಕೆಆರ್ ಪೇಟೆಯ ಸೋಮನಹಳ್ಳಿ ಗ್ರಾಮದಲ್ಲಿ MBS ಬೋರ್ಡಿಂಗ್ & ಲಾಡ್ಜಿಂಗ್ ಹೆಸರಿನ ಕಟ್ಟಡ ನಿರ್ಮಿಸಿರುವ ಸುಂದರ್ ತಮ್ಮ ತಂದೆಯ ಹೆಸರಲ್ಲಿ CL7 ಪರವಾನಗಿ ಪಡೆಯಲು ಅರ್ಜಿ ಸಲ್ಲಿಸಿದ್ದರು.
ಬ್ಯಾಂಕಿನಿಂದ ಸಾಲ ಪಡೆದು ಕಾನೂನು ಬದ್ಧವಾಗಿ 1.20 ಕೋಟಿ ವೆಚ್ಚದಲ್ಲಿ ಕಟ್ಟಡ ಕಟ್ಟಲಾಗಿದೆ. ಅಗತ್ಯ 11 ದಾಖಲೆ ಸಮೇತ ವರ್ಷದ ಹಿಂದೆಯೇ ಅರ್ಜಿ ಸಲ್ಲಿಸಿದ್ದರೂ ಅರ್ಜಿ ತಿರಸ್ಕೃತ ಮಾಡಲಾಗಿದೆ.
ಅಬಕಾರಿ ಜಿಲ್ಲಾ ಅಧಿಕಾರಿ(ಡಿಸಿ) ಅವರ ಅಧೀನ ಅಧಿಕಾರಿಗಳಾದ ಇನ್ಸ್ಪೆಕ್ಟರ್, ಡೆಪ್ಯೂಟಿ ಸೂಪರ್ಡೆಂಟ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಶಿಫಾರಸ್ಸು ಮಾಡಿದರೂ ವಿನಾಕಾರಣ ಡಿಸಿ ತಡೆಹಿಡಿದಿದ್ದರು ಎನ್ನಲಾಗಿದೆ.
ಅಷ್ಟೇ ಅಲ್ಲ ನಾಲ್ಕು ವಾರದೊಳಗೆ ನಿಯಮಾನುಸಾರ ಕ್ರಮವಹಿಸುವಂತೆ ಹೈಕೋರ್ಟ್ ನಿರ್ದೇಶನ ನೀಡದರೂ, ಅಬಕಾರಿ ಅಧಿಕಾರಿಗಳು ಅನುಮತಿ ನೀಡುವ ಕುರಿತು ತಲೆಕೆಡಿಸಿಕೊಂಡಿಲ್ಲ.
ಅಧಿಕಾರಿಗಳು ಕೇಳಿದಷ್ಟು ಲಂಚ ಕೊಡದೆ ಇರುವುದೇ ಇಷ್ಟಕ್ಕೆಲ್ಲ ಕಾರಣ ಅಂತ ಅರ್ಜಿದಾರ ಸುಂದರ್ ಆರೋಪಿಸಿದ್ದಾರೆ. CL7 ಲೈಸೆನ್ಸ್ ನೀಡಲು ಮಂಡ್ಯ ಅಬಕಾರಿ ಡಿಸಿ ನಾಗಾಶಯನ 60 ಲಕ್ಷ ಲಂಚ ಕೇಳಿದ್ದಾರಂತೆ. ಇಷ್ಟೇ ಅಲ್ಲದೇ ಲೈಸೆನ್ಸ್ ಸಿಗಬೇಕಾದರೆ ಯಾವ ರೀತಿ ಜಾತಿ ರಾಜಕಾರಣ ಮಾಡಬೇಕು ಎಂಬ ಕಿವಿ ಮಾತನ್ನು ಕೂಡ ಅವರು ಹೇಳಿಕೊಟ್ಟಿದ್ದಾರಂತೆ.
ಜೆಡಿಎಸ್‌ನವರಿಗಾದರೆ ಲೈಸೆನ್ಸ್ ಸಿಗುವುದು ಕಷ್ಟ. ಕುರುಬ ನಾಯಕರನ್ನು ಸಿಎಂ ಸಿದ್ದರಾಮಯ್ಯ, ಅವರ ಮಗ ಯತೀಂದ್ರ ಬಳಿಗೆ, ಒಕ್ಕಲಿಗ ನಾಯಕರನ್ನು ಚಲುವರಾಯಸ್ವಾಮಿ ಬಳಿಗೆ ಕರೆದುಕೊಂಡು ಹೋಗಿ ಹೇಳಿಸಿ ಆಗ ಲೈಸೆನ್ಸ್ ಸಿಗುತ್ತದೆ ಎಂದು ಡಿಸಿ ನಾಗಾಶಯನ ಅವರು ಸುಂದರ್ ಅವರಿಗೆ ಪೋನ್ ಕರೆ ಮೂಲಕ ಹೇಳಿದ್ದಾರೆ ಎನ್ನಲಾಗಿದೆ.
ನಾಗಾಶಯನ ಮಾತನಾಡಿರುವ ಆಡಿಯೋವನ್ನು ಸುಂದರ್ ಅವರು ಲೋಕಾಯುಕ್ತಕ್ಕೆ ನೀಡಿ ದೂರು ನೀಡಿದ್ದಾರೆ.
ಭ್ರಷ್ಟಚಾರದ ಆಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರು ಅಬಕಾರಿ ಡಿಸಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಅಬಕಾರಿ ಡಿಸಿ ವಿರುದ್ಧ ಇಲಾಖೆ ಕಾರ್ಯದರ್ಶಿಗೆ ದೂರು ನೀಡಲು ತಯಾರಿ ನಡೆಸಿದ್ದಾರೆ ಎನ್ನುವ ಮಾಹಿತಿ ಮಂಡ್ಯ ಜಿಲ್ಲೆಯಲ್ಲಿ ಹರಿದಾಡುತ್ತಿದೆ.
ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಈ ಕುರಿತು ಮಾತನಾಡಿ, ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ. ಲೈಸೆನ್ಸ್ ಪ್ರಕರಣ ಈಗಾಗಲೇ ಕೋರ್ಟ್ನಲ್ಲಿದೆ. ಡಿಸಿಯವರು ಆ ಕುರಿತು ಮಾತನಾಡುವ ಅವಶ್ಯಕತೆ ಇರಲಿಲ್ಲ. ಅಬಕಾರಿ ಡಿಸಿ ಮಾತನಾಡಿದ್ದರೆ ವರದಿ ತರಿಸಿಕೊಂಡು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವಂತೆ ಇಲಾಖೆ ಮುಖ್ಯಕಾರ್ಯದರ್ಶಿಗಳಿಗೆ ಸೂಚಿಸುತ್ತೇನೆ ಎಂದು ತಿಳಿಸಿದ್ದಾರೆ.
ಅಬಕಾರಿ ಡಿಸಿ ಅವರು ಮುಖ್ಯಮಂತ್ರಿಗಳು, ಮುಖ್ಯಮಂತ್ರಿ ಪುತ್ರ, ಸಚಿವರ ಹೆಸರನ್ನು ಹೇಳಬಾರದಿತ್ತು. ಸಂಪೂರ್ಣ ಮಾಹಿತಿ ಪಡೆದು ಕ್ರಮಕೈಗೊಳ್ಳಲು ಸೂಚಿಸುತ್ತೇನೆ ಎಂದು ಸಚಿವರು ತಿಳಿಸಿದ್ದಾರೆ.

