ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಹೊರ ಗುತ್ತಿಗೆ ರದ್ದುಪಡಿಸಿ ಪೌರ ಕಾರ್ಮಿಕರನ್ನು ನೇರ ನೇಮಕಾತಿ ಮಾಡಿಕೊಂಡು ಸರ್ಕಾರ ಸಂಬಳ ನೀಡಬೇಕೆಂದು ಪೌರ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ನಾರಾಯಣ್ ಒತ್ತಾಯಿಸಿದರು.
ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹೊರ ಗುತ್ತಿಗೆ ರದ್ದುಪಡಿಸುವಂತೆ ೨೦೧೭ ರಿಂದ ಹೋರಾಟ ನಡೆಸುತ್ತಿದ್ದೇವೆ. ಪೌರ ಕಾರ್ಮಿಕರು, ವಾಹನ ಚಾಲಕರು, ಗಟಾರದಲ್ಲಿ ಕೆಲಸ ಮಾಡುವವರು, ಕಸ ವಿಂಗಡಿಸುವವರು ಹೀಗೆ ಹಲವು ಬಗೆಯ ಪೌರ ಕಾರ್ಮಿಕರು ಆರೋಗ್ಯ ಹಾಗೂ ಜೀವನ ಭದ್ರತೆಯಿಲ್ಲದೆ ಕೆಲಸ ಮಾಡುತ್ತಿದ್ದಾರೆ.
ರಾಜ್ಯದಲ್ಲಿ ೩೯ ಸಾವಿರ ಪೌರ ಕಾರ್ಮಿಕರಿದ್ದು, ೨೯೩೦೦ ಪೌರ ಕಾರ್ಮಿಕರನ್ನು ಖಾಯಂಗೊಳಿಸಲಾಗಿದೆ. ಉಳಿದ ಪೌರ ಕಾರ್ಮಿಕರನ್ನು ಯಾವಾಗ ನೇಮಕ ಮಾಡುತ್ತೀರೆಂಬುದು ಸರ್ಕಾರಕ್ಕೆ ನಮ್ಮ ಪ್ರಶ್ನೆ? ಬೇರೆ ಜಿಲ್ಲೆಗಳಲ್ಲಿ ಪೌರ ಕಾರ್ಮಿಕರಿಗೆ ಸರ್ಕಾರದಿಂದ ನಿವೇಶನ ವಿತರಿಸಲಾಗಿದೆ.
ಅದೇ ರೀತಿ ಚಿತ್ರದುರ್ಗ ಜಿಲ್ಲೆಯಲ್ಲಿಯೂ ಪೌರ ಕಾರ್ಮಿಕರಿಗೆ ನಿವೇಶನಗಳು ಸಿಗಬೇಕು. ಕಸ ಗುಡಿಸುವವರು ಹಾಗೂ ಘಟಾರದಲ್ಲಿ ಕೆಲಸ ಮಾಡುವವರನ್ನು ಸರ್ಕಾರ ತುಚ್ಚವಾಗಿ ಕಾಣುತ್ತಿರುವುದು ಸರಿಯಲ್ಲ. ಒಳ ಮೀಸಲಾತಿ ಜಾರಿಯಾಗುವತನಕ ನೇಮಕಾತಿಯನ್ನು ತಡೆಹಿಡಿದಿದ್ದೇವೆಂಬ ನೆಪ ಹೇಳುವುದು ಬೇಡ. ತುರ್ತಾಗಿ ಪೌರ ಕಾರ್ಮಿಕರನ್ನು ಖಾಯಂಗೊಳಿಸಬೇಕೆಂಬುದು ನಮ್ಮ ಬೇಡಿಕೆ ಎಂದರು.
ಕೆ.ಬಿ.ಓಬಳೇಶ್ ಮಾತನಾಡಿ ಹಿಂದಿನ ಬಿಜೆಪಿ. ಈಗಿನ ಕಾಂಗ್ರೆಸ್ ಸರ್ಕಾರಗಳು ನಮ್ಮ ಹೋರಾಟಕ್ಕೆ ಮಣಿದು ಎಲ್ಲಾ ಪೌರ ಕಾರ್ಮಿಕರನ್ನು ಖಾಯಂಗೊಳಿಸುವುದಾಗಿ ಭರವಸೆ ಕೊಟ್ಟಿದ್ದವು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದಂತೆ ನಡೆದುಕೊಳ್ಳಲಿ. ಎರಡು ವರ್ಷಗಳಾದರೂ ನಮ್ಮ ಬೇಡಿಕೆ ಈಡೇರಿಲ್ಲ. ಕಸ ವಿಂಗಡಣೆ ಮಾಡುವವರು ಹಾಗೂ ಚರಂಡಿ ಕೆಲಸ ಮಾಡುವವರ ಸ್ಥಿತಿ ನೋಡುವಂತಿಲ್ಲ. ಜಿಲ್ಲೆಯಲ್ಲಿ ಪೌರ ಕಾರ್ಮಿಕರನ್ನು ಕಸಕ್ಕಿಂತ ಕಡೆಯಾಗಿ ಕಾಣಲಾಗುತ್ತಿದೆ. ರಾಜ್ಯ ಸರ್ಕಾರ ತುರ್ತಾಗಿ ಕ್ರಮ ಕೈಗೊಳ್ಳಬೇಕು.
೨೦೧೮ ರಿಂದ ಇಲ್ಲಿಯವರೆಗೂ ರಾಜ್ಯದಲ್ಲಿ ೧೪೮ ಪೌರ ಕಾರ್ಮಿಕರು ನಿಧನರಾಗಿದ್ದಾರೆ. ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ೧೦೧೦ ಪೌರ ಕಾರ್ಮಿಕರು ಚಿತ್ರದುರ್ಗ ಜಿಲ್ಲೆಯಲ್ಲಿದ್ದಾರೆ. ನಮ್ಮ ನ್ಯಾಯಯುತವಾದ ಬೇಡಿಕೆಗಳು ಶೀಘ್ರವೇ ಈಡೇರಬೇಕು ಎಂದು ಮನವಿ ಮಾಡಿದರು.
ಡಿ.ದುರುಗೇಶ್, ಜಗದೀಶ್, ರಾಜಣ್ಣ ಇನ್ನು ಅನೇಕರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.