ಹಿರಿಯೂರು ಹನಿ ನೀರಾವರಿಗೆ ಸಿಎಂ, ಡಿಸಿಎಂ ಹಸಿರು ನಿಶಾನೆ-ಸುಧಾಕರ್

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ತಾಲೂಕಿನ ಐಮಂಗಲ ಹೋಬಳಿಯ ಗೋಕಟ್ಟೆಗಳು ಸೇರಿದಂತೆ 61 ಕೆರೆಗಳು ಹಾಗೂ ಧರ್ಮಪುರ ಹೋಬಳಿಯ 4 ಕೆರೆಗಳು ಸೇರಿದಂತೆ ಒಟ್ಟು 65 ಕೆರೆಗಳಿಗೆ ನೀರು ತುಂಬಿಸುವ ಜೊತೆಗೆ 37644 ಹೆಕ್ಟೇರ್ ಪ್ರದೇಶಕ್ಕೆ ಹನಿ ನೀರಾವರಿ ಮೂಲಕ ನೀರು ಉಣಿಸುವ ಕಾಮಗಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹಸಿರು ನಿಶಾನೆ ತೋರಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ತಿಳಿಸಿದರು.

- Advertisement - 

ನಗರದ ನಗರಸಭೆ ಕಾರ್ಯಾಲಯದ ಸಭಾಂಗಣದಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಬಗ್ಗೆ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.

- Advertisement - 

ಭದ್ರಾ ಮೇಲ್ದಂಡೆ ಯೋಜನೆಯ ಮೂಲ ಅಂದಾಜು ಪಟ್ಟಿಯಲ್ಲಿ ಈ ಮೊದಲು ತಾಲೂಕಿನ ಐಮಂಗಲ ಹೋಬಳಿಯ 11 ಮತ್ತು ಧರ್ಮಪುರ ಹೋಬಳಿಯ 4 ಕೆರೆಗಳು ಸೇರಿ ಒಟ್ಟು 15 ಕೆರೆಗಳಿಗೆ ನೀರು ತುಂಬಿಸುವ ಹಾಗೂ ಐಮಂಗಲ ಹೋಬಳಿಯ 37644 ಹೆಕ್ಟರ್ ಪ್ರದೇಶಕ್ಕೆ ಹನಿ ನೀರಾವಮೂಲಕ ಕೃಷಿಗೆ ನೀರೊದಗಿಸುವ ಯೋಜನೆ ರೂಪಿಸಲಾಗಿತ್ತು.

ಈ ಯೋಜನೆ ಕಾಮಗಾರಿಯ ಶೇ 90 ರಷ್ಟು ಕೆಲಸ ಮುಕ್ತಾಯ ಹಂತ ತಲುಪಿದೆ. ಕಾಮಗಾರಿ ಅನುಷ್ಠಾನ ಹಂತದಲ್ಲಿ ಗ್ರಾವಿಟಿ ಮುಖಾಂತರ ನೀರು ಹರಿಸಲು ಸಾಧ್ಯವಿರುವ ಹಾಗೂ ಮೂಲ ಡಿಪಿಆರ್ ನಲ್ಲಿ ಕೈಬಿಟ್ಟ ಐಮಂಗಲ ಹೋಬಳಿಯ 49 ಕೆರೆಗಳು ಮತ್ತು ಗೋಕಟ್ಟೆಗಳನ್ನು ಸೇರ್ಪಡೆಗೊಳಿಸಿ  ಒಟ್ಟಾರೆಯಾಗಿ ನೀರು ತುಂಬಿಸುವ ಯೋಜನೆಗೆ ಕ್ರಮ ಕೈಗೊಳ್ಳಲಾಗಿದೆ.

- Advertisement - 

ವಿಶ್ವೇಶ್ವರಯ್ಯ ಜಲ ನಿಗಮದ ಮುಖಾಂತರ ನಾಲ್ಕು ಪ್ಯಾಕೇಜ್ ಗಳಲ್ಲಿ ಹಿರಿಯೂರು ತಾಲೂಕು ವ್ಯಾಪ್ತಿಗೆ ರೂ 1421 ಕೋಟಿಗಳ ಟೆಂಡರ್ ಕರೆಯಲಾಗಿರುತ್ತದೆ. ಆದರೆ ಈ ಕೆರೆ ತುಂಬಿಸುವ ಯೋಜನೆಯಲ್ಲಿ ಐಮಂಗಲ ಹೋಬಳಿಯ ಚಿಕ್ಕಸಿದ್ದವ್ವನಹಳ್ಳಿ ಕೆರೆಯನ್ನು ಗುರುತ್ವಾಕರ್ಷಣೆ ಮುಖಾಂತರ ತುಂಬಿಸಲು ಸಾಧ್ಯವಿಲ್ಲದ ಕಾರಣದಿಂದ ಈ ಕೆರೆಯನ್ನು ಈ ಟೆಂಡರ್ ಕಾಮಗಾರಿ ಕೆಲಸದಲ್ಲಿ ಸೇರ್ಪಡೆಗೊಳಿಸುವ ಸಂಬಂಧ ಈಗಾಗಲೇ ವಿಶ್ವೇಶ್ವರ ಜಲ ನಿಗಮದ ಅಧಿಕಾರಿಗಳು ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರೊಂದಿಗೆ ಚರ್ಚಿಸಲಾಗಿದ್ದು ಕಾಮಗಾರಿ ಅನುಷ್ಠಾನದ ವೇಳೆ ಯಾವುದಾದರು ಮೂಲದಲ್ಲಿ ಸೇರ್ಪಡೆಗೊಳಿಸಿ ಕಾಮಗಾರಿ ಅನುಷ್ಠಾನಗೊಳಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.

ಹಿರಿಯೂರು ಕ್ಷೇತ್ರಕ್ಕೆ ಕಳೆದ ಎರಡೂವರೆ ವರ್ಷಗಳಲ್ಲಿ ಸಾಕಷ್ಟು ಅನುದಾನ ನೀಡುವ ಮೂಲಕ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಇದೇ ತಿಂಗಳ ಕೊನೆ ವಾರದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಚಿತ್ರದುರ್ಗ ನಗರಕ್ಕೆ ಭೇಟಿ ನೀಡಲಿದ್ದು ಅಂದು ಭದ್ರಾ ಕಾಮಗಾರಿ ವೀಕ್ಷಣೆ ಮಾಡಲಿದ್ದಾರೆ. ತಾಲೂಕಿನ ಜನರ ಹತ್ತಾರು ವರ್ಷಗಳ ಸಮಸ್ಯೆಗಳನ್ನು ಒಂದೊಂದಾಗಿ ಈಡೇರಿಸುವ ಸಂಕಲ್ಪ ಮಾಡಿದ್ದು ಸಮಗ್ರ ಅಭಿವೃದ್ಧಿಯತ್ತ ತಾಲೂಕನ್ನು ಕೊಂಡೊಯ್ಯಲಾಗುವುದು. ಎಂದರು.

ಈ ಸಂದರ್ಭದಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಕಾರ್ಯಪಾಲಕ ಇಂಜಿನಿಯರ್ ಗಳಾದ ಹರೀಶ್, ಚಂದ್ರಪ್ಪ, ಎಇ ಇ ಗಳಾದ ಚಂದ್ರಶೇಖರ್, ಸಂತೋಷ್, ನಗರಸಭೆ ಪೌರಾಯುಕ್ತ ಎ ವಾಸಿಂ, ನಗರಸಭೆ ಅಧ್ಯಕ್ಷ ಬಾಲಕೃಷ್ಣ, ಉಪಾಧ್ಯಕ್ಷೆ ಮಂಜುಳಾ, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ವಿಠ್ಠಲ ಪಾಂಡುರಂಗ, ಮಮತಾ, ಎಂಡಿ. ಸಣ್ಣಪ್ಪ, ರತ್ನಮ್ಮ, ಜಿಲ್ಲಾ ಗ್ಯಾರಂಟಿ ಸಮಿತಿ ಉಪಾಧ್ಯಕ್ಷ ಖಾದಿ ರಮೇಶ್, ಈರಲಿಂಗೇಗೌಡ, ನಗರಸಭೆ ಸದಸ್ಯಆದ ಮಂಜುನಾಥ್,ಬಿ ಎನ್ ಪ್ರಕಾಶ್,ಶಿವರಂಜನಿ ಯಾದವ್ ಮುಂತಾದವರು ಉಪಸ್ಥಿತರಿದ್ದರು.

 

 

 

Share This Article
error: Content is protected !!
";