ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಆರ್ ಸಿಬಿ ವಿಜಯೋತ್ಸವ ಸಂದರ್ಭದಲ್ಲಿನ ಕಾಲ್ತುಳಿತ ದುರಂತ ಸಂಬಂಧ ಸಿಎಂ, ಡಿಸಿಎಂ ರಾಜೀನಾಮೆಗೆ ಆಗ್ರಹಿಸಿ ಜೂನ್ 17ರಂದು ಬಿಜೆಪಿ ವತಿಯಿಂದ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಲು ರಾಜ್ಯ ಬಿಜೆಪಿ ತೀರ್ಮಾನಿಸಿದೆ ಮಾಜಿ ಸಚಿವ ಗೋಪಾಲಯ್ಯ ತಿಳಿಸಿದು.
ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಮಂಗಳವಾರ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನ್ಯಾಯಕ್ಕಾಗಿ ಬಿಜೆಪಿ ಬೃಹತ್ ಹೋರಾಟ ನಡೆಸಲಿದೆ. ಸಿಎಂ, ಡಿಸಿಎಂ, ಗೃಹ ಸಚಿವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ಮತ್ತು ಸಿಎಂ ನಿವಾಸ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿಧಾನಸೌಧದಲ್ಲಿ ನಡೆದಿದ್ದು ಸನ್ಮಾನ ಕಾರ್ಯಕ್ರಮ ಅಲ್ಲ, ಅವಮಾನ ಮಾಡುವ ಕಾರ್ಯಕ್ರಮ ಎಂದು ಅವರು ಗಂಭೀರ ಆರೋಪ ಮಾಡಿದರು.
ಚಿನ್ನಸ್ವಾಮಿ ಮೈದಾನದಲ್ಲಿ 21 ಗೇಟ್ ಇದ್ದರೂ ಕೇವಲ ನಾಲ್ಕು ತೆರೆಯಲಾಗಿತ್ತು. ಉಳಿದ ಗೇಟ್ ಏಕೆ ತೆರೆದಿರಲಿಲ್ಲ. ವಿಧಾನಸೌಧದ ಮುಂದೆಯೂ ನ ಜಮಾವಣೆಯಾಗಿತ್ತು. ಜನರು ಮರ ಏರಿ ಕುಳಿತಿದ್ರು. ಬೌರಿಂಗ್ ಆಸ್ಪತ್ರೆಯಲ್ಲಿ ಮೊದಲ ಸಾವಾಗಿತ್ತು. ಆ ಮಾಹಿತಿ ಸಿಎಂಗೆ ಲೇಟಾಗಿ ಬಂದಿತ್ತು. ಒಟ್ಟು 11 ಸಾವಾಗಿದೆ. ಸತ್ತ ಅನೇಕ ಕುಟುಂಬ ಸುಸ್ಥಿರ ಕುಟುಂಬ. ಅವರಿಗೆ ಪರಿಹಾರ ಬೇಕಿರಲಿಲ್ಲ. ಅವರಿಗೆ ಬೇಕಾಗಿದ್ದು ತಮ್ಮ ಮಕ್ಕಳು ಎಂದು ಗೋಪಾಲಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಮೃತ ಕುಟುಂಬಗಳ ಶಾಪ ಈ ಸರ್ಕಾರಕ್ಕೆ ತಟ್ಟುತ್ತದೆ. ಈ ಕಾರ್ಯಕ್ರಮ ಮಾಡಬೇಡಿ ಎಂದು ಡಿಸಿಪಿ ಅವರು ಡಿಪಿಎಆರ್ಗೆ ಪತ್ರ ಬರೆದಿದ್ದರು. ಆದರೂ ಏಕಾಏಕಿ ಪೊಲೀಸ್ ಮೇಲೆ ಕ್ರಮ ಮಾಡಿದ್ದು ನಿಮ್ಮ ತಪ್ಪು ಮುಚ್ಚಿಕೊಳ್ಳಲು. ಸಿದ್ದರಾಮಯ್ಯ ನೀವು ರಾಜ್ಯದ ಮುಖ್ಯಮಂತ್ರಿಯೋ? ಅಥವಾ ವಿಧಾನಸೌಧಕ್ಕೆ ಮಾತ್ರ ಮುಖ್ಯಮಂತ್ರಿಯೋ? ನೀವು ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಇದೇ ವಿಷಯ ಇಟ್ಟುಕೊಂಡು ಜೂ.17 ರಂದು ಮಂಗಳವಾರ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ. ಹತ್ತು ಸಾವಿರ ಜನರು ಸೇರಿ ಹೋರಾಟ ಮಾಡುತ್ತೇವೆ. ಈ ಕೆಟ್ಟ ಸರ್ಕಾರಕ್ಕೆ ಕಪ್ಪುಚುಕ್ಕೆ ಬಂದಿದೆ. 11 ಬಲಿ ಆದ ಮೇಲೂ ಮರೆಮಾಚಲು ಜನಗಣತಿ ಮರುಗಣತಿ ಅಂತ ಹೊರಟಿದ್ದಾರೆ. ಮಾಡಿ, ಆದರೆ ಹಿಂದೆ ಖರ್ಚು ಮಾಡಿದ್ದ 165 ಕೋಟಿ ಎಲ್ಲಿಗೆ ಹೋಯ್ತು? ಗಣತಿ ಮಾಡುವಾಗ ಪ್ರತಿಯೊಬ್ಬರ ಮನೆ ಮೇಲೆ ಸ್ಟಿಕ್ಕರ್ ಹಾಕಬೇಕು ಎಂದು ಅವರು ಆಗ್ರಹಿಸಿದರು.
ಪರಿಷತ್ ಸದಸ್ಯ ಎನ್.ರವಿಕುಮಾರ್ ಮಾತನಾಡಿ, ಆರ್ ಸಿಬಿ ವಿಜಯೋತ್ಸವಕ್ಕೆ ಭದ್ರತೆ ಒದಗಿಸಲು ಸಾಧ್ಯವಿಲ್ಲ ಎಂದು ಪೊಲೀಸ್ ಇಲಾಖೆ ಹೇಳಿತ್ತು. ಆದರೆ ಸರ್ಕಾರ ಅದೇ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ವಹಿಸಿದ್ದು ಖಂಡನೀಯ. ಖಡಕ್ ಪೊಲೀಸ್ ಕಮಿಷನರ್ ದಯಾನಂದ್ ಮೇಲೆ ಕ್ರಮ ತೆಗೆದುಕೊಂಡಿದ್ದಾರೆ. ಈ ಎಲ್ಲ ಕೇಸ್ ಮುಚ್ಚಿಹಾಕಲು ಜಾತಿಗಣತಿ ಅಡ್ಡ ತಂದಿದ್ದಾರೆ. ಹಳೆ ವರದಿ ವಾಪಸ್ ಪಡೆಯಲು ಕಾಂಗ್ರೆಸ್ ಹೈಕಮಾಂಡ್ ಹೇಳಿದೆ. ಅದಕ್ಕೆ ಸಿಎಂ ಒಪ್ಪಿ, ವಾಪಸ್ ಪಡೆದರು.
ಕಾಂತರಾಜ್ ವರದಿ ವಾಪಸ್ ಪಡೆಯಲು ರಾಜ್ಯದ ಜನ, ಮಠಾಧೀಶರು ಹೇಳಿದಾಗ ಒಪ್ಪಲಿಲ್ಲ. ಆದರೆ ಪಕ್ಷದ ಹೈಕಮಾಂಡ್ ಹೇಳಿದ ತಕ್ಷಣ ವರದಿ ವಾಪಸ್ ಪಡೆಯುವ ಮೂಲಕ ರಾಜ್ಯದ ಜನರ ಮಾತಿಗೆ ಸಿಎಂ ಗೌರವ ನೀಡಲಿಲ್ಲ ಎಂದು ರವಿಕುಮಾರ್ ಕಿಡಿಕಾರಿದರು. ಸಿಎಂ, ಡಿಸಿಎಂ ಕಾಲ್ತುಳಿತ ಘಟನೆಯ ನೇರ ಹೊಣೆ ಹೊರಬೇಕು. ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೀಗಾಗಿದ್ರೆ, ಸಿದ್ದರಾಮಯ್ಯ ವಿಧಾನ ಸೌಧದ ಗೇಟ್ ಮುರೀತಿದ್ರು, ವಿಧಾನಸೌಧದ ಬಾಗಿಲು ಒದೀತಾ ಇದ್ರು. ನಿಮಗೊಂದು ನ್ಯಾಯ ನಮಗೊಂದು ನ್ಯಾಯಾನಾ ಸಿದ್ದರಾಮಯ್ಯನವರೇ? ಈ ಸರ್ಕಾರದಲ್ಲಿ ಅಧಿಕಾರಿಗಳು ಮಾತ್ರ ತಪ್ಪು ಮಾಡೋದಾ? ಘಟನೆಗೆ ನೇರವಾಗಿ ಸರ್ಕಾರ ಕಾರಣ ಎಂದು ಅವರು ವಾಗ್ದಾಳಿ ಮಾಡಿದರು.