ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಧಿಕಾರಕ್ಕಾಗಿ ಬೇಕಾಬಿಟ್ಟಿಯಾಗಿ ಅವೈಜ್ಞಾನಿಕ ಗ್ಯಾರಂಟಿಗಳನ್ನು ಘೋಷಿಸಿ ಅಧಿಕಾರಕ್ಕೆ ಬಂದು ಜನರನ್ನು ಲೂಟಿ ಹೊಡೆದಿದ್ದೇ ಕರ್ನಾಟಕ ಕಾಂಗ್ರೆಸ್ ಪಕ್ಷದ ಎರಡು ವರ್ಷದ ಸಾಧನೆಯಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ಅಸಮರ್ಥ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜನತೆಯ ವಿಶ್ವಾಸ ಗಳಿಸುವುದು ಬಿಡಿ, ಸ್ವತಃ ತಮ್ಮ ಆಪ್ತ ಸಲಹೆಗಾರರ ವಿಶ್ವಾಸ ಪಡೆಯಲು ಸಾಧ್ಯವಾಗಿಲ್ಲ.
ಸರ್ಕಾರದ ಗ್ಯಾರಂಟಿ ಯೋಜನೆಗಳು ಷರತ್ತುಗಳನ್ನು ಹಾಕುತ್ತ, ಕುಂಟುತ್ತಾ ಸಾಗುತ್ತಿದೆ. ಗ್ಯಾರಂಟಿ ಯೋಜನೆಗಳನ್ನು ನೀಡಿರುವುದರಿಂದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಕರ್ನಾಟಕ ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ. ರಾಜ್ಯ ಸರ್ಕಾರದ ಖಜಾನೆ ಸಹ ಖಾಲಿಯಾಗಿ ಗ್ಯಾರಂಟಿ ಯೋಜನೆಗಳ ಹಣ ಸಹ ಸಮಯಕ್ಕೆ ಸರಿಯಾಗಿ ಬಿಡುಗಡೆಯಾಗುತ್ತಿಲ್ಲ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕೆ ಮೀಸಲಾಗಿದ್ದ ಹಣವನ್ನು ಸಹ ಗ್ಯಾರಂಟಿ ಯೋಜನೆಗೆ ದುರ್ಬಳಕೆ ಮಾಡಿ ದಲಿತ ಸಮುದಾಯಕ್ಕೆ ಅನ್ಯಾಯವೆಸಗಿದೆ.
ರಾಜ್ಯದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ. ಸರ್ಕಾರದ 2 ವರ್ಷದ ಸಾಧನೆ ಕೇವಲ ಬೆಲೆ ಏರಿಕೆ, ಭ್ರಷ್ಟಾಚಾರ ಮತ್ತು ಹಗರಣಗಳು ಮಾತ್ರ. ರಾಜ್ಯದ ಮುಖ್ಯಮಂತ್ರಿಗಳ ರಾಜೀನಾಮೆಗೆ ಈಗ ಮತ ಕೊಟ್ಟ ಮತದಾರರೇ ಕಾಯುತ್ತಿದ್ದಾರೆ…! ಎಂದು ತಿಳಿಸಿದರು.