ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ಕೈಲಾಗದವರು ಮೈ ಪರಚಿಕೊಂಡರಂತೆ” ಕರ್ನಾಟಕ ಕಾಂಗ್ರೆಸ್ ಸರ್ಕಾರದ್ದು ಈಗ ಇದೇ ಪರಿಸ್ಥಿತಿ ! ಎಂದು ಜೆಡಿಎಸ್ ಟೀಕಾ ಪ್ರಹಾರ ಮಾಡಿದೆ.
ಕಾಲ್ತುಳಿತ ದುರಂತ ಘಟನೆಗೆ ಕಾಂಗ್ರೆಸ್ ಸರ್ಕಾರದ ವೈಫಲ್ಯ ಮತ್ತು ಬೇಜಾವ್ದಾರಿಯೇ ಪ್ರಮುಖ ಕಾರಣ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಇದನ್ನು ಮರೆಮಾಚಲು ಜೆಡಿಎಸ್ ಪಕ್ಷದ ಸಾಮಾಜಿಕ ಜಾಲತಾಣದ ಮುಖ್ಯಸ್ಥರ ವಿರುದ್ಧ ಕಾಂಗ್ರೆಸ್ಸಿಗರು ದೂರು ನೀಡಿರುವುದು ಹೇಡಿತನವನ್ನು ಪ್ರದರ್ಶಿಸುತ್ತಿದೆ.
“ಕಾಂಗ್ರೆಸ್ ಪಕ್ಷದ ಸಮಾರಂಭಗಳಿಗೆ ನೀಡುವ ಭದ್ರತೆ, ಆರ್‌ಸಿಬಿ ವಿಜಯೋತ್ಸವ ಮೆರವಣಿಗೆಗೆ ಯಾಕಿಲ್ಲ” ? ಎಂದು ಪ್ರಶ್ನಿಸಿ ವಿಜಯೋತ್ಸವ ಮೆರವಣಿಗೆ ನಡೆಸಬೇಕು ಎಂದು ಜೆಡಿಎಸ್ ಟ್ವೀಟ್ ಮಾಡಿತ್ತು.
ಗುಪ್ತಚರ ಇಲಾಖೆ ವೈಫಲ್ಯ, ಅಗತ್ಯ ಪೂರ್ವಸಿದ್ಧತೆ ಮಾಡಿಕೊಳ್ಳದಿರುವುದು, ಸೂಕ್ತ ಭದ್ರತೆ, ಜನಸಂದಣಿ ನಿರ್ವಹಣೆ ಮಾಡದಿರುವುದು ಸಿದ್ದರಾಮಯ್ಯ ಸರ್ಕಾರದಿಂದಾಗಿರುವ ಗಂಭೀರ ಲೋಪಗಳಾಗಿವೆ. ಆರ್‌ಸಿಬಿ ವಿಜಯೋತ್ಸವದಲ್ಲಿ ಕಾಂಗ್ರೆಸ್ ಪ್ರಚಾರದ ಲಾಭ ಪಡೆಯಲು, ಪೊಲೀಸರ ಎಚ್ಚರಿಕೆಯನ್ನು ಧಿಕ್ಕರಿಸಿ ತರಾತುರಿಯಲ್ಲಿ 2 ಕಡೆಗಳಲ್ಲಿ ಕಾರ್ಯಕ್ರಮ ಆಯೋಜಿಸಿದ್ದೇ 11 ಅಮಾಯಕರ ಸಾವಿಗೆ ಪ್ರಮುಖ ಕಾರಣ ಎಂದು ಜೆಡಿಎಸ್ ದೂರಿದೆ.
ಸ್ವತಃ ಮುಖ್ಯಮಂತ್ರಿಗಳೇ “ಈ ಐತಿಹಾಸಿಕ ಗೆಲುವಿನ ಸಂಭ್ರಮದಲ್ಲಿ ನೀವೂ ಭಾಗಿಯಾಗಿ” ಎಂದು ಟ್ವೀಟ್ ಮಾಡಿದ್ದರು.
ಡಿಸಿಎಂ ಡಿಕೆ ಶಿವಕುಮಾರ್ ಅವರೂ ಸಹ ಕನಕಪುರದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಅಭಿಮಾನಿಗಳು “ಸ್ಟೇಡಿಯಂ ಬಳಿ ಬನ್ನಿ” ಎಂದು ಆಹ್ವಾನ ನೀಡಿದ್ದರು. ಇವರಿಬ್ಬರ ವಿರುದ್ಧ ಕ್ರಮ ಕೈಗೊಳ್ಳಲು ಯಾಕೆ ದೂರು ನೀಡಿಲ್ಲ? ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ ಇವರಿಬ್ಬರ ಬಹಿರಂಗ ಆಹ್ವಾನ ನಂಬಿ ಬಂದಿದ್ದಕ್ಕೆ ಈ ಮಹಾದುರಂತ ಸಂಭವಿಸಿದೆ ಎಂದು ಜೆಡಿಎಸ್ ದೂರಿದೆ.
ಕಾಂಗ್ರೆಸ್‌ನ ಮೂರ್ಖರೇ, ವಿರೋಧ ಪಕ್ಷಗಳು ಇರುವುದೇ ಆಡಳಿತ ಪಕ್ಷ ತಪ್ಪು ಮಾಡಿದಾಗ ಅದನ್ನು ಎಚ್ಚರಿಸಲು ಎಂಬುದನ್ನು ಮರೆಯಬೇಡಿ.
ಸರ್ಕಾರ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರ ತಪ್ಪನ್ನು ಮುಚ್ಚಿಕೊಳ್ಳಲು ಪೊಲೀಸ್ ಅಧಿಕಾರಿಗಳ ತಲೆದಂಡ ಮಾಡಿದ್ದಾಯ್ತು, ಈಗ ವಿಪಕ್ಷಗಳ ವಿರುದ್ಧ ಬೊಟ್ಟು ಮಾಡುತ್ತಿರುವುದು ಕಾಂಗ್ರೆಸ್ಸಿಗರ ಲಜ್ಜೆಗೇಡಿತನ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.