ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಆಗ್ರಹ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
2025-26ನೇ ಸಾಲಿನ ಬಜೆಟ್ ತಯಾರಿಕೆಯಲ್ಲಿ, ಸಾರ್ವಜನಿಕರ ಸಹಭಾಗಿತ್ವ ಮರೆತ ಬಹುತೇಕ ಸ್ಥಳೀಯ ಸಂಸ್ಥೆಗಳ ಪೌರಾಯುಕ್ತರು ಮತ್ತು ಮುಖ್ಯಾಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಕರ್ನಾಟಕ ರಾಜ್ಯ ನಿವೃತ್ತ ಪೌರ ನೌಕರರ ಮತ್ತು ಪೌರಕಾರ್ಮಿಕ ಸಂಘದ ಅಧ್ಯಕ್ಷ ಎಲ್. ನಾರಾಯಣಚಾರ್ ಪೌರಾಡಳಿತ ನಿರ್ದೇಶಕರನ್ನು ವಿನಂತಿಸಿದ್ದಾರೆ.

ಕರ್ನಾಟಕ ಪೌರಸಭೆಗಳ ಲೆಕ್ಕಪದ್ಧತಿ ಮತ್ತು ಬಜೆಟ್ ನಿಯಮಗಳು 2006ರ ಅಧ್ಯಾಯ 24ರಲ್ಲಿ  ಅಯ-ವ್ಯಯ ತಯಾರಿಸುವ ಪೂರ್ವಸಿದ್ಧತೆ ಹಾಗೂ ಅನುಸರಿಸಬೇಕಾದ ಕ್ರಮಗಳ ಬಗ್ಗೆ ವಿವರಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ನಿಯಮಗಳ ಪ್ರಕಾರ ಬಜೆಟ್ ತಯಾರಿಸುವ ಪೂರ್ವದಲ್ಲಿ, ಸ್ಥಳೀಯ ಸಂಸ್ಥೆಗಳು ಕಡ್ಡಾಯವಾಗಿ ಪ್ರತಿವರ್ಷ ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಎರಡು ಬಾರಿ ಸಾರ್ವಜನಿಕರೊಂದಿಗೆ ಬಜೆಟ್ ತಯಾರಿಕೆ ಬಗ್ಗೆ ಪೂರ್ವಭಾವಿ ಸಭೆ ಕರೆದು ಚರ್ಚಿಸತಕ್ಕದ್ದು ಎಂದು ಇರುತ್ತದೆ ಎಂದು ತಿಳಿಸಿದ್ದಾರೆ. ಪ್ರಥಮ ಸಭೆಯಲ್ಲಿ ಹಿಂದಿನ ವರ್ಷದ ಬಜೆಟ್ಟಿನ ಸಾಧಕ ಬಾದಕಗಳು ಮತ್ತು ಸಾಧನೆ ಬಗ್ಗೆ ಸಾರ್ವಜನಿಕರಿಗೆ ವಿವರಿಸಬೇಕು.

ತದನಂತರ ಚಾಲ್ತಿ ವರ್ಷದ  ಸಾಧನೆ ಮತ್ತು ಮುಂದಿನ ವರ್ಷದ ಬಂಡವಾಳ ವೆಚ್ಚಗಳ ಮಾಹಿತಿಯನ್ನು ಸಭೆಯಲ್ಲಿ ಸಾರ್ವಜನಿಕರ ಗಮನಕ್ಕೆ ತಂದು, ಅವರ ಸಲಹೆ ಸೂಚನೆಗಳನ್ನು ಪಡೆಯಬೇಕು. ಪ್ರತಿ ವರ್ಷ ಜನವರಿ-15ರೊಳಗಾಗಿ ಕೌನ್ಸಿಲ್ ಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆಯಬೇಕು. ಸಭೆಯ ಒಪ್ಪಿಗೆ ದೊರೆತ ನಂತರ ಸ್ಥಳೀಯ ಸಂಸ್ಥೆಗಳ ಚುನಾಯಿತ ಮುಖ್ಯಸ್ಥರೊಂದಿಗೆ ಅಂತರ್ಜಾಲ ವೆಬ್ಸೈಟ್ನಲ್ಲಿ ಹಾಗೂ ಅತಿ ಹೆಚ್ಚಿನ ಪ್ರಸಾರ ಹೊಂದಿರುವ ಸ್ಥಳೀಯ ಎರಡು ದಿನ ಪತ್ರಿಕೆಗಳಲ್ಲಿ ಬಜೆಟ್ ನಲ್ಲಿರುವ ಮುಖ್ಯಾಂಶಗಳನ್ನು ಸಾರ್ವಜನಿಕರ ಮಾಹಿತಿಗಾಗಿ ಜಾಹೀರಾತು ಮೂಲಕ ಪ್ರಕಟಣೆ ಮಾಡಬೇಕು.

ಅನುಮೋದಿತ ಬಡ್ಜೆಟ್ ಪತ್ರವನ್ನು ಕೌನ್ಸಿಲ್ ತೀರ್ಮಾನದೊಂದಿಗೆ ಸಕ್ಷಮ ಪ್ರಾಧಿಕಾರಿಗಳಿಗೆ ಸಲ್ಲಿಸಬೇಕು. ಆದರೆ ಬಹುತೇಕ ಕಡೆ ಅಲ್ಲಿನ ಪೌರಾಯುಕ್ತರು ಮತ್ತು ಮುಖ್ಯ ಅಧಿಕಾರಿಗಳು ಕಾಲ ಕಾಲಕ್ಕೆ ನಿಯಮಗಳನ್ನು ಜಾರಿಗೆ ತಾರದೆ ಇರುವುದಕ್ಕೆ ಬಹು ಮುಖ್ಯ ಕಾರಣ, ಅಸಮರ್ಥರನ್ನು ಆಯಾ ಕಟ್ಟಿನ ಜಾಗಗಳಿಗೆ ಸರ್ಕಾರವು ನೇಮಕ ಮಾಡಿರುವುದು ಇದಕ್ಕೆ ಮುಖ್ಯ ಕಾರಣ ಎಂದು ನಾರಾಯಣಾಚಾರ್ ಆರೋಪಿಸಿದ್ದಾರೆ.

ಆದ್ದರಿಂದ ಪೌರಾಡಳಿತ ನಿರ್ದೇಶಕರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿಸಸ್ಥ ಪೌರಾಯುಕ್ತರುಗಳು ಹಾಗೂ ಮುಖ್ಯ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ವಹಿಸಲು ರಾಜ್ಯದ ಎಲ್ಲಾ ಜಿಲ್ಲೆಯ ಯೋಜನಾ ನಿರ್ದೇಶಕರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕಾಗಿ ಅವರು ಕೋರಿದ್ದಾರೆ.

 ಕಳೆದ ಬಾರಿ ನನ್ನ ಮನವಿ ಮೇರೆಗೆ ಜಂಟಿ ನಿರ್ದೇಶಕರು ಹಣಕಾಸು, ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು ಇವರು ರಾಜ್ಯದ ಎಲ್ಲಾ ಯೋಜನಾ ನಿರ್ದೇಶಕರು, ಜಿಲ್ಲಾ ನಗರ ಅಭಿವೃದ್ಧಿ ಕೋಶಗಳಿಗೆ ವರದಿ ಮಾಡಲು ಸೂಚನೆ ನೀಡಿದ್ದನ್ನು ಅವರು ಸ್ಮರಿಸಿದ್ದಾರೆ.

- Advertisement -  - Advertisement -  - Advertisement - 
Share This Article
error: Content is protected !!
";