ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಂತ್ರಿ ಆಗಬೇಕೆಂಬ ಆಸೆ ಇದ್ದರೆ ತಪ್ಪಲ್ಲ. ಎಲ್ಲ ಶಾಸಕರಿಗೆ ಅರ್ಹತೆ ಇದೆ. ಆದರೆ ಶಾಸಕರೆಲ್ಲರೂ ಮಂತ್ರಿ ಆಗಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ವಿಧಾನಸೌಧದಲ್ಲಿ ಮಂಗಳವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ 138 ಚುನಾಯಿತ ಸದಸ್ಯರಿದ್ದು 30 ಅಥವಾ 35 ಮಂದಿ ಸಚಿವರಾಗಬಹುದಷ್ಟೇ ಎಂದು ತಿಳಿಸಿದರು.
ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅವರು ನನ್ನನ್ನು ಕರೆದಿದ್ದಾರೆ. ಯಾವುದೇ ವಿಚಾರದ ಕುರಿತು ಚರ್ಚೆ ಮಾಡಲ್ಲ. ಅವರು ಆರಾಮಾಗಿದ್ದೀರಾ ಎಂದು ಕೇಳಿದರೆ, ನಾನು ಆರಾಮವಾಗಿಯೇ ಇದ್ದೇನೆ ಎಂದು ಹೇಳುತ್ತೇನೆ. ಆದರೆ, ಏನು ಹೇಳುತ್ತಾರೆ ಗೊತ್ತಿಲ್ಲ. ಏನಾದರೂ ಇದ್ದರೆ ಕಿವಿಯಲ್ಲಿ ಹೇಳಬಹುದು, ಅದು ಕೂಡಾ ಗೊತ್ತಿಲ್ಲ ಎಂದು ಹಾಸ್ಯವಾಗಿ ಹೇಳಿದರು.
ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಇಚ್ಛೆ ಪ್ರಕಾರ ಸಿಎಂ ಆಗಬೇಕು ಅಂತ ಕೇಳಿದ್ರೆ ನಾನು ಏನು ಹೇಳುವುದಕ್ಕೆ ಆಗಲ್ಲ. ನಮ್ಮದು ರಾಷ್ಟ್ರೀಯ ಪಕ್ಷ. ಸಿದ್ದರಾಮಯ್ಯ ನಾಯಕತ್ವವನ್ನು ಹೈಕಮಾಂಡ್ ಆಯ್ಕೆ ಮಾಡಿದೆ. ಅವರು ಸಿಎಂ ಆಗಿ ಕೆಲಸ ಮಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಈಗಾಗಲೇ ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿಯಲು ಒಪ್ಪಿಗೆ ಇದೆ ಅಂತ ಹೇಳಿದ್ದಾರೆ ಎಂದು ತಿಳಿಸಿದರು.
ಪಕ್ಷ ಕಟ್ಟುವ ವಿಚಾರಕ್ಕೆ ದೆಹಲಿಗೆ ಹೋಗುತ್ತಿರಬಹುದು. ಇಬ್ಬರೂ ಒಂದಾಗಿ ದೆಹಲಿಗೆ ಹೋಗಬಹುದು. ಸರ್ಕಾರದ ಯಾವುದಾದರೂ ಕೆಲಸ ಇರಬಹುದು. ಅವರು ಯಾಕೆ ಹೋಗುತ್ತಾರೆ ಎಂಬ ಮಾಹಿತಿ ನನ್ನ ಬಳಿ ಇಲ್ಲ ಎಂದು ದೇಶಪಾಂಡೆ ತಿಳಿಸಿದರು.
ರಂಬಾಪುರಿ ಶ್ರೀಗಳ ಬಗ್ಗೆ ಬಹಳ ಗೌರವ ಇದೆ. ಅವರು ಏನೇ ಹೇಳಿದರೂ ಆಶೀರ್ವಾದ ಅಂತ ತಿಳಿದುಕೊಳ್ಳುತ್ತೇವೆ. ಗ್ಯಾರಂಟಿಯಿಂದ ಜನರು ಸೋಮಾರಿಗಳಾಗುತ್ತಾರೆ ಅಂದರೆ ನಂಬಲ್ಲ. ಹಲವಾರು ಮನೆಯವರಿಗೆ ಗ್ಯಾರಂಟಿ ಕೊಡ್ತಿದ್ದೇವೆ.
ರೇಷನ್ ಕೂಡ ಕೊಡುತ್ತಿದ್ದೇವೆ. ಬಡತನ ದೂರ ಆಗಬೇಕು. ಈ ದೃಷ್ಟಿಯಿಂದ ಸರ್ಕಾರ ಗ್ಯಾರಂಟಿ ಕಾರ್ಯಕ್ರಮ ಹಾಕಿಕೊಂಡಿದೆ. ಹೀಗಾಗಿ ಪೂಜ್ಯ ಗುರುಗಳು ಏನು ಹೇಳಿದ್ದಾರೆ ಅದರ ಬಗ್ಗೆ ನಾನು ಕಾಮೆಂಟ್ ಮಾಡಲ್ಲ ಎಂದು ತಿಳಿಸಿದರು.
ಗಾಣಿಗ ಸಮುದಾಯ ಸ್ವಾಮೀಜಿಯ ಕಮಿಷನ್ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ದೇಶಪಾಂಡೆ, ಶಾಸಕರು ಹಾಗೂ ಸಂಸದರಿಗಿಂತ ಸ್ವಾಮೀಜಿಗಳೇ ಹೆಚ್ಚಾಗಿದ್ದಾರೆ. ನನಗೆ ಎಲ್ಲಾ ಸ್ವಾಮೀಜಿಗಳ ಬಗ್ಗೆ ಗೌರವ ಇದೆ. ಅವರು ಏನು ಹೇಳಿದ್ದಾರೆ ಅಂತ ನನಗೆ ಗೊತ್ತಿಲ್ಲ. ಹೀಗಾಗಿ ನಾನು ಕಾಮೆಂಟ್ ಮಾಡಲ್ಲ ಎಂದು ಹೇಳಿದರು.