ಧರ್ಮಸ್ಥಳ ಪ್ರಕರಣ ಕುರಿತು ಸದನದಲ್ಲಿ ಇಂದು ಉತ್ತರ

News Desk

ಚಂದ್ರವಳ್ಳಿ ನ್ಯೂಸ್, ಚಾಮರಾಜನಗರ:
ಸೋಮವಾರ ನಡೆಯಲಿರುವ ಅಧಿವೇಶನದಲ್ಲಿ ಧರ್ಮಸ್ಥಳ ಪ್ರಕರಣ ಸಂಬಂಧ ಸಂಪೂರ್ಣ ಉತ್ತರ ನೀಡಲಾಗುತ್ತದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಭಾನುವಾರ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಯಾರೂ ಕೂಡ ಧರ್ಮಸ್ಥಳದ ಪ್ರಕರಣದಲ್ಲಿ ರಾಜಕಾರಣ ಮಾಡಬಾರದು. ಇದು ನ್ಯಾಯ ಹಾಗೂ ಕಾನೂನಿಗೆ ಸಂಬಂಧಪಟ್ಟ ವಿಚಾರ. ಯಾರಾದರೂ ದೂರು ಕೊಟ್ಟರೆ ಪೊಲೀಸರು ಎಫ್.ಐ.ಆರ್ ಮಾಡಿ ತನಿಖೆ ಮಾಡುವುದು ಸಹಜ. ಇದರಲ್ಲಿ ರಾಜಕೀಯ ಹಾಗು ಧರ್ಮವನ್ನು ಸೇರಿಸಬಾರದು ಎಂದು ಪರಮೇಶ್ವರ್ ತಿಳಿಸಿದರು.

- Advertisement - 

ಧರ್ಮಸ್ಥಳ ಪ್ರಕರಣ ಕುರಿತು ಎಸ್ಐಟಿ ತನಿಖೆ ನಡೆಯುತ್ತಿದ್ದು ಪೂರ್ಣಗೊಂಡ ನಂತರ ಸತ್ಯಾಸತ್ಯತೆ ಹೊರ ಬರಬೇಕಿದೆ. ಅದು ಬಿಟ್ಟು ರಾಜಕೀಯ ಮಾಡುವುದು, ಧಾರ್ಮಿಕ ವಿಚಾರ ಎಳೆದು ತರುವುದು ಸರಿಯಲ್ಲ ಎಂದು ಗೃಹ ಸಚಿವರು ಎಚ್ಚರಿಸಿದರು.

ಎಸ್ಐಟಿ ತನಿಖೆಯಲ್ಲಿ ಸರ್ಕಾರ ಇದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ.  ಮದ್ಯಂತರ ವರದಿ ಕುರಿತು ಅಧಿಕಾರಿಗಳು ತೀರ್ಮಾನ ಮಾಡುತ್ತಾರೆ. ಆತ ಹೇಳಿದ ಹಾಗೆ ಅಗೆಯುತ್ತಾ ಕೂರುವುದಕ್ಕೆ ಆಗಲ್ಲ. ಎಸ್​ಐಟಿ ಅಧಿಕಾರಿಗಳು ಎಲ್ಲವನ್ನೂ ತೀರ್ಮಾನ ಮಾಡುತ್ತಾರೆ ಎಂದು ಸಚಿವರು ಹೇಳಿದರು.

- Advertisement - 

ಪಿಎಸ್ಐಗಳ ಕೊರತೆ ಕುರಿತು ಮಾತನಾಡಿದ ಗೃಹ ಸಚಿವರು, ಈ ಹಿಂದಿನ ಸರ್ಕಾರದಲ್ಲಿ ಪಿಎಸ್ಐ ನೇಮಕಾತಿಯಲ್ಲಿ ಹಗರಣ ಆಗಿತ್ತು. 545 ಪಿಎಸ್​ಐಗಳ ನೇಮಕ ಅಕ್ರಮ ಸಾಬೀತಾಗಿತ್ತು. ಕಳೆದ ಐದಾರು ವರ್ಷಗಳಿಂದ ನೇಮಕಾತಿ ನಿಂತಿತ್ತು. ಹಾಗಾಗಿ ಸಾವಿರಾರು ಪಿಎಸ್ಐ ಹುದ್ದೆಗಳು ಖಾಲಿ ಇದೆ. 545 ಮಂದಿ ತರಬೇತಿಯಲ್ಲಿದ್ದಾರೆ. 402 ಮಂದಿಗೆ ಮೆಡಿಕಲ್​ ಟೆಸ್ಟ್​ ನಡೆಯುತ್ತಿದೆ. 15 ದಿನದಲ್ಲಿ ಅವರಿಗೆ ಆದೇಶ ನೀಡುತ್ತೇವೆ ಎಂದು ಡಾ.ಪರಮೇಶ್ವರ್ ತಿಳಿಸಿದರು.

ಒಳಮೀಸಲಾತಿ ಜಾರಿ ಕುರಿತು ಮಾತನಾಡಿ, ಸರ್ಕಾರ ಒಳ ಮೀಸಲಾತಿ ಜಾರಿ ಮಾಡುವುದಕ್ಕೆ ಬದ್ಧವಾಗಿದೆ. ಇದಕ್ಕಾಗಿ ನಾವು ಜಸ್ಟೀಸ್​ ನಾಗಮೋಹನ್​ ದಾಸ್​ ಸಮಿತಿ ಮಾಡಿದ್ದೇವೆ, ವರದಿ ಬಂದಿದೆ. 19ರಂದು ವಿಶೇಷ ಸಂಪುಟ ಸಭೆ ಮಾಡಿ ತೀರ್ಮಾನ ಮಾಡುತ್ತೇವೆ. ಪರ-ವಿರೋಧ ಮಾಡುವವರು ಮಾಡೇ ಮಾಡುತ್ತಾರೆ. ಅನ್ಯಾಯ ಆದಾಗ ಅನ್ಯಾಯ ಅಂತ ಹೇಳುವುದರಲ್ಲಿ ತಪ್ಪೇನಿದೆ?. ಸರ್ಕಾರ ಆ ಅನ್ಯಾಯವನ್ನು ಸರಿಪಡಿಸಬೇಕಲ್ವಾ, ಸರ್ಕಾರ ಆ ಕೆಲಸ ಮಾಡುತ್ತೆ ಎಂದು ತಿಳಿಸಿದರು.

 

 

Share This Article
error: Content is protected !!
";