ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಹೆತ್ತವರ ಪ್ರೀತಿಸಲು ಸಾಯುವ ತನಕ ಕಾಯಬಾರದು ತಂದೆ ತಾಯಿಯರ ಮಹತ್ವ ಸರಿಯಾಗಿ ಅರಿಯದವನೆ ಅನಾಥ ಏಕೆಂದರೆ ತಾಯಿ ಇರೋವರೆಗೂ ಹಸಿವು ತಿಳಿಯೋದಿಲ್ಲವಂತೆ ಮತ್ತು ತಂದೆ ಇರೋವರೆಗೂ ಜವಾಬ್ದರಿ ಬರೋದಿಲ್ಲವಂತೆ ಈ ರೀತಿ ನಮ್ಮ ತಂದೆ ತಾಯಿ ಇರೋವಾಗ ನಾವು ನಮ್ಮದೇ ಆದ ಉಡಾಫೆ ಬೇಜವಾಬ್ದಾರಿತನ ತೋರುತ್ತೇವೆ. ಕೊನೆಗೆ ಅವರು ಇಲ್ಲವಾದಾಗ ಅವರ ಅನುಪಸ್ಥಿತಿಯಿಂದ ಸದಾ ಕನವರಿಸಿ ಕೊರಗುತ್ತೇವೆ.
ಈ ರೀತಿ ಬೇಜವಾಬ್ದಾರಿ ತೋರದೇ ಅವರು ಇರುವಾಗಲೇ ಅವರ ಮೇಲೆ ನಮಗಿರುವ ಪ್ರೀತಿ ಕಾಳಜಿಯನ್ನು ತೋರಿಸಬೇಕು. ಈ ಸಂದರ್ಭದಲ್ಲಿ 2006ನೇ ಇಸವಿಯಲ್ಲಿ “ಓ ಮನಸೇ” ಎಂಬ ಪಾಕ್ಷಿಕದಲ್ಲಿ, ಓದಿದ ಒಂದು ಲೇಖನದ ಬಗ್ಗೆ ನಿಮ್ಮೊಂದಿಗೆ ಹಂಚಿಕೊಳ್ಳಲೇಬೇಕು ಅದು ನನಗೆ ತುಂಬಾ ಇಷ್ಟ ಆಗಿತ್ತು. ಆದ್ದರಿಂದಲೇ ಆ ಪ್ರತಿಯನ್ನು ಇದುವರೆಗೂ ನನ್ನ ಬಳಿ ಅಚ್ಚಳಿಯದಂತೆ ಜತನದಲ್ಲಿ ಕಾಪಾಡಿಕೊಂಡು ಬಂದಿದ್ದೇನೆ. ಏಕೆಂದರೆ ಆ ಲೇಖನ ಎಲ್ಲಾ ಕಾಲಕ್ಕೂ ಸಲ್ಲುವ ಶ್ರೇಷ್ಠ ಲೇಖನ ಎಂದೇ ಹೇಳಬಹುದು.
ಬದುಕಿನ ಜಂಜಾಟದಲ್ಲಿ ನಾವು ನಮ್ಮ ಹೆತ್ತವರನ್ನು ಅರಿವಿಲ್ಲದಂತೆ ಕಡೆಗಣಿಸಿ ಬಿಡುತ್ತೇವೆ. ಅವರು ನಮ್ಮೊಂದಿಗೆ ಇರುವಾಗಲೂ ಎಷ್ಟೋ ಬಾರಿ ಅವರಿಗೆ ತೋರಬೇಕಾದ ಪ್ರೀತಿ ಕಾಳಜಿ ತೋರಿಸುವುದಿಲ್ಲ. ಅದೇನೋ ಒಂಥರಾ ನಮ್ಮ ಅಪ್ಪ ಅಮ್ಮ ತಾನೇ ಇಲ್ಲೇ ಇರ್ತಾರಲ್ಲ ಬಿಡು, ಅವರೆಲ್ಲಿ ಹೋಗುತ್ತಾರೆ ಎಂಬ ನಮ್ಮ ಭ್ರಮೆಯಿಂದ ನಮಗೆ ತಿಳಿಯದ ಹಾಗೆ ನಾವೇ ಅವರನ್ನ ಕಡೆಗಣಿಸುತ್ತಾ ಹೋಗುತ್ತೇವೆ. ಆದರೆ ಅವರು ಇಲ್ಲದ ಮೇಲೆ ಅವರ ಅನುಪಸ್ಥಿತಿ ಮಾತ್ರ ನಮಗೆ ತುಂಬಾ ದುಃಖ ತರಿಸುತ್ತೆ. ಅದಕ್ಕೆ ಆ ರೀತಿ ಆಗಬಾರದು ಎಂದು ಆ ಲೇಖನದ ಬಗ್ಗೆ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ತನ್ನ ತಾಯಿಗೆ ಮಣ್ಣುಕೊಟ್ಟು ಬಂದ ಒಬ್ಬ ಮಗ ಬರೆದುಕೊಂಡ ಒಂದು ಇಮೇಲ್ ಅಂತರ್ಜಾಲದಲ್ಲಿ ಹರಿದಾಡಿ ಬಂದಿದ್ದನ್ನು ನೋಡಿ ‘ಅಜಿತ್‘ ಎಂಬುವವರು ಬರೆದ “ಸಾಯುವ ತನಕ ಕಾಯಬೇಡ” ಎಂಬ ಲೇಖನದಲ್ಲಿನ ಆ ಇಮೇಲ್ ನ ಭಾಗವನ್ನು ಯಥಾವತ್ತಾಗಿ ನಿಮ್ಮ ಮುಂದೆ ಇಟ್ಟಿದ್ದೇನೆ ದಯವಿಟ್ಟು ಇದನ್ನು ಓದಿ;
ಜಗತ್ತಿನ ತುಂಬ ಇರುವವರೆಲ್ಲ ನನ್ನಂತಹ ಮಕ್ಕಳೇ ನನಗೊಬ್ಬಳು ಅದ್ಭುತವಾದ ತಾಯಿ ಇದ್ದಳು. ನಾನು ಹುಟ್ಟಿದಾಗಿನಿಂದ ಇಲ್ಲಿಯ ತನಕ ನಾನೇ ಅವಳ ಬದುಕಿನ ಕೇಂದ್ರವಾಗಿದ್ದೆ. ನನಗೆ ದುಃಖವಾದಾಗ ತಾನೂ ದುಃಖಪಟ್ಟಳು. ನನಗೆ ಸಂತೋಷವಾದಾಗ ತಾನೂ ಸಂತೋಷಪಟ್ಟಳು.
ನಾನು ಕುಸಿದು ಕುಳಿತಾಗಲೆಲ್ಲಾ ಧೈರ್ಯ ಹೇಳಿದಳು. ನಾನು ರ್ಯಾಂಕ್ ಪಡೆದೆ-ನನಗಿಂತ ಹೆಚ್ಚು ಆಕೆಯೇ ನಲಿದಳು. ನಾನು ಹನಿಮೂನ್‌ಗೆ ಹೋದೆ-ಆಕೆ ಮನೆ ನೋಡಿಕೊಂಡಳು. ನಾವು ಗಂಡ-ಹೆಂಡ್ತಿ ನೌಕರಿಗೆ ಹೋದರೆ ಮಕ್ಕಳನ್ನಾಡಿಸಿದಳು. ಆಕೆಯ ಮಡಿಲಲ್ಲೇ ದೊಡ್ಡವಾದವು ಮಕ್ಕಳು. ಅಂಥ ತಾಯಿ ಇವತ್ತು ತೀರಿಹೋದಳು. ಮಣ್ಣು ಕೊಟ್ಟು ಬಂದು, ಅವಳು ಮಲಗುತ್ತಿದ್ದ ಹಾಸಿಗೆ ತೆಗೆದಿಡುತ್ತಿದ್ದೆ.
ಆಗ ದಿಂಬಿನ ಕೆಳಗೆ ಸಿಕ್ಕಿತು ಈ ಪತ್ರ. ಹೌದು, ಅಮ್ಮನೇ ಬರೆದಿದ್ದಳು ನನಗೇ ಬರೆದಿದ್ದಳು ಆದರೆ ಕೊಟ್ಟಿರಲಿಲ್ಲ. ಪತ್ರ ಓದಲು ಪ್ರಾರಂಭಿಸುತ್ತಿದ್ದಂತೆಯೇ ಕಣ್ಣು ಮಂಜಾದವು. ಅಕ್ಷರಗಳು ಮಸುಕು-ಮಸುಕು…
”ಮಗನೇ.
ಇನ್ನೇನು ಬಿದ್ದು ಹೋಗೋ ಮರ ಇದು. ನನ್ನನ್ನು ನೀನು ನಿಜವಾಗಲೂ ಇಷ್ಟಪಡೋದಾದರೆ, ನನ್ನ ಮೇಲೆ ಮಮಕಾರ ಇದ್ದರೆ ಅದೆಲ್ಲವನ್ನೂ ಈಗಲೇ ತೋರಿಸಿ ಬಿಡು ನಾನು ಸಾಯೋತನಕ ಕಾಯಬೇಡ ನನಗೆ ಗೊತ್ತು, ನಾನು ಸತ್ತಾಗ ನೀನು ತುಂಬಾ ಅಳ್ತೀಯಾ. ನನ್ನ ಶ್ರಾದ್ಧ ಮಾಡಿ ಬ್ರಾಹ್ಮಣರಿಗೆ ಹೊಟ್ಟೆ ತುಂಬಾ ಊಟ ಹಾಕ್ತೀಯಾ ನನ್ನದೊಂದು ದೊಡ್ಡ ಫೋಟೋ ಅದಕ್ಕೆ ಬಂಗಾರ ಬಣ್ಣದ ಪ್ರೇಮು, ಗಂಧದ ಮಾಲೆ ಹಾಕಿಸಿ ಬಂದವರೆಲ್ಲರಿಗೂ ಕಾಣಿಸುವಂತೆ ಗೋಡೆಗೆ ತೂಗು ಹಾಕ್ತೀಯಾ. ನನಗೊಂದು ದೊಡ್ಡ ಸಮಾಧಿ ಕಟ್ಟಿ ಅಮೃತ ಶಿಲೆಯ ಮೇಲೆ ನನ್ನ ಹೆಸರು ಕೆತ್ತಿಸಿ ಹಾಕ್ತೀಯಾ, ಬಂದವರೆಲ್ಲರೆದುರು ನನ್ನದೇ ಗುಣಗಾನ, ಅಮ್ಮ ಎಷ್ಟು ಒಳ್ಳೆಯವ್ಳು ಗೊತ್ತಾ?…
ಏನುಪಯೋಗ ಮಗನೇ? ಅಷ್ಟೊತ್ತಿಗಾಗಲೇ ನಮ್ಮಿಬ್ಬರ ನಡುವೆ ಮರಣದ ಮಹಾಗೋಡೆ. ಅದಕ್ಕೇ ಹೇಳಿದ್ದು, ನನ್ನ ಮೇಲೆ ಪ್ರೀತಿ ಇದ್ದರೆ ಈಗಲೇ ತೋರಿಸಿಬಿಡು. ಸ್ವಲ್ಪಾನೇ ಆದ್ರೂ ಪರವಾಗಿಲ್ಲ. ಸಾಯೋತನಕ ಖುಷಿ ಪಡಲು ನನಗೆ ಅದಕ್ಕಿಂತ ಹೆಚ್ಚಿಗೆ ಏನು ಬೇಕು? ಮಗನೇ, ದಯವಿಟ್ಟು ನಾನು ಸಾಯೋ ತನಕ ಕಾಯಬೇಡ”.
ಇಷ್ಟು ಓದುವುದರೊಳಗಾಗಿ ನನ್ನ ದುಃಖ ಉಮ್ಮಳಿಸಿ ಬಂದಿತ್ತು. ನಾನು ಅಮ್ಮನನ್ನು ತುಂಬ ಇಷ್ಟ ಪಡ್ತಿದ್ದೆ, ಆದರೆ ಯಾವತ್ತೂ ಹೇಳಿಕೊಳ್ಳಲಿಲ್ಲ ಪ್ರೀತಿಯಿಂದ ಜೊತೆಗೆ ಕುಳಿತು ಮಾತನಾಡಲಿಲ್ಲ. ನಾವೆಲ್ಲರೂ ಸಿನಿಮಾಕ್ಕೆ ಹೋದ್ವಿ, ಆಕೇನಾ ಸಂಜೆ ಪಾರ್ಕಿಗೋ ದೇವಸ್ಥಾನಕ್ಕೋ ಹೋಗಿ ಬಾ ಅಂದ್ವಿ. ಔಷಧಿ ಕೊಡೋದನ್ನೇ ಪ್ರೀತಿ ಅಂದುಕೊಂಡೆ ನಾನು ಅಮ್ಮ ಹಾಸಿಗೆ ಹಿಡಿದಾಗ ನಾನ್ಯಾವತ್ತೂ ಹೋಗಿ ತಲೆ ಸವರಿ ಹೇಗಿದ್ದೀ ಅಂತ ಕೇಳಲೇ ಇಲ್ಲ. ಇವತ್ತು ಅಮ್ಮ ಇಲ್ಲ, ಆಕೆ ನನ್ನ ಪಾಲಿನ ಏನಾಗಿದ್ದಳು ಎಂಬುದನ್ನು ನಾನ್ಯಾವತ್ತೂ ಹೇಳಿ ಕೊಳ್ಳಲೇ ಇಲ್ಲ. ಜಗತ್ತಿನ ತುಂಬ ನನ್ನಂತಹ ಮಕ್ಕಳೇ….
ಅಮ್ಮನ ಮೇಲಿನ ಪ್ರೀತಿಯನ್ನ ತೋರಿಸಲು ಆಕೆ ಸಾಯುವ ತನಕ ಕಾಯುವವರು.
ಈ ಲೇಖನ ನಿಮ್ಮೊಂದಿಗೆ ಹಂಚಿಕೊಳ್ಳುವ ಉದ್ದೇಶ ಇಷ್ಟೇ ಕನಿಷ್ಠ ಇದನ್ನು ಓದಿಯಾದರೂ ಕೆಲವರು ಬದಲಾಗಿ ತಮ್ಮ ತಮ್ಮ ತಂದೆ-ತಾಯಿಯವರಿಗೆ ತಮ್ಮ ಸಮಯ ನೀಡಿ ಅವರ ಅನುಭವವನ್ನು ಅವರ ಪಕ್ಕದಲ್ಲಿ ಕುಳಿತು ಕೇಳಿ ಅವರ ಆಸೆಗಳನ್ನು ಒತ್ತಾಯ ಮಾಡಿ ಕೇಳಿ ತಿಳಿದು ಅದನ್ನು ಈಡೇರಿಸಿ.
ಏಕೆಂದರೆ ಅವರು ನನ್ನ ಕಂದನ ಹಣ ಎಲ್ಲಿ ಕರಗುವುದೋ ಎಂದು ತಮ್ಮ ಯಾವುದೇ ಆಸೆಯನ್ನು ಪೂರೈಸಲು ಹೇಳದೆ, ಡಿಮ್ಯಾಂಡ್ ಮಾಡದೆ ಹಾಗೆ ಮನಸಲ್ಲಿ ಮರೆಮಾಚಿಕೊಂಡು ಕೊರಗುತ್ತಿರುತ್ತಾರೆ. ಆದರೆ ನಾವು ನಮ್ಮ ಜವಾಬ್ದಾರಿ ಅರಿತು ಅವರು ಸಾಯುವವರೆಗೂ ಕಾಯದೆ ಅವರು ಬದುಕಿರುವಾಗಲೇ ಅವರ ಮೇಲೆ ಇರುವ ನಮ್ಮ ಪ್ರೀತಿ ಕಾಳಜಿಯನ್ನು ಯಥೇಚ್ಛವಾಗಿ ತೋರಿಸಬೇಕು ಮತ್ತು ಅವರ ಆಸೆಯನ್ನು ಪೂರೈಸಬೇಕು ಏಕೆಂದರೆ “ಕಾಲ ಮತ್ತು ಕಿರೀಟ ಯಾರನ್ನು ಕಾಯುವುದಿಲ್ಲ”.
ಲೇಖನ:ವೆಂಕಟೇಶ ಹೆಚ್ ಚಿತ್ರದುರ್ಗ. (ನವ ದೆಹಲಿ) 7760023887