ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ರಾಜ್ಯದಲ್ಲಿನ 30 ಜಿಲ್ಲೆಗಳಲ್ಲಿ 28 ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿ ನದಿ, ಹಳ್ಳ, ಕೊಳ್ಳಗಳು ತುಂಬಿ ಹರಿದು ಜನರ ಜೀವನ ಅಸ್ತವ್ಯಸ್ತ ಗೊಂಡಿದೆ.
ರಾಜ್ಯದಲ್ಲಿನ ನದಿಗಳು ತುಂಬಿ ಹರಿಯುತ್ತಿವೆ. ಸರ್ಕಾರ ಜನರಿಗೆ ಎಚ್ಚರಿಕೆ ರವಾನಿಸಿದೆ. ಇನ್ನುಳಿದ 2 ಜಿಲ್ಲೆಗಳಾದ ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲಾ ಪ್ರಾಂತ್ಯದಲ್ಲಿ ಮಳೆ ಎಂಬುದು ಮರೀಚಿಕೆಯಾಗಿದೆ. ರೈತರು ಮಳೆಗಾಗಿ ಮುಗಿಲು ನೋಡುತ್ತಿದ್ದಾರೆ.
ರಾಜ್ಯದ ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ, ಹಳೆ ಮೈಸೂರು, ಹೈದರಾಬಾದ್ ಕರ್ನಾಟಕ ಈ ಎಲ್ಲಾ ಪ್ರಾಂತ್ಯದಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿ ನದಿ ಸಾಗರಗಳು ತುಂಬಿ ತುಳುಕುತ್ತಿವೆ. ನದಿಗಳು ಭೋರ್ಗರೆದು ನುಗ್ಗುತ್ತಿರುವ ರಭಸದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ದೇಶದಲ್ಲಿನ ಎಲ್ಲಾ ರಾಜ್ಯಗಳಲ್ಲಿ ಮಳೆ ಆರ್ಭಟಕ್ಕೆ ದೊಡ್ಡ ಪ್ರಮಾಣದಲ್ಲಿ ಅವಘಡಗಳು ಸಂಭವಿಸಿವೆ. ಪ್ರಪಂಚಾದ್ಯಂತ ಮಳೆ ಆರ್ಭಟ ಹೆಚ್ಚಾಗಿದೆ ಜನರ ಸಾವುನೋವುಗಳ ಸಂಖ್ಯೆ ಹೆಚ್ಚಾಗಿದೆ ಈ ಎಲ್ಲಾ ವಿಚಾರಗಳನ್ನು ಸುದ್ದಿ ಮಾದ್ಯಮಗಳಲ್ಲಿ ದೊಡ್ಡದಾಗಿ ನಿರಂತರವಾಗಿ ಸುದ್ದಿಯಾಗುತ್ತಿದೆ.
ಆದರೆ ಮಳೆಯಿಂದ ಮರೆಯಾಗಿರುವ ಬರ ಪೀಡಿತ ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಮಳೆ ಇಲ್ಲದೆ ಮಳೆಗಾಗಿ ರೈತರು ಮುಗಿಲು ನೋಡುತ್ತಿದ್ದಾರೆ. ಹಿರಿಯೂರು ತಾಲ್ಲೂಕಿನ ಐಮಂಗಳ ಹಾಗೂ ಜವಗೊಂಡನಹಳ್ಳಿ ಹೋಬಳಿಯಲ್ಲಿ ಬೋರ್ ಗಳಲ್ಲಿ ನೀರು ಬರುತ್ತಿಲ್ಲ.
ರೈತರು ನಿರಂತರವಾಗಿ ಬೋರ್ ಕೊರೆಸುತ್ತಿದಾರೆ ನೀರು ಸಿಗುತ್ತಿಲ್ಲ. ರೈತರು ಕಂಗಾಲಾಗಿದ್ದಾರೆ. ಭೂಮಂಡಲದ ಎಲ್ಲಾ ಭಾಗದಲ್ಲಿ ಮಳೆ ಹೆಚ್ಚಾಗಿ ಜನರು ತತ್ತರಿಸಿರುವ ಸುದ್ದಿ ಕೇಳುತ್ತಿರುವ ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಯ ರೈತರು ಪ್ರಕೃತಿಯ ವಿಪರ್ಯಾಸಕ್ಕೆ ನಲುಗಿದ್ದಾರೆ ಎಂದು ರಘು ಗೌಡ ಆತಂಕ ವ್ಯಕ್ತಪಡಿಸಿದ್ದಾರೆ.

