ಚಂದ್ರವಳ್ಳಿ ನ್ಯೂಸ್, ಮೊಳಕಾಲ್ಮೂರು:
ಅಮೇರಿಕಾದ ವಿಶ್ವ ಕಾನೂನು ಕಾಂಗ್ರೆಸ್ ಕೊಡ ಮಾಡುವ ವರ್ಲ್ಡ್ ಜೂಲರಿಯಸ್ ಅವಾರ್ಡ್ನ ಪುರಸ್ಕೃತ ಮೊದಲ ಭಾರತೀಯ ಜಸ್ಟ್ ರೈಟ್ ಫಾರ್ ಚಿಲ್ಡ್ರನ್ ಸಂಸ್ಥೆಯ ಸಂಸ್ಥಾಪಕ ಭುವನ್ ರಿಜ್ಜು ಅವರಿಂದ ಬಾಲ ಕಾರ್ಮಿಕರು ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಗೋಸ್ಕರ ಕೆಲಸ ಮಾಡುತ್ತಿರುವ ತಾಲೂಕಿನ ಚಿಕ್ಕೋಬನಹಳ್ಳಿ ಮೂಲದ ಆಶ್ರಿತ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಎಸ್. ನಾಗರಾಜ್ ಸಿದ್ದಲಿಂಗಪ್ಪ ಇವರಿಗೆ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಇತ್ತೀಚೆಗೆ ದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾ ಹಾಲ್ ನಲ್ಲಿ ನಡೆದ ಕಾರ್ಯಗಾರದಲ್ಲಿ ಅವರು ಭಾಗವಹಿಸಿದ್ದರು. ತೆಲಂಗಾಣದ ಹೈದರಾಬಾದ್ ,ನಲ್ಗೊಂಡ, ರಂಗಾರೆಡ್ಡಿ ಜಿಲ್ಲೆಗಳಲ್ಲಿ ಬಾಲ ಕಾರ್ಮಿಕ ನಿರ್ಮೂಲನೆಗೆ ಮತ್ತು ಮಕ್ಕಳ ಅಕ್ರಮ ಸಾಗಾಣಿಕೆ ತಡೆಗಾಗಿ ಪೊಲೀಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಉತ್ತಮ ಸೇವೆ ಸಲ್ಲಿಸಿದ್ದಾರೆ.
2005 ರಿಂದ 2008ರ ವರೆಗೆ ಸುನಾಮಿ ಸಂದರ್ಭದಲ್ಲಿ ಅಂಡಮಾನ್ ನ ಲಿಟಲ್ ಅಂಡಮಾನ್ ದ್ವೀಪದಲ್ಲಿ ಮಕ್ಕಳು ಮತ್ತು ನಾಗರೀಕರನ್ನು ರಕ್ಷಿಸಿ ಅವರಿಗೆ ಪುನರ್ವಸತಿ ಕಲ್ಪಿಸಿ ಕೊಟ್ಟಿದ್ದಾರೆ. ಹಾಗೂ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಉತ್ತರ ಪ್ರದೇಶದ ರೈಲ್ವೆ ನಿಲ್ದಾಣಗಳಲ್ಲಿ ಬಾಲಕಾರ್ಮಿಕರು, ಅನಾಥ ಮಕ್ಕಳ, ಅವರ ಹಕ್ಕುಗಳನ್ನು ರಕ್ಷಣೆ ಮಾಡಿದ್ದಾರೆ. ಇವರ ಸೇವೆಯನ್ನು ರಾಷ್ಟ್ರದ ಅತಿ ದೊಡ್ಡ ಸಂಸ್ಥೆಯಾದ ‘ಜಸ್ಟ್ ರೈಟ್ ಫಾರ್ ಚಿಲ್ಡ್ರನ್‘ ಗುರುತಿಸಿ ಪ್ರಶಸ್ತಿ ನೀಡಿರುವುದು ಸಂತಸ ತಂದಿದ್ದು ಸಂಸ್ಥೆಯ ಯಶಸ್ವಿಗೆ ಕಾರಣರಾಗಿರುವ ಸಿಬ್ಬಂದಿ, ಮತ್ತು ಕುಟುಂಬ ವರ್ಗಕ್ಕೆ ಎಸ್. ನಾಗರಾಜ ಅಭಿನಂದನೆ ಸಲ್ಲಿಸಿದ್ದಾರೆ.