ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಡಿ. 20ರಂದು ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರಕ್ಕೆ ಅವಕಾಶ ಕಲ್ಪಿಸಬೇಕೆಂದು ಕನ್ನಡ ಪಕ್ಷ ಒತ್ತಾಯಿಸಿದೆ.
ಕನ್ನಡಪಕ್ಷದ ಕಾರ್ಯಕರ್ತರು ಈ ಬಗ್ಗೆ ತಹಸೀಲ್ದಾರ್ ವಿಭಾ ವಿದ್ಯಾ ರಾತೋಡ್ ರವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವ್ ನಾಯಕ್ ಮಾತನಾಡಿ ಕರ್ನಾಟಕ ಬಹು ಸಂಸ್ಕೃತಿ ಹೊಂದಿರುವ ರಾಜ್ಯವಾಗಿದೆ.
ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಕರಾವಳಿ, ಮಲೆನಾಡು ಪ್ರದೇಶ, ಮದ್ಯ ಕರ್ನಾಟಕ, ಹಳೆ ಮೈಸೂರು ಭಾಗ ಹೀಗೆ ಪ್ರದೇಶವಾರು ವಿಭಿನ್ನ ರೀತಿಯ ತಿಂಡಿಗಳಿಗೆ ಪ್ರಸಿದ್ದಿಯಾಗಿದೆ. ಇದುವರೆಗೂ ನಡೆದ ಸಾಹಿತ್ಯ ಸಮ್ಮೇಳನಗಳಲ್ಲಿ ಆಯಾ ಪ್ರದೇಶವಾರು ತಿಂಡಿ ತಿನಿಸುಗಳಿಗೆ ಆದ್ಯತೆ ನೀಡಲಾಗಿದ್ದು ಅದರಂತೆ ಉತ್ತರ ಕರ್ನಾಟಕ ಜೋಳದ ರೊಟ್ಟಿ ಖಡಕ್ ಚಟ್ನಿ, ಎಣ್ಣೆಗಾಯಿ, ಗೋದಿ ಹುಗ್ಗಿ, ಕರಾವಳಿ ಮಲೆನಾಡ ಭಾಗದ ಮಂಗಳೂರು ಬಜ್ಜಿ, ಪಾವಬಜ್ಜಿ, ನೀರ್ದೋಸೆ, ಮೈಸೂರು ಭಾಗದಲ್ಲಿ ರಾಗಿ ಮುದ್ದೆ ಕಾಳುಸಾರು, ಚಿತ್ರಾನ್ನ, ಪಾಯಸ ಹೀಗೆ ವಿವಿಧ ಬಗೆಯ ಪ್ರದೇಶನುವಾರು ತಿಂಡಿಗೆ ಆದ್ಯತೆ ನೀಡಲಾಗಿದೆ. ಮಂಡ್ಯ ಹೇಳಿಕೇಳಿ ಬಾಡೂಟಕ್ಕೆ ಹೆಸರುವಾಸಿ ಹೀಗಾಗಿ ಸಾಹಿತ್ಯ ಸಮ್ಮೇಳನಕ್ಕೆ ಬರುವ ಸಾಹಿತ್ಯಸಕ್ತ ಮಾಂಸಾಹಾರಿಗಳಿಗೆ ಮಾಂಸದ ಊಟಕ್ಕೆ ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಕನ್ನಡ ಪಕ್ಷದ ರಾಜ್ಯ ಪ್ರದಾನ ಕಾರ್ಯದರ್ಶಿ ಡಿ. ಪಿ. ಆಂಜನೇಯ ಮಾತನಾಡಿ ಸಾಹಿತ್ಯ ಸಮ್ಮೇಳನಕ್ಕೆ ಸಾರ್ವಜನಿಕರ ಕೋಟಿ ಕೋಟಿ ತೆರಿಗೆ ಹಣ ಖರ್ಚು ಮಾಡುತ್ತಿರುವಾಗ ಮಂಡ್ಯ ಭಾಗದ ಪ್ರದಾನ ಆಹಾರದಂತೆ ಹಾಗೂ ಮಾಂಸಾಹಾರಿಗಳಿಗೆ ಮಾಂಸದ ಊಟವನ್ನು ಕೊಡಬೇಕು.
ಸಾಹಿತ್ಯ ಸಮ್ಮೇಳನಕ್ಕೆ ಬರುವ ಬಹು ಸಂಖ್ಯಾತರು ಮಾಂಸಾಹಾರಿಗಳು. ಹೀಗಾಗಿ ಅವರ ಆಶಯಕ್ಕೆ ತಕ್ಕಂತೆ ಮಾಂಸಾಹಾರದ ವ್ಯವಸ್ಥೆ ಮಾಡಬೇಕು. ಇದು ಹೆಚ್ಚು ಸಾಹಿತ್ಯಸಕ್ತರ ಬೇಡಿಕೆಯಾಗಿದ್ದು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸರ್ಕಾರ ಯಾವುದೇ ಕಾರಣ ನೀಡದೆ ಮಾಂಸಾಹಾರಿ ಸಾಹಿತ್ಯ ಪ್ರಿಯರಿಗೆ ಮಾಂಸಾಹಾರದ ವ್ಯವಸ್ಥೆ ಮಾಡಬೇಕೆಂದು ಹೇಳಿದರು.
ಕನ್ನಡಪಕ್ಷದ ಜಿಲ್ಲಾಧ್ಯಕ್ಷ ಮುನಿಪಾಪಯ್ಯ, ತಾಲೂಕು ಅಧ್ಯಕ್ಷ ವೆಂಕಟೇಶ್, ಬೋರೇಗೌಡ, ಕುಮಾರ್, ನಗರಸಭಾ ಸದಸ್ಯ ಕಾಂತರಾಜ್ ಸೇರಿದಂತೆ ರೈತ, ದಲಿತ, ಪ್ರಗತಿಪರ ಸಂಘಟನೆಗಳ ಮುಖಂಡರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.