ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಗಣೇಶ ಮತ್ತು ಈದ್ ಮೀಲಾದ್ ಹಬ್ಬಗಳನ್ನು ಪ್ರತಿಯೊಬ್ಬರು ಶಾಂತಿ ಸೌಹಾರ್ದತೆಯಿಂದ ಆಚರಿಸಬೇಕು, ಹಬ್ಬದ ಸಂದರ್ಭದಲ್ಲಿ ಅನಗತ್ಯ ಗೊಂದಲ ಸೃಷ್ಠಿ ಮಾಡುವುದು ಬೇಡ ದಾವಣಗೆರೆ ಜಿಲ್ಲಾಧಿಕಾರಿ ಡಾ. ಜಿ.ಎಂ. ಗಂಗಾಧರಸ್ವಾಮಿ ಹೇಳಿದರು.
ಗಣೇಶ ವಿಸರ್ಜನೆ ಹಾಗೂ ಈದ್ ಮಿಲಾದ್ ಹಬ್ಬಗಳ ಮೆರವಣಿಗೆ ಸಂದರ್ಭದಲ್ಲಿ ಶಾಂತಿ ಕಾಪಾಡುವ ಉದ್ದೇಶದಿಂದ ಡಿಜೆಗೆ ಅನುಮತಿ ನಿರಾಕರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಜಿ.ಎಂ. ಗಂಗಾಧರಸ್ವಾಮಿ ಖಡಕ್ ಸಂದೇಶ ರವಾನಿಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ತುಂಗಭದ್ರಾ ಸಭಾಂಗಣದಲ್ಲಿ ನಡೆದ ಶಾಂತಿ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡೊಳ್ಳು, ಕಂಸಾಳೆ ಸೇರಿದಂತೆ ಮತ್ತಿತರ ಸಾಂಸ್ಕೃತಿಕ ಕಲೆಗಳನ್ನು ಡಿಜೆ ಬದಲಿಗೆ ಬಳಿಸಿ ಎಂದು ಅವರು ಸಲಹೆ ನೀಡಿದರು.
21 ದಿನಗಳಿಗೆ ಗಣೇಶ ಪ್ರತಿಷ್ಠಾಪನೆ ಸೀಮಿತ ಮಾಡಿ ಆದೇಶ ಹೊರಡಿಸಲಾಗಿದೆ. ಕಳೆದ ಬಾರಿ ಗಣೇಶ ಮೆರವಣಿಗೆಯಲ್ಲಿ ಕಲ್ಲು ತೂರಾಟ ನಡೆದ ಹಿನ್ನೆಲೆ ಈ ಬಾರಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.ಪೊಲೀಸ್ ಇಲಾಖೆ ಮಾಡಿದ ರೂಟ್ ಮ್ಯಾಪ್ನಲ್ಲೇ ಈದ್ ಮಿಲಾದ್ ಹಾಗೂ ಗಣೇಶ ಮೆರವಣಿಗೆ ಮಾಡಲು ಜಿಲ್ಲಾಧಿಕಾರಿಗಳು ಆಯೋಜಕರಿಗೆ ತಿಳಿಸಿದರು.
ಗಣೇಶ ಹಾಗೂ ಈದ್ ಮಿಲಾದ್ ಮೆರವಣಿಗೆಯಲ್ಲಿ ಯಾರೇ ಆಗಲಿ ಹದ್ದು ಮೀರಿ ವರ್ತಿಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸುತ್ತೇವೆ.ದೇವರ ಕಾರ್ಯದಲ್ಲಿ ಮದ್ಯಪಾನ ಮಾಡಬಾರದು. 3 ಸಾವಿರಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳ ಕಣ್ಗಾವಲು ಇರುತ್ತದೆ. ಸಾಮಾಜಿಕ ಜಾಲತಾಣದಲ್ಲಿ ತಪ್ಪು ಮಾಹಿತಿ ಹಂಚಿದರೆ ಅಂಥವರ ವಿರುದ್ಧವೂ ಕಠಿಣ ಕ್ರಮಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದರು.
ಕೋಮು ಗಲಭೆಗೆ ಪ್ರಚೋದನೆ ನೀಡಿದರೆ ಅಂಥವರನ್ನ ಮುಲಾಜಿಲ್ಲದೆ ಗಡಿಪಾರು ಮಾಡಲಾಗುತ್ತದೆ. ಈಗಾಗಲೇ ಕೋಮು ಗಲಭೆಗೆ ಪ್ರಚೋದನೆ ನೀಡುವಂತ ಹಿನ್ನೆಲೆ ಇರುವ 27 ಜನರ ಪೈಕಿ 12 ಜನರನ್ನು ಗಡಿಪಾರು ಮಾಡಲಾಗಿದೆ. ಉಳಿದವರ ಮೇಲೂ ನಿಗಾ ವಹಿಸಿ ಮತ್ತೆ ಕೃತ್ಯ ಎಸಗಿದರೆ ಗಡಿಪಾರು ಮಾಡಲಾಗುತ್ತದೆ ಎಂದು ಎಚ್ಚರಿಸಿದರು.
ಶಾಂತಿ ಸಭೆಯಲ್ಲಿ ಪ್ರಚೋದನೆ ಮಾಡಲು ಸಭೆಗೆ ಬರ್ತೀರಾ, ಕೂತ್ಕೊಳ್ಳಯ್ಯ ಎಂದು ಜಿಲ್ಲಾಧಿಕಾರಿ ಡಾ. ಗಂಗಾಧರ್ ಸ್ವಾಮಿ ವ್ಯಕ್ತಿಯೊಬ್ಬರನ್ನ ಗದರಿದರು.
ನಾವು ಹಿಂದೂಗಳೇ ಅದರಲ್ಲೂ ಪುರೋಹಿತರು ನಾವು. ಕಳೆದ ವರ್ಷ ನಡೆದ ಗಲಭೆ ಹಿನ್ನೆಲೆಯಲ್ಲಿ ಈ ಬಾರಿ ಕಟ್ಟುನಿಟ್ಟಿನ ಕ್ರಮ ಜರುಗಿಸುತ್ತಿದ್ದೇವೆ. ಅಲ್ಲದೇ ಜಿಲ್ಲೆಯಲ್ಲಿ ಗಣೇಶ ಮೆರವಣಿಗೆಯ ವೇಳೆ ಡಿಜೆ ಬ್ಯಾನ್ ಮಾಡಿದ್ದೇವೆ, ಅನುಮತಿ ಕೂಡ ನಿರಾಕರಿಸಿದ್ದೇವೆ.
ಡಿಜೆ ಬದಲು ಕಲಾ ತಂಡಗಳನ್ನು ಕರೆಸಿ ಅವರ ಹೊಟ್ಟೆ ತುಂಬಿಸಿ. ಗಣೇಶ ಹಬ್ಬದಲ್ಲಿ ಭಕ್ತಿ ಗೀತೆಗಳು, ರಾಜ್ಕುಮಾರ್ ಹಾಡುಗಳು ಕೇಳುತ್ತಿದ್ದೆವು. ಇದೀಗ ಹೊಡಿ ಮಗ, ಹೊಡಿ ಮಗ ಹಾಡು ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. 21 ದಿನಗಳಕಾಲ ಮಾತ್ರ ಗಣೇಶ ಕೂರಿಸಲು ಅನುಮತಿ ಇದೆ ಎಂದು ಜಿಲ್ಲಾಧಿಕಾರಿಗಳು ಆಯೋಜಕರಿಗೆ ಸೂಕ್ಷ್ಮವಾಗಿ ತಿಳಿಸಿದರು.

