ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಬಲೀಕರಣ, ಸಶಕ್ತೀಕರಣದ ಬುನಾದಿಯಾಗಿ ಪಂಚ ಗ್ಯಾರಂಟಿಗಳನ್ನು ಎರಡು ವರ್ಷಗಳ ಹಿಂದೆ ನಾವು ಆರಂಭಿಸಿದೆವು. ಈಗ ಅದು ಸ್ವಾಭಿಮಾನದ ಕಿಡಿಯಾಗಿ ನಾಡಿನಲ್ಲಿ ಯಶಸ್ಸು ಸಾಧಿಸಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದರು.
ವಾರ್ಷಿಕವಾಗಿ 52,000 ಕೋಟಿ ಅನುದಾನದಲ್ಲಿ ನಮ್ಮ ಗ್ಯಾರಂಟಿಗಳು ಕನಸುಗಳಿಗೆ ಶಕ್ತಿ ತುಂಬಿ, ಕುಟುಂಬದ ನಿರ್ವಹಣೆಗೆ ಆರ್ಥಿಕ ಬಲ ನೀಡಿದೆ. ಮಹಾತ್ಮ ಗಾಂಧಿಯವರ ಅಂತ್ಯೋದಯ ಮತ್ತು ಸರ್ವೋದಯದ ಕನಸನ್ನು ನನಸು ಮಾಡಿದ್ದೇವೆ ಎಂದು ಅವರು ತಿಳಿಸಿದರು.
ಸಂವಿಧಾನ ಶಿಲ್ಪಿ ಅಂಬೇಡ್ಕರರ ಆಶಯದಂತೆ, ಹೆಣ್ಣುಮಕ್ಕಳನ್ನು ಸಬಲೀಕರಣಗೊಳಿಸುವ ಕೆಲಸ ಮಾಡಿದ್ದೇವೆ. ಈ ಎರಡು ವರ್ಷಗಳು ಅಸಂಖ್ಯಾತ ಕುಟುಂಬಗಳಿಗೆ ಹರುಷ ತಂದಿದೆ, ನಮಗೆ ಸಾರ್ಥಕತೆ ತಂದಿದೆ ಎಂದು ಡಿಸಿಎಂ ಶಿವಕುಮಾರ್ ಹೇಳಿದರು.