ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹತ್ತಾರು ಸದಾಬಿರುಚಿಯ ನಾಟಕಗಳನ್ನಾಡಿ ಪ್ರೇಕ್ಷಕರನ್ನ ರಂಜಿಸಿದ್ದ ಭಾರತಿ ಕಲಾವಿದರ ಸಂಘ ಈಗ ನೆನಪು ಮಾತ್ರ.
ಹಿರಿಯೂರಿನಲ್ಲಿ 1965ರಲ್ಲಿ ಹಲವು ಸ್ನೇಹಿತರು ಸೇರಿ ಭಾರತಿ ಕಲಾವಿದರ ಸಂಘ ಸ್ಥಾಪನೆ ಮಾಡಿದ್ದರು. ಹಿರಿಯೂರು ನಗರ ಸೇರಿದಂತೆ ವಿವಿಧೆಡೆಗಳಲ್ಲಿ 1977ರ ತನಕ ಸಾಮಾಜಿಕ, ಐತಿಹಾಸಿಕ, ಪೌರಾಣಿಕ ನಾಟಕಗಳನ್ನು ಪ್ರದರ್ಶನ ಮಾಡಿ ಪ್ರಥಮ ಬಹುಮಾನಗಳಿಸಿದ್ದ ಭಾರತಿ ಕಲಾವಿದರು ಸಾಕಷ್ಟು ಹೆಸರು ಮಾಡಿದ್ದರು.
ರಂಗಪ್ರೇಮಿ ದಿವಂಗತ ಬಿ.ಎಲ್ ಗೌಡ ಅವರು ಸಚಿವರಾಗಿದ್ದಾಗ ಭಾರತಿ ಕಲಾವಿದರು ಆಡುತ್ತಿದ್ದಂತಹ ನಾಟಕಗಳನ್ನು ನೋಡಿ ಮನಸೋತು ಮೆಚ್ಚಿದ್ದರು. ಅಷ್ಟೇ ಹಿರಿಯೂರು ಪ್ರತಿಭೆಗಳನ್ನು ರಾಜಧಾನಿ ಬೆಂಗಳೂರಿಗೆ ಪರಿಚಯಿಸುವ ಕೆಲಸವನ್ನು ಬಿ.ಎಲ್ ಗೌಡರು ಮಾಡಿದ್ದರು.
ಹಳ್ಳಿ ಚಿತ್ರ ಎನ್ನುವ ನಾಟಕಕ್ಕೆ ಬೆಂಗಳೂರಿನಲ್ಲಿ ಪ್ರದರ್ಶನಕ್ಕೆ ಅನುವು ಮಾಡಿಕೊಟ್ಟಿದ್ದರು. ನಾಟಕಕ್ಕೆ ಅಲ್ಲಿ ಪ್ರಥಮ ಬಹುಮಾನ ಬಂದಿತ್ತು. ಅದೇ ರೀತಿ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಸಿಂಹಘಡ ನಾಟಕ ಪ್ರದರ್ಶನ ಕೂಡಾ ಮಾಡಿದಾಗಲೂ ಹಿರಿಯೂರಿನ ಭಾರತಿ ಕಲಾವಿದರಿಗೆ ಪ್ರಥಮ ಬಹುಮಾನ ಬಂದಿತ್ತು.
ಹಿರಿಯೂರಿನ ಕಡಲೆಕಾಯಿ(ನೆಹರು ಮೈದಾನ) ಮಂಡಿಯಲ್ಲಿ, ಪ್ರತಿವರ್ಷ ನಡೆಯುತ್ತಿದ್ದ ಗಣೇಶನ ಹಬ್ಬಗಳಲ್ಲಿ ವಿವಿಧ ನಾಟಕಗಳನ್ನು ಪ್ರದರ್ಶನವನ್ನು ಭಾರತಿ ಕಲಾವಿದರು ಮಾಡುವ ಮೂಲಕ ಎಲ್ಲರ ಮೆಚ್ಚುಗೆ ಗಳಿಸುತ್ತಿದ್ದರು.
ಒಮ್ಮೆ ಅಭಲಯ ಕೊಲೆ ನಾಟಕ ಪ್ರದರ್ಶನ ಮಾಡಿದಾಗ ನಮ್ಮೆಲ್ಲರ ಪೂಜ್ಯ ಗುರುಗಳಾಗಿದ್ದ ಎಲ್ಲರನ್ನೂ ಪ್ರೀತಿ ಮಾಡುತ್ತಿದ್ದ ದಿವಂಗತ ಎಂಎಸ್ ಅವಧಾನಿಗಳು ಹೇಳಿದ ಮಾತು ಈಗಲೂ ನೆನಪು ಬರುತ್ತದೆ.
ಭಾರತಿ ಕಲಾವಿದರಿಂದ ಈಗ ನಾಟಕ ಅಭಲಯ ಕೊಲೆ ಇವರೆಲ್ಲರೂ ಸೇರಿ ಯಾರನ್ನು ಕೊಲೆ ಮಾಡುತ್ತಾರೆ ಕಾದು ನೋಡಿ ಪ್ರೇಕ್ಷಕರೆ ಎಂದು ಹೇಳಿ ಆಸೆ ಪಟಾಕಿ ಬೀರಿದ್ದರು ಎನ್ನುತ್ತಾರೆ ಭಾರತಿ ಕಲಾವಿದರ ಸಂಘದ ಹಿರಿಯಜ್ಜ ಎಲ್.ನಾರಾಯಣಾಚಾರ್.
ಹಿರಿಯೂರಿನಲ್ಲಿ ಭಾರತಿ ಕಲಾವಿದರ ಸಂಘ ಸ್ಥಾಪನೆಯಾಗಿತ್ತು. ಒಂದು ತಿಂಗಳ ಕಾಲ ನಿರಂತರವಾಗಿ ನಾಟಕವಾಡುತ್ತಿದ್ದರು. ರಾಜ್ಯದ ಅನೇಕ ಜಿಲ್ಲೆಗಳಲ್ಲಿ ನಾಟಕ ಪ್ರದರ್ಶನ ಮಾಡಿದ್ದರು. ಇದರಲ್ಲಿ ಪ್ರಮುಖರು ಎಲ್.ನಾರಾಯಣಾಚಾರ್ ಅವರ ಸಹೋದರ(ಅಣ್ಣ) ದಿವಂಗತ ಎಲ್.ಮಹಾಲಿಂಗ ಚಾರ್.
ಮುಂದುವರೆದು ಎಲ್.ನಾರಾಯಣಾಚಾರ್ 60 ವರ್ಷಗಳ ಹಿಂದಿನ ಘಟನೆಗಳನ್ನು ಮೆಲಕು ಹಾಕುತ್ತಾ, ಐದು ಜನ ಸಹೋದರರು ಸೇರಿದಂತೆ ಭಾರತಿ ಕಲಾವಿದರೊಟ್ಟಿಗೆ ನಾಟಕ ಆಡಿದ್ದೆವು. ಹಿರಿಯೂರಿನ ಈಗಿನ ನೆಹರು ಮಾರುಕಟ್ಟೆಯ ಒಳಭಾಗದಲ್ಲಿ ಮಲತಾಯಿ ಎಂಬ ಸಾಮಾಜಿಕ ನಾಟಕ ಮಾಡಿದ್ದೆವು. ಅದೇ ದಿನವೇ ಹಾಸ್ಯ ಚಕ್ರವರ್ತಿ ಮಾಸ್ಟರ್ ಹಿರಣ್ಣಯ್ಯನವರ ಲಂಚಾವತಾರ ನಾಟಕ ಸಹ ಪ್ರದರ್ಶನಗೊಂಡಿತ್ತು.

ಶ್ರೀ ತೇರು ಮಲ್ಲೇಶ್ವರ ಸ್ವಾಮಿ ಜಾತ್ರೆಯಲ್ಲೂ ಸಹ ಭಾರತಿ ಕಲಾವಿದರುಗಳು ನಾಟಕ ಮಾಡುತ್ತಿದ್ದರು.
ಹಿರಿಯೂರು ತಾಲೂಕಿನ ಅನೇಕ ಗ್ರಾಮಗಳಲ್ಲಿ ಹಳ್ಳಿ ಚಿತ್ರ ನಾಟಕ ಪ್ರದರ್ಶನಗೊಂಡಿತ್ತು. ಆ ಮೂಲಕ ತಾಲೂಕಿನ ಎಲ್ಲಾ ಹಳ್ಳಿಗರ ಮನಸ್ಸನ್ನು ಭಾರತಿ ಕಲಾವಿದರು ಆಕರ್ಷಣೆ ಮಾಡಿದ್ದರು.
ಎಲ್.ನಾರಾಯಣಾಚಾರ್ ಅವರೊಟ್ಟಿಗೆ ಪಾತ್ರ ವಹಿಸುತ್ತಿದ್ದ ಲಕ್ಷ್ಮಣ್, ಪಾಂಡುರಂಗ ನಾಯಕ, ಸಣ್ಣ ತಿಮ್ಮಯ್ಯ, ತಿಮ್ಮಯ್ಯ, ಜಿಪಿ ನಾರಾಯಣ, ವಕೀಲ ಎಚ್.ಆರ್ ಕಣ್ಣಪ್ಪ, ನಿಜಲಿಂಗಪ್ಪ ಮತ್ತು ಗಿರಿಯಣ್ಣ ವಿಧಿವಶರಾಗಿದ್ದಾರೆ. ಈಗ ಅವರುಗಳು ಮತ್ತು ಭಾರತಿ ಕಲಾವಿದರ ಸಂಘ ನೆನಪು ಮಾತ್ರ.

