ಮಲ್ಲಿಕಾರ್ಜುನ ಖರ್ಗೆ ಅವರನ್ನು ದಿಢೀರ್ ಭೇಟಿ ಮಾಡಿದ ಗೃಹ ಸಚಿವರು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಗೃಹ ಸಚಿವರು ದಿಢೀರ್ ಭೇಟಿ ಮಾಡಿದ್ದು ರಾಜಕೀಯವಾಗಿ ಹಲವು ಚರ್ಚೆಗಳನ್ನು ಹುಟ್ಟು ಹಾಕಿರುವ ಸಂದರ್ಭದಲ್ಲೇ ಭೇಟಿಯ ವೇಳೆ ಯಾವುದೇ ರೀತಿಯ ರಾಜಕೀಯ ಚರ್ಚಿಸಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ನನಗೆ ಮಲ್ಲಿಕಾರ್ಜುನ ಖರ್ಗೆಯವರು ಹಿರಿಯಣ್ಣ ಇದ್ದ ಹಾಗೆ. ಖರ್ಗೆ ಅವರ ಕುಟುಂಬ ಮತ್ತು ನಮ್ಮ ಕುಟುಂಬ ಒಂದೇ. ನಾವು ಆಗಾಗ್ಗೆ ಭೇಟಿ ಮಾಡುತ್ತಿರುತ್ತೇವೆ. ಈ ವೇಳೆ ಕುಟುಂಬದ ವಿಚಾರಗಳನ್ನು ಮಾತಾಡುತ್ತೇವೆ. ರಾಜಕೀಯ ವಿಚಾರಗಳನ್ನು ಮಾತನಾಡಲು ಹೋಗುವುದಿಲ್ಲ. ನಿನ್ನೆಯ ಭೇಟಿ ವೇಳೆ ಯಾವುದೇ ರಾಜಕೀಯ ಚರ್ಚೆ ಮಾಡಿಲ್ಲ ಎಂದರು.

ದೆಹಲಿ ನಾಯಕರ ಭೇಟಿಯ ವಿಚಾರಕ್ಕೆ, ದೆಹಲಿಗೆ ಹೋಗುತ್ತೇನೆ. ಅದರಲ್ಲೇನು ತೊಂದರೆ ಇದೆ?. ನಮ್ಮ ನಾಯಕರನ್ನು ಭೇಟಿ ಮಾಡಿ ಬರುತ್ತೇವೆ. ಅದಕ್ಕೆ ಬೇರೆ ಬೇರೆ ಕಲ್ಪನೆಗಳನ್ನು ಮಾಡಿಕೊಳ್ಳುವ ಅಗತ್ಯವಿಲ್ಲ. ಖರ್ಗೆ ಅವರನ್ನು ಭೇಟಿ ಮಾಡಿರುವ ವಿಚಾರದಲ್ಲಿ ಮುಚ್ಚುಮರೆ ಏನಿದೆ?. ರಾಜಕೀಯ ಚರ್ಚೆ ಮಾಡಿದ್ದರೆ, ಮಾಡಿರುವುದಾಗಿ ಹೇಳುತ್ತಿದ್ದೆ ಎಂದು ಪರಮೇಶ್ವರ್ ತಿಳಿಸಿದರು.

ತೆರಿಗೆ ಪಾಲು ಕೇಳಿದರೆ ಸಣ್ಣತನ ಎಂದಿರುವ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರಿಗೆ ನಾಚಿಕೆಯಾಗಬೇಕು. ಈ ದೇಶದಲ್ಲಿ ಯಾವ ರೀತಿಯ ಆಡಳಿತ ನಡೆಯುತ್ತಿದೆ ಅನ್ನೋದನ್ನು ಸ್ವಲ್ಪ ಅರ್ಥ ಮಾಡಿಕೊಂಡು ವಿಶ್ಲೇಷಣೆ ಮಾಡಿಕೊಂಡರೆ ಒಳ್ಳೆಯದು. ಒಕ್ಕೂಟ ವ್ಯವಸ್ಥೆಯಲ್ಲಿ ತೆರಿಗೆ ಪಾಲು ಯಾವ ರೀತಿ ಹಂಚಿಕೆಯಾಗಬೇಕು ಎಂಬುದರ ಬಗ್ಗೆ ನಿಯಮ ಮಾಡಿಟ್ಟಿದ್ದಾರೆ. ಹೆಚ್ಚು ತೆರಿಗೆ ಕಟ್ಟುತ್ತಿರುವ ಕರ್ನಾಟಕದವರಿಗೆ ಹೆಚ್ಚು ಪಾಲು ನೀಡುವಂತೆ ಕೇಳುತ್ತಿದ್ದೇವೆ ಎಂದು ಅವರು ತಿಳಿಸಿದರು.

ಸರಿಯಾಗಿ ತೆರಿಗೆ ಹಂಚಿಕೆ ಮಾಡಿ ಎಂದು ಕೇಳಿದರೆ ಗೋಯಲ್ ಅವರು ಸಣ್ಣತನ ಅಂತ ಹೇಳುತ್ತಾರೆ. ನಮ್ಮ ರಾಜ್ಯವನ್ನು ಪ್ರತಿನಿಧಿಸುತ್ತಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕ ದಿವಾಳಿ ಆಗಿದೆ ಎಂದು ಹೇಳುತ್ತಾರೆ. ಒಬ್ಬ ಜವಾಬ್ದಾರಿ ಸ್ಥಾನದಲ್ಲಿರುವ ಸಚಿವೆ ಆ ರೀತಿ ಮಾತನಾಡಬಾರದು ಎಂದು ಪರಮೇಶ್ವರ್ ತಾಕೀತು ಮಾಡಿದರು. ಒಕ್ಕೂಟ ವ್ಯವಸ್ಥೆಯಲ್ಲಿ ನಾವೆಲ್ಲ ಹೋಗಬೇಕು. ವ್ಯವಸ್ಥೆ ಬದಲಾವಣೆ ಮಾಡಿಕೊಳ್ಳಲಿ. ಕೇಂದ್ರಕ್ಕೆ ಬಂದಿರುವ ತೆರಿಗೆ ಯಾರಿಗೂ ಕೊಡುವುದಿಲ್ಲ ಎಂದು ನಿಯಮ ಮಾಡಲಿ ಎಂದು ಖಾರವಾಗಿ ಅವರು ಹೇಳಿದರು.
ಜಾತಿಗಣತಿ ವರದಿ: ಜಾತಿಗಣತಿ ವರದಿ ಜಾರಿಗೆ ತರಲು ಯಾರೂ ಅಡ್ಡಿಪಡಿಸಿಲ್ಲ. ಆಂತರಿಕವಾಗಿ ಚರ್ಚೆಯಾಗಬೇಕಿದೆ ಎಂದರು.
 

ಸಂಪುಟ ಸಭೆ:
ಮುಖ್ಯಮಂತ್ರಿಗಳು ಆರೋಗ್ಯದ ಸಮಸ್ಯೆಯಿಂದ ಸಚಿವ ಸಂಪುಟ ಸಭೆ ಮುಂದೂಡಿದ್ದು ಮಲೆಮಹದೇಶ್ವರ ಬೆಟ್ಟದಲ್ಲಿ ಫೆ.17ರಂದು ಸಂಪುಟ ಸಭೆ ನಡೆಸಲು ನಿರ್ಧರಿಸಿದ್ದಾರೆ ಎಂದು ತಿಳಿಸಿದರು.

 

Share This Article
error: Content is protected !!
";