ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಸರ್ಕಾರದ ವತಿಯಿಂದ ಐಪಿಎಲ್-2025 ಚಾಂಪಿಯನ್ ಆರ್‌ಸಿಬಿ ಆಟಗಾರರಿಗೆ ವಿಧಾನಸೌಧದ ಮುಂಭಾಗದಲ್ಲಿ ಸನ್ಮಾನ ನಡೆಯಿತು. ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮಾತನಾಡಿ ವಿಧಾನಸೌಧ ಮತ್ತು ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ಹೆಚ್ಚು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದು ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿ ನೇಮಿಸಲಾಗಿದೆ ಎಂದು ತಿಳಿಸಿದರು.
ಚಿನ್ನಸ್ವಾಮಿಗೆ ಯಾರಿಗೆ ಎಂಟ್ರಿ?: ಅಧಿಕೃತ ಟಿಕೆಟ್ ಹಾಗೂ ಐಪಿಎಲ್‌ನಿಂದ ಮಾನ್ಯತೆ ಪಡೆದಿರುವ ಪಾಸ್ ಹೊಂದಿರುವವರಿಗೆ ಮಾತ್ರವೇ ಕ್ರೀಡಾಂಗಣಕ್ಕೆ ಪ್ರವೇಶ ಕಲ್ಪಿಸಲಾಗುವುದು. ಈಗಾಗಲೇ ಆನ್‌ಲೈನ್ ಮೂಲಕ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯನ್ನು ಆಯೋಜಕರು ಮಾಡಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಆಯುಕ್ತರು ತಿಳಿಸಿದರು. ಸಂಜೆ 5 ಗಂಟೆಯ ಬಳಿಕ ಆರ್‌ಸಿಬಿ ಆಟಗಾರರು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆಯಲ್ಲಿ ಭಾಗಿಯಾಗಲಿದ್ದಾರೆ.
ಮೈಸೂರಿನಲ್ಲೂ ಸಂಭ್ರಮಾಚರಣೆ:
ಮೈಸೂರಿನಲ್ಲೂ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ದೇವರಾಜ ಅರಸು ರಸ್ತೆ, ಅಗ್ರಹಾರ, ರಾಮಾನುಜ ರಸ್ತೆ, ಕಾಳಿದಾಸ ರಸ್ತೆ, ಹಲವೆಡೆ ಮ್ಯಾಚ್ ನೋಡಲು ನೂರಾರು ಸಂಖ್ಯೆಯಲ್ಲಿ ಸೇರಿ ಅಭಿಮಾನಿಗಳು, ಪಂಜಾಬ್ ಕಿಂಗ್ಸ್ ವಿರುದ್ಧ ಬೆಂಗಳೂರು ತಂಡ ಗೆಲ್ಲುತ್ತಿದ್ದಂತೆ ಕುಣಿದು ಕುಪ್ಪಳಿಸಿದರು. ಆರ್‌ಸಿಬಿ ಬಾವುಟ, ವಿರಾಟ್ ಕೊಹ್ಲಿ ಸೇರಿದಂತೆ ಆರ್‌ಸಿಬಿ ಆಟಗಾರರ ಭಾವಚಿತ್ರ ಹಿಡಿದು ಅಭಿಮಾನಿಗಳು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.
ಸಿಎಂ ಅಭಿನಂದನೆ: ಐಪಿಎಲ್ ಗೆದ್ದಿರುವ ಆರ್‌ಸಿಬಿ ತಂಡಕ್ಕೆ ಹಾಗೂ ಅಭಿಮಾನಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದಿಸಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯವು ಅತೀವ ಹೆಮ್ಮೆ ಹಾಗೂ ಪಡುವಂಥ ಕೆಲಸ ಆರ್‌ಸಿಬಿ ಮಾಡಿದ್ದು, ವಿಧಾನಸೌಧದ ಮೆಟ್ಟಿಲುಗಳಲ್ಲಿ ಇಂದು ತಂಡಕ್ಕೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಬಳಿಕ ತೆರೆದ ವಾಹನದಲ್ಲಿ ಆರ್‌ಸಿಬಿ ತಂಡದ ವಿಯಯೋತ್ಸವ ಪರೇಡ್ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಭದ್ರತಾ ಸಮಸ್ಯೆಯಿಂದ ವಿಧಾನಸೌಧದಿಂದ ಚಿನ್ನಸ್ವಾಮಿ ಸ್ಟೇಡಿಯಂವರೆಗೆ ಪರೇಡ್ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ ಎಂದು ತಿಳಿದುಬಂದಿದೆ. ಅದರ ಬದಲು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವಿಜಯೋತ್ಸವ ನಡೆಯಲಿದೆ.