ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಶ್ರೀ ಮಾದರ ಚೆನ್ನಯ್ಯ ಗುರು ಪೀಠ ಹಾಗೂ ಸಂತೋಷ್ ಲಾಡ್ ಫೌಂಡೇಶನ್ ಹಾಗೂ ಇಂಡೋ-ಟಿಬೆಟ್ ಫ್ರೆಂಡ್ ಶಿಪ್ ಸೊಸೈಟಿ ವತಿಯಿಂದ ಚಿತ್ರದುರ್ಗ ನಗರದಲ್ಲಿ ಮಾದಾರ ಗುರು ಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳ ನೇತೃತ್ವದಲ್ಲಿ ಭಾನುವಾರ ಬೃಹನ್ಮಠದ ಅನುಭವ ಮಂಟಪದಲ್ಲಿ ಬಸವ ನಾಡಿನಲ್ಲಿ ಬುದ್ಧ ಸ್ಮರಣೆ ಕಾರ್ಯಕ್ರಮದ ಅಂಗವಾಗಿ ಚಿತ್ರದುರ್ಗ ನಗರದಲ್ಲಿ ಬೌದ್ಧ ಭಿಕ್ಕುಗಳ(ಟಿಬೆಟಿಯನ್ನರ) ಬೃಹತ್ ಪಾದಾಯಾತ್ರೆ ಹಮ್ಮಿಕೊಳ್ಳಲಾಗಿತ್ತು.
ಚಿತ್ರದುರ್ಗ ನಗರದ ಪ್ರವಾಸಿ ಮಂದಿರದ ಬಳಿ ಟಿಬೆಟಿಯನ್ನರಿಗೆ ಮಾದರ ಚೆನ್ನಯ್ಯ ಗುರು ಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಸಚಿವ ಸಂತೋಷ್ ಲಾಡ್ ಶಾಸಕ ಕೆ ಸಿ ವೀರೇಂದ್ರ ಪಪ್ಪಿ ಯವರು ಹೂ ಗುಚ್ಛ ನೀಡುವುದರ ಮೂಲಕ ಗೌರವಯುತವಾಗಿ ಸ್ವಾಗತಿಸಿದರು.
ನಂತರ ಅಲ್ಲಿಂದ ಪಾದಯಾತ್ರೆ ಹೊರಟ ಬೌದ್ಧ ಭಿಕ್ಕುಗಳು ನೀಲಕಂಠೇಶ್ವರ ದೇವಾಲಯದಿಂದ ಅಂಬೇಡ್ಕರ್ ವೃತ್ತದವರೆಗೆ ಪಾದಯಾತ್ರೆ ನಡೆಸಿ ಅಂಬೇಡ್ಕರ್ ಅವರ ಪುತ್ತಳಿಗೆ ನಮನ ಸಲ್ಲಿಸಿ, ಮುಂದೆ ಸಾಗುತ್ತಾ ಮದಕರಿ ನಾಯಕ ಅವರ ಪುತ್ತಳಿಗೆ ಹೂ ಮಾಲೆ ಹಾಕಿ ಪ್ರಾರ್ಥನೆ ಸಲ್ಲಿಸಿದರು.
500ಕ್ಕೂ ಹೆಚ್ಚು ಬೌದ್ಧ ಭಿಕ್ಕುಗಳು ತಮ್ಮ ವಿಶೇಷ ವಸ್ತ್ರಗಳನ್ನು ಧರಿಸಿ ದಾರಿ ಉದ್ದಕ್ಕೂ ಪ್ರಾರ್ಥನೆ ಸಲ್ಲಿಸುತ್ತಾ ಪಾದಯಾತ್ರೆ ನಡೆಸಿದರು.

ಇವರ ಜೊತೆಗೆ ಮಾದರ ಚೆನ್ನಯ್ಯ ಶ್ರೀಗಳು, ಸಚಿವ ಸಂತೋಷಲಾಡ್, ಶಾಸಕರಾದ ಕೆ.ಸಿ.ವಿರೇಂದ್ರ ಪಪ್ಪಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

