ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆ ಸಂಪುಟದ ನಿರ್ಣಯ ವಾಪಸ್ ಪಡೆಯದಿದ್ದರೆ ಹೋರಾಟ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಲ್ಪಸಂಖ್ಯಾತರ ಭಾಷೆ, ಸಂಸ್ಕೃತಿಯ ರಕ್ಷಣೆಯ ದೃಷ್ಟಿಯಿಂದ ಸಂವಿಧಾನದಲ್ಲಿ ಅಲ್ಪಸಂಖ್ಯಾತರಿಗೆ ಶಿಕ್ಷಣ ಸಂಸ್ಥೆ ಸ್ಥಾಪಿಸುವ ಹಕ್ಕು ನೀಡಲಾಗಿದೆ. ಅಲ್ಪಸಂಖ್ಯಾತ ಸಮುದಾಯದವರು ಸ್ಥಾಪಿಸಿ ಮುನ್ನಡೆಸುವ ಶಿಕ್ಷಣ ಸಂಸ್ಥೆಗಳಲ್ಲಿ ಆಯಾ ಧರ್ಮದ ಅಥವಾ ಭಾಷಿಕರ ಸಂಖ್ಯೆ ಶೇ.90 ರಷ್ಟು ಇರಬೇಕು ಎನ್ನುವುದು ಕಾಯ್ದೆಯ ವ್ಯಾಖ್ಯಾನವಾಗಿದೆ. ಇಂತಹ ಸಂಸ್ಥೆಗಳು ಮಾತ್ರ ಅಲ್ಪಸಂಖ್ಯಾತ ಸ್ಥಾನಮಾನ ಹೊಂದಲು ಅವಕಾಶ ನೀಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.

ಈ ಹಿಂದಿನಿಂದಲೂ ಅಲ್ಪಸಂಖ್ಯಾತರನ್ನು ತುಷ್ಟೀಕರಣ ಮಾಡುವುದು ತನ್ನ ಮೊದಲ ಆದ್ಯತೆ ಎಂಬಂತೆ ನಡೆದುಕೊಳ್ಳುತ್ತಿರುವ ಕಾಂಗ್ರೆಸ್ ,ಕರ್ನಾಟಕದಲ್ಲಿ ವಿಪರೀತ ಎನ್ನುವಷ್ಟರಮಟ್ಟಿಗೆ ಅಲ್ಪಸಂಖ್ಯಾತರನ್ನು ಓಲೈಸುತ್ತಿದೆ. ಇದೀಗ ಅಲ್ಪ ಸಂಖ್ಯಾತರ ಆಡಳಿತ ಮಂಡಳಿ ಇರುವ ಶಿಕ್ಷಣ ಸಂಸ್ಥೆಗಳಿಗೆ ಬೆನ್ನೆಲುಬಾಗುವ ದೃಷ್ಟಿಯಿಂದ ಆ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳ ಸಂಖ್ಯೆ ಕನಿಷ್ಠವಿದ್ದರೂ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ನಿರ್ಧಾರ ಕೈಗೊಂಡಿರುವ ನಿನ್ನೆಯ ಸಂಪುಟದ ನಿರ್ಣಯ ಕನ್ನಡ ನಾಡು, ನುಡಿ, ಸಂಸ್ಕೃತಿಯ ಬೆಳವಣಿಗೆಗೆ ಕೊಡಲಿ ಪೆಟ್ಟು ನೀಡುವ ಮಾರಕ ನಿರ್ಧಾರವಾಗಿದೆ ಎಂದು ವಿಜಯೇಂದ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಬೆಂಗಳೂರನ್ನು ಕೇಂದ್ರೀಕರಿಸಿದಂತೆ ರಾಜ್ಯದಲ್ಲಿ ಅನೇಕ ಅಲ್ಪಸಂಖ್ಯಾತ ಆಡಳಿತ ಮಂಡಳಿಯ ಶಿಕ್ಷಣ ಸಂಸ್ಥೆಗಳು ಈಗಾಗಲೇ ತಮ್ಮ ಕಬಂದಬಾಹುವಿನಿಂದ ಶಿಕ್ಷಣ ವ್ಯವಸ್ಥೆಯನ್ನು ಆಪೋಶನ ಮಾಡಿಕೊಂಡಿವೆ. ಇಂತಹ ಸಂಸ್ಥೆಗಳಲ್ಲಿ ಕನ್ನಡ ಕಲಿಕೆ ಮತ್ತು ಕರ್ನಾಟಕ ಸಂಸ್ಕೃತಿಯನ್ನು ಕಾಣುವುದು ವಿರಳವಾಗುತ್ತಿದೆ. ಇದರ ನಡುವೆ ಅಲ್ಪಸಂಖ್ಯಾತರು ನಡೆಸುವ ಸಂಸ್ಥೆಗಳಿಗೆ ಇನ್ನಷ್ಟು ಶಕ್ತಿ ತುಂಬುವ ನಿಟ್ಟಿನಲ್ಲಿ ಅಲ್ಪಸಂಖ್ಯಾತ ಸ್ಥಾನಮಾನ ಕೊಡಲು ಉದಾರತೆ ತೋರುತ್ತಿರುವ ಸರ್ಕಾರದ ನಿರ್ಣಯ ಅತ್ಯಂತ ಖಂಡನೀಯ. ಇದು ಸಂವಿಧಾನಕ್ಕೆ ಬಗೆಯುತ್ತಿರುವ ಅಪಚಾರವೂ ಹೌದು ಎಂದು ಅವರು ಎಚ್ಚರಿಸಿದ್ದಾರೆ.

ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳೆಂದರೆ ಅಲ್ಲಿ ಕನಿಷ್ಠ ಶೇ 75 % ರಷ್ಟಾದರೂ ಆಯಾ ಧರ್ಮದ ಅಥವಾ ಆಯಾ ಭಾಷಿಕ ವಿದ್ಯಾರ್ಥಿಗಳು ಇರಲೇಬೇಕು ಎಂಬ ನಿಯಮವನ್ನು ಕಾಯ್ದೆಗೆ ವಿರುದ್ಧವಾಗಿ ತಿದ್ದುಪಡಿ ಮಾಡಲು ಹೊರಟಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ ಈ ನಿರ್ಣಯವನ್ನು ವಾಪಾಸ್ ಪಡೆದುಕೊಳ್ಳಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯವಾದೀತು ಎಂದು ವಿಜಯೇಂದ್ರ ಎಚ್ಚರಿಸಿದ್ದಾರೆ.

 

- Advertisement -  - Advertisement - 
Share This Article
error: Content is protected !!
";