ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಭಾರತೀಯ ಸಂಸ್ಕೃತಿ ಜಗತ್ತಿನಲ್ಲಿಯೇ ಶ್ರೇಷ್ಠ, ಗುರುಗಳನ್ನು ಗೌರವಿಸುವ ಏಕೈಕ ಪರಂಪರೆ ಹೊಂದಿರುವ ರಾಷ್ಟ್ರವೆಂದರೆ ಭಾರತ ಮಾತ್ರ, ಗುರು ಕರುಣೆ ಪಡೆದ ಶಿಷ್ಯಂದಿರ ಭವಿಷ್ಯ ಉಜ್ವಲವಾಗುತ್ತದೆ ಎಂದು ನಿವೃತ್ತ ಮುಖ್ಯ ಶಿಕ್ಷಕ ಚಿಕ್ಕತಿಮ್ಮಪ್ಪ ಹೇಳಿದರು.
ತಾಲೂಕಿನ ಹರಿಯಬ್ಬೆ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಭಾನುವಾರ ೧೯೯೯ ನೇ ಸಾಲಿನ ಸಹಪಾಠಿ ಸ್ನೇಹಿತರ ಬಳಗದಿಂದ ಹಮ್ಮಿಕೊಂಡಿದ್ದ ಗುರುವಂದನಾ-ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪಾಠ ಮಾಡಿದ ಗುರುಗಳು ಯಾವುದೇ ಅಪೇಕ್ಷೆ ಇಲ್ಲದೆ ಶಿಷ್ಯರ ಭವಿಷ್ಯ ರೂಪಿಸುತ್ತಾರೆ, ಜೀವನಕ್ಕೆ ಮಾರ್ಗದರ್ಶಕರಾಗುತ್ತಾರೆ. ಆದರೆ ಇಂದಿನ ಶಿಕ್ಷಣ ಪದ್ಧತಿ ಸಾಕಷ್ಟು ಬದಲಾಗಿದೆ. ಮಕ್ಕಳಿಗೆ ದಂಡಿಸದೆ ಶಿಕ್ಷಿಸದೆ ಪಾಠ ಮಾಡಬೇಕು ಎಂದು ಪಾಲಕರೇ ತಾಕೀತು ಮಾಡುತ್ತಾರೆ. ಇದು ಬೇಸರದ ಸಂಗತಿ. ವಿದ್ಯಾರ್ಥಿಗಳ ಕಲಿಕೆ ಶ್ರೇಷ್ಠ ಮಠದಲ್ಲಿ ಇರಬೇಕು ಎಂಬುದಕ್ಕಾಗಿ ಗುರುಗಳು ದಂಡಿಸುತ್ತಾರೆ, ಬಾಲ್ಯದಲ್ಲಿ ತಿದ್ದದೇ ತಪ್ಪಿಗೆ ಶಿಕ್ಷೆ ನೀಡದೇ ಕಲಿಸುವ ಶಿಕ್ಷಣವು ನಿಜವಾದ ಶಿಕ್ಷಣವೇ ಅಲ್ಲ, ವಿದ್ಯಾರ್ಥಿಗಳು ಬದುಕು ಹಸನಾಗಲಿ ಎಂದು ಮಾತ್ರ ಶಿಕ್ಷಕರು ಬಯಸುತ್ತಾರೆ. ಈ ನಿಟ್ಟಿನಲ್ಲಿ ಇಂದಿನ ಶಿಕ್ಷಕ-ಪಾಲಕರ ಸಂಬಂಧ ಉನ್ನತೀಕರಣಗೊಳ್ಳಬೇಕು ಎಂದು ತಿಳಿಸಿದರು.
ಶಿಕ್ಷಕಿ ಶಿವಲಿಂಗಮ್ಮ ಮಾತನಾಡಿ, ನಾವು ಗಳಿಸಿದ ಆಸ್ತಿ, ಅಧಿಕಾರ, ಸಂಪತ್ತು ಯಾವುದೂ ಕೊನೆಯವರೆಗೂ ಉಳಿಯೊಲ್ಲ, ಆದರೆ ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜತೆಗಿರುತ್ತದೆ. ಸರ್ಕಾರಿ ಕನ್ನಡ ಮಾಧ್ಯಮ ಗ್ರಾಮೀಣ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗ ವಿದ್ಯಾರ್ಥಿಗಳೇ ಬದುಕು, ಸಮಾಜದಲ್ಲಿ ಛಲ ಹಿಂಜರಿಕೆಯಿಲ್ಲದೇ ಮುನ್ನಡೆಯಲು ಸಾಧ್ಯ, ನಮ್ಮ ಮಕ್ಕಳು ಕೂಡಾ ಗೌರವಿಸದ ಈ ಕಾಲ ಘಟ್ಟದಲ್ಲಿ ಹಳೆ ವಿದ್ಯಾರ್ಥಿಗಳು ನಮ್ಮನ್ನು ನಡೆಸಿಕೊಂಡ ರೀತಿ ಅದ್ಬುತ, ಅದನ್ನು ಮಾತಿನಲ್ಲಿ ವರ್ಣಿಸಲಸಾಧ್ಯ ಎಂದರು. ನಾವು ಗುರುಗಳಾಗಿ ಎಷ್ಟು ನ್ಯಾಯ ಒದಗಿಸಿದ್ದೀವೋ ಗೊತ್ತಿಲ್ಲ ಆದರೆ ನಮ್ಮನ್ನು ಮರೆಯದೆ ೨೫ ವರ್ಷದ ನಂತರ ಕರೆದು ಗೌರವಿಸುತ್ತಿರುವುದು ಅವಿಸ್ಮರಣೀಯ ಎಂದು ಹೇಳಿದರು.
ನಿವೃತ್ತ ಮುಖ್ಯ ಶಿಕ್ಷಕ ತಿಪ್ಪೇಸ್ವಾಮಿ ಮಾತನಾಡಿ, ಒಂದು ಕಾಲದಲ್ಲಿ ಗುರು-ಶಿಷ್ಯರ ಸಂಬಂಧ ಉತ್ತಮವಾಗಿತ್ತು. ಮಕ್ಕಳಿಗೆ ಸಂಸ್ಕಾರದ ಜತೆ, ದೇಶದ ಪರಂಪರೆ, ಸಂಸ್ಕೃತಿ, ಹಳ್ಳಿಯ ಸೊಗಡು, ಸಂಪ್ರದಾಯ, ಆಚಾರ-ವಿಚಾರ, ಸಮಾಜಮುಖಿ ಚಿಂತನೆ ಬೆಳೆಸಬೇಕು ಎಂದರು.
ನಿವೃತ್ತ ಪ್ರಾಚಾರ್ಯ ವೀರಭದ್ರಯ್ಯ ಮಾತನಾಡಿ, ಶಿಕ್ಷಕ ವೃತ್ತಿ, ಸ್ಥಾನ ಗೌರವಿಸಿ, ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು, ಗುರುಗಳಲ್ಲಿ ಹೇಗೆ ಅರ್ಪಣಾ ಮನೋಭಾವ ಅಗತ್ಯವೋ ಹಾಗೆ ಶಿಷ್ಯರಲ್ಲಿ ಗುರುವನ್ನು ಸತ್ಕರಿಸುವ ಮನಸ್ಸಿರಬೇಕು ಎಂದರು.
ಉಪನ್ಯಾಸಕ ಹರೀಶ್ ಮಾತನಾಡಿ, ದೇಶಕ್ಕೆ ಉತ್ತಮ ನಾಗರಿಕರನ್ನು ರೂಪಿಸಿಕೊಡುವಲ್ಲಿ ಗುರುವಿನ ಪಾತ್ರ ಮಹತ್ವ ಅನನ್ಯವಾಗಿದೆ. ನಮ್ಮಲ್ಲಿರುವ ಅಜ್ಞಾನವನ್ನು ಹೊರ ಹಾಕಲು ಶಿಕ್ಷಕರು ಮಾರ್ಗದರ್ಶಿಯಾಗುತ್ತಾರೆ. ಗುರು ಎಂಬ ಶಬ್ದದ ಅರ್ಥವೂ ಇದನ್ನೇ ಹೇಳುತ್ತದೆ. ಅಂಧಕಾರವನ್ನು ದೂರಾಗಿಸುವವನು ಪ್ರತಿಯೊಬ್ಬರ ಜೀವನದ ಏಳು-ಬೀಳಿಗೆ ಗುರು ಪ್ರತ್ಯಕ್ಷ-ಪರೋಕ್ಷವಾಗಿ ಕಾರಣನಾಗುತ್ತಾನೆ ಎಂದರು.
ನಿವೃತ್ತ ಶಿಕ್ಷಕ ಶಿವಲಿಂಗಪ್ಪ ಮಾತನಾಡಿ, ದಿನ ನಿತ್ಯದ ಒತ್ತಡ ಜೀವನದಲ್ಲಿ ಹುಟ್ಟಿದ ಊರು, ಹೆತ್ತವರು, ಅಕ್ಷರ ಕಲಿಸಿದ ಗುರುಗಳನ್ನು ನೆನಪು ಮಾಡಿಕೊಳ್ಳಲಾಗದ ಸ್ಥಿತಿಗೆ ತಲುಪಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹಿರಿಯ ವಿದ್ಯಾರ್ಥಿಗಳೆರಲ್ಲನ್ನೂ ಒಟ್ಟುಗೂಡಿಸಿ ತಮ್ಮ ಹಳೆಯ ದಿನಗಳನ್ನು ಮೆಲಕು ಹಾಕುವಂತಹ ಸುಂದರ ಕ್ಷಣಗಳಿಗೆ ಸಾಕ್ಷಿಯಾಗಿದೆ. ಇಂತಹ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಲಿದೆ. ಆ ಮೂಲಕ ಶಾಲೆ-ಗ್ರಾಮದ ಅಭಿವೃದ್ಧಿಯನ್ನು ಸಾಧಿಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ನಿವೃತ್ತ ಶಿಕ್ಷಕಿ ಅನಸೂಯಮ್ಮ ಮಾತನಾಡಿದರು. ಶಿಕ್ಷಕರಾದ ಮಹಾದೇವಮ್ಮ, ಸುವರ್ಣಮ್ಮ, ಯಶೋಧಮ್ಮ, ರುದ್ರಪ್ಪ, ಸುರೇಶ್, ಬಸವರಾಜಪ್ಪ, ಕೆಂಚಪ್ಪ, ಅಣ್ಣಪ್ಪ ಹಿರೇಕಲ್, ಡೀಷಪ್ಪ, ತಿಪ್ಪೇಸ್ವಾಮಿ, ಶ್ರೀನಾಥ್, ಬಿ.ತಿಪ್ಪೇಸ್ವಾಮಿ, ಈಶ್ವರಪ್ಪ ಅವರನ್ನು ಗೌರವಿಸಲಾಯಿತು.
ಹಳೇ ವಿದ್ಯಾರ್ಥಿ ಸಂಘದ ಉಪನ್ಯಾಸಕ ಶಿವಾನಂದ್, ಜೆ.ಕವಿತಾ, ರೂಪಾ, ಸುಮ, ಸಂಧ್ಯಾ, ರೂಪಾ, ತೀರ್ಥ, ಇಂದಿರಾ, ಶಿವಮೂರ್ತಿ, ಕೆ.ಟಿ. ಹನುಮಂತರಾಯ, ರಾಘವೇಂದ್ರನಾಯ್ಕ್, ಜೆ.ರಾಧಾ, ದೇವರಾಜ್, ಶಕ್ತಿಮುನಿ, ಶ್ರೀನಿವಾಸ್, ಸತ್ಯ, ಎಚ್.ಎಂ. ನಾಯಕ್, ಸುನೀಲ್, ಗ್ರಾಪಂ. ಮಾಜಿ ಅಧ್ಯಕ್ಷ ಪರಮೇಶ್ವರ್, ಶಿಕ್ಷಣ ಪ್ರೇಮಿ ಶಿವಮೂರ್ತಿ, ಏಕಾಂತಪ್ಪ, ವೆಂಕಟೇಶ್ ಇತರರಿದ್ದರು.