ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಮುಲ್ ನಿರ್ದೇಶಕರಾದ ಡಿ.ಕೆ ಸುರೇಶ್ ಅವರೇ ನಿಮಗೆ ಬುದ್ಧಿಭ್ರಮಣೆಯಾಗಿದೆಯೇ ? ಜೆಡಿಎಸ್ ಮಾಡಿರುವ ಟ್ವೀಟ್ ಅನ್ನು ಮತ್ತೊಮ್ಮೆ ಮಗದೊಮ್ಮೆ ಗಮನಿಸಿ ಎಂದು ಜೆಡಿಎಸ್ ಸಲಹೆ ನೀಡಿದೆ. ಭದ್ರತೆಯ ನೆಪವೊಡ್ಡಿ RCB ತಂಡದ ವಿಜಯೋತ್ಸವ ಮೆರವಣಿಗೆಗೆ ಕರ್ನಾಟಕ ಕಾಂಗ್ರೆಸ್ ಸರ್ಕಾರದ ತಡೆ ಸರಿಯಲ್ಲ.
ಸಿಎಂ , ಡಿಸಿಎಂ ಹಾಗೂ ಗೃಹ ಸಚಿವರೇ ಕಾಂಗ್ರೆಸ್ ಕಾರ್ಯಕ್ರಮಗಳಿಗೆ ಇರುವ ಭದ್ರತೆ, ಬೆಂಗಳೂರಿನಲ್ಲಿ ಆರ್‌ಸಿಬಿ ತಂಡದ ವಿಜಯೋತ್ಸವ ಮೆರವಣಿಗೆಗೆ ಯಾಕಿಲ್ಲ? ಭದ್ರತೆಯ ದೃಷ್ಟಿಯಿಂದ ರದ್ದು ಮಾಡಿದ್ದು ಎಷ್ಟು ಸರಿ? ವ್ಯವಸ್ಥಿತವಾಗಿ ವಿಜಯೋತ್ಸವ ಮೆರವಣಿಗೆ ನಡೆಸಿ ಎಂದು ಜೆಡಿಎಸ್ ಟ್ವೀಟ್ ಮಾಡಿತ್ತು.
ನಿಮ್ಮ ಅಣ್ಣ ಡಿಕೆಶಿ ಕನಕಪುರದ ಕೋರ್ಟ್ ಬಳಿ, ಮಾಧ್ಯಮಗಳನ್ನು ಉದ್ದೇಶಿಸಿ ಎಲ್ಲ ಅಭಿಮಾನಿಗಳು “ಸ್ಟೇಡಿಯಂ ಬಳಿ ಬನ್ನಿ” ಎಂದು ಆಹ್ವಾನ ನೀಡಿದ್ದರು. ಡಿ.ಕೆ.ಸುರೇಶ್ ಅವರೇ, RCB ಅಭಿಮಾನಿಗಳಿಗೆ ನಿಮ್ಮ ಸಹೋದರ ನೀಡಿದ ಪ್ರೀತಿಯ ಆಹ್ವಾನದ ಈ ಮಾತನ್ನು ಮರೆತು ಬಿಟ್ಟಿರಾ ? ಎಂದು ಜೆಡಿಎಸ್ ಪ್ರಶ್ನಿಸಿದೆ.
ಸಿಎಂ ಸಿದ್ದರಾಮಯ್ಯ ಅವರು “ಈ ಐತಿಹಾಸಿಕ ಗೆಲುವಿನ ಸಂಭ್ರಮದಲ್ಲಿ ನೀವೂ ಭಾಗಿಯಾಗಿ” ಎಂದು ಮಾಡಿದ್ದ ಟ್ವೀಟ್ ಬಗ್ಗೆ ನಿಮಗೆ ಜಾಣ ಕುರುಡೇ, ಎರೆಡೆರೆಡು ಕಡೆ ಕಾರ್ಯಕ್ರಮಗಳನ್ನು ಆಯೋಜಿಸಿ ಎಂದು ಜೆಡಿಎಸ್ ಪಕ್ಷ ಹೇಳಿರಲಿಲ್ಲ.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಸರ್ಕಾರದ ವತಿಯಿಂದ ವಿಧಾನಸೌಧದ ಮುಂದೆ ಕುಟುಂಬ ಸಮೇತ ಆರ್‌ಸಿಬಿ ಆಟಗಾರರ ಜೊತೆ ಸೆಲ್ಫಿ ತೆಗೆದು, ಫೋಟೋ ಶೂಟ್ ಮಾಡಿ ಎಂದು ನಾವು ಹೇಳಿರಲಿಲ್ಲ.
ಸ್ಟೇಡಿಯಂ ಬಳಿ ಕಾಲ್ತುಳಿತವಾಗಿ ಹೆಣಗಳು ಬೀಳುತ್ತಿದ್ದರೂ, ನಿಮ್ಮ ಸಹೋದರ ಕ್ರೀಡಾಂಗಣದ ಒಳಗೆ ಐಪಿಎಲ್ ಟ್ರೋಪಿಗೆ ಮುತ್ತಿಕ್ಕುತ್ತಿದ್ದರು. ಆರ್‌ಸಿಬಿ ಆಟಗಾರರ ಜೊತೆ ಫೋಟ್ ಶೂಟ್ ಮಾಡಿ, ತಾವೇ ಟ್ರೋಪಿ ಗೆದ್ದಂತೆ ಮುತ್ತಿಕ್ಕಿ ಸಂಭ್ರಮಿಸಿದ್ದು ದೇಶದ ಜನರೇ ನೋಡಿದ್ದಾರೆ.
ವಿರೋಧ ಪಕ್ಷಗಳು ಆಡಳಿತಾರೂಢ ಸರ್ಕಾರಕ್ಕೆ ಎಚ್ಚರಿಸಿ ಮಾಡುವ ಟ್ವೀಟ್‌ಗಳ ಜನಪರ ವಿಚಾರಗಳನ್ನು ಕಾರ್ಯಗತಗೊಳಿಸುವ ಇಚ್ಛಾಶಕ್ತಿ ಕಾಂಗ್ರೆಸ್ ಸರ್ಕಾರಕ್ಕೆ ಸಾಧ್ಯವಿದೆಯೇ ? ಉತ್ತರಿಸಿ ಡಿಕೆ ಸುರೇಶ್ ಎಂದು ಜೆಡಿಎಸ್ ಪ್ರಶ್ನಿಸಿದೆ.