ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹೆಸರಾಗಲಿ ಹಸಿರು, ಉಸಿರಾಗಲಿ ಪರಿಸರ, ಪರಿಸರ ನಮ್ಮ ಮನೆ. ಅದನ್ನು ರಕ್ಷಣೆ ಮಾಡಬೇಕಾದುದು ನಮ್ಮ ಆದ್ಯ ಕರ್ತವ್ಯ. ಪರಿಸರ ಸಂರಕ್ಷಣೆ ಎಂದರೆ ದೇಶದ ರಕ್ಷಣೆಯಂತೆ. ಹಸಿರೇ ಉಸಿರು ಎಂದು ತಿಳಿದು ಮಾರಕ ಪ್ಲಾಸ್ಟಿಕ್ ನಿರ್ಮೂಲನೆ ಮಾಡಬೇಕಾದುದು ನಮ್ಮ- ನಿಮ್ಮೆಲ್ಲರ ಜವಾಬ್ದಾರಿ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.
ವಿಧಾನಸೌಧದ ಪೂರ್ವದ್ವಾರದಲ್ಲಿ ಪರಿಸರ ದಿನದ ಅಂಗವಾಗಿ ಪರಿಸರ ನಡಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಅದಕ್ಕಾಗಿ ಈಗಾಗಲೇ ಶಾಲೆಗಳಲ್ಲಿ ಕಡ್ಡಾಯವಾಗಿ 25 ವಿದ್ಯಾರ್ಥಿಗಳನ್ನು ಒಳಗೊಂಡಂತೆ ಹವಾಮಾನ ಕ್ರಿಯಾ ಬಳಗ ಮತ್ತು ಪರಿಸರ ಸಂಘಗಳನ್ನು ರಚಿಸಲು ಆದೇಶ ನೀಡಿದ್ದೇನೆ. ಒಂದೊಂದು ಶಾಲೆ ಒಂದೊಂದು ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಬೇಕು, ಒಬ್ಬೊಬ್ಬ ವಿದ್ಯಾರ್ಥಿಯೂ ಒಂದೊಂದು ಗಿಡ ನೆಟ್ಟು ಪೋಷಿಸಬೇಕು ಎಂದು ಕರೆ ನೀಡಿದರು.
ಹವಾಮಾನ, ಇಲ್ಲಿನ ಹಸಿರು ಪರಿಸರ ಬೆಂಗಳೂರಿನ ಆಸ್ತಿ. ಈ ಗಾರ್ಡನ್ ಸಿಟಿಯ ಹೆಸರನ್ನು ನಾವೆಲ್ಲರೂ ಉಳಿಸಿಕೊಂಡು ಹೋಗಬೇಕು. ಅದಕ್ಕಾಗಿ ನಾವೆಲ್ಲರೂ ಒಗ್ಗಟ್ಟಾಗೊಣ; ಹಸಿರ ಹಾದಿಯಲ್ಲಿ ನಡೆಯೋಣ ಎಂದು ಡಿಸಿಎಂ ಶಿವಕುಮಾರ್ ಕರೆ ನೀಡಿದರು.