ಚಂದ್ರವಳ್ಳಿ ನ್ಯೂಸ್, ಬೆಂಗಳೂರು :
ಪ್ರತಿ ಪಕ್ಷದ ನಾಯಕ ಆರ್. ಅಶೋಕ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರಿಬ್ಬರೂ ಮೊದಲು ಅವರವರ ಕುರ್ಚಿ ಉಳಿಸಿಕೊಳ್ಳಲಿ ಎಂದು ವಿಧಾನ ಪರಿಷತ್ ಸದಸ್ಯ ಬಿ. ಕೆ. ಹರಿಪ್ರಸಾದ್ ತಿರುಗೇಟು ನೀಡಿದರು.
ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಎರಡು ವರ್ಷವಾದರೂ ಕೇಂದ್ರದಲ್ಲಿ ಅಧ್ಯಕ್ಷರನ್ನು ನೇಮಕ ಮಾಡಿಲ್ಲ. ಮಹಿಳೆಯರನ್ನು ಹುಡುಕುತ್ತಿದ್ದಾರೆ. ಅರ್ಧನಾರೇಶ್ವರರನ್ನು ಹುಡುಕಿದರೂ ಬಹಳ ಸಂತೋಷ ಎಂದು ಲೇವಡಿ ಮಾಡಿದರು.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ. ಕೆ. ಶಿವಕುಮಾರ್ ದೆಹಲಿ ಪ್ರವಾಸ ವಿಚಾರದ ಕುರಿತು ಮಾತನಾಡಿದ ಅವರು, ಸಿಎಂ ಸ್ಥಾನದ ಬಗ್ಗೆ ಯಾವುದೇ ಗೊಂದಲಗಳು ಇಲ್ಲ. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳ ನಡುವೆ ಯಾವುದೇ ಗೊಂದಲಗಳು ಇಲ್ಲ. ಸಿಎಂ ಸೀಟು ಗೊಂದಲ ಕೇವಲ ಮಾಧ್ಯಮಗಳ ಸೃಷ್ಟಿ ಎಂದರು.
ಬೆಂಗಳೂರಿನಲ್ಲಿ ಜುಲೈ 15 ರಂದು ನಡೆಯಲಿರುವ ಒಬಿಸಿ ಸಭೆ ಕುರಿತು ಪ್ರತಿಕ್ರಿಯಿಸಿದ ಅವರು, ಹಿಂದುಳಿದ ಸಮುದಾಯದ ದೇಶದಲ್ಲಿರುವ ನಾಯಕರೆಲ್ಲ ಒಂದೇ ವೇದಿಕೆಯಲ್ಲಿ ಸೇರುತ್ತಿದ್ದಾರೆ. ಕರ್ನಾಟಕದಲ್ಲಿ ಹಿಂದುಳಿದ ಸಮುದಾಯದ ಮುಖ್ಯಮಂತ್ರಿ ಇರುವುದರಿಂದ ಆಲ್ ಇಂಡಿಯಾ ಕಾಂಗ್ರೆಸ್ನ ಹಿಂದುಳಿದ ಕಮಿಟಿ ಅಧ್ಯಕ್ಷ ಅನಿಲ್ ಜೈಹಿಂದ್ ಇಲ್ಲೇ ಸಭೆ ಮಾಡಲು ತೀರ್ಮಾನ ಮಾಡಿದ್ದಾರೆ. ಅನಿಲ್ ಜೈ ಹಿಂದ್ ನೇತೃತ್ವದಲ್ಲಿ ಭಾರತ್ ಜೋಡೋ ಭವನದಲ್ಲಿ 15ರಂದು ಸಭೆ ನಡೆಯಲಿದೆ. ಇದೇ ಸಭೆಯಲ್ಲಿ ಬಹಳಷ್ಟು ನಿರ್ಣಯ ತೆಗೆದುಕೊಳ್ಳಲಾಗುತ್ತದೆ. ಹಿಂದುಳಿದ ವರ್ಗ ಹಾಗೂ ಜಾತಿ ಜನಗಣತಿ ಬಗ್ಗೆ ಬಹಳಷ್ಟು ನಿರ್ಣಯ ತೆಗೆದುಕೊಳ್ಳುತ್ತಾರೆ ಎಂದು ಹರಿಪ್ರಸಾದ್ ತಿಳಿಸಿದರು.
ಗಾಣಿಗ ಮಠದ ಸ್ವಾಮೀಜಿ ಅವರು ಸಚಿವ ತಂಗಡಗಿ ವಿರುದ್ಧ ಮಾಡಿರುವ ಲಂಚ ಆರೋಪ ವಿಚಾರ ಕುರಿತು ಮಾತನಾಡಿದ ಹರಿಪ್ರಸಾದ್, ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆ ಇದೆ. ಅಂತಹ ಆರೋಪಗಳು ಇದ್ದಾಗ ದೂರು ಕೊಡಲಿ. ತನಿಖೆ ಆಗಲಿ. ಅದಕ್ಕೆ ಯಾರೂ ಅಡ್ಡಿ ಬರುವುದಿಲ್ಲ ಎಂದು ತೀಕ್ಷ್ಣವಾಗಿ ಅವರು ಹೇಳಿದರು.
ಬಿಜೆಪಿಯವರು ಸಮರ್ಥನೆ ಮಾಡಿಕೊಳ್ಳುವುದರಲ್ಲಿ ನಿಸ್ಸೀಮರು. ಮೋದಿ ಅವರು ಸೋನಿಯಾ ಗಾಂಧಿ ಅವರಿಗೆ ಜಸ್ಸಿ ಕೌ ಅಂತ ಹೇಳಿದ್ರು. ಶಶಿ ತರೂರು ಪತ್ನಿಗೆ 50 ಗರ್ಲ್ ಫ್ರೆಂಡ್ ಅಂತ ಹೇಳಿದ್ರು. ಇವೆಲ್ಲ ಕೀಳು ಮಟ್ಟದ ಭಾಷೆಗಳು. ಇಂತಹ ಕೀಳು ಭಾಷೆ ಬಳಸುವುದರಲ್ಲಿ ಈ ನಾಗಪುರದ ಗೋಬರ್ ಯುನಿವರ್ಸಿಟಿಗಳು ಡಾಕ್ಟರೇಟ್ ತೆಗೆದುಕೊಂಡಿದ್ದಾರೆ. ಗೋಬರ್ ಯುನಿವರ್ಸಿಟಿ, ಎಲ್ಲಿಯವರೆಗೆ ನಾಗಪುರ ಯುನಿವರ್ಸಿಟಿಯನ್ನು ನಾವು ರದ್ದು ಮಾಡುವುದಿಲ್ಲವೋ, ಅಲ್ಲಿವರೆಗೂ ಇದು ಹೀಗೆಯೇ ಇರುತ್ತದೆ ಎಂದು ಹರಿಪ್ರಸಾದ್ ವಾಗ್ದಾಳಿ ಮಾಡಿದರು.
ಹೆಣ್ಣು ಮಕ್ಕಳಿಗೆ ಅವಹೇಳನಕಾರಿಯಾಗಿ ಮಾತನಾಡುವುದು ಬಿಜೆಪಿ ಸಂಸ್ಕೃತಿ. ಬಿಜೆಪಿ ಅವರಿಂದ ಇದನ್ನು ಬಿಟ್ಟು ಬೇರೆ ಏನೂ ನಿರೀಕ್ಷೆ ಮಾಡಲು ಆಗುವುದಿಲ್ಲ. ರವಿಕುಮಾರ್ ಕೇಸ್ ನಲ್ಲಿ ಕೋರ್ಟ್ ಎಫ್ಐಆರ್ ರದ್ದು ಮಾಡಿಲ್ಲ. ಅದೇ ಸಂತೋಷದ ಸುದ್ದಿ. ನ್ಯಾಯಾಲಯಗಳು ಕಠಿಣ ಕ್ರಮ ತೆಗೆದುಕೊಂಡಾಗ ಇಂತಹ ಮಾತುಗಳಿಗೆ ಕಡಿವಾಣ ಬೀಳುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.
ಜಾಮೀನು ಪಡೆದು ರವಿಕುಮಾರ್ ಹೊರಗಿದ್ದಾರೆ. ಅವರ ನಾಲಿಗೆಗೆ ಕಡಿವಾಣ ಬೀಳುತ್ತದೆ ಎಂದು ಅನ್ನಿಸುತ್ತದೆ. ಸಭಾಪತಿಗಳಿಗೆ ನಾವು ದೂರು ಕೊಟ್ಟಿದ್ದೇವೆ. ಸದನಕ್ಕೆ ಅಗೌರವ ತಂದಿದ್ದಾರೆ, ಅವರನ್ನು ವಜಾ ಮಾಡಿ, ಇಂತಹ ಭಾಷೆ ಪ್ರಯೋಗ ಸರಿಯಲ್ಲ ಎಂದು ಹೇಳಿದ್ದೇವೆ. ಸಭಾಪತಿಗಳು ಏನು ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದನ್ನು ನೋಡೊಣ. ಸದನ ಪ್ರಾರಂಭವಾದಾಗ ಈ ವಿಷಯ ಪ್ರಸ್ತಾಪ ಮಾಡುತ್ತೇವೆ ಎಂದು ಹರಿಪ್ರಸಾದ್ ತಿಳಿಸಿದರು.