ಚಂದ್ರವಳ್ಳಿ ನ್ಯೂಸ್ ಹಿರಿಯೂರು:
ಹಿರಿಯೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ನಿಷ್ಕ್ರಿಯ ಗೊಂಡಿದ್ದು ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರನ್ನು ಬದಲಾವಣೆ ಮಾಡಿ ಎಂದು ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಧನoಜಯ ಕುಮಾರ್, ನಿವೃತ್ತ ಪ್ರಾಚಾರ್ಯ ರಾಜಶೇಖರಯ್ಯ, ಮಲ್ಲಪ್ಪನಹಳ್ಳಿ ಮಹಾಲಿಂಗಯ್ಯ, ಜಿಡಿ ಚಿತ್ತಣ್ಣ, ಹರ್ತಿಕೋಟೆ ಮಹಾಸ್ವಾಮಿ, ಸಕ್ಕರ ರಂಗಸ್ವಾಮಿ ಮುಂತಾದ ಮೂವತ್ತಕ್ಕೂ ಹೆಚ್ಚು ಸಾಹಿತ್ಯಾಸಕ್ತರು ಒತ್ತಾಯಿಸಿದ್ದಾರೆ.
ನಗರದಲ್ಲಿ ಸಭೆ ನಡೆಸಿ ಪತ್ರಿಕಾ ಪ್ರಕಟಣೆ ನೀಡಿರುವ ಅವರು ಚಿತ್ರದುರ್ಗ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಗೆ ಪರಂಪರಾಗತ ಸಾಹಿತ್ಯಕ ಹಿನ್ನೆಲೆಯಿದ್ದು ಜಿಲ್ಲೆಯ ಸಾಹಿತ್ಯದ ದಿಗ್ಗಜರು ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.
ಕೇವಲ 30-40 ರಷ್ಟು ಜನರಿದ್ದ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರನ್ನು ಸಾವಿರಾರು ಸದಸ್ಯರನ್ನಾಗಿಸಲಾಗಿದೆ. ಮನೆ ಮನೆಗೆ ತೆರಳಿ ಸಾಹಿತ್ಯದ ಅರಿವು ಮೂಡಿಸುತ್ತಾ ಕನ್ನಡದ ತೇರನ್ನು ಹಿಂದಿನಿಂದಲೂ ಎಲ್ಲರೂ ಎಳೆಯುತ್ತಾ ಬಂದಿದ್ದಾರೆ.ಆದರೀಗ ಸಾಹಿತ್ಯ ಪರಿಷತ್ತಿನ ಚಪ್ಪರದೊಳಕ್ಕೆ ರಾಜಕೀಯ, ಜಾತಿ ಪ್ರೇಮ ನುಸುಳಿದೆ.
ಬಲಿಷ್ಠರು ಸಾಹಿತ್ಯ ಲೋಕವನ್ನು ಕಲುಷಿತಗೊಳಿಸುತ್ತಿದ್ದಾರೆ. ಕನ್ನಡ ಸಾಹಿತ್ಯದ ಕನಿಷ್ಠ ಜ್ಞಾನವೂ ಇಲ್ಲದವರನ್ನು, ಸ್ವಜಾತಿ ಎಂಬ ಒಂದೇ ಕಾರಣಕ್ಕೆ ಕನ್ನಡ ಓದಲು ಬರೆಯಲು ಬಾರದವರನ್ನು ತಂದು ಹಿರಿಯೂರಿನ ಸಾಹಿತ್ಯ ಪರಿಷತ್ತಿಗೆ ಅಧ್ಯಕ್ಷರನ್ನಾಗಿಸಲಾಗಿದೆ.
ತಾಲೂಕಿನ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರನ್ನು ಕರೆದು ಸಂವಿಧಾನದ ನೆಲೆಯಲ್ಲಿ ಆಯ್ಕೆ ಮಾಡದೇ ಕೇವಲ ಸ್ವಜಾತಿಯ ಸಂಬಂಧಿ ಎಂಬ ಕಾರಣಕ್ಕೆ ತಾಲೂಕು ಅಧ್ಯಕ್ಷರನ್ನು ಆಯ್ಕೆ ಮಾಡಿ ತಾಲೂಕು ಸಾಹಿತ್ಯ ಪರಿಷತ್ತಿನ ಘನತೆ ಕಳೆದ ಕೀರ್ತಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ಸಲ್ಲುತ್ತದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದುವರೆಗೂ ಸಾಹಿತಿಗಳನ್ನು, ಕಲಾವಿದರನ್ನು, ಕವಿಗಳನ್ನು, ಚಿಂತಕರನ್ನು, ಕನ್ನಡ ಸಂಘಟನೆಗಳವರನ್ನು, ಕನ್ನಡದ ಬಗ್ಗೆ ಅಭಿಮಾನವಿರುವ ರೈತ ಹೋರಾಟಗಾರರನ್ನು, ಆಟೋ ಚಾಲಕರನ್ನು, ಕನ್ನಡ ಪರ ಹೋರಾಟಗಾರರನ್ನು ತಾಲೂಕು ಅಧ್ಯಕ್ಷರು ಕ್ಯಾರೆ ಅಂದಿಲ್ಲ. ಯಾರ ವಿಶ್ವಾಸವನ್ನು ಗಳಿಸಿಲ್ಲ. ಹಾಗಾಗಿ ಸಾಹಿತ್ಯಾಸಕ್ತರು ಸಭೆ ನಡೆಸಿ ತಾಲೂಕು ಅಧ್ಯಕ್ಷರನ್ನು ಬದಲಾಯಿಸಿ ಎಂದು ಜಿಲ್ಹಾಧ್ಯಕ್ಷರಿಗೆ ಮನವಿ ಮಾಡಿದಾಗ ಇಪ್ಪತ್ತು ದಿನದೊಳಗೆ ಬದಲಾವಣೆ ಮಾಡುತ್ತೇವೆ ಎಂದು ಹೋದವರು ಇದುವರೆಗೂ ಪತ್ತೆ ಇಲ್ಲ.
ಅವರ ಲೆಕ್ಕದಲ್ಲಿ ಇಪ್ಪತ್ತು ತಿಂಗಳು ಎಂದರೆ ಎಷ್ಟು ತಿಂಗಳಾದ ಮೇಲೆ ಬರುತ್ತವೋ ಏನೋ. ಆದ್ದರಿಂದ ತಾಲೂಕು ಸಾಹಿತ್ಯ ಪರಿಷತ್ತಿನ ಭವಿಷ್ಯದ ದೃಷ್ಟಿಯಿಂದ ಕೂಡಲೇ ಈಗಿನ ಅಧ್ಯಕ್ಷರನ್ನು ಬದಲಿಸಿ ಸಾಹಿತ್ಯ ಲೋಕದ ಗಂಧ ಗಾಳಿ ಗೊತ್ತಿರುವವರನ್ನು ಅಧ್ಯಕ್ಷರನ್ನಾಗಿ ನೇಮಿಸಬೇಕು ಎಂದು ಒತ್ತಾಯಿಸಿದ್ದಾರೆ.