ಸಿರಿಗೆರೆ ಶ್ರೀಗಳ ನೇತೃತ್ವದಲ್ಲಿ ಹೋರಾಡಿ ಎಲ್ಲ ಕೆರೆಗಳಿಗೆ ನೀರು ಭರ್ತಿ ಮಾಡಿಸೋಣ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹರಿದು ಹಂಚಿ ಹೋಗಿರುವ ಜಿಲ್ಲೆಯ ಎಲ್ಲಾ ರೈತ ಸಂಘಟನೆಗಳು ಒಂದಾಗುವ ಕುರಿತು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯಿಂದ ಎ.ಪಿ.ಎಂ.ಸಿ. ರೈತ ಭವನದಲ್ಲಿ ಶನಿವಾರ ಸಮಾಲೋಚನಾ ಸಭೆ ನಡೆಯಿತು. ರೈತ ಮುಖಂಡ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಸಮಾಲೋಚನಾ ಸಭೆಯನ್ನುದ್ದೇಶಿಸಿ ಮಾತನಾಡಿ ಇಷ್ಟು ವರ್ಷಗಳ ಕಾಲ ರಾಜಕಾರಣಿಗಳನ್ನು ನಂಬಿ ಹಾಳಾಗಿದ್ದೇವೆ.

ಇನ್ನು ಆಸೆಯಿಟ್ಟುಕೊಂಡು ಕಾಲಹರಣ ಮಾಡುವುದರಲ್ಲಿ ಅರ್ಥವಿಲ್ಲ. ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಶಕ್ತಿಯಿರುವ ಸಿರಿಗೆರೆಯ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳನ್ನು ಜ.೧೩ ರಂದು ಎಲ್ಲರೂ ಒಗ್ಗೂಡಿ ಭೇಟಿಯಾಗಿ ನಮ್ಮ ಸಮಸ್ಯೆಗಳ ಕುರಿತು ಚರ್ಚಿಸೋಣ. ಇಲ್ಲಿಯವರೆಗೂ ನಮ್ಮನ್ನಾಳಿದ ಯಾವ ಶಾಸಕ ಸಂಸದರಿಂದಲೂ ರೈತರ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ಇನ್ನು ಮುಂದಾದರೂ ರೈತ ಸಂಘಟನೆಗಳೆಲ್ಲಾ ಒಂದಾಗಿ ಸಂಘಟಿತರಾಗೋಣ ಎಂದು ಕರೆ ನೀಡಿದರು.

ಮತ್ತೊಬ್ಬ ರೈತ ಮುಖಂಡ ಆರ್.ಬಿ.ನಿಜಲಿಂಗಪ್ಪ ಮಾತನಾಡಿ ಎಲ್ಲಾ ಕೆರೆಗಳಲ್ಲಿ ನೀರು ತುಂಬಬೇಕಾದರೆ ಸಿರಿಗೆರೆಯ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳಿಂದ ಮಾತ್ರ ಸಾಧ್ಯ. ಹಾಗಾಗಿ ಜ.೧೩ ರಂದು ಎಲ್ಲರೂ ಒಗ್ಗೂಡಿ ಸ್ವಾಮೀಜಿಯನ್ನು ಭೇಟಿ ಮಾಡೋಣ.

ಅದಕ್ಕಾಗಿ ಜಿಲ್ಲೆಯಾದ್ಯಂತ ಎಲ್ಲಾ ತಾಲ್ಲೂಕುಗಳಲ್ಲಿ ಸಂಚರಿಸಿ ರೈತರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ. ಬರಗಾಲಕ್ಕೆ ತುತ್ತಾಗಿರುವ ಮಧ್ಯ ಕರ್ನಾಟಕದ ಚಿತ್ರದುರ್ಗ ಜಿಲ್ಲೆಗೆ ನೀರು ಹರಿಸಬೇಕಾಗಿದೆ. ರೈತ ನಾಯಕ ಪ್ರೊ.ನಂಜುಂಡಸ್ವಾಮಿ ಸಮಾಧಿಗೆ ಹೋಗಿ ಕರಪತ್ರವಿಟ್ಟು ಎಲ್ಲಾ ರೈತರು ಒಂದಾಗಲಿ ಎಂದು ಪ್ರಾರ್ಥಿಸಿಕೊಂಡು ಬಂದಿದ್ದೇವೆ. ರೈತರ ಪರವಾಗಿ ನೂರಾರು ಹೋರಾಟಗಳನ್ನು ಮಾಡಿ ಮೂರು ಬಾರಿ ಜೈಲಿಗೆ ಹೋಗಿ ಬಂದಿದ್ದೇನೆ. ನಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕಾಗಿಯಾದರೂ ಎಲ್ಲಾ ಸಂಘಟನೆಗಳು ಒಂದಾಗಿ ಹೋರಾಡೋಣ ಎಂದು ಹೇಳಿದರು.

ರೈತ ನಾರಪ್ಪ ಮಾತನಾಡಿ ವೈಮನಸ್ಸು ಬಿಟ್ಟು ಎಲ್ಲಾ ರೈತರು ಒಂದಾಗಿ ಸಿರಿಗೆರೆಯ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳ ಬಳಿ ಹೋಗೋಣ. ಒಗ್ಗಟ್ಟಿನಿಂದ  ರೈತರು ಸರ್ಕಾರಗಳ ವಿರುದ್ದ ಶಕ್ತಿ ಪ್ರದರ್ಶಿಸಬೇಕಿದೆ. ಸಂಕುಚಿತ ಮನೋಭಾವ ಬಿಟ್ಟು ವಿಶಾಲವಾದ ಆಲೋಚನೆಯಿಟ್ಟುಕೊಂಡಾಗ ಮಾತ್ರ ರೈತ ಕುಲ ಉಳಿಯಲು ಸಾಧ್ಯ ಎಂದರು.

ಹಿರಿಯೂರಿನ ರೈತ ಎಚ್.ಆರ್.ತಿಮ್ಮಯ್ಯ ಸಮಾಲೋಚನಾ ಸಭೆಯನ್ನುದ್ದೇಶಿಸಿ ಮಾತನಾಡಿ ಸಿರಿಗೆರೆ ಶ್ರೀಗಳ ನೇತೃತ್ವದಲ್ಲಿ ರೈತರು ಹೋರಾಡೋಣ. ಆಗ ಜಿಲ್ಲೆಯ ಎಲ್ಲಾ ಕೆರೆಗಳಿಗೆ ನೀರು ತುಂಬಲಿದೆ. ಜಿಲ್ಲೆಯ ಎಲ್ಲಾ ರೈತ ಸಂಘಟನೆಗಳು ಒಂದಾದರೆ ಆಳುವ ಸರ್ಕಾರಗಳು ರೈತರ ಹೋರಾಟಕ್ಕೆ ಮಣಿಯುತ್ತವೆ. ಇಲ್ಲವಾದಲ್ಲಿ ರೈತರ ಬೇಡಿಕೆಗಳು ಈಡೇರುವುದಿಲ್ಲ ಎಂದು ನುಡಿದರು.

ರೈತ ಮುಖಂಡರುಗಳಾದ ಜಿ.ಕೆ.ನಾಗರಾಜ್ ಚಿಕ್ಕಬ್ಬಿಗೆರೆ, ನಾಗರಾಜ್ ಮುದ್ದಾಪುರ, ಸಿದ್ದಪ್ಪ ಹಳಿಯೂರು, ಹಿರೇಕಬ್ಬಿಗೆರೆ ರಾಜಣ್ಣ, ಇಸಾಮುದ್ರ ಪ್ರಭಣ್ಣ ಇನ್ನು ಅನೇಕರು ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ್ದರು.

 

 

 

 

 

- Advertisement -  - Advertisement - 
Share This Article
error: Content is protected !!
";