ಮಳೆ ಹಾನಿ ಪ್ರದೇಶಗಳಿಗೆ ಲೋಕಾಯುಕ್ತರ ಭೇಟಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಲೋಕಾಯುಕ್ತ ಬಿ.ಎಸ್.ಪಾಟೀಲ್
, ಉಪಲೋಕಾಯುಕ್ತ ನ್ಯಾ.ಕೆ.ಎನ್. ಫಣೀಂದ್ರ, ನ್ಯಾ.ಬಿ.ವೀರಪ್ಪ ಅವರು ಬೆಂಗಳೂರು ನಗರದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಜನ ಸಾಮಾನ್ಯರು ಅನುಭವಿಸಿದ ಅವ್ಯವಸ್ಥೆಗಳಿಗೆ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಗರಂ ಆದ ಪ್ರಸಂಗ ಜರುಗಿದೆ.

- Advertisement - 

ಲೋಕಾಯುಕ್ತರು, ಮಳೆ ಸಂತ್ರಸ್ತ ನಿವಾಸಿಗಳ ಸಂಕಷ್ಟಗಳನ್ನು ಆಲಿಸಿ ಸ್ವಯಂ ಪ್ರೇರಿತ ದೂರು ದಾಖಲಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಸಮಸ್ಯೆಗಳ ಪರಿಹಾರಕ್ಕಾಗಿ ಶುಕ್ರವಾರ ಅಧಿಕಾರಿಗಳೊಂದಿಗೆ ಸಾರ್ವಜನಿಕ ಸಭೆ ಕರೆದು ಚರ್ಚಿಸಿದ್ದಾರೆ.

- Advertisement - 

ಮಳೆ ಹಾನಿಗೆ ಒಳಗಾದ ನಗರದ ಸಿಲ್ಡ್‌ಬೋರ್ಡ್, ಪಣತ್ತೂರು ರೈಲ್ವೆ ಸೇತುವೆ, ಸಾಯಿ ಲೇಔಟ್, ಮಾನ್ಯತಾ ಟೆಕ್ ಪಾರ್ಕ್ ಪ್ರದೇಶಗಳಿಗೆ ಲೋಕಾಯುಕ್ತ ಮತ್ತು ಉಪಲೋಕಾಯುಕ್ತರು ಭೇಟಿ ನೀಡಿ ಪರಿಶೀಲನೆ ಮಾಡಿದರು. ಸಿಲ್ಕ್ ಬೋರ್ಡ್ ವೃತ್ತದ ಬಳಿ ಮಳೆ ನೀರುಗಾಲುವೆಯಲ್ಲಿ ನೀರು ಹರಿಯದೆ ಸ್ಥಗಿತಗೊಂಡಿರುವುದನ್ನು ಕಂಡು ಸ್ಥಳದಲ್ಲಿದ್ದ ಬಿಎಂಆರ್‌ಸಿಎಲ್ ಮತ್ತು ಬಿಬಿಎಂಪಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಎರಡು ಸಂಸ್ಥೆಗಳ ಮುಖ್ಯ ಎಂಜಿನಿಯರ್‌ಗಳನ್ನು ವಿಚಾರಣೆಗೆ ಒಳಪಡಿಸಿದರು. ಈ ವೇಳೆ ಅಧಿಕಾರಿಗಳು ನೀಡಿದ ವಿವರಣೆಯಿಂದಾಗಿ ಸಮಾಧಾನಗೊಳ್ಳದ ಲೋಕಾಯುಕ್ತರು ಮತ್ತು ಉಪಲೋಕಾಯುಕ್ತರು ಸಮಗ್ರ ವರದಿಯೊಂದಿಗೆ ಹಾಜರಾಗಿ ವಿವರಣೆ ನೀಡುವಂತೆ ಸೂಚನೆ ನೀಡಿದರು. ಇದೇ ವೇಳೆ ಮಳೆ ನೀರು ನಿಲ್ಲದಂತೆ ಕೈಗೊಳ್ಳುವ ಕಾಮಗಾರಿಗಳ ಕುರಿತು ಮಾಹಿತಿ ನೀಡುವಂತೆಯೂ ತಿಳಿಸಲಾಯಿತು.

- Advertisement - 

ಬಳಿಕ ಪಣತ್ತೂರುಗೆ ತೆರಳಿದ ಲೋಕಾಯುಕ್ತರು, ಉಪ ಲೋಕಾಯುಕ್ತರು ಪಣತ್ತೂರು ಮುಖ್ಯರಸ್ತೆಯಲ್ಲಿನ ರೈಲ್ವೆ ಕೆಳ ಸೇತುವೆಯ ಬಳಿ ಜಲಾವೃತವನ್ನು ಕಂಡು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ಹೆಣ್ಣೂರು ಬಳಿಯ ಸಾಯಿ ಬಡಾವಣೆಗೆ ಲೋಕಾಯುಕ್ತರು ಭೇಟಿ ನೀಡಿದಾಗ ಸ್ಥಳೀಯ ನಿವಾಸಿಗಳು ತಮ್ಮ ಅಹವಾಲಗಳನ್ನು ಮುಂದಿಟ್ಟರು. ಈ ವೇಳೆ ಮನೆಗಳಿಗೆ ನೀರು ನುಗ್ಗಿರುವುದರಿಂದ ಜನಜೀವನ ಅಸ್ತವ್ಯಸ್ತವಾಗಿರುವ ಕುರಿತು ಅಧಿಕಾರಿಗಳ ವಿರುದ್ಧ ಗರಂ ಆದರು.

ಕಳೆದ 3 ದಿನಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದ್ದು, ಪ್ರತಿ ಬಾರಿ ಮಳೆ ಬಂದರೆ ಈ ಸಮಸ್ಯೆ ತಲೆದೋರುತ್ತದೆ. ಇದಕ್ಕೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಸಂತ್ರಸ್ತರು ಲೋಕಾಯುಕ್ತರಲ್ಲಿ ಮನವಿ ಮಾಡಿದರು.

ಲೋಕಾಯುಕ್ತ, ಉಪ ಲೋಕಾಯುಕ್ತರು ಜನರ ಸಮಸ್ಯೆಗಳನ್ನು ಆಲಿಸಿ ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿ ವಿಚಾರಣೆಗೆ ಹಾಜರಾಗಿ ವಿಸ್ತೃತ ವರದಿ ನೀಡಬೇಕು. ಸಾರ್ವಜನಿಕರು ಸಹ ಹಾಜರಾಗಿ ಅಹವಾಲು ಸಲ್ಲಿಸುವಂತೆ ಲೋಕಾಯುಕ್ತರು ಸಲಹೆ ನೀಡಿದರು.

 

Share This Article
error: Content is protected !!
";