ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಒಳ ಮೀಸಲಾತಿ ಮುಂದೂಡುತ್ತಿರುವ ಮಾದಿಗ ಸಮುದಾಯದ ಅನುಮಾನಕ್ಕೆ ಕಾರಣವಾಗಿದೆ. 224 ಶಾಸಕರಿಗೆ ಮನವಿ ಮಾಡುತ್ತಿರುವ ಮಾದಿಗ ಸಮುದಾಯ ವಿಧಾನಸಭೆಯಲ್ಲಿ ಸರ್ಕಾರದ ಗಮನ ಸಳೆಯುವಂತೆ ಮನವಿ ಮಾಡುತ್ತಿದೆ.
ದೊಡ್ಡಬಳ್ಳಾಪುರ ಮಾದಿಗ ಸಂಘಟನೆಗಳ ಒಕ್ಕೂಟ ಶಾಸಕ ಧೀರಜ್ ಮುನಿರಾಜುರವರನ್ನ ಭೇಟಿ ಮಾಡಿ ಒಳ ಮೀಸಲಾತಿ ಜಾರಿಗೆ ಆಗ್ರಹಿಸಿದೆ, ಈ ವೇಳೆ ಮಾತನಾಡಿದ ಅವರು ಸರ್ಕಾರ ಒಳ ಮೀಸಲಾತಿಯನ್ನ ಮುಂದೂಡುತ್ತಿರುವುದು ತಪ್ಪು,
ಯಾರೇ ಬರಲಿ ಹೋಗಲಿ ಅರ್ಹತೆ ಇರುವರಿಗೆ ಮೀಸಲಾತಿ ಕೊಡಬೇಕೆಂಬುದು ಬಾಬಾ ಸಾಹೇಬ್ ಅಂಬೇಡ್ಕರ್ ರವರ ಅಶಯ, ಪ್ರಾರಂಭದಲ್ಲಿ 3 ಜಾತಿಗಳಿಗೆ ಮಾತ್ರ ಮೀಸಲಾತಿ ನೀಡಲಾಗಿತ್ತು ಈಗ 101 ಜಾತಿಗಳಿಗೆ ಮೀಸಲಾತಿ ನೀಡಲಾಗಿದೆ. ಶಾಸಕನಾಗಿ ನನ್ನ ವೈಯಕ್ತಿಕ ಅಭಿಪ್ರಾಯ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿಯನ್ನ ನೀಡಬೇಕು, ವಿಧಾನಸಭೆ ಒಳಗೆ ಅಥವಾ ಹೊರಗೆ ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಸರ್ಕಾರದ ಮೇಲೆ ಒತ್ತಡ ತರುವ ಕೆಲಸ ಮಾಡುವುದ್ದಾಗಿ ಹೇಳಿದರು.
ಸಮುದಾಯದ ಮುಖಂಡರಾದ ಬಚ್ಚಹಳ್ಳಿ ನಾಗರಾಜು ಮಾತನಾಡಿ, ಮಾದಿಗರ 40 ವರ್ಷಗಳ ಹೋರಾಟದ ಫಲ ಒಳ ಮೀಸಲಾತಿಗೆ ಜಾರಿಗಾಗಿ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ, ವರದಿ ಬಂದ ನಂತರ ಸರ್ಕಾರ ಜಾರಿ ಮಾಡಲು ಹಿಂದೇಟು ಹಾಕುತ್ತಿದೆ, ಈಗಾಗಲೇ 3 ಬಾರಿ ಮುಂಡೂಡಲಾಗಿದೆ, ಇಲ್ಲಿಯವರೆಗೂ ಸುಮ್ಮನಿದ್ದ ಬಲಗೈ ಸಮುದಾಯದ ಸಹೋದರರು ಈಗ ವರದಿಯಲ್ಲಿ ನಮಗೆ ಮೋಸವಾಗಿದೆ ಎಂದು ಹೇಳುತ್ತಿದ್ದಾರೆ.
ಸಿದ್ದರಾಮಯ್ಯನವರೇ ಹಿಂಬಾಗಿಲ ಮೂಲಕ ಬಲಗೈ ಸಮುದಾಯಕ್ಕೆ ಹೋರಾಟ ಮಾಡುವಂತೆ ಕುಮ್ಮಕ್ಕು ನೀಡಿದ್ದಾರೆ, ಮಾದಿಗರ ನೋವೇ ಕಾಂಗ್ರೆಸ್ ಸಾವು ಈ ಎಚ್ಚರಿಕೆಯನ್ನ ಸರ್ಕಾರಕ್ಕೆ ನೀಡುವ ಮೂಲಕ ಆಗಸ್ಟ್ 19ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಜಾರಿಯಾಗ ಬೇಕು, ಇಲ್ಲದಿದ್ದಾರೆ ಮಾದಿಗರು ಬೀದಿಗಿಳಿದು ಹೋರಾಟ ಮಾಡುವುದ್ದಾಗಿ ಹೇಳಿದರು.
ಮುಖಂಡರಾದ ಟಿ.ಡಿ.ಮುನಿಯಪ್ಪ ಮಾತನಾಡಿ, ಒಳ ಮೀಸಲಾತಿ ಜಾರಿ ಮಾಡಲು ಸರ್ಕಾರ ದಿನಗಳನ್ನ ಮುಂದೂಡುತ್ತಿರುವುದು ನಮಗೆ ಅನುಮಾನ ಮೂಡುತ್ತಿದೆ, ಈ ಹಿನ್ನಲೆ ನಾವು ಶಾಸಕರಾದ ಧೀರಜ್ ಮುನಿರಾಜುರವರನ್ನ ಭೇಟಿ ಮಾಡಲಾಗಿದ್ದು, ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ವಿಧಾನಸಭೆಯಲ್ಲಿ ಗಮನ ಸಳೆಯುವಂತೆ ಮಾತನಾಡಿ ಸರ್ಕಾರಕ್ಕೆ ಚಾಟಿ ಬಿಸಬೇಕೆಂದು ಮನವಿ ಮಾಡಲಾಗಿದೆ ಎಂದರು.
ಹಿರಿಯ ಮುಖಂಡರಾದ ಹನುಮಯ್ಯ ಅಪ್ಪಕಾರನಹಳ್ಳಿ ಮಾತನಾಡಿ, ಅಹಿಂದ ನಾಯಕ ಎಂದು ಕರೆಸಿಕೊಳ್ಳುವ ಸಿದ್ದರಾಮಯ್ಯ ಒಳ ಮೀಸಲಾತಿ ಜಾರಿ ಮಾಡದೆ ಹಿಂದೇಟು ಹಾಕುತ್ತಿದ್ದಾರೆ, ಚುನಾವಣೆಯಲ್ಲಿ ಒಳ ಮೀಸಲಾತಿ ಜಾರಿ ಮಾಡುವುದ್ದಾಗಿ ಹೇಳಿದ ಅವರು ಮಾದಿಗ ಸಮುದಾಯಕ್ಕೆ ಮೋಸ ಮಾಡುತ್ತಿದ್ದಾರೆ, ಅವರು ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಜವಾಬ್ದಾರಿ ಅವರ ಮೇಲಿದೆ, ಆಗಸ್ಟ್ 19ರೊಳಗೆ ಒಳ ಮೀಸಲಾತಿ ಜಾರಿ ಮಾಡದಿದ್ದಾರೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠವನ್ನ ಮಾದಿಗ ಸಮುದಾಯ ಕಲಿಸಲಿದೆ ಎಂದರು.
ಮುಖಂಡರಾದ ತಳವಾರ ನಾಗರಾಜು ಮಾತನಾಡಿ, ರಾಜ್ಯದಲ್ಲಿ ಎಡಗೈ ಮತ್ತು ಬಲಗೈ ಸಮುದಾಯ ಸಹೋದರರಂತೆ ಬದುಕುತ್ತಿದ್ದೇವೆ, ಬಲಗೈ ಸಮುದಾಯ ಜನಸಂಖ್ಯೆ ಕಡಿಮೆ ಇದ್ದರು ಹೆಚ್ಚಿನ ಅಧಿಕಾರ ಅನುಭವಿಸುತ್ತಿದ್ದಾರೆ, ಎಡಗೈ ಸಮುದಾಯ ನಿಮ್ಮಂತೆ ಬೆಳೆಯ ಬೇಕಲ್ಲವೇ, ಸ್ವಾಮೀಜಿಯವರ ಮಾತು ನಂಬಿ ಬಲಗೈ ಸಮುದಾಯ ಹೋರಾಟಕ್ಕೆ ಇಳಿದಿದೆ, ಈ ಹೋರಾಟ ಕೈ ಬೀಡಬೇಕು, ಇಲ್ಲದಿದ್ದಾರೆ ನಿಮ್ಮ ವಿರುದ್ಧವೇ ಹೋರಾಟ ಮಾಡುವುದ್ದಾಗಿ ಹೇಳಿದರು.
ಮುಖಂಡರಾದ ಕಾಂತರಾಜು ಮಾತನಾಡಿ, ಒಳ ಮೀಸಲಾತಿ ಜಾರಿಗಾಗಿ ನ್ಯಾ.ನಾಗಮೋಹನ್ ದಾಸ್ ಸರ್ಕಾರಕ್ಕೆ ವರದಿಯನ್ನ ಸಲ್ಲಿಸಿದ್ದಾರೆ, ವರದಿಯಲ್ಲಿ ಬಲಗೈ ಸಮುದಾಯಕ್ಕಿಂತ 3 ಲಕ್ಷ ಹೆಚ್ಚು ಜನಸಂಖ್ಯೆಯನ್ನ ಮಾದಿಗ ಸಮುದಾಯ ಇದ್ದು, ಇದೀಗ ಬಲಗೈ ಸಮುದಾಯ ವರದಿ ಅವೈಜ್ಞಾನಿಕವಾಗಿದೆ ಎಂದು ಹೇಳುತ್ತಿದೆ, ಈ ಮೂಲಕ ಒಳ ಮೀಸಲಾತಿ ಜಾರಿಯಾಗದಂತೆ ಮಾಡುವ ಹುನ್ನಾರವನ್ನ ನಡೆಸುತ್ತಿದೆ, ಇದರ ವಿರುದ್ಧ ಶಾಸಕ ಧೀರಜ್ ಮುನಿರಾಜು ವಿಧಾನಸಭೆಯಲ್ಲಿ ಸರ್ಕಾರದ ಗಮನ ಸೆಳೆದು ಮಾದಿಗ ಸಮುದಾಯಕ್ಕೆ ನ್ಯಾಯ ಕೊಡಬೇಕೆಂದು ಮನವಿ ಮಾಡಿದ.
ಈ ವೇಳೆ ನಾರಸಿಂಹನಹಳ್ಳಿ ಗಂಗರಾಜು, ನಾರಾಯಣಪ್ಪ, ಹರ್ಷ, ಹನುಮಂತರಾಯಪ್ಪ, ಮುನಿರಾಜು,ವೆಂಕಟೇಶ್, ಗುರುಪ್ರಸಾದ್ ಹೆಚ್.ಪಿ, ದಯಾಶಂಕರ್ ತಳಗವಾರ, ನರಸಿಂಹಯ್ಯ ಸಿದ್ದೇನಾಯಕನಹಳ್ಳಿ, ಶ್ರೀನಿವಾಸ್ ತಳಗವಾರ ಹಾಜರಿದ್ದರು.

