ಅಲ್ಪಸಂಖ್ಯಾತರ ಓಲೈಕೆ ಕಾಂಗ್ರೆಸ್ ಸರ್ಕಾರದ ಆದ್ಯತೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮೈಸೂರಿನ ಉದಯಗಿರಿಯಲ್ಲಿ ನಡೆದಿರುವ ಪುಂಡರ ಗುಂಪಿನ ಅಟ್ಟಹಾಸ ಕಾನೂನು ಸುವ್ಯವಸ್ಥೆಯನ್ನೇ ಮೂಲೋತ್ಪಾಟನೆ ಮಾಡುವ ವಿದ್ವಾಂಸಕ ಶಕ್ತಿಗಳ ಪ್ರದರ್ಶನವಾಗಿದೆ. ಅಲ್ಪಸಂಖ್ಯಾತರ ಓಲೈಕೆ ಕಾಂಗ್ರೆಸ್ ಸರ್ಕಾರದ ಆದ್ಯತೆ ಎಂಬಂತೆ ನಡೆದುಕೊಳ್ಳುತ್ತಿರುವ ಸರ್ಕಾರದ ಧೋರಣೆ ಮತೀಯವಾದಿ ಪುಂಡ ಪೋಕರಿಗಳಿಗೆ ರಹದಾರಿ ಕೊಟ್ಟಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹರಿಹಾಯ್ದಿದ್ದಾರೆ.

ಕೋಮುವಾದಿ ರಕ್ಕಸ ವರ್ತನೆಯನ್ನು ಸಮರ್ಥಿಸುವ ರೀತಿಯಲ್ಲಿ ಮಾತನಾಡಿರುವ ಸಚಿವ ಕೆ.ಎನ್.ರಾಜಣ್ಣ  ಅವರು ಪೊಲೀಸರ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ ಪರಿಯಲ್ಲಿ ಘಟನೆಯನ್ನು ವ್ಯಾಖ್ಯಾನಿಸಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಎನ್ ಆರ್ ಕ್ಷೇತ್ರದ ಉದಯಗಿರಿ ಠಾಣಾ ವ್ಯಾಪ್ತಿ ಹಿಂದಿನಿಂದಲೂ ಮುಸ್ಲಿಂ ಸಮುದಾಯದ ಬಾಹುಳ್ಯದಲ್ಲಿದ್ದು ನಿರಂತರವಾಗಿ ಮತೀಯ ದುಷ್ಕರ್ಮಿಗಳು ಕ್ರೌರ್ಯ ಮೆರೆಯುತ್ತಿದ್ದಾರೆ. ಪೊಲೀಸರ ಮೇಲೆ ಹಲ್ಲೆ ನಡೆಸುವಷ್ಟು ಬಲಿಷ್ಠರಾಗಿದ್ದಾರೆ. ಹಿಂದೂ ಕಾರ್ಯಕರ್ತರ ಸರಣಿ ಕೊಲೆಗಳು ಈ ವ್ಯಾಪ್ತಿಯಲ್ಲಿ ಈ ಹಿಂದೆಯೂ ನಡೆದಿದೆ ಎಂದು ವಿಜಯೇಂದ್ರ ಟೀಕಾಪ್ರಹಾರ ಮಾಡಿದ್ದಾರೆ.

ಇಷ್ಟಾಗಿಯೂ ಈ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆಯನ್ನು ನಿಯಂತ್ರಿಸುವ ಯಾವ ಕ್ರಮವನ್ನೂ ಕಾಂಗ್ರೆಸ್ ಸರ್ಕಾರ ಕೈಗೊಂಡಿಲ್ಲ, ಬದಲಾಗಿ ಈ ಪ್ರದೇಶವನ್ನು ವಿಧ್ವಂಸಕ ಚಟುವಟಿಕೆಯ ತಾಣವಾಗಿ ಪೋಷಿಸುತ್ತಿದೆ ಅದರ ಪರಿಣಾಮವಾಗಿಯೇ ಕ್ಷುಲ್ಲಕ ಕಾರಣವನ್ನು ಮುಂದಿಟ್ಟುಕೊಂಡು ಕಿಡೆಗೇಡಿಗಳೆಲ್ಲ ಒಟ್ಟುಗೂಡಿ ದಂಗೆ ಎದ್ದು ಪೊಲೀಸರಿಗೆ ಸವಾಲೆಸೆದಿದ್ದರೆ, ಈ ಕೂಡಲೇ ಕರ್ನಾಟಕ ಕಾಂಗ್ರೆಸ್ ಸರ್ಕಾರ ಕೋಮು ಪಕ್ಷಪಾತದ ಧೋರಣೆಯನ್ನು ಬದಿಗಿಟ್ಟು ಸಮಾಜಘಾತುಕ ದುಷ್ಟರ ವಿರುದ್ಧ ಕಠಿಣ ಕ್ರಮ ಜರುಗಿಸದಿದ್ದರೆ ಶಾಂತಿ-ಸುವ್ಯವಸ್ಥೆಗೆ ಹೆಸರಾದ ಮೈಸೂರು ಕೋಮು ದಳ್ಳುರಿಗೆ ಸಿಲುಕುವ ಅಪಾಯಕ್ಕೆ ತಲುಪಿದರೆ ಕಾಂಗ್ರೆಸ್ ಸರ್ಕಾರವೇ ಅದರ ಹೊಣೆ ಹೊರಬೇಕಾದೀತು? ಎಂದು ವಿಜಯೇಂದ್ರ ಎಚ್ಚರಿಸಿದ್ದಾರೆ.

 

 

Share This Article
error: Content is protected !!
";