ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ತಾಲ್ಲೂಕು ಕೃಷಿಕ ಸಮಾಜಕ್ಕೆ ಕಳೆದ ೧೫ರಂದು ಚುನಾವಣೆ ನಡೆದಿದ್ದು, ಒಟ್ಟು ೧೫ ನೂತನ ನಿರ್ದೇಶಕರು ತಾಲ್ಲೂಕು ಕೃಷಿ ಸಮಾಜಕ್ಕೆ ಚುನಾವಣೆ ಮೂಲಕ ಆಯ್ಕೆಯಾಗಿದ್ದರು. ಅಧಿಕೃತವಾಗಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಕೃಷಿ ಇಲಾಖೆಯ ಆವರಣದಲ್ಲಿ ಮಂಗಳವಾರ ನಡೆಯಿತು.
ತಾಲ್ಲೂಕು ಕೃಷಿ ಸಮಾಜದ ನೂತನ ಅಧ್ಯಕ್ಷರಾಗಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಎಂ.ಎಸ್.ನವೀನ್ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಹೆಂಜೇರರೆಡ್ಡಿ, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಸಿ.ಸತೀಶ್‌ಕುಮಾರ್, ಖಜಾಂಚಿಯಾಗಿ ಓ.ಲೋಕೇಶ್, ಜಿಲ್ಲಾ ಪ್ರತಿನಿಧಿಯಾಗಿ ಡಿ.ಕೇಶವ ಆಯ್ಕೆ ಮಾಡಲಾಯಿತು.
ತಾಲ್ಲೂಕು ಕೃಷಿ ಸಮಾಜದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಎಂ.ಎಸ್.ನವೀನ್ ಮಾತನಾಡಿ, ಕೃಷಿ ಸಮಾಜದ ಅಭಿವೃದ್ದಿಗೆ ಸಾಕಷ್ಟು ಚಿಂತನೆ ನಡೆಸಲಾಗುತ್ತಿದೆ. ಜಿಲ್ಲಾ ಕೃಷಿ ಸಮಾಜದ ಅಧ್ಯಕ್ಷರಾಗಿ ನನ್ನ ತಂದೆ ದಿವಂಗತ ಎಂ.ಸಿ.ಶಿವಣ್ಣರೆಡ್ಡಿ ಕಾರ್ಯನಿರ್ವಹಿಸಿದ್ದರು. ಪುನಃ ನನಗೆ ಈ ತಾಲ್ಲೂಕಿನ ಕೃಷಿ ಸಮಾಜದ ಅಧ್ಯಕ್ಷಸ್ಥಾನವನ್ನು ನೀಡಲಾಗಿದೆ. ನೂತನ ಜವಾಬ್ದಾರಿಯನ್ನು ನಿಮ್ಮೆಲ್ಲರ ಸಹಕಾರದಿಂದ ಯಶಸ್ವಿಯಾಗಿ ಮುನ್ನಡೆಸುವ ವಿಶ್ವಾಸ ನನಗಿದೆ. ಎಲ್ಲರೂ ನನಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಹಾಯಕ ಕೃಷಿ ನಿರ್ದೇಶಕ ಜೆ.ಅಶೋಕ್, ಕಳೆದ ಸುಮಾರು ಒಂದೆರಡು ವರ್ಷಗಳಿಂದ ಕೃಷಿ ಸಮಾಜಕ್ಕೆ ಚುನಾವಣೆ ನಡೆಯದೆ ಜನಪ್ರತಿನಿಧಿ ಆಯ್ಕೆಯಾಗದೆ ಸೂಕ್ತ ಸಮಯದಲ್ಲಿ ಕೆಲಸ ಕಾರ್ಯಗಳು ನಡೆಯುತ್ತಿರಲಿಲ್ಲ. ಆದರೆ, ಈಗ ಕೃಷಿ ಸಮಾಜದ ನೂತನ ಪದಾಧಿಕಾರಿಗಳೊಂದಿಗೆ ಮತ್ತೊಮ್ಮೆ ತನ್ನ ಚಟುವಟಿಕೆ ಆರಂಭಿಸಿದೆ. ಇಲಾಖೆಯಿಂದ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಎಚ್.ಕಾಂತರಾಜ್, ಗಿರೀಶ್, ಜಗದೀಶ್, ಭೀಮಾರೆಡ್ಡಿ, ರಮೇಶ್, ಜಿ.ಎಚ್.ಲೀಲಾವತಿ, ವಂಶಿಕೃಷ್ಣ, ವೆಂಕಟೇಶ್, ಶ್ರೀನಿವಾಸ್‌ರೆಡ್ಡಿ, ಬಿ.ಸಿ.ಸತೀಶ್‌ಕುಮಾರ್, ಸುಶೀಲಮ್ಮ ಮುಂತಾದವರು ಉಪಸ್ಥಿತರಿದ್ದರು.