Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ದೆಹಲಿಯಲ್ಲಿ ಕಡು ಬಡತನದಲ್ಲಿರುವ ಕನ್ನಡದ ಕುಟುಂಬಗಳ ಕನ್ನಡಿ

ಚಂದ್ರವಳ್ಳಿ ನ್ಯೂಸ್, ದೆಹಲಿ:
ಒಮ್ಮೆ ದೆಹಲಿಯ ನಿವೇದಿತಾ ಕುಂಜ್ ನ ಬಳಿ ಇರುವ ನಿವೇದಿತಾ ಆಶ್ರಮದ ಗಲ್ಲಿಯಲ್ಲಿ ಹೋಗುತ್ತಿದ್ದೆ ಆ ಜಾಗ ತುಂಬಾ ಕಿರಿಯಾದಾಗಿತ್ತು ರಸ್ತೆಯ ಇಕ್ಕೆಲಗಳಲ್ಲಿ ಪುಟ್ಟ ಪುಟ್ಟದಾದ ಒಂದಕ್ಕೊಂದು ಅಂಟಿಕೊಂಡಿರುವ ಮನೆಗಳು. ಅಲ್ಲಿನ ರಸ್ತೆಯು ಸಹ ಬಹಳ ಇಕ್ಕಟ್ಟಾಗಿತ್ತು ಸುಮಾರು ಐದಾರು ಅಡಿ ಅಗಲ 90 ಅಡಿ ಉದ್ದದ ಆ ರಸ್ತೆಯಲ್ಲಿ ಹೋಗುವಾಗ ಏನೋ ಒಂಥರಾ ಸರಕಾರಿ ಆಸ್ಪತ್ರೆ ಒಳಗೆ ಬರುವಂತಹ ಘಾಟು ವಾಸನೆ ಮೂಗಿಗೆ ಮುತ್ತಿಕೊಂಡಂತೆ ಬರುತ್ತಿತ್ತು ಅದರ ತೀವ್ರತೆಗೆ ಮೂಗು ಮುಚ್ಚಿಕೊಳ್ಳಬೇಕು ಎನ್ನುವಷ್ಟರಲ್ಲಿ


ಅಲ್ಲಿನ ಮನೆಯ ಅಂಗಳದಲ್ಲಿ ಚಿಕ್ಕ ಪುಟ್ಟ ಕೆಲಸದಲ್ಲಿ ನಿರತ ಹೆಣ್ಣು ಮಕ್ಕಳು ಮಾತಾಡುತ್ತಿದ್ದ ಶಬ್ದಗಳು ಮಾತೃಭಾಷೆಯ ಮುತ್ತಿನಸುರಿಮಳೆ ಸದ್ದಿಗೆ ನನ್ನ ಕಿವಿಗಳೆರಡು ಅರಳಿ ಮನಸೆಲ್ಲ ಸಂತೋಷದಿಂದ ತೇಲಿದಂತಾಯಿತು ಏಕೆಂದರೆ ದೆಹಲಿಯ ಮೂಲೆ ಮೂಲೆಯಲ್ಲಿಯೂ ಬರೀ ಹಿಂದಿ ಭಾಷೆಯ ಸದ್ದು ಗದ್ದಲವನ್ನೇ ಕೇಳಿ ಕೇಳಿ ಬೇಸರವಾದಂತಹ ಸಮಯದಲ್ಲಿ ಇದ್ದಕ್ಕಿದ್ದಂತೆ ಇಲ್ಲಿ ಕನ್ನಡದ ಕಲರವ ಕೇಳಿ ತುಂಬಾ ಖುಷಿಯಾಯಿತು. ನಮ್ಮ ನಾಡಿನಿಂದ ದೂರವಿರುವ ನಮಗೆ ಮಾತೃಭಾಷೆ ಕೇಳಿದಾಗ ಆಗುವ ಆನಂದವೇ ಬೇರೆ ಅದೇಗೆ ಅಂದ್ರೆ ನಮ್ಮ ತಾಯಿ ನಮ್ಮ ಜೊತೆ ಇರುವಾಗ ಏನೂ ಗೊತ್ತಾಗೋಲ್ಲ ತಾಯಿ ಇಲ್ಲದೆ ತಬ್ಬಲಿಯಾದಾಗ ತಾಯಿಯ ಮಹತ್ವ ಅರಿವಾಗುವಂತೆ ನಮ್ಮ ಭಾಷೆಯನ್ನು ಹೊರ ರಾಜ್ಯದಲ್ಲಿ ಕೇಳಿದರೆ ಮಹದಾನಂದ ಆಗುವುದು.

ಅಲ್ಲಿಯೇ ಅವರನ್ನು ಕುರಿತು ಮಾತಾಡಿ ಯೋಗಕ್ಷೇಮ ಕೇಳಿ ಸಂತೋಷದಿಂದ ಮುಖ್ಯರಸ್ತೆಗೆ ಬಂದೆ. ಆದರೂ ಏಕೋ ನನ್ನ ಮನಸ್ಸು ಆ ಜನರನ್ನು ಇನ್ನೂ ತುಂಬಾ ವಿಚಾರಿಸಬೇಕಿತ್ತು ಅವರು ಇಲ್ಲಿಗೇಕೆ ಬಂದಿದ್ದಾರೆ ಅಷ್ಟೊಂದು ಜನಕ್ಕೂ ಒಂದೇ ಕಡೆ ಸೂರು ಅದು ಈ ದೆಹಲಿಯಲ್ಲಿ ಸಿಕ್ಕಿದ್ದಾದರೂ ಹೇಗೆ ಅವರೆಲ್ಲಾ ಇಲ್ಲಿ ಏನು ಮಾಡುತ್ತಿದ್ದಾರೆ ಎಂಬ ಹಲವಾರು ಪ್ರಶ್ನೆಗಳು ಕಾಡಿ ಕುತೂಹಲ ಮೂಡಿ ಒಂದು ಭಾನುವಾರದಂದು ಗೆಳೆಯ ಶ್ರೀನಿವಾಸಯ್ಯನನ್ನು ಜೊತೆಯಲ್ಲಿ ಕರೆದುಕೊಂಡು ನಿವೇದಿತಾ ಆಶ್ರಮಕ್ಕೆ ಬಂದು ಅಲ್ಲಿನ ಕನ್ನಡದ ಕುಟುಂಬವನ್ನು ಉದ್ದೇಶಿಸಿ ಮಾಡಿದ ಒಂದು ಸಂದರ್ಶನ ಹೀಗಿದೆ;



ನೀವೆಷ್ಟು ಜನ ಇದ್ದೀರ ಎಷ್ಟು ಮನೆಗಳಿವೆ?
ಇಲ್ಲಿ ನಾವು ಸರಿ ಸುಮಾರು 150 ಜನರಿದ್ದೇವೆ ಮತ್ತು 55 ಮನೆಗಳಿವೆ.

ಇಲ್ಲಿಗೆ ಏಕೆ ಮತ್ತು ಯಾವಾಗ ಬಂದಿರಿ?
ಸುಮಾರು 30-40 ವರ್ಷಗಳ ಹಿಂದೆ ಕುಷ್ಟರೋಗದಿಂದ ಬಳಲಿ ಪರಿತಪಿಸುತ್ತಾ ಭಿಕ್ಷಾಟನೆ ಮಾಡುತ್ತಾ ಇಲ್ಲಿಗೆ ಬಂದು ಸೇರಿದೆವು.

ಇಲ್ಲಿ ನೀವೇನು ಕೆಲಸ ಮಾಡುತ್ತಿದ್ದೀರಿ?
ಚಿಕ್ಕ ಪುಟ್ಟ ವ್ಯಾಪಾರ ಕೆಲವರು ಮಾಡಿದರೆ ಇನ್ನೂ ಕೆಲವರು ಚಾಲಕ ವೃತ್ತಿ ಹಾಗು ನಾಲ್ವರು ದೆಹಲಿ ಮುನ್ಸಿಪಲ್ ಇಲಾಖೆಯಲ್ಲಿ ಕೆಲಸ ಮಾಡುತ್ತೇವೆ.

ಇಲ್ಲಿನ ಜನ ಜೀವನ ಪರಿಸರ ಒಗ್ಗಿತೇ?
ಹೇಗೋ ಬಂದು ಬಿಟ್ಟಿದ್ದೇವೆ ಮತ್ತು ಇಲ್ಲಿನ ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಂಡಿದ್ದೇವೆ. 

ನಿಮ್ಮ ಊರಿನಲ್ಲಿ ನಿಮ್ಮ ಸಂಬಂಧಿಕರು ಮತ್ತು ಮನೆ ಮಠ ಏನಾದರೂ ಇದೆಯೇ ಅಲ್ಲಿಗೆ ಯಾವಾಗಲಾದರೂ ಹೋಗುತ್ತೀರಾ?
ಹೌದು ನಮ್ಮ ಸ್ವಂತ ಊರಿನಲ್ಲಿ ಈಗಲೂ ನಮ್ಮ ಸಂಬಂಧಿಕರು ಇದ್ದಾರೆ ಅಲ್ಲಿ ನಮಗೆ ಹೇಳಿಕೊಳ್ಳುವಂತ ಯಾವುದೇ ಆಸ್ತಿ ಏನು ಇಲ್ಲ ಆದರೂ ಕನಿಷ್ಠ ವರ್ಷಕ್ಕೊಮ್ಮೆಯಾದರೂ ನಮ್ಮ ಊರಿಗೆ ಹೋಗಿ ಸಂಬಂಧಿಕರನ್ನು ನೋಡಿ ಮಾತಾಡಿಸಿಕೊಂಡು ಬರುತ್ತೇವೆ ಅಲ್ಲದೆ ಅವರು ಯಾವುದಾದರೂ ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ ಕರೆದರೆ ಹೋಗಿ ಬರುತ್ತೇವೆ.

ನಿಮಗೆ ಇಲ್ಲಿ ಇರಲು ಇಷ್ಟವೋ ಅಥವಾ ಕರ್ನಾಟಕದ ನಿಮ್ಮ ಪೂರ್ವಜರ ಊರಲ್ಲಿ ಇರಲು ಬಯಸುತ್ತೀರೋ?
ನಾವು ನಮ್ಮ ಪೂರ್ವಿಕರ ಊರಿನಲ್ಲಿ ಇರಲು ಇಷ್ಟವೇ ಆದರೆ ಇಲ್ಲಿನ ಜನ ಜೀವನ ಪರಿಸ್ಥಿತಿಗೆ ತಕ್ಕಂತೆ ಒಗ್ಗಿಕೊಂಡಿದ್ದೇವೆ ಅಲ್ಲಿ ಹೋದರೆ ಹೇಗೋ ಏನೋ ಎಂಬ ಅಳಕು ಆದ್ದರಿಂದ ಇದ್ದುದರಲ್ಲೇ ಇಲ್ಲಿಯೇ ಬದುಕನ್ನು ನಡೆಸಿಕೊಂಡು ಹೋಗುತ್ತಿದ್ದೇವೆ.

ನಿಮ್ಮ ಮಕ್ಕಳು ಇಲ್ಲಿ ಯಾವ ಭಾಷೆಯಲ್ಲಿ ಕಲಿಕೆ ಮಾಡುತ್ತಿದ್ದಾರೆ?
ಇಲ್ಲಿ ನಮ್ಮ ಮಕ್ಕಳು ಹಿಂದಿ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ

ಇಲ್ಲಿರುವುದು ನಿಮಗೆಲ್ಲ ಸ್ವಂತ ಮನೆಯೋ ಅಥವಾ ತಾತ್ಕಾಲಿಕವೋ?
ಇಲ್ಲಿನ ಸರ್ಕಾರದಿಂದ ನಮಗೆ ಚಿಕ್ಕದಾದರೂ ಸ್ವಂತ ಮನೆಯೇ ಸಿಕ್ಕಿದೆ.

ಇಲ್ಲಿನ ಆಡಳಿತವು ನಿಮಗೆ ಯಾವ ಯಾವ ಸೌಕರ್ಯಗಳನ್ನು ಒದಗಿಸುತ್ತಿದೆ? ಇಲ್ಲಿ ನೀರಿನ ಸೌಲಭ್ಯ ಮತ್ತು ಉಚಿತ ವಿದ್ಯುತ್ ಸಂಪರ್ಕ ಹಾಗು ಇನ್ನೂ ಹಲವಾರು ಸೌಕರ್ಯಗಳನ್ನು ನೀಡಿದ್ದಾರೆ ಆದರೂ ಮಳೆ ಬಂದಾಗ ಇಲ್ಲಿ ತುಂಬಾ ಅವ್ಯವಸ್ಥೆ ಆಗುತ್ತದೆ ಆದರೂ ಏನು ಮಾಡುವುದು.

- ಸ್ವರ್ಗೀಯ ಶ್ರೀಮತಿ ಸುಷ್ಮಾ ಸ್ವರಾಜ್ ಮೇಡಂ ಅವರು ಇರುವಾಗ ಸುಮಾರು 18-20 ವರ್ಷಗಳಿಂದಲೂ ಪ್ರತಿ ವರ್ಷ ಅವರ ಹುಟ್ಟು ಹಬ್ಬವನ್ನು ಇಲ್ಲಿಯೇ ಆಚರಿಸಿಕೊಂಡು ನಮ್ಮ ಜೊತೆಯೇ ಕುಳಿತು ಊಟಮಾಡಿ ಹೋಗುತ್ತಿದ್ದರು ಅವರು ಇರುವಾಗ ನಮ್ಮ ಎಲ್ಲಾ ಆಗು ಹೋಗುಗಳ ಬಗ್ಗೆ ಗಮನ ತೆಗೆದುಕೊಂಡು ನಮಗೆ ಹಲವು ಸೌಲಭ್ಯ ಸೌಕರ್ಯಗಳನ್ನು ನೀಡಿದರು ಅವರು ಮಾತ್ರ ನಮಗೆ ತುಂಬಾ ನೆನಪಾಗುತ್ತಾರೆ ಮತ್ತು ಅವರನ್ನು ಕಳೆದುಕೊಂಡು ಅನಾಥಪ್ರಜ್ಞೆ ಕಾಡುತ್ತದೆ ಈಗಲೂ ಅವರ ಮಗಳು ಸಂಸದೆ ಬಾಂಸುರಿ ಸ್ವರಾಜ್ ಸಹ ಅವರ ತಾಯಿಯ ಅನುಕರಣೆ ಮಾಡುತ್ತಿದ್ದಾರೆ ಅವರ ತಾಯಿಯ ಹುಟ್ಟು ಹಬ್ಬವನ್ನು ಇಲ್ಲಿಯೇ ಆಚರಿಸುತ್ತಾರೆ ಮತ್ತು ನಮ್ಮ ಜೊತೆ ಚರ್ಚಿಸಿ ಸಣ್ಣ ಪುಟ್ಟ ಸಮಸ್ಯೆಗಳನ್ನು ಈಡೇರಿಸುತ್ತಾರೆ.

ನಮ್ಮ ಕನ್ನಡದ ಬಹಳಷ್ಟು ರಾಜಕಾರಣಿಗಳು ಈ ದೆಹಲಿಯಲ್ಲಿ ಇದ್ದಾರೆ ಅವರು ಯಾರಾದರೂ ಇಲ್ಲಿ ಬಂದಿದ್ದರೋ ಮತ್ತು ನಿಮ್ಮನ್ನು ಕಂಡು ನಿಮ್ಮ ಸಮಸ್ಯೆಯ ಬಗ್ಗೆ ಮಾತನಾಡಿದ್ದಾರೆಯೇ?

ಹೌದು ನಮ್ಮ ಕನ್ನಡದ ಬಹಳಷ್ಟು ರಾಜಕಾರಣಿಗಳು ದೆಹಲಿಯಲ್ಲಿ ಇದ್ದಾರೆ ಅವರಲ್ಲಿ ಕೆಲವರು ಬರುತ್ತಾರೆ ಹಿಂದೆ ಒಮ್ಮೆ ಶ್ರೀಮತಿ ಶೋಭಾ ಕರಂದ್ಲಾಜೆ ಅವರು ಬಂದಿದ್ದರು ಮತ್ತು ಹಲವಾರು ಸೌಲಭ್ಯಗಳನ್ನು ಕೊಡಿಸಲು ಸರ್ಕಾರಕ್ಕೆ ಮನವಿ ಮಾಡುವುದಾಗಿ ಭರವಸೆ ನೀಡಿ ಹೋದರು. ಆದರೆ ಯಾವುದೇ ಸೌಲಭ್ಯ ಸಿಗಲಿಲ್ಲ.

ಈಗಲೂ ಕುಷ್ಟರೋಗದ ಸಮಸ್ಯೆ ಇದೆಯೇ?
ಇಲ್ಲ. ಹೀಗೆಲ್ಲಾ M.D.T ಬಂದಾಗಿನಿಂದ ಕುಷ್ಟರೋಗ ವಾಸಿಯಾಗಿದೆ (ವಿಶ್ವ ಆರೋಗ್ಯ ಸಂಸ್ಥೆ (WHO) ಕುಷ್ಠರೋಗಕ್ಕೆ MDT ಯನ್ನು ಬಳಸುತ್ತದೆ, ಇದು ಸಾಮಾನ್ಯವಾಗಿ ಮೂರು ಔಷಧಿಗಳನ್ನು ಒಳಗೊಂಡಿರುತ್ತದೆ: ಡ್ಯಾಪ್ಸೋನ್, ಕ್ಲೋಫಾಜಿಮೈನ್ ಮತ್ತು ರಿಫಾಂಪಿಸಿನ್). ಇಲ್ಲಿ ಇರುವವರಿಗೆಲ್ಲ ಕುಷ್ಟರೋಗ ವಾಸಿಯಾಗಿದೆ ಈಗ ಯಾರಿಗೂ ಕುಷ್ಠ ರೋಗ ಇಲ್ಲ ಸರ್ಕಾರ ಇದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಕುಷ್ಟರೋಗವನ್ನು ಸಂಪೂರ್ಣವಾಗಿ ತಡೆಗಟ್ಟಿದ್ದಾರೆ. ಈಗ ಯಾರಿಗಾದರೂ ಕಂಡು ಬಂದರೆ ವೈದ್ಯರ ಬಳಿ ಹೋಗಿ ವಾಸಿ ಮಾಡಿಸಿಕೊಳ್ಳಬಹುದು ಈಗ ಅಂತಹ ಯಾವುದೇ ತೊಂದರೆ ಇಲ್ಲ ಈಗ ಯಾರಿಗಾದರೂ ಕುಷ್ಟರೋಗ ಬಂದರೂ ಹೆದರುವ ಅವಶ್ಯಕತೆ ಇಲ್ಲ ಆರು ತಿಂಗಳು ಅಥವಾ ಒಂದು ವರ್ಷದ ಕೋರ್ಸ್ ತೆಗೆದುಕೊಂಡರೆ ವಾಸಿಯಾಗುತ್ತದೆ ಈ ನಿಟ್ಟಿನಲ್ಲಿ ಸರ್ಕಾರ ತುಂಬಾ ಕಾಳಜಿ ವಹಿಸಿ ಗುಣಮುಖರಾಗುವಂತೆ ಮಾಡುತ್ತಿದ್ದಾರೆ.

ಈ ಕುಷ್ಟರೋಗ ಖಾಯಿಲೆಯಿಂದ ಮೊದಲು ಹೆದರುತ್ತಿದ್ದರು ಆದರೆ ಈಗ ಆ ರೀತಿ ಯಾವುದೇ ತೊಂದರೆಗಳಿಲ್ಲ ಇವರ ಜೊತೆ ಸಂಪರ್ಕದಲ್ಲಿದ್ದರೂ ಯಾವುದೇ ಅಪಾಯವಿಲ್ಲ ಎಂದು ಸರ್ಕಾರವು ಹೇಳುತ್ತಿದೆ ಮತ್ತು ನಮ್ಮ ಮಕ್ಕಳು ಸಹ ಶಾಲೆಗೆ ಹೋಗುತ್ತಿದ್ದಾರೆ ಎಂ.ಡಿ.ಟಿ ಎಂಬುವುದು ಬಂದಾಗಿನಿಂದ ಯಾವುದೇ ತೊಂದರೆ ಇಲ್ಲ ಇದರಿಂದ ನಾವು ನಿಶ್ಚಿಂತೆಯಾಗಿ ಜೀವನ ನಡೆಸುತ್ತಿದ್ದೇವೆ.

ಅಲ್ಲಿ ನನ್ನ ಜೊತೆ ಮಾತಿಗೆ ಸಿಕ್ಕ ವಯಸ್ಸಾದವರನ್ನು ನಾನು ಗಮನಿಸಿದಾಗ ಬಹಳಷ್ಟು ಜನರ ಮುಂಗೈ ಬೆರಳುಗಳು ಕುಷ್ಠ ರೋಗದಿಂದ ಮುಕ್ಕಾಗಿ ಹೋಗಿರುವ ಕುರುಹು ಕಾಣುತ್ತಿತ್ತು. ಅಲ್ಲಿನ ಮುಖ್ಯಸ್ಥ ಉಳಿಗಪ್ಪ ಅವರು ಹೇಳಿದ ಪ್ರಕಾರ ಈ ಸರ್ಕಾರದಿಂದ ಕೆಲವು ಸೌಲಭ್ಯಗಳು ಸಿಗುತ್ತವೆಯಾದರು ಸಾಲುವುದಿಲ್ಲ ಆದರೆ ಕೆಲವು ದಾನಿಗಳು ಮಾಡುವ ದಾನ ಧರ್ಮದಿಂದ ಎಷ್ಟೋ ಸಹಾಯ ಆಗುತ್ತದೆ ಅದರಿಂದ ನಮ್ಮ ಜೀವನ ಸಾಗುತ್ತದೆ ಎಂದರು. ಅಂದಹಾಗೆ ನಿವೇದಿತಾ ಆಶ್ರಮದ ಮುಖ್ಯಸ್ಥ ಉಳಿಗಪ್ಪ ಅವರನ್ನು ಸಂಪರ್ಕಿಸಿ ಆಶ್ರಮದ ನಿವಾಸಿಗಳಿಗೆ ಸಹಾಯ ಮಾಡುವ ಇಚ್ಛೆ ಇರುವ ದಾನಿಗಳು ಉಳಿಗಪ್ಪ ಅವರನ್ನು ಸಂಪರ್ಕಿಸಬಹುದು 98187 23152.
ಸಂದರ್ಶನ: ವೆಂಕಟೇಶ. ಹೆಚ್, ಚಿತ್ರದುರ್ಗ (7760023887).
ಪೋಟೋ ಸಹಾಯ: ಶ್ರೀನಿವಾಸಯ್ಯ


 

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು