Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
International News

ಮಾಜಿ ಶಾಸಕ ಪಿಳ್ಳ ಮುನಿ ಶಾಮಪ್ಪನವರ ಒಂದು ಅನುಭವದ ಅನಿಸಿಕೆ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಒಂದು ಅನಿಸಿಕೆ ದೇವನಹಳ್ಳಿ ಕ್ಷೇತ್ರದ ಮಾಜಿ ಶಾಸಕರಾದ ಪಿಳ್ಳ ಮುನಿಶಾಮಪ್ಪನವರು ನಿನ್ನೆ ಚೀನಾ ದೇಶದಿಂದ ಕರೆ ಮಾಡಿದ್ದರು. ಹಾಂಕಾಂಗ್ ಮತ್ತು ಚೀನಾ ಪ್ರವಾಸದಲ್ಲಿರುವ ಅವರು ಚೀನಾದ ಸುತ್ತಾಟದಲ್ಲಿ ತಮಗಾದ ಕೆಲವು ಅನುಭವಗಳನ್ನು ಹಂಚಿಕೊಳ್ಳುತ್ತಾ ಭಾವುಕರಾದರು.


ಚೀನಾದ ಆ ಅದ್ಭುತ ರಸ್ತೆಗಳು, ಚೀನಾದ ಜನರ ಸೌಮ್ಯ ಸ್ವಭಾವ, ಅಲ್ಲಿನ ಗಿಡಮರಗಳನ್ನು, ಸಸಿಗಳನ್ನು ಮಕ್ಕಳಂತೆ ನೋಡಿಕೊಳ್ಳುವ ಅವರ ಪರಿಸರ ಪ್ರೀತಿ, ಹೋಟೆಲ್ ಮತ್ತು ವಾಹನ ಚಾಲಕರ ನಾಗರಿಕ ವರ್ತನೆ ಇತ್ಯಾದಿ ಇತ್ಯಾದಿ ವಿವರಣೆಗಳನ್ನು ನೀಡುತ್ತಾ, ನಮ್ಮ ದೇಶದ ಕೆಲವು ಜನರ ವರ್ತನೆಗಳ ಬಗ್ಗೆಯೂ ಹೋಲಿಕೆ ಮಾಡುತ್ತಾ, ನಮ್ಮ ಸಮಾಜದಲ್ಲಿ, ನಮ್ಮ ಸಂಸ್ಕೃತಿಯಲ್ಲಿ, ನಮ್ಮ ನಾಗರಿಕತೆಯಲ್ಲಿ ಮಾಡಿಕೊಳ್ಳಬಹುದಾದ ಕೆಲವು ಬದಲಾವಣೆ ಮತ್ತು ಪರಿವರ್ತನೆಗಳನ್ನು ಕುರಿತು ಚರ್ಚೆ ಮಾಡಿದರು.

ಸಾಮಾನ್ಯವಾಗಿ ವಿದೇಶ ಯಾತ್ರೆ ಮಾಡುವ ಮುಖ್ಯವಾಗಿ ಚೀನಾ, ಜಪಾನ್, ಕೊರಿಯಾ, ವಿಯೆಟ್ನಾಂ, ಭೂತಾನ್ ಅದರಲ್ಲೂ ಯುರೋಪಿನ ಸ್ಕ್ಯಾಂಡಿನೇವಿಯಾ ದೇಶಗಳಾದ ನಾರ್ವೆ, ಸ್ವೀಡನ್, ಡೆನ್ಮಾರ್ಕ್, ಐಸ್ಲ್ಯಾಂಡ್, ಗ್ರೀನ್ಲ್ಯಾಂಡ್, ಫಿನ್ಲೆಂಡ್ ಮುಂತಾದ ದೇಶಗಳು, ಜೊತೆಗೆ ನ್ಯೂಜಿಲೆಂಡ್ ಆಸ್ಟ್ರೇಲಿಯಾದಂತ ದೇಶಗಳನ್ನು ಸುತ್ತಿ ಬರುವವರಲ್ಲಿ, ಅಮೆರಿಕಾದ ಅತ್ಯಂತ ಶ್ರೀಮಂತಿಕೆ ನೋಡಿರುವವರು, ಯುನೈಟೆಡ್ ಅರಬ್ ಎಮಿರೇಟ್ಸ್ ಸುತ್ತಾಡಿರುವವರು ಅಲ್ಲಿನ ಪ್ರಾಕೃತಿಕ ಸೌಂದರ್ಯ, ಶ್ರೀಮಂತಿಕೆ, ಜನರ ಶಿಸ್ತು, ನಾಗರೀಕ ವರ್ತನೆಗಳನ್ನು ಕಂಡು ಅದನ್ನು ಭಾರತದ ಸ್ಥಳೀಯತೆಗೆ ಹೋಲಿಸಿಕೊಂಡು ಒಂದಷ್ಟು ಬೇಸರ ವ್ಯಕ್ತಪಡಿಸುವುದು ಸದಾ ಕಾಲ ಗಮನಿಸಬಹುದು.

ಹಾಗೆಂದು ಅದು ಭಾರತದ ದೂಷಣೆಯಲ್ಲ, ಭಾರತದ ಮೇಲಿನ ಪ್ರೀತಿ. ಅಂದರೆ ನಮ್ಮ ದೇಶವೂ ಸಹ ಆ ರೀತಿಯ ನಾಗರಿಕ ವರ್ತನೆ ತೋರಿಸಿದರೆ ಉತ್ತಮ ಗುಣಮಟ್ಟದಲ್ಲಿ ಅಭಿವೃದ್ಧಿ ಹೊಂದಿ ನೆಮ್ಮದಿಯಾಗಿ ಬದುಕಬಹುದು ಎನ್ನುವ ಆಸೆಯನ್ನು ಅವರ ಮಾತುಗಳಲ್ಲಿ ಗ್ರಹಿಸಬಹುದು.

ನಾನು ಕೂಡ ವಿಶ್ವದ ಎಲ್ಲಾ ದೇಶಗಳನ್ನು, ಎಲ್ಲಾ ಕಾಲದಲ್ಲೂ ಸದಾ  ಸುತ್ತುವ ಟೂರ್ ಮ್ಯಾನೇಜರ್ ಗಳನ್ನು ಈ ವಿಷಯದಲ್ಲಿ ಆಗಾಗ ಮಾತನಾಡಿಸುತ್ತೇನೆ. ಯಾವ ದೇಶದ ಜನರ ನಡವಳಿಕೆಗಳು ಹೇಗಿರುತ್ತದೆ ಎಂದು ಪ್ರಶ್ನಿಸುತ್ತೇನೆ. ಅವರೆಲ್ಲರೂ ಹೇಳುವುದು ಸಾಮಾನ್ಯವಾಗಿ ವಿಶ್ವದ ಪ್ರವಾಸಿಗರಲ್ಲಿ ಅವರ ನಡೆ-ನುಡಿಗಳಲ್ಲಿ ಮೊದಲ ಸ್ಥಾನ ಚೀನಾ, ಜಪಾನ್ ಕೊರಿಯಾ ಮುಂತಾದ ದೇಶದ ಪ್ರವಾಸಿಗಳಿಗೆ ನೀಡುತ್ತಾರೆ. ಎರಡನೇ ಸ್ಥಾನವನ್ನು ಯುರೋಪಿನ ದೇಶಗಳಿಗೂ, ಮೂರನೆಯ ಸ್ಥಾನವನ್ನು ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಅಮೆರಿಕ ಮುಂತಾದ ದೇಶಗಳಿಗೂ ಕೊಡುತ್ತಾರೆ. ಕೊನೆಯ ಸ್ಥಾನವನ್ನು ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಆಫ್ರಿಕಾದ ಕೆಲವು ದೇಶಗಳನ್ನು ಹೆಸರಿಸುತ್ತಾರೆ. ಈಗ ಒಂದಷ್ಟು ಭಾರತೀಯರ ಬಗ್ಗೆ ವಿದೇಶದಲ್ಲಿ ಬದಲಾವಣೆ ಆಗಿದೆ ಎಂದು ಹೇಳುತ್ತಾರಾದರೂ ಅಂತರಿಕವಾಗಿ ಭಾರತದ ಜನರ ಮನೋಭಾವವನ್ನು ಗಮನಿಸಿದಾಗ ಇನ್ನು ಸಾಕಷ್ಟು ಬದಲಾವಣೆ ಬರಬೇಕೆಂದು ಎಲ್ಲರಿಗೂ ಅನಿಸುತ್ತದೆ.

ಇಂದಿನ ಭಾರತದ ಒಟ್ಟು ವ್ಯವಸ್ಥೆಯಲ್ಲಿ ಯಾವ ವ್ಯಕ್ತಿಗಳು ಹೆಚ್ಚು ಪ್ರಸಿದ್ಧರಾಗಿದ್ದಾರೆ, ಯಾವ ರೀತಿಯ ವ್ಯಕ್ತಿಗಳು ಅಧಿಕಾರ ಹಿಡಿದಿದ್ದಾರೆ, ಯಾವ ರೀತಿಯ ವ್ಯಕ್ತಿಗಳು ಜನಪ್ರಿಯರಾಗಿದ್ದಾರೆ, ಯಾವ ರೀತಿಯ ವ್ಯಕ್ತಿತ್ವದವರು ಹಣ ಮಾಡಿದ್ದಾರೆ, ಯಾವ ರೀತಿಯ ಸಿನಿಮಾಗಳು, ಧಾರವಾಹಿಗಳು ಯಶಸ್ವಿಯಾಗುತ್ತಿವೆ, ಯಾವ ರೀತಿಯ ಯೂಟ್ಯೂಬ್ ಚಾನೆಲ್ ಗಳು ಅತಿ ಹೆಚ್ಚು ವೀಕ್ಷಕರನ್ನು ಆಕರ್ಷಿಸುತ್ತಿದೆ, ಯಾವ ರೀತಿಯ ರಿಯಾಲಿಟಿ ಶೋಗಳು ಜನಪ್ರಿಯತೆ ಪಡೆಯುತ್ತಿವೆ, ಯಾವ ರೀತಿಯ ಉದ್ಯಮಿಗಳು ಯಶಸ್ವಿಯಾಗುತ್ತಿದ್ದಾರೆ, ಯಾವ ಉದ್ಯೋಗ ಹೆಚ್ಚು ಲಾಭಗಳಿಸುತ್ತಿದೆ ಹೀಗೆ ಇಡೀ ವ್ಯವಸ್ಥೆಯನ್ನು ಒಮ್ಮೆ ಅವಲೋಕಿಸಿ ನೋಡಿ ನಿಜಕ್ಕೂ ಹೆಚ್ಚು ನಿರಾಶೆಯಾಗುವುದು ಮಾತ್ರವಲ್ಲದೆ ಬೇಸರವಾಗುತ್ತದೆ ಸಹ.

ನಿಜವಾದ ಈ ದೇಶದ ಸಾಂಸ್ಕೃತಿಕ ವ್ಯಕ್ತಿತ್ವವನ್ನು ಹೊಂದಿರುವವರು ಬಹುತೇಕ ಮೂಲೆಗುಂಪಾಗಿರುತ್ತಾರೆ. ಒಳ್ಳೆಯವರು ಒಳ್ಳೆಯವರಾಗಿಯೇ ಬದುಕಲು ಸಹ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಚುನಾವಣೆಗಳೇ ಇರಲಿ, ಸರ್ಕಾರಿ ಅಧಿಕಾರಿಗಳೇ ಇರಲಿ, ಧಾರ್ಮಿಕ ಮುಖಂಡರೇ ಆಗಿರಲಿ, ಜಾತಿ ಸಂಘಟನೆಗಳೇ ಇರಲಿ, ಭ್ರಷ್ಟಾಚಾರವೇ ಇರಲಿ ಎಲ್ಲವೂ ಕೂಡ ಇಂದು ಉಡಾಫೆ ವ್ಯಕ್ತಿತ್ವದ, ಭ್ರಷ್ಟ ಮನಸ್ಥಿತಿಯ ಜನರೇ ಹೆಚ್ಚು ಹೆಚ್ಚು ಮುಖ್ಯ ವಾಹಿನಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

ಕೆಟ್ಟ ಸಿನಿಮಾಗಳು, ಭಾರತದ ಮೌಲ್ಯಗಳಿಗೆ ವಿರುದ್ಧ ಚಿಂತನೆಯ ಕಥೆಗಳು ಯಶಸ್ವಿಯಾಗುತ್ತಿವೆ. ಹಿಂಸೆ, ಕ್ರೌರ್ಯ ವಿಜೃಂಭಿಸುತ್ತಿದೆ. ಜನರ ಆರೋಗ್ಯ ಕುಸಿಯುತ್ತಿದೆ. ಮಾನಸಿಕ ನೆಮ್ಮದಿ ಕಾಣೆಯಾಗಿದೆ. ನಾಗರೀಕ ಲಕ್ಷಣಗಳು ತುಂಬಾ ಕಡಿಮೆಯಾಗಿದೆ. ಎಲ್ಲಾ ಕಡೆಯೂ ಸ್ವಚ್ಛತೆ ಕಾಣೆಯಾಗಿದೆ. ಪರಿಸರ ಮಾಲಿನ್ಯ ಅಧೋಗತಿ ತಲುಪಿದೆ. ಆಹಾರ ಕಲಬೆರಕೆಗಳು ಎಗ್ಗಿಲ್ಲದೆ ನಡೆಯುತ್ತಿದೆ. ಶಿಕ್ಷಣ ಮತ್ತು ಮೆಡಿಕಲ್ ಮಾಫಿಯಾ ಉತ್ತುಂಗದಲ್ಲಿದೆ. ರಾಜಕೀಯ ಕೆಸರಾಟ ತನ್ನ ಮೌಲ್ಯ ಕಳೆದುಕೊಂಡಿದೆ.

ಹೀಗಿರುವಾಗ ಖಂಡಿತವಾಗಲೂ ಆತ್ಮವಂಚನೆ ಮಾಡಿಕೊಂಡು ಈ ದೇಶದ ಇಲ್ಲದ ಮೌಲ್ಯಗಳನ್ನು ಎತ್ತಿ ಹೇಳಿ ವಿಜೃಂಭಿಸುವುದು ಎಷ್ಟರಮಟ್ಟಿಗೆ ಸರಿ. ಹಾಗೆಂದು ಈ ದೇಶ ಸಂಪೂರ್ಣ ಹಾಳಾಗಿದೆ ಎಂದು ಹೇಳುತ್ತಿಲ್ಲ. ನಮ್ಮ ಸಾಂಸ್ಕೃತಿಕ ಮೌಲ್ಯಗಳು ಅತ್ಯುತ್ತಮ ನಿಜ, ಆದರೆ ಅವು ವಿನಾಶದ ಹಾದಿಯಲ್ಲಿ ಸಾಗುತ್ತಿದೆ.

ಆದಷ್ಟು ಬೇಗ ನಾವೆಲ್ಲರೂ ಈ ನಿಟ್ಟಿನಲ್ಲಿ ಎಚ್ಚರಗೊಂಡು ಮಾನವೀಯ ಮೌಲ್ಯಗಳು, ನಾಗರಿಕ ಲಕ್ಷಣಗಳು, ಭಾರತೀಯ ಪ್ರಗತಿಪರ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ.

ಸಾಮಾನ್ಯವಾಗಿ ಪ್ರತಿ ಕುಟುಂಬದಲ್ಲೂ ಒಂದಲ್ಲ ಒಂದು ಒಡಕು ಮೂಡಿ ಅನೇಕ ರೀತಿಯ ಗಲಾಟೆಗಳಾಗುತ್ತಿವೆ. ಅದನ್ನು ನಿಯಂತ್ರಣಕ್ಕೆ ತರಲೇಬೇಕಿದೆ. ಕೌಟುಂಬಿಕ ವ್ಯವಸ್ಥೆಯು ಸಂಪೂರ್ಣ ಅವನತಿಯ ಹಾದಿಯಲ್ಲಿದೆ. ಅದರ ಪರಿಣಾಮ ಸಮಾಜದ ಮೇಲೂ ಆಗುತ್ತಿದೆ. ಆದ್ದರಿಂದ ಇದೊಂದು ಎಚ್ಚರಿಕೆಯ ಗಂಟೆಯಾಗಿ ಕನಿಷ್ಠ ಸಾಮಾಜಿಕ ಜಾಲತಾಣಗಳು, ಮಾಧ್ಯಮಗಳ ಮೂಲಕವಾದರೂ ಒಂದಷ್ಟು ಜಾಗೃತ ಚಳುವಳಿಗಳು ಪ್ರಾರಂಭವಾಗಲಿ ಎಂಬ ಉದ್ದೇಶದಿಂದ ಶ್ರೀ ಪಿಳ್ಳ ಮುನಿಶಾಮಪ್ಪನವರ ಕಾಳಜಿಯನ್ನು ಹಿನ್ನೆಲೆಯಾಗಿಟ್ಟುಕೊಂಡು ಈ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ.
ಲೇಖನ-ವಿವೇಕಾನಂದ‌. ಎಚ್. ಕೆ. 9844013068

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚಿತ್ರದುರ್ಗ: 25,000 ರೂ. ಲಂಚ ಪಡೆಯುತ್ತಿದ್ದ ಉಪವಿಭಾಗಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ಲೋಕಾಯುಕ್ತ ಬಲೆಗೆಪಶ್ಚಿಮಘಟ್ಟ ಸಂರಕ್ಷಣೆ: ಕಸ್ತೂರಿ ರಂಗನ್ ವರದಿ ಸ್ಯಾಟಲೈಟ್ ಮ್ಯಾಪಿಂಗ್ ಒಪ್ಪಲು ಸಾಧ್ಯವಿಲ್ಲ; ಬಿ.ಕೆ.ಹರಿಪ್ರಸಾದ್ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣ: ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶಶಾಸಕ ಎಸ್. ಸುರೇಶ್ ಕುಮಾರ್ ಅವರು "ಸಜ್ಜನ" ಎಂಬ ಮುಖವಾಡ ಧರಿಸಿದ ದುರ್ಜನಸರ್ಕಾರದ ಅನುದಾನಕ್ಕೆ ಕಾಯದೆ ಸ್ವಂತ ಖರ್ಚಿನಲ್ಲಿ ಕಾಲುವೆ ದುರಸ್ತಿಗೆ ಮುಂದಾದ ಎಚ್.ಡಿ. ರೇವಣ್ಣಹೈಕೋರ್ಟ್‌ನಿಂದ ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಹಗರಣಕ್ಕೆ ಎಸ್‌ಐಟಿ ತನಿಖೆಗೆ ಆದೇಶಆಲಮಟ್ಟಿ ಜಲಾಶಯ ಎತ್ತರ ಹೆಚ್ಚಳ: ಯುಕೆಪಿ ಹಂತ-3ರ ಭೂಸ್ವಾಧೀನ ಪ್ರಕ್ರಿಯೆಗೆ ಚುರುಕುವ್ಯಾಪಕ ಭ್ರಷ್ಟಾಚಾರ: ಕಾಮಗಾರಿಗಳ ಶ್ವೇತಪತ್ರ ಹೊರಡಿಸಲು ಆಂಜನೇಯ ಆಗ್ರಹ‘ಗೌರವಯುತ ಲಂಚ’: ಕಾಂಗ್ರೆಸ್ ಸರ್ಕಾರದ ಹೊಸ 'ಪ್ರಜಾಸೇವಾ ಶುಲ್ಕ' ಎಂದು ಆರ್. ಅಶೋಕ್ಸ್ವಪಕ್ಷೀಯರ ಆಕ್ರೋಶವೇ ಕಾಂಗ್ರೆಸ್ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ: ಆರ್. ಅಶೋಕ್ ವಾಗ್ದಾಳಿ