ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ಜಮೀನಿನ ಸಾಗುವಳಿ ಚೀಟಿ ಆದೇಶಕ್ಕೆ ಸಂಬಂಧಿಸಿದಂತೆ ದೂರುದಾರರಿಂದ ಲಂಚ ಸ್ವೀಕರಿಸುತ್ತಿದ್ದ ಚಿತ್ರದುರ್ಗ ಉಪವಿಭಾಗಾಧಿಕಾರಿಗಳ ಕಚೇರಿಯ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಬಸವರಾಜ್ ಹೆಚ್. ಜಿ. ಸೋಮವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಪ್ರಕರಣದ ವಿವರ:
ಹೊಸದುರ್ಗ ತಾಲೂಕಿನ ಕೆಲ್ಲೋಡು ಗ್ರಾಮದ ನಿವಾಸಿ ಟಿ. ಹನುಮಂತಪ್ಪ ಎಂಬುವವರು ತಮ್ಮ ತಂದೆ ತಿಮ್ಮಪ್ಪ ಅವರಿಗೆ ಸೇರಿದ ಶ್ರೀರಾಮಪುರ ಹೋಬಳಿ ಹುಳುವಿನಗುಂಡಿ ಗ್ರಾಮದ ಜಮೀನಿನ ಸಾಗುವಳಿ ಚೀಟಿಗಾಗಿ ಉಪವಿಭಾಗಾಧಿಕಾರಿಗಳ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ಮುಗಿದು 2026ರ ಜೂನ್ 9ರಂದು ಪ್ರಕರಣವು ಆದೇಶಕ್ಕಾಗಿ ಕಾಯ್ದಿರಿಸಲ್ಪಟ್ಟಿತ್ತು.
ಆದೇಶ ಹೊರಡಿಸಲು ವಿಳಂಬ ಮಾಡುತ್ತಿದ್ದ ಎಫ್‌ಡಿಎ ಬಸವರಾಜ್, ದೂರುದಾರರಿಂದ ರೂ. 30,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಪೈಕಿ ಸೆಪ್ಟೆಂಬರ್ 7ರಂದು ರೂ. 5,000 ಪಡೆದಿದ್ದ ಆರೋಪಿ, ಬಾಕಿ ರೂ. 25,000 ನೀಡುವಂತೆ ಪಟ್ಟು ಹಿಡಿದಿದ್ದರು.
ಲಂಚ ನೀಡಲು ಇಷ್ಟವಿಲ್ಲದ ಹನುಮಂತಪ್ಪ ಅವರು ಚಿತ್ರದುರ್ಗ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ರೆಡ್‌ಹ್ಯಾಂಡ್ ಆಗಿ ಬಂಧನ:
ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪ್ರಭಾರ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್. ಕೌಲಾಪುರೆ ಅವರ ಮಾರ್ಗದರ್ಶನದಲ್ಲಿ ಸೆಪ್ಟೆಂಬರ್ 21ರ ಸಂಜೆ ಕಾರ್ಯಾಚರಣೆ ನಡೆಸಲಾಯಿತು.
ದೂರುದಾರರಿಂದ ಬಾಕಿ ರೂ. 25,000 ಲಂಚ ಸ್ವೀಕರಿಸಿ, ಆಟೋರಿಕ್ಷಾದಲ್ಲಿ ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿ ಬಸವರಾಜ್ ಅವರನ್ನು ಲೋಕಾಯುಕ್ತ ಅಧಿಕಾರಿಗಳು ರೆಡ್‌ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ ವಿಚಾರಣೆ ಮುಂದುವರಿದಿದೆ.




