ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಪಕ್ಷದ ಕೆಲ ನಾಯಕರು ಸಿದ್ದರಾಮಯ್ಯ ಅವರ ರಾಜಕೀಯ ಜೀವನವನ್ನು ಮುಗಿಸಿ ಹೊಸ ರಾಜಕೀಯ ಮಾಡಲು ಹೊರಟಿದ್ದು, ಇದಕ್ಕೆ 2028ರ ಚುನಾವಣೆಯಲ್ಲಿ ರಾಜ್ಯದ ಜನ ತಕ್ಕ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ಜೆಪಿ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗೃಹ ಇಲಾಖೆ ಹಾಗೂ ಗುಪ್ತದಳ ಕೈಯಲ್ಲಿದ್ದರೂ ತನಿಖೆ ನಡೆಸದೆ ನನ್ನ ಬಳಿ ಸಾಕ್ಷ್ಯ ಕೇಳುತ್ತಿರುವ ಪ್ರಿಯಾಂಕ್ ಖರ್ಗೆ ಅವರಿಗೆ ಗೃಹ ಖಾತೆ ನಿರ್ವಹಿಸುವ ಯೋಗ್ಯತೆಯೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಮೇಲ್ ರಹಸ್ಯದ ಪ್ರಶ್ನೆ: ಸಂತ್ರಸ್ತೆ ಕೃಪಾ ಆಳ್ವ ಅಧ್ಯಕ್ಷರಾಗಿದ್ದಾಗ ಮಕ್ಕಳ ಹಕ್ಕುಗಳ ಆಯೋಗಕ್ಕೆ ಕಳುಹಿಸಿದ್ದ ಇಮೇಲ್ ಎಲ್ಲಿದೆ? ಅದನ್ನು ಇಟ್ಟುಕೊಂಡಿದ್ದೀರಾ ಅಥವಾ ಅಳಿಸಿಹಾಕಿದ್ದೀರಾ? ಎಂದು ಪ್ರಶ್ನಿಸಿದ ಅವರು, ಆ ಸಮಯದಲ್ಲಿ ಬಂದಿದ್ದ ಇಮೇಲ್ ಪರಿಶೀಲಿಸಿ ಸೂಕ್ತ ತನಿಖೆ ನಡೆಸಲು ಗೃಹ ಸಚಿವರು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ತಪ್ಪುತ್ತಿರುವ ತನಿಖೆಯ ದಾರಿ: ಸ್ಟಿಂಗ್ ಆಪರೇಷನ್ನ ಸೂತ್ರಧಾರರನ್ನು ಬಂಧಿಸಬೇಕೆಂದು ಸಿದ್ದರಾಮಯ್ಯ ಅವರು ಹೈಕಮಾಂಡ್ ಮೇಲೆ ಒತ್ತಡ ತರುತ್ತಿದ್ದಾರೆ. ಆದರೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ಒತ್ತಡದಿಂದಾಗಿ ಪೊಲೀಸರು ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದು, ತನಿಖೆಯ ಹಾದಿ ಸಂಪೂರ್ಣವಾಗಿ ತಪ್ಪುತ್ತಿದೆ ಎಂದು ಕಿಡಿಕಾರಿದರು.
ಹೈಕಮಾಂಡ್ಗೆ ಸಿದ್ದರಾಮಯ್ಯ ಎಚ್ಚರಿಕೆ: "2028ಕ್ಕೆ ನಾನು ಇರಬೇಕೋ ಬೇಡವೋ ನೀವೇ ಹೇಳಿ" ಎಂದು ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರಿಗೆ ಗಟ್ಟಿಯಾಗಿಯೇ ಎಚ್ಚರಿಕೆ ನೀಡಿದ್ದಾರೆ ಎಂಬ ಮಾಹಿತಿ ಬಂದಿದೆ ಎಂದು ತಿಳಿಸಿದರು.
ನೋವಿನಿಂದ ಆಡಿದ ಮಾತು: ತಾವು ಸಿದ್ದರಾಮಯ್ಯ ಅವರ ವಿರುದ್ಧ ಸದಾ ಹೋರಾಟ ಮಾಡಿಕೊಂಡು ಬಂದಿದ್ದರೂ, ಈ ಮಾತುಗಳನ್ನು ಅನುಕಂಪಕ್ಕಾಗಲಿ ಅಥವಾ ಅಸೂಯೆಯಿಂದಾಗಲಿ ಹೇಳುತ್ತಿಲ್ಲ. ರಾಜ್ಯಕ್ಕೊದಗಿರುವ ದಾರಿದ್ರ್ಯ ಸ್ಥಿತಿಯ ನೋವಿನಿಂದ ಮತ್ತು ರಾಜ್ಯದ ಹಿತದೃಷ್ಟಿಯಿಂದ ಎಚ್ಚರಿಸುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.




