ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷದವರೇ ಯಾರಾದರೂ ಶಾಮೀಲಾಗಿದ್ದರೆ ಮುದಾಕ್ಷಿಣ್ಯವಿಲ್ಲದೆ ನೋಟಿಸ್ ಜಾರಿಗೊಳಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಸ್ಪಷ್ಟಪಡಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯತೀಂದ್ರ ಸಿದ್ದರಾಮಯ್ಯ ಅವರು ಎತ್ತಿರುವ ಆರೋಪಗಳ ಕುರಿತು ಪ್ರತಿಕ್ರಿಯೆ ನೀಡಿದರು. ರಾಜಕೀಯವಾಗಿ ಸೇಡು ತೀರಿಸಿಕೊಳ್ಳುವ ದುರ್ಉದ್ದೇಶದಿಂದ ಕೆಲವರು ಇಂತಹ ಹೀನ ಕೃತ್ಯಗಳಿಗೆ ಇಳಿಯುತ್ತಿದ್ದಾರೆ. ಇದು ಒಮ್ಮೆಯೂ ಆಗಬಾರದಿತ್ತು ಎಂದು ತಿಳಿಸಿದ ಅವರು, ವಿಡಿಯೋದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿಗಳು ಹಾಗೂ ಅವರ ಹಿಂದೆ ಇರುವ ಕಾಣದ ಕೈಗಳ ಬಗ್ಗೆ ಸಿಐಡಿ ಅಥವಾ ಸಿಬಿಐ ಮೂಲಕ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ
ಇದೇ ವೇಳೆ ಸಿಡಿ ಹಾಗೂ ಆಪರೇಷನ್ ರಾಜಕಾರಣದ ಪಿತಾಮಹ ದೇಶದ ಪ್ರಧಾನಿ ನರೇಂದ್ರ ಮೋದಿ ಎಂದು ತೀವ್ರವಾಗಿ ಕಿಡಿಕಾರಿದ ಬಿ.ಕೆ. ಹರಿಪ್ರಸಾದ್, ಗುಜರಾತ್‌ನಲ್ಲಿ ತಮ್ಮ ಜೊತೆ ಬಿಜೆಪಿ ಉಸ್ತುವಾರಿಯಾಗಿದ್ದ ಸಂಜಯ್ ಜೋಶಿ ಅವರ ರಾಜಕೀಯ ಜೀವನವನ್ನು ಸಿಡಿ ಬಿಡುಗಡೆ ಮಾಡುವ ಮೂಲಕ ಸಂಪೂರ್ಣವಾಗಿ ನಿರ್ನಾಮ ಮಾಡಲಾಗಿತ್ತು ಎಂದು ಹಳೆಯ ಘಟನೆಯನ್ನು ನೆನಪಿಸಿದರು.
ಸಿದ್ದರಾಮಯ್ಯ ಅಷ್ಟು ವೀಕ್ ಅಲ್ಲ
ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುವುದಾಗಿ ಎಚ್.ಡಿ. ಕುಮಾರಸ್ವಾಮಿ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ ಹರಿಪ್ರಸಾದ್, "ಸಿದ್ದರಾಮಯ್ಯನವರು ಅಷ್ಟೇನೂ ದುರ್ಬಲರಲ್ಲ. ಕುಮಾರಸ್ವಾಮಿಯವರಿಗೆ ಇರುವ ಧೈರ್ಯಕ್ಕಿಂತ ಹೆಚ್ಚಿನ ಧೈರ್ಯ ಸಿದ್ದರಾಮಯ್ಯನವರಿಗಿದೆ. ಇದನ್ನು ನಾವು ರಾಜಕೀಯವಾಗಿಯೇ ಸಮರ್ಥವಾಗಿ ಎದುರಿಸುತ್ತೇವೆ" ಎಂದು ನುಡಿದರು.
ನವೆಂಬರ್ 1ರಿಂದ ದೆಹಲಿಯಲ್ಲಿ ಇಂಡಿಯಾ ಒಕ್ಕೂಟದ ಬೃಹತ್ ಪ್ರತಿಭಟನೆ
ಮತಕಳ್ಳತನದ ವಿವಾದವನ್ನು ಖಂಡಿಸಿ ನವೆಂಬರ್ 1ರಿಂದ ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಇಂಡಿಯಾ ಒಕ್ಕೂಟದ ವತಿಯಿಂದ ಮಹತ್ವದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ದೇಶದ ವಿವಿಧ ಮೂಲೆಗಳಿಂದ ಸುಮಾರು 5 ಲಕ್ಷಕ್ಕೂ ಅಧಿಕ ಜನರು ಇದರಲ್ಲಿ ಭಾಗಿಯಾಗಲಿದ್ದು, ಕಾಂಗ್ರೆಸ್‌ನ ಉನ್ನತ ನಾಯಕರೂ ಸಾಥ್ ನೀಡಲಿದ್ದಾರೆ. ಆದರೆ ಕರ್ನಾಟಕದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವಿರುವ ಕಾರಣ ರಾಜ್ಯದ ಸಚಿವರುಗಳು ಇಲ್ಲೇ ಇರಲಿದ್ದಾರೆ ಎಂದು ತಿಳಿಸಿದರು.
ಅಮಿತ್ ಶಾ ಹೇಳಿಕೆಗೆ ತಿರುಗೇಟು
ಇನ್ನೇನು ಮೂರು ತಿಂಗಳಲ್ಲಿ ಅಮಿತ್ ಶಾ ಅವರು ದೆಹಲಿಯಿಂದ ಗಡಿಪಾರಾಗಲಿದ್ದಾರೆ ಎಂಬುದು ಅವರಿಗೇ ಇನ್ನೂ ತಿಳಿದಿಲ್ಲ ಎಂದು ಕೇಂದ್ರ ಗೃಹ ಸಚಿವರ '30 ವರ್ಷ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ' ಎಂಬ ಹೇಳಿಕೆಗೆ ಹರಿಪ್ರಸಾದ್ ವ್ಯಂಗ್ಯವಾಗಿ ತಿರುಗೇಟು ನೀಡಿದರು.
ನಿಗಮ ಮಂಡಳಿ ನೇಮಕಾತಿ ಶೀಘ್ರ
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ನಿಗಮ-ಮಂಡಳಿಗಳ ನೇಮಕಾತಿ ಪಟ್ಟಿ ತಡವಾಗಿದ್ದು, ಶೀಘ್ರದಲ್ಲೇ ಪ್ರಕಟಗೊಳ್ಳಲಿದೆ. ಆರಂಭದಲ್ಲಿ ನಿರ್ದೇಶಕರು ಹಾಗೂ ಸದಸ್ಯರ ನೇಮಕ ನಡೆಯಲಿದ್ದು, ಮುಂದಿನ ಹಂತದಲ್ಲಿ ಅಧ್ಯಕ್ಷರ ಆಯ್ಕೆ ಅಂತಿಮಗೊಳ್ಳಲಿದೆ ಎಂದರು.
ಗೋವಿಂದ ಕಾರಜೋಳ ವಿರುದ್ಧ ಹರಿಹಾಯ್ದ ಹರಿಪ್ರಸಾದ್
ದಸರಾ ಉತ್ಸವದ ವೇಳೆ ಮಂತ್ರಿಗಳ ಪ್ರವೇಶಕ್ಕೆ ತಡೆ ನೀಡಿರುವುದು ತಪ್ಪು ಹಾಗೂ ಆ ರೀತಿಯ ಘಟನೆಗಳು ಮರುಕಳಿಸಬಾರದು ಎಂದ ಬಿ.ಕೆ. ಹರಿಪ್ರಸಾದ್, ಮೈಸೂರು ಘಟನೆಯ ಕುರಿತು ತನಿಖೆಗೆ ಮುಖ್ಯಮಂತ್ರಿಗಳು ಈಗಾಗಲೇ ಸೂಚಿಸಿದ್ದಾರೆ ಎಂದರು.
ಇದೇ ವೇಳೆ ಬಿಜೆಪಿ ನಾಯಕ ಗೋವಿಂದ ಕಾರಜೋಳ ಅವರ ವಿರುದ್ಧ ವಾಗ್ದಾಳಿ ನಡೆಸಿದ ಅವರು, "ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ದಲಿತ ಬಾಲಕಿಯನ್ನು ರಾತ್ರಿ 12 ಗಂಟೆಗೆ ಸುಟ್ಟುಹಾಕಿದಾಗ, ರೋಹಿತ್ ವೇಮುಲ ಆತ್ಮಹತ್ಯೆ ಮಾಡಿಕೊಂಡಾಗ ಅಥವಾ ಗುಜರಾತ್‌ನಲ್ಲಿ ದಲಿತನೊಬ್ಬ ಮೀಸೆ ಬಿಟ್ಟ ಹಾಗೂ ಕುದುರೆ ಏರಿದ ಕಾರಣಕ್ಕೆ ಹಲ್ಲೆ/ಕೊಲೆಗಳಾದಾಗ ಗೋವಿಂದ ಕಾರಜೋಳ ಯಾಕೆ ಮೌನವಾಗಿದ್ದರು? ಅವರಿಗೆ ಧೈರ್ಯವಿದ್ದರೆ ಮೊದಲು ಬೇರೆ ರಾಜ್ಯಗಳಲ್ಲಿ ದಲಿತರ ಮೇಲಾಗುತ್ತಿರುವ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತಲಿ" ಎಂದು ಸವಾಲುಹಾಕಿದರು.




