ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಹಿಳೆಯರ ಕಲ್ಯಾಣಕ್ಕಾಗಿ ಜಾರಿಯಲ್ಲಿರುವ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆಯಡಿ ಸಲ್ಲಿಕೆಯಾಗುವ ದೂರುಗಳನ್ನು ವಿಚಾರಣೆಗೂ ಮುನ್ನವೇ ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಕೆನಡಾದ ಟೊರಾಂಟೋದಲ್ಲಿ ನೆಲೆಸಿರುವ ಸಬುಜ್ ಪಾಲ್ ಎಂಬುವರು ತಮ್ಮ ವಿರುದ್ಧ ಪತ್ನಿ ನೀಡಿದ್ದ ದೂರು ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಹೆಚ್.ಪಿ. ಸಂದೇಶ್ ಅವರಿದ್ದ ನ್ಯಾಯಪೀಠ ವಜಾಗೊಳಿಸಿದೆ. 2013ರಲ್ಲಿ ಮದುವೆಯಾಗಿದ್ದ ದಂಪತಿ ಕೆನಡಾದಲ್ಲಿದ್ದರು. 2016ರಲ್ಲಿ ಭಾರತಕ್ಕೆ ಬಂದ ಪತ್ನಿಯನ್ನು ಪತಿ ಕೆನಡಾಕ್ಕೆ ಕರೆದುಕೊಂಡು ಹೋಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಪತ್ನಿ 2017ರಲ್ಲಿ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಗೃಹ ಹಿಂಸೆ ತಡೆ ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು.
ಪತಿಯ ಪರ ವಕೀಲರು, 'ದೂರು ಸಲ್ಲಿಕೆ ತಡವಾಗಿದೆ ಮತ್ತು ಪತಿ ವಿದೇಶದಲ್ಲಿದ್ದಾಗ ಹಿಂಸೆ ಎಸಗಲು ಸಾಧ್ಯವಿಲ್ಲ' ಎಂದು ವಾದಿಸಿದ್ದರು. ಆದರೆ, ಪತ್ನಿಯು ನಿರ್ದಿಷ್ಟ ಹಾಗೂ ಸ್ಪಷ್ಟ ಆರೋಪಗಳನ್ನು ಮಾಡಿರುವಾಗ, ಗೃಹ ಹಿಂಸೆ ನಡೆದಿದೆಯೇ ಇಲ್ಲವೇ ಎಂಬುದು ವಿಚಾರಣಾ ನ್ಯಾಯಾಲಯದ ಸಾಕ್ಷ್ಯಾಧಾರಗಳ ಮೂಲಕವೇ ನಿರ್ಧಾರವಾಗಬೇಕಾದ ಸಂಗತಿ. ಈ ಕಾಯ್ದೆಯಡಿ ಬರುವ ಅರ್ಜಿಗಳಿಗೆ ಕಾಲಮಿತಿಗಿಂತ ಘಟನೆಯ ಸತ್ಯಾಸತ್ಯತೆ ಮುಖ್ಯವಾಗಿರುತ್ತದೆ ಎಂದು ಸ್ಪಷ್ಟಪಡಿಸಿದ ಹೈಕೋರ್ಟ್, ಹೈಕೋರ್ಟ್ನ ಅಸಾಧಾರಣ ಅಧಿಕಾರ ಬಳಸಿ ಆರಂಭಿಕ ಹಂತದಲ್ಲೇ ಪ್ರಕರಣ ರದ್ದುಗೊಳಿಸಲು ನಿರಾಕರಿಸಿದೆ.




