ಚಂದ್ರವಳ್ಳಿ ನ್ಯೂಸ್, ಮೈಸೂರು
ಬದುಕಿನ ಮೌಲ್ಯವನ್ನು ಸಂಪತ್ತು, ಸ್ಥಾನಮಾನ, ಸಾಧನೆ ಅಥವಾ ಹೊರಗಿನ ಯಶಸ್ಸಿನ ಅಳತೆಯಿಂದ ನಿರ್ಧರಿಸದೆ, ಅದರೊಳಗಿನ ಅನುಭವ, ಮೌಲ್ಯ ಮತ್ತು ಮಾನವೀಯತೆ ಯನ್ನು ಅರಿಯಬೇಕು. ಎಷ್ಟು ಬದುಕಿದೆ ಎಂಬುದಕ್ಕಿಂತ ಹೇಗೆ ಬದುಕಿದೆ, ತನ್ನ ಬದುಕಿನಿಂದ ಏನು ಕಲಿತೆ ಮತ್ತು ಇತರರ ಬದುಕಿಗೆ ಏನು ನೀಡಿದೆ ಎಂಬುದನ್ನು ಅರಿತಾಗ ಜೀವನದ ನಿಜವಾದ ಅರ್ಥ ತೆರೆದುಕೊಳ್ಳುತ್ತದೆ.
ಮನುಷ್ಯನ ಬದುಕು ಇಂದು ಅಂಕಿ-ಅಂಶಗಳ ನಡುವೆ ಸಿಕ್ಕಿಹಾಕಿಕೊಂಡಿದೆ. ಎಷ್ಟು ಹಣ ಸಂಪಾದಿಸಿದ್ದಾನೆ, ಎಷ್ಟು ದೊಡ್ಡ ಮನೆ ಕಟ್ಟಿದ್ದಾನೆ, ಯಾವ ಹುದ್ದೆಯಲ್ಲಿದ್ದಾನೆ, ಎಷ್ಟು ಆಸ್ತಿಯನ್ನು ಹೊಂದಿದ್ದಾನೆ, ಎಷ್ಟು ಜನರಿಗೆ ಪರಿಚಿತನಾಗಿ ದ್ದಾನೆ ಎಂಬುದರ ಆಧಾರದ ಮೇಲೆ ಅವನ ಬದುಕಿನ ಯಶಸ್ಸನ್ನು ಅಳೆಯುವ ಪ್ರವೃತ್ತಿ ಹೆಚ್ಚಾಗಿದೆ. ಬದುಕಿನ ಮೌಲ್ಯವನ್ನು ಅಳೆಯಲು ಸಮಾಜ ತನ್ನದೇ ಆದ ಮಾಪಕಗಳನ್ನು ಸೃಷ್ಟಿಸಿಕೊಂಡಿದೆ. ಆ ಮಾಪಕದಲ್ಲಿ ಹಿಂದೆ ಬಿದ್ದವನು ತನ್ನ ಬದುಕನ್ನೇ ಕಡಿಮೆ ಎಂದು ಭಾವಿಸುತ್ತಾನೆ. ಮುಂದೆ ಹೋದವನು ತನ್ನನ್ನು ಯಶಸ್ವಿ ಎಂದುಕೊಳ್ಳುತ್ತಾನೆ. ಆದರೆ ಬದುಕಿನ ನಿಜವಾದ ಅರ್ಥವನ್ನು ಈ ಅಳತೆಗಳು ಹೇಳಬಲ್ಲವೇ ಎಂಬ ಪ್ರಶ್ನೆಯನ್ನು ನಾವು ಗಂಭೀರವಾಗಿ ಕೇಳಿಕೊಳ್ಳಬೇಕಾಗಿದೆ.
ಅಳತೆ ಎನ್ನುವುದು ವಸ್ತುಗಳ ಜಗತ್ತಿಗೆ ಅಗತ್ಯವಾದುದು. ತೂಕವನ್ನು ತಕ್ಕಡಿಯಿಂದ, ದೂರವನ್ನು ಮಾಪಕದಿಂದ, ಸಮಯವನ್ನು ಗಡಿಯಾರದಿಂದ ಅಳೆಯಬಹುದು. ಆದರೆ ಮನುಷ್ಯನ ಮನಸ್ಸನ್ನು ಯಾವ ಮಾಪಕದಿಂದ ಅಳೆಯುವುದು? ಪ್ರೀತಿಯ ಆಳಕ್ಕೆ ಯಾವ ಪ್ರಮಾಣ? ತ್ಯಾಗದ ಮೌಲ್ಯಕ್ಕೆ ಯಾವ ಬೆಲೆ? ಕರುಣೆಯ ಎತ್ತರಕ್ಕೆ ಯಾವ ಅಂಕ? ಒಬ್ಬನು ಮೌನವಾಗಿ ಮಾಡಿದ ಸಹಾಯವನ್ನು ಯಾವ ಪಟ್ಟಿಯಲ್ಲಿ ದಾಖಲಿಸುವುದು? ಹೀಗಾಗಿ ಬದುಕಿನ ಪ್ರತಿಯೊಂದು ಮೌಲ್ಯವನ್ನೂ ಪ್ರಮಾಣದ ಮೂಲಕ ನಿರ್ಧರಿಸಲು ಹೊರಟಾಗ, ಬದುಕಿನ ಗುಣಾತ್ಮಕ ಅಂಶಗಳು ನಿಧಾನವಾಗಿ ನಮ್ಮ ದೃಷ್ಟಿಯಿಂದ ಮರೆಯಾಗುತ್ತವೆ.
ಇಂದಿನ ಸಮಾಜದಲ್ಲಿ ಯಶಸ್ಸು ಬಹಳಷ್ಟು ಬಾರಿ ಪ್ರದರ್ಶನದ ವಸ್ತುವಾಗಿದೆ. ಸಾಧಿಸಿದುದನ್ನು ತೋರಿಸಬೇಕು, ಹೊಂದಿರುವುದನ್ನು ಪ್ರಕಟಿಸಬೇಕು, ಬದುಕಿನ ಪ್ರತಿಯೊಂದು ಕ್ಷಣಕ್ಕೂ ಹೊರಗಿನ ಮಾನ್ಯತೆ ಪಡೆಯಬೇಕು ಎಂಬ ಮನೋಭಾವ ಬೆಳೆಯುತ್ತಿದೆ. ಸಾಮಾಜಿಕ ಜಾಲತಾಣಗಳು ಈ ಪ್ರವೃತ್ತಿಗೆ ಮತ್ತಷ್ಟು ವೇಗ ನೀಡಿವೆ. ಮತ್ತೊಬ್ಬನ ಪ್ರವಾಸ, ಮನೆ, ಉಡುಪು, ವಾಹನ ಅಥವಾ ಸಾಧನೆಯನ್ನು ನೋಡಿದಾಗ ನಮ್ಮ ಬದುಕಿನೊಂದಿಗೆ ಹೋಲಿಕೆ ಆರಂಭವಾಗುತ್ತದೆ. ಹೋಲಿಕೆಯೇ ನಿಧಾನವಾಗಿ ಅತೃಪ್ತಿಯ ಬೀಜವಾಗುತ್ತದೆ. ನಮ್ಮಲ್ಲಿರುವುದನ್ನು ನೋಡುವ ಕಣ್ಣು ಕಡಿಮೆಯಾಗುತ್ತದೆ. ಮತ್ತೊಬ್ಬನಲ್ಲಿರುವುದನ್ನು ನೋಡುವ ಕಣ್ಣು ಹೆಚ್ಚಾಗುತ್ತದೆ.
ಆದರೆ ನಾವು ಮರೆಯುತ್ತಿರುವ ಸಂಗತಿಯೆಂದರೆ ಪ್ರತಿಯೊಬ್ಬರ ಬದುಕಿನ ಹಿನ್ನೆಲೆ ವಿಭಿನ್ನ. ಒಬ್ಬನಿಗೆ ದೊರೆತ ಅವಕಾಶ ಮತ್ತೊಬ್ಬನಿಗೆ ದೊರಕಿರಲಿಕ್ಕಿಲ್ಲ. ಒಬ್ಬನ ದಾರಿ ಸುಗಮವಾಗಿರಬಹುದು, ಮತ್ತೊಬ್ಬನ ದಾರಿ ಕಲ್ಲು-ಮುಳ್ಳಿನಿಂದ ಕೂಡಿರಬಹುದು. ಒಬ್ಬನ ಯಶಸ್ಸು ಹೊರಗಿನಿಂದ ವೇಗವಾಗಿ ಕಾಣಬಹುದು, ಮತ್ತೊಬ್ಬನ ಹೋರಾಟ ಒಳಗಿನಿಂದ ದೊಡ್ಡದಾಗಿರಬಹುದು. ಆದ್ದರಿಂದ ಪರರ ಬದುಕಿನ ಫಲವನ್ನು ನಮ್ಮ ಬದುಕಿನ ಪಯಣದೊಂದಿಗೆ ಹೋಲಿಸುವುದು ನ್ಯಾಯಯುತವಾದ ಅಳತೆಯಲ್ಲ. ನಮ್ಮ ನಿನ್ನೆಗಿಂತ ಇಂದಿನ ನಾವು ಎಷ್ಟು ಬೆಳದಿದ್ದೇವೆ ಎಂಬುದನ್ನು ನೋಡುವುದು ಹೆಚ್ಚು ಅರ್ಥಪೂರ್ಣ.
ಬದುಕಿನ ಅರ್ಥವು ದೊಡ್ಡ ಸಾಧನೆಗಳಲ್ಲೇ ಅಡಗಿದೆ ಎಂಬ ಭ್ರಮೆಯೂ ನಮ್ಮನ್ನು ಕಾಡುತ್ತಿದೆ. ಇತಿಹಾಸದಲ್ಲಿ ಹೆಸರು ಮಾಡಿದವರ ಬದುಕು ನಮಗೆ ಕಾಣುತ್ತದೆ. ಆದರೆ ಹೆಸರು ಮಾಡದೆ ತಮ್ಮ ಕುಟುಂಬವನ್ನು ಕಟ್ಟಿದವರು, ಸಮಾಜಕ್ಕೆ ಸೇವೆ ಮಾಡಿದವರು, ಕಷ್ಟದಲ್ಲಿರುವವರಿಗೆ ನೆರವಾದವರು, ಮಕ್ಕಳಿಗೆ ಉತ್ತಮ ಬದುಕು ನೀಡಲು ತಮ್ಮ ಆಸೆಗಳನ್ನು ಬದಿಗಿಟ್ಟವರು, ತಮ್ಮ ಸುತ್ತಲಿನವರಲ್ಲಿ ಒಳ್ಳೆಯತನ ಬೆಳೆಸಿದವರು ಎಷ್ಟೋ ಮಂದಿ ಇದ್ದಾರೆ. ಅವರ ಬದುಕು ಸುದ್ದಿಯಾಗದೇ ಇರಬಹುದು. ಆದರೆ ಸುದ್ದಿಯಾಗದ ಬದುಕು ಅರ್ಥವಿಲ್ಲದ ಬದುಕಲ್ಲ.
ಒಬ್ಬ ವ್ಯಕ್ತಿಯ ಮೌಲ್ಯ ಅವನ ಹುದ್ದೆಯಿಂದ ನಿರ್ಧಾರವಾಗುವುದಿಲ್ಲ. ಹುದ್ದೆ ಬದಲಾಗುತ್ತದೆ, ಅಧಿಕಾರ ಕಳೆದುಹೋಗುತ್ತದೆ, ಸಂಪತ್ತು ಕಡಿಮೆಯಾಗಬಹುದು, ದೇಹದ ಶಕ್ತಿ ಕುಗ್ಗಬಹುದು. ಆದರೆ ಮನುಷ್ಯನು ತನ್ನ ನಡೆನುಡಿಯಲ್ಲಿ ಬಿತ್ತಿದ ಮೌಲ್ಯಗಳು ಇತರರ ನೆನಪಿನಲ್ಲಿ ಉಳಿಯುತ್ತವೆ. ಒಬ್ಬ ಶಿಕ್ಷಕ ತನ್ನ ವಿದ್ಯಾರ್ಥಿಯ ಜೀವನಕ್ಕೆ ನೀಡಿದ ದಿಕ್ಕು, ಒಬ್ಬ ತಂದೆ ತನ್ನ ಮಗುವಿಗೆ ಕಲಿಸಿದ ಪ್ರಾಮಾಣಿಕತೆ, ಒಬ್ಬ ಸ್ನೇಹಿತ ಸಂಕಷ್ಟದಲ್ಲಿ ನೀಡಿದ ಧೈರ್ಯ, ಒಬ್ಬ ಅಪರಿಚಿತನಿಗೆ ಮಾಡಿದ ಸಣ್ಣ ಸಹಾಯ ಇವೆಲ್ಲವೂ ಬದುಕಿನ ಅರ್ಥವನ್ನು ರೂಪಿಸುವ ಕಾರ್ಯಗಳೇ.
ಅಳತೆಯಾಚೆ ಬದುಕು ನೋಡು
ಅರಿವಿನೊಳಗೆ ಅರ್ಥ ಹುಡುಕು
ಮೌಲ್ಯದಿಂದ ಹೆಜ್ಜೆ ಇಡು
ಮಾನವೀಯತೆಯಿಂದ ಬದುಕು ಬೆಳೆಸು.
ಇಲ್ಲಿ ಒಂದು ಸೂಕ್ಷ್ಮವಾದ ವ್ಯತ್ಯಾಸವನ್ನು ಅರಿಯಬೇಕು. ಬದುಕನ್ನು ಅಳೆಯಬೇಡ ಎಂದರೆ ಬದುಕಿನಲ್ಲಿ ಗುರಿ ಇರಬಾರದು ಎಂದಲ್ಲ. ಸಾಧನೆ ಮಾಡಬಾರದು ಎಂದೂ ಅಲ್ಲ. ಮನುಷ್ಯನು ಕನಸು ಕಾಣಬೇಕು, ಪರಿಶ್ರಮಿಸಬೇಕು, ತನ್ನ ಸಾಮರ್ಥ್ಯವನ್ನು ವಿಸ್ತರಿಸಬೇಕು, ಸಮಾಜದಲ್ಲಿ ತನ್ನ ಕೊಡುಗೆಯನ್ನು ಹೆಚ್ಚಿಸಬೇಕು. ಆದರೆ ಸಾಧನೆಯ ಪ್ರಮಾಣವೇ ಬದುಕಿನ ಮೌಲ್ಯ ಎಂದು ಭಾವಿಸಬಾರದು. ಗುರಿ ಬದುಕಿಗೆ ದಿಕ್ಕು ನೀಡಲಿ, ಆದರೆ ಗುರಿಯ ಹಿಂದೆ ಓಡುವಾಗ ಬದುಕನ್ನೇ ಕಳೆದುಕೊಳ್ಳಬಾರದು.
ಕೆಲವೊಮ್ಮೆ ಮನುಷ್ಯನು ಭವಿಷ್ಯವನ್ನು ಕಟ್ಟುವ ಆತುರದಲ್ಲಿ ವರ್ತಮಾನವನ್ನು ಕಳೆದುಕೊಳ್ಳುತ್ತಾನೆ. ಮಕ್ಕಳಿಗಾಗಿ ದುಡಿಯುತ್ತಾ ಮಕ್ಕಳೊಂದಿಗೆ ಮಾತನಾಡಲು ಸಮಯವಿಲ್ಲದ ತಂದೆ, ಕುಟುಂಬದ ಸುಖಕ್ಕಾಗಿ ಸಂಪಾದಿಸುತ್ತಾ ಕುಟುಂಬದವರ ನಗುವನ್ನು ನೋಡಲು ಸಮಯವಿಲ್ಲದ ವ್ಯಕ್ತಿ, ಭವಿಷ್ಯದ ಭದ್ರತೆಗಾಗಿ ಇಂದಿನ ನೆಮ್ಮದಿಯನ್ನು ತ್ಯಜಿಸುವ ಮನುಷ್ಯ ಇಂತಹ ವಿರೋಧಾಭಾಸಗಳ ನಡುವೆ ಬದುಕುತ್ತಾನೆ. ನಾಳೆಗಾಗಿ ಬದುಕುವುದು ಅಗತ್ಯ. ಆದರೆ ನಾಳೆಯನ್ನು ಕಟ್ಟುವ ಹೆಸರಿನಲ್ಲಿ ಇಂದನ್ನು ಸಂಪೂರ್ಣವಾಗಿ ಕಳೆದುಕೊಳ್ಳುವುದು ಬದುಕಿನ ಸಮತೋಲನವನ್ನು ಹಾಳುಮಾಡುತ್ತದೆ.
ಬದುಕಿನ ಅರ್ಥವನ್ನು ಅರಿಯುವುದು ಎಂದರೆ ತನ್ನೊಳಗೆ ಕೆಲವು ಪ್ರಶ್ನೆಗಳನ್ನು ಎಬ್ಬಿಸಿಕೊಳ್ಳುವುದು. ನಾನು ಏನು ಗಳಿಸಿದ್ದೇನೆ ಎಂಬುದರ ಜೊತೆಗೆ ನಾನು ಏನು ಕಲಿತಿದ್ದೇನೆ? ನನ್ನ ಸಾಧನೆಯಿಂದ ನನಗೆ ಏನು ಸಿಕ್ಕಿದೆ ಎಂಬುದರ ಜೊತೆಗೆ ನನ್ನಿಂದ ಇತರರಿಗೆ ಏನು ಸಿಕ್ಕಿದೆ? ನನ್ನ ಮಾತು ಎಷ್ಟು ಜನರಿಗೆ ಕೇಳಿಸಿದೆ ಎಂಬುದಕ್ಕಿಂತ ನನ್ನ ನಡೆ ಎಷ್ಟು ಜನರಿಗೆ ಪ್ರೇರಣೆಯಾಗಿದೆ? ನಾನು ಎಷ್ಟು ಜನರನ್ನು ಗೆದ್ದಿದ್ದೇನೆ ಎಂಬುದಕ್ಕಿಂತ ಎಷ್ಟು ಜನರ ವಿಶ್ವಾಸವನ್ನು ಗಳಿಸಿದ್ದೇನೆ? ಇಂತಹ ಪ್ರಶ್ನೆಗಳು ಮನುಷ್ಯನನ್ನು ಹೊರಗಿನ ಅಳತೆಯಿಂದ ಒಳಗಿನ ಅರಿವಿನ ಕಡೆಗೆ ಕರೆದೊಯ್ಯುತ್ತವೆ.
ಬದುಕಿನ ಅರ್ಥವು ಸಂಪತ್ತಿಗೆ ವಿರುದ್ಧವಾದುದು ಅಲ್ಲ. ಸಂಪತ್ತು ಬದುಕಿಗೆ ಅಗತ್ಯ. ಆದರೆ ಸಂಪತ್ತು ಮನುಷ್ಯನನ್ನು ಆಳಲು ಆರಂಭಿಸಿದಾಗ ಸಮಸ್ಯೆ ಶುರುವಾಗುತ್ತದೆ. ತಂತ್ರಜ್ಞಾನವೂ ಅಗತ್ಯ. ಆದರೆ ಅದು ಸಂಬಂಧಗಳ ನಡುವೆ ಗೋಡೆಯಾದರೆ ಪ್ರಶ್ನಿಸಬೇಕು. ಅಧಿಕಾರವೂ ಅಗತ್ಯ. ಆದರೆ ಅದು ಸೇವೆಯ ಬದಲು ಸ್ವಾರ್ಥಕ್ಕೆ ಬಳಕೆಯಾದರೆ ಅದರ ಅರ್ಥ ಕಳೆದುಹೋಗುತ್ತದೆ.
ಶಿಕ್ಷಣವೂ ಅಗತ್ಯ. ಆದರೆ ಅದು ವಿವೇಕ ಮತ್ತು ಮಾನವೀಯತೆಯನ್ನು ಬೆಳೆಸದಿದ್ದರೆ ಅದರ ಪೂರ್ಣ ಉದ್ದೇಶ ಸಾಧಿಸಿದಂತಾಗುವುದಿಲ್ಲ. ಸಾಧನಗಳು ಬೆಳೆಯುವುದಕ್ಕಿಂತ ಅವುಗಳನ್ನು ಬಳಸುವ ಮನುಷ್ಯನ ಪ್ರಜ್ಞೆ ಬೆಳೆಯುವುದು ಮುಖ್ಯ.
ನಮ್ಮ ಬದುಕನ್ನು ಅಳೆಯಲು ಹೊರಗಿನ ಸಮಾಜದ ಮಾಪಕವನ್ನು ಮಾತ್ರ ಬಳಸಿದರೆ, ನಾವು ನಿರಂತರವಾಗಿ ಯಾರಿಗಾದರೂ ಕಡಿಮೆಯೇ ಅಥವಾ ಯಾರಿಗಾದರೂ ಹೆಚ್ಚೇ ಎಂಬ ಲೆಕ್ಕದಲ್ಲಿ ಸಿಲುಕುತ್ತೇವೆ. ಆದರೆ ಬದುಕನ್ನು ಅರಿಯಲು ಆರಂಭಿಸಿದಾಗ ಪ್ರಶ್ನೆಯೇ ಬದಲಾಗುತ್ತದೆ. “ನಾನು ಯಾರಿಗಿಂತ ಮುಂದೆ?” ಎಂಬುದರ ಬದಲು “ನಾನು ನಿನ್ನೆಗಿಂತ ಇಂದು ಉತ್ತಮವಾಗಿದ್ದೇನೆಯೇ?” ಎಂಬ ಪ್ರಶ್ನೆ ಮೂಡುತ್ತದೆ. “ನನ್ನ ಬಳಿ ಎಷ್ಟು ಇದೆ?” ಎಂಬುದರ ಬದಲು “ನನ್ನಲ್ಲಿರುವುದನ್ನು ಎಷ್ಟು ಅರ್ಥಪೂರ್ಣವಾಗಿ ಬಳಸುತ್ತಿದ್ದೇನೆ?” ಎಂಬ ಪ್ರಶ್ನೆ ಬರುತ್ತದೆ. ಇದೇ ಆತ್ಮಪರಿಶೀಲನೆಯ ಆರಂಭ.
ಮನುಷ್ಯನ ಬದುಕಿಗೆ ಅಂತಿಮ ಅರ್ಥವನ್ನು ನೀಡುವುದು ಅವನು ಬಿಟ್ಟುಹೋದ ವಸ್ತುಗಳ ಪ್ರಮಾಣವಲ್ಲ. ಅವನು ಬಿಟ್ಟುಹೋದ ಮೌಲ್ಯಗಳ ಗುರುತು. ಒಂದು ಮನೆ ಕುಸಿಯಬಹುದು, ಒಂದು ಹುದ್ದೆ ಕಳೆದುಹೋಗಬಹುದು, ಒಂದು ಹೆಸರು ಕಾಲದೊಂದಿಗೆ ಮಸುಕಾಗಬಹುದು. ಆದರೆ ಒಳ್ಳೆಯ ನಡೆ ಮತ್ತೊಬ್ಬನ ಬದುಕಿನಲ್ಲಿ ಬದಲಾವಣೆಯನ್ನು ತಂದಿದ್ದರೆ, ಆ ಪರಿಣಾಮ ಮುಂದುವರಿಯುತ್ತದೆ. ಮನುಷ್ಯನ ನಿಜವಾದ ವಿಸ್ತಾರ ಅವನ ಆಸ್ತಿಯಲ್ಲಿ ಅಲ್ಲ, ಅವನ ಪ್ರಭಾವದಲ್ಲಿ. ಆ ಪ್ರಭಾವ ಅಧಿಕಾರದಿಂದಲ್ಲ, ವ್ಯಕ್ತಿತ್ವದಿಂದ ಹುಟ್ಟಬೇಕು.
ಆದ್ದರಿಂದ ಬದುಕಿನ ಲೆಕ್ಕಾಚಾರವನ್ನು ಸ್ವಲ್ಪ ಕಡಿಮೆ ಮಾಡಿ ಬದುಕಿನ ಅರಿವನ್ನು ಹೆಚ್ಚಿಸಬೇಕಾಗಿದೆ. ಎಷ್ಟು ವರ್ಷ ಬದುಕಿದೆ ಎಂಬುದಕ್ಕಿಂತ ಆ ವರ್ಷಗಳಲ್ಲಿ ಎಷ್ಟು ಅರ್ಥಪೂರ್ಣವಾಗಿ ಬದುಕಿದೆ ಎಂಬುದು ಮುಖ್ಯ. ಎಷ್ಟು ಸಂಪಾದಿಸಿದೆ ಎಂಬುದಕ್ಕಿಂತ ಸಂಪಾದಿಸಿದುದರಲ್ಲಿ ಎಷ್ಟು ನ್ಯಾಯವಿತ್ತು ಎಂಬುದು ಮುಖ್ಯ. ಎಷ್ಟು ಜನರು ನಮ್ಮನ್ನು ಹೊಗಳಿದರು ಎಂಬುದಕ್ಕಿಂತ ನಮ್ಮ ಅಂತಃಕರಣ ನಮ್ಮನ್ನು ಒಪ್ಪಿಕೊಂಡಿದೆಯೇ ಎಂಬುದು ಮುಖ್ಯ.
ಬದುಕು ಒಂದು ಸ್ಪರ್ಧೆಯಲ್ಲ.
ಅದು ಒಂದು ಪಯಣ. ಪಯಣದಲ್ಲಿ ವೇಗಕ್ಕಿಂತ ದಿಕ್ಕು ಮುಖ್ಯ. ದಾರಿಯಲ್ಲಿ ಸಿಕ್ಕ ಅನುಭವಕ್ಕಿಂತ ಅದರಿಂದ ಪಡೆದ ಅರಿವು ಮುಖ್ಯ. ಗೆಲುವಿಗಿಂತ ಗೆಲುವಿನ ಹಾದಿಯಲ್ಲಿ ಕಳೆದುಕೊಳ್ಳದೆ ಉಳಿಸಿಕೊಂಡ ಮಾನವೀಯತೆ ಮುಖ್ಯ. ಹೀಗಾಗಿ ಬದುಕನ್ನು ಅಳೆಯುವ ಬದಲು ಬದುಕನ್ನು ಅರಿಯುವ ಪ್ರಯತ್ನ ಆರಂಭಿಸೋಣ. ಆಗ ಜೀವನವು ಸಂಖ್ಯೆಗಳ ಸರಣಿಯಾಗದೆ, ಅನುಭವಗಳ ಅರ್ಥಪೂರ್ಣ ಕಥೆಯಾಗುತ್ತದೆ. ಬದುಕಿನ ಉದ್ದವನ್ನು ಕಾಲ ಅಳೆಯಬಹುದು. ಆದರೆ ಬದುಕಿನ ಆಳವನ್ನು ಅರಿವು ಮಾತ್ರ ತಿಳಿಸಬಲ್ಲದು ಅಲ್ಲವೇ.
ಲೇಖನ : ಕೆ. ಎಸ್. ಪ್ರಮೋದ್ ಕುಮಾರ್, ನೌಕರರು, ಮೈಸೂರು.




