ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಉಂಟಾಗಿರುವ ತೀವ್ರ ಮಳೆ ಕೊರತೆ ಹಾಗೂ ಬರ ಪರಿಸ್ಥಿತಿಯಿಂದ ನಷ್ಟ ಅನುಭವಿಸಿರುವ ರೈತರ ನೆರವಿಗೆ ಕರ್ನಾಟಕ ಸರ್ಕಾರ ಮುಂದಾಗಿದೆ. ಶೇ.33ಕ್ಕಿಂತ ಹೆಚ್ಚು ಬೆಳೆಹಾನಿಯಾದ ರೈತರಿಗೆ ಮೊದಲ ಹಂತದಲ್ಲಿ ಗರಿಷ್ಠ 2,500 ರೂಪಾಯಿಗಳ ವರೆಗೆ ತುರ್ತು ಬೆಳೆಹಾನಿ ಇನ್ಪುಟ್ ಸಬ್ಸಿಡಿಯನ್ನು (ಪರಿಹಾರ) ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಲು ಕಂದಾಯ ಇಲಾಖೆ ಆದೇಶ ಹೊರಡಿಸಿದೆ.
ಪ್ರಮುಖ ಮಾಹಿತಿ ಮತ್ತು ನಿಯಮಗಳು: ಅರ್ಜಿ ಸಲ್ಲಿಸುವ ಅಗತ್ಯವಿಲ್ಲ: 'ಪರಿಹಾರ' ತಂತ್ರಾಂಶ, 'FRUITS' ಪೋರ್ಟಲ್ ಮತ್ತು ಬೆಳೆ ಸಮೀಕ್ಷೆಯ ದತ್ತಾಂಶ ಆಧರಿಸಿ ಅರ್ಹ ಫಲಾನುಭವಿಗಳನ್ನು ನೇರವಾಗಿ ಆಯ್ಕೆ ಮಾಡಲಾಗುತ್ತದೆ.
ಡಿಬಿಟಿ ಮೂಲಕ ಪಾವತಿ: ಆಧಾರ್ ಜೋಡಣೆಯಾಗಿರುವ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ವರ್ಗಾವಣೆಯಾಗಲಿದೆ.
ಸಣ್ಣ ರೈತರಿಗೆ ಮೊದಲ ಆದ್ಯತೆ: ಕಡಿಮೆ ಜಮೀನು ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಬೆಳೆಗಳಲ್ಲಿ ಮಳೆಯಾಶ್ರಿತ, ನಂತರ ನೀರಾವರಿ ಹಾಗೂ ಬಹುವಾರ್ಷಿಕ ಬೆಳೆಗಳಿಗೆ ಪರಿಹಾರ ಜಮೆಯಾಗಲಿದೆ.
ಮಿತಿ: ಒಬ್ಬ ರೈತನಿಗೆ ಗರಿಷ್ಠ 2 ಹೆಕ್ಟೇರ್ ಜಮೀನಿಗೆ ಮಾತ್ರ ಪರಿಹಾರ ಸೀಮಿತವಾಗಿರುತ್ತದೆ.
ಅರ್ಹರಲ್ಲದವರು: ಕೃಷಿಯೇತರ ಭೂಮಿ, ಸರ್ಕಾರಿ ಜಮೀನು ಹಾಗೂ ಈಗಾಗಲೇ ಭೂಸ್ವಾಧೀನವಾಗಿ ಪರಿಹಾರ ಪಡೆದ ಜಮೀನುಗಳಿಗೆ ಈ ನೆರವು ಸಿಗುವುದಿಲ್ಲ.
ದೋಷ ತಿದ್ದುಪಡಿಗೆ ಅವಕಾಶ: ಆಧಾರ್ ಹಾಗೂ ಪಹಣಿ ವಿವರಗಳಲ್ಲಿ ವ್ಯತ್ಯಾಸವಿದ್ದರೆ, ಗ್ರಾಮ ಆಡಳಿತಾಧಿಕಾರಿಗಳು ಮತ್ತು ತಹಶೀಲ್ದಾರರು ಸ್ಥಳ ಪರಿಶೀಲನೆ ನಡೆಸಿ ಬಯೋಮೆಟ್ರಿಕ್ ಮೂಲಕ ಸರಿಪಡಿಸಲು ಸೂಚಿಸಲಾಗಿದೆ.
ಜಿಲ್ಲಾಧಿಕಾರಿಗಳು ಪಟ್ಟಿಯನ್ನು ಅಂತಿಮಗೊಳಿಸಿದ ನಂತರ 'ಖಜಾನೆ-೨' ಮೂಲಕ ಹಣ ಬಿಡುಗಡೆಯಾಗಲಿದ್ದು, ಸಂಪೂರ್ಣ ಮಾಹಿತಿಯನ್ನು 'ಪರಿಹಾರ' ಪೋರ್ಟಲ್ನಲ್ಲಿ ಪ್ರಕಟಿಸಲಾಗುತ್ತದೆ.




