Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
International News

ಎಮರ್ಜೆನ್ಸಿ ಒಂದು ಕಹಿ ನೆನಪು ಮತ್ತು ಎಚ್ಚರಿಕೆ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಒಂದು ಕಹಿ ನೆನಪು ಮತ್ತು ಎಚ್ಚರಿಕೆ.. ಜೂನ್ 25 - 1975, ಜೂನ್ 25 -  2025....ಸರಿಯಾಗಿ 50 ವರ್ಷಗಳ ಹಿಂದೆ.....ತುರ್ತು ಪರಿಸ್ಥಿತಿ ( ಎಮರ್ಜೆನ್ಸಿ ) ಜಾರಿಯಾದ ದಿನ......

ಸ್ವತಂತ್ರ ಭಾರತದ, ಸಂಸದೀಯ ಪ್ರಜಾಪ್ರಭುತ್ವದ ಗಣರಾಜ್ಯಗಳ ಒಕ್ಕೂಟ ವ್ಯವಸ್ಥೆಯ ರಾಜಕೀಯ ಇತಿಹಾಸದಲ್ಲಿ ಕೆಲವೇ ಅತ್ಯಂತ ಕಹಿ ಘಟನೆಗಳಲ್ಲಿ ರಾಷ್ಟ್ರಪತಿಗಳು ಸಹಿ ಹಾಕಿದ ಈ ದಿನವೂ ಒಂದು. ಅಂದಿನ ಭಾರತದ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರು ದೇಶದ ಬಾಹ್ಯ ಮತ್ತು ಆಂತರಿಕ ಭದ್ರತೆಗೆ ಅಪಾಯವಿದೆ ಎಂಬ ನೆಪದಿಂದ, ತಮ್ಮ ಅಧಿಕಾರ ಉಳಿಸಿಕೊಳ್ಳಲು ಈ ದೇಶದ ಮೇಲೆ ತುರ್ತುಪರಿಸ್ಥಿತಿಯನ್ನು ಹೇರಿದರು.....

ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾದ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಸದಸ್ಯರುಗಳು ಅತ್ಯಂತ ಗಂಭೀರವಾಗಿ ಒಂದು ವಿಷಯವನ್ನು ಸಂವಿಧಾನದಲ್ಲಿ ಸೇರಿಸಿರುತ್ತಾರೆ. ದೇಶದ ಆಂತರಿಕ ಮತ್ತು ಬಾಹ್ಯ ಭದ್ರತೆಗೆ ನಿಜವಾಗಲೂ ದುಷ್ಟ ಶಕ್ತಿಗಳಿಂದ ಅತ್ಯಂತ ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾದಾಗ ದೇಶವನ್ನು ರಕ್ಷಿಸಲು ಈ ಒಂದು ಸ್ವಯಂ ವಿವೇಚನೆಯ  ಸಂವಿಧಾನಾತ್ಮಕ ಅವಕಾಶವನ್ನು, ಅಧಿಕಾರವನ್ನು ನೀಡಲಾಗಿರುತ್ತದೆ. ದುರಾದೃಷ್ಟವಶಾತ್ ಅಂತಹ ಸಂದರ್ಭ ಸೃಷ್ಟಿಯಾಗದಿದ್ದರೂ ಇಂದಿರಾಗಾಂಧಿಯವರು ಸಂವಿಧಾನದ ಆ ವಿಧಿಯನ್ನು  ದುರುಪಯೋಗಪಡಿಸಿಕೊಂಡಿದ್ದು ಅಕ್ಷರಶಃ ಸತ್ಯ.......

ಆ ಕಾಲಘಟ್ಟದ ಭಾರತದ ರಾಜಕೀಯ ಪರಿಸ್ಥಿತಿ ಇಷ್ಟೊಂದು ಸಂಕೀರ್ಣವಾಗಿರಲಿಲ್ಲ. ಹಾಗೆಯೇ ಅಪಮೌಲ್ಯಗೊಂಡಿರಲಿಲ್ಲ. ಇದ್ದುದರಲ್ಲಿ ಒಂದಷ್ಟು ಮೌಲ್ಯಯುತ ರಾಜಕಾರಣ ನಡೆಯುತ್ತಿದ್ದ ದಿನಗಳವು. ಆದರೂ ಸ್ವಾತಂತ್ರ್ಯ ಲಭಿಸಿದ ಸುಮಾರು 28 ವರ್ಷಗಳ ನಂತರ ಇಂದಿರಾಗಾಂಧಿಯವರು ಈ ಕಲಂ ಅನ್ನು ದೇಶದ ಮೇಲೆ ಹೇರಿದ್ದಲ್ಲದೆ ಅನೇಕ ಅನೈತಿಕ, ಅಸಂಸದೀಯ, ಹಿಂಸಾತ್ಮಕ ಘಟನೆಗಳಿಗೂ, ರಾಜಕೀಯ ವಿರೋಧಿಗಳ ಬದುಕಿನ ದುರಂತಕ್ಕೂ ಕಾರಣರಾಗುತ್ತಾರೆ......

50 ನೇ ವರ್ಷದ ನೆನಪಿನ ಆ ಘಟನೆ ಬಹುತೇಕ ಜನರ ಮನಸ್ಸಿನಿಂದ ಮರೆಯಾಗಿದೆ. ಅಂದಿನ ಹೋರಾಟಗಾರರಲ್ಲಿ ಅನೇಕರು ಇಂದು ಅಷ್ಟಾಗಿ ಸಕ್ರಿಯವಾಗಿ ಉಳಿದಿಲ್ಲ. ಕೆಲವರು ಮಾತ್ರ ಈಗಲೂ ಆ ಕಹಿ ದಿನಗಳನ್ನು ನೆನಪಿಸಿಕೊಂಡು ಬೆಚ್ಚುತ್ತಾರೆ. ಹಲವರು ಆ ಘಟನೆಯ ಮುಖಾಂತರವೇ ರಾಜಕೀಯ ಮುನ್ನಡೆಗೆ ಬಂದು ದೊಡ್ಡ ದೊಡ್ಡ ಹುದ್ದೆಗೂ ಏರುತ್ತಾರೆ.....

ತುರ್ತು ಪರಿಸ್ಥಿತಿ ಒಂದು ಪಾಠ ಮತ್ತು ಎಚ್ಚರಿಕೆ. 21 ತಿಂಗಳ ಆ ಭಯಂಕರ ಐತಿಹಾಸಿಕ ತಪ್ಪು ನಂತರ ನಲವತ್ತು ವರ್ಷಗಳವರೆಗೆ  ಮರುಕಳಿಸುವ ಆತಂಕ ಅಷ್ಟಾಗಿ ಯಾರನ್ನು ಕಾಡಲಿಲ್ಲ. ಆದರೆ ಅದರ ಮುಂದಿನ ಅಂದರೆ ಈಗಿನ ನರೇಂದ್ರ ಮೋದಿಯವರ 11 ವರ್ಷಗಳ ಆಡಳಿತ ಆಗಾಗ ಪರೋಕ್ಷವಾಗಿ ತುರ್ತು ಪರಿಸ್ಥಿತಿಯ ದಿನಗಳನ್ನು ನೆನಪಿಸುತ್ತದೆ ಮತ್ತು ಇಂದಿರಾಗಾಂಧಿ ಆಡಳಿತದ ಕೆಲವು ಲಕ್ಷಣಗಳನ್ನು ಹೋಲುತ್ತದೆ ಎಂದು ಇತಿಹಾಸದ ಅಧ್ಯಯನಕಾರರು, ರಾಜಕೀಯ ಚಿಂತಕರು, ಮೋದಿಯವರ ಪ್ರಬಲ ವಿರೋಧಿಗಳು ಸಾಕಷ್ಟು ಉದಾಹರಣೆಗಳೊಂದಿಗೆ ಮಾತನಾಡುತ್ತಾರೆ...... ಅಂದಿನ ಆ ನೇರ ತುರ್ತು ಪರಿಸ್ಥಿತಿ ಮತ್ತು ಸರ್ಕಾರಗಳನ್ನು ಬೇಕಾಬಿಟ್ಟಿ ವಜಾ ಮಾಡುತ್ತಿದ್ದ ರೀತಿ ಈಗ ಇಲ್ಲದಿದ್ದರೂ ಅದೇ ರೀತಿಯ ಆದರೆ ಪರೋಕ್ಷವಾಗಿ ಸಂವಿಧಾನದ ಕಲಂಗಳನ್ನೇ ಉಪಯೋಗಿಸಿಕೊಂಡು ಚುನಾಯಿತ ಸರ್ಕಾರಗಳನ್ನು ಬೀಳಿಸುವುದು, ಇಡಿ, ಐಟಿ, ಸಿಬಿಐ ಮುಂತಾದ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುವುದು, ಚುನಾವಣಾ ಆಯೋಗ, ರಾಜಭವನ, ರಾಷ್ಟ್ರಪತಿಗಳು ಮತ್ತು ನ್ಯಾಯಾಂಗದ ಕೆಲವು ವಿಭಾಗಗಳಲ್ಲಿ ಒಂದಷ್ಟು ನಿಯಂತ್ರಣ ಪಡೆದು ವಿರೋಧಿಗಳನ್ನು ಹಣಿಯಲು ಉಪಯೋಗಿಸಿಕೊಳ್ಳುತ್ತಾರೆ ಎಂದು ಬಲವಾಗಿ ಆರೋಪಿಸಲಾಗುತ್ತಿದೆ......

ಇದು ನರೇಂದ್ರ ಮೋದಿಯವರಿಗೆ ಮಾತ್ರ ವಿಶೇಷವಾಗಿ ಅನ್ವಯಿಸುತ್ತದೆ. ಏಕೆಂದರೆ ಅದರ ಹಿಂದಿನ 40 ವರ್ಷಗಳ ಯಾವುದೇ ಪಕ್ಷದ ಪ್ರಧಾನಮಂತ್ರಿಗಳ ಮೇಲೂ ಈ ರೀತಿಯ ಆರೋಪ ಅಷ್ಟಾಗಿ ಕೇಳಿ ಬರಲಿಲ್ಲ...... ತುರ್ತು ಪರಿಸ್ಥಿತಿ ಎಂದರೆ ಬಹುತೇಕ ದೇಶದ ಪ್ರಜೆಗಳ ಎಲ್ಲಾ ಮೂಲಭೂತ ಹಕ್ಕುಗಳನ್ನು ಸರ್ಕಾರ ರದ್ದು ಪಡಿಸುತ್ತದೆ. ಯಾವುದೇ ವ್ಯಕ್ತಿಯನ್ನು ಕಾರಣ ನೀಡದೆ ವಿಚಾರಣೆಗೊಳಪಡಿಸಲು ಬಂಧಿಸಬಹುದು. ಮಾಧ್ಯಮಗಳಿಗೇ ಆಗಲಿ ಅಥವಾ ಇನ್ಯಾವುದೇ ಸ್ವಾಯುತ್ತ ಸಂಸ್ಥೆಗಳಿಗೆ ಇರುವ ಸ್ವಾತಂತ್ರ್ಯವನ್ನು ಸಂಪೂರ್ಣ ನಿರ್ಬಂಧಿಸಲಾಗುತ್ತದೆ. ಕೇವಲ ಸರ್ಕಾರಕ್ಕೆ ಮಾತ್ರ ಸಂಪೂರ್ಣ ಪರಮಾಧಿಕಾರವಿರುತ್ತದೆ. ಬಹುತೇಕ ಸರ್ವಾಧಿಕಾರಿ ಆಡಳಿತಕ್ಕೆ ಅತ್ಯಂತ ಸಮೀಪ ಆಡಳಿತ ವ್ಯವಸ್ಥೆ. ಅದು ತಾತ್ಕಾಲಿಕ ಮತ್ತು ಸಂಸತ್ತಿನ ಹಾಗೂ ರಾಷ್ಟ್ರಪತಿಗಳ ಅನುಮೋದನೆ ಪಡೆದಿರಬಹುದು. ಅದರೂ ಪ್ರಜಾಪ್ರಭುತ್ವಕ್ಕೆ ಅದು ದ್ರೋಹ ಬಗೆದಂತೆ.....

ಆದ್ದರಿಂದ ಯಾವುದೇ ಕಾರಣಕ್ಕೂ ಆಗಿನ ತುರ್ತು ಪರಿಸ್ಥಿತಿಯನ್ನು ಸಮರ್ಥಿಸುವುದು ಒಳ್ಳೆಯದಲ್ಲ. ನೇರ ಮಾತುಗಳಲ್ಲೇ ಅದನ್ನು ಖಂಡಿಸಬೇಕು. ಹಾಗೆಯೇ ಈಗಿನ ಒಂದು ರೀತಿಯ ಅಘೋಷಿತ ಸರ್ವಾಧಿಕಾರಿ ಮನೋಭಾವವನ್ನು ಸಹ ಅದೇ ಧ್ವನಿಯಲ್ಲಿ ಟೀಕಿಸಬೇಕಾಗುತ್ತದೆ. ಇಲ್ಲದಿದ್ದರೆ ನಮ್ಮದು ಪಕ್ಷಪಾತ ದೃಷ್ಟಿಕೋನದ ನಿಲುವಾಗಿರುವ ಸಾಧ್ಯತೆ ಇದೆ......

ಭಾರತದಂತಹ ಬೃಹತ್ ವೈವಿಧ್ಯಮಯ ದೇಶದಲ್ಲಿ ಸಂವಿಧಾನಾತ್ಮಕ ನೀತಿ ನಿಯಮಗಳನ್ನು ಏಕಪ್ರಕಾರವಾಗಿ ರೂಪಿಸುವುದು ಅಷ್ಟು ಸುಲಭವಲ್ಲ. ಬಾಬಾ ಸಾಹೇಬ್ ಅವರಂತಹ ಅದ್ಭುತ ಪ್ರತಿಭೆಯಿಂದ ಮಾತ್ರ ಈ ರೀತಿಯ ಸಂವಿಧಾನ ರಚಿಸಲು ಸಾಧ್ಯವಾಯಿತು. ಅವರು ಸಹ ತುಂಬಾ ದೂರ ದೃಷ್ಟಿಯಿಂದ ಮತ್ತು ದೇಶದ ಹಿತಾಸಕ್ತಿಗಾಗಿ ಕೆಲವು ಕಾನೂನುಗಳನ್ನು ವಿಮಾನದ ಪ್ಯಾರಾಚೂಟ್ ರೀತಿಯಲ್ಲಿ ಅತ್ಯಂತ ತುರ್ತು ಮತ್ತು ಅನಿವಾರ್ಯ ಸಂದರ್ಭದಲ್ಲಿ ರಕ್ಷಣೆಗಾಗಿ ಮಾತ್ರ ಎಂದು ಒಂದು ವಿವೇಚನಾ ಅಧಿಕಾರ ಆಡಳಿತದ ಮುಖ್ಯಸ್ಥರಿಗೆ ಇರಲಿ ಎನ್ನುವ ಸದಾಶಯದಿಂದ ಸಂವಿಧಾನದಲ್ಲಿ ಸೇರಿಸಲಾಯಿತು...... 

ಆದರೆ ಬಾಬಾ ಸಾಹೇಬರೇ ಸ್ವತಃ ಹೇಳಿದಂತೆ ಸಂವಿಧಾನ ಎಷ್ಟೇ ಬಲವಾದ ನೀತಿ ನಿಯಮಗಳನ್ನು ಹೊಂದಿದ್ದರೂ ಅದನ್ನು ಜಾರಿಗೆ ತರುವವರು ಪ್ರಾಮಾಣಿಕರಲ್ಲದಿದ್ದರೆ ಸಂವಿಧಾನದ ಆಶಯ ಈಡೇರುವುದು ಸಾಧ್ಯವಿಲ್ಲ. ಈಗಲೂ ಅನೇಕ ಘಟನೆಗಳನ್ನು ನೋಡಿದಾಗ ಆ ಮಾತು ನಿಜವೆನಿಸುತ್ತದೆ. ನೂರು ಅಪರಾಧಿಗಳು ತಪ್ಪಿಸಿಕೊಂಡರು ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು ಎನ್ನುವ ಮಹೋನ್ನತ, ಉದಾತ್ತ ಆಶಯ ಇಂದು ನಿಜವಾಗಿಯೂ ನಿರಪರಾಧಿಗೆ ಬಿಡುಗಡೆಯಾಗುತ್ತದೋ ಇಲ್ಲವೋ ಆದರೆ ಅಪರಾಧಿಗಳು ಮಾತ್ರ ತಪ್ಪಿಸಿಕೊಂಡು ಹೋಗಲು ಈ ಒಂದು ವಿವೇಚನಾ ಅಧಿಕಾರವು ಸಹ ಮುಖ್ಯ ಕಾರಣವಾಗಿದೆ. ಅಷ್ಟು ಖಚಿತ ಸಾಕ್ಷಿಗಳು ಸಿಗುವುದು ಕಷ್ಟ ಮತ್ತು ನಿಷ್ಣಾತ ವಕೀಲರು ಅದರ ಲಾಭ ಪಡೆಯುತ್ತಾರೆ.....

ಆದ್ದರಿಂದಲೇ ಪ್ರತಿಬಾರಿಯೂ ಮೌಲ್ಯಗಳ ಬಗ್ಗೆ ಮತ್ತೆ ಮತ್ತೆ ಪ್ರಸ್ತಾಪ ಮಾಡಲಾಗುತ್ತದೆ. ನೈತಿಕತೆ ಮತ್ತು ಮೌಲ್ಯಗಳಿಲ್ಲದ ಯಾವ ಜಾತಿ, ಧರ್ಮ, ಭಾಷೆ, ಕಾನೂನು, ವ್ಯಕ್ತಿ ಎಲ್ಲವೂ ಬಹುತೇಕ ವಿಫಲವಾದಂತೆ ಮತ್ತು ಮೌಲ್ಯಗಳ ದುರುಪಯೋಗವಾದಂತೆ ಎಂದು ಎಚ್ಚರಿಸುತ್ತಾ.......

ನಮ್ಮೆಲ್ಲರ ನಿಜವಾದ ಸ್ವಾತಂತ್ರ್ಯ, ಸಮಾನತೆ, ಅಭಿವೃದ್ಧಿ, ಭದ್ರತೆ, ನೆಮ್ಮದಿ, ಕ್ರಿಯಾತ್ಮಕತೆ, ಭವಿಷ್ಯ ಎಲ್ಲವೂ ಅಡಗಿರುವುದು ಪ್ರಜಾಪ್ರಭುತ್ವದ ಈ ಸಂವಿಧಾನದ ಒಡಲಿನಲ್ಲಿ. ಅದನ್ನು ಯಾವುದೇ ಬೆಲೆ ತೆತ್ತಾದರೂ ರಕ್ಷಿಸುವ ಜವಾಬ್ದಾರಿ ಎಲ್ಲಾ ಭಾರತೀಯರದು ಎಂದು ನೆನಪಿಸಿಕೊಳ್ಳುತ್ತಾ.......
ಲೇಖನ-ವಿವೇಕಾನಂದ. ಎಚ್. ಕೆ.
9663750451

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚಿತ್ರದುರ್ಗ: 25,000 ರೂ. ಲಂಚ ಪಡೆಯುತ್ತಿದ್ದ ಉಪವಿಭಾಗಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ಲೋಕಾಯುಕ್ತ ಬಲೆಗೆಪಶ್ಚಿಮಘಟ್ಟ ಸಂರಕ್ಷಣೆ: ಕಸ್ತೂರಿ ರಂಗನ್ ವರದಿ ಸ್ಯಾಟಲೈಟ್ ಮ್ಯಾಪಿಂಗ್ ಒಪ್ಪಲು ಸಾಧ್ಯವಿಲ್ಲ; ಬಿ.ಕೆ.ಹರಿಪ್ರಸಾದ್ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣ: ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶಶಾಸಕ ಎಸ್. ಸುರೇಶ್ ಕುಮಾರ್ ಅವರು "ಸಜ್ಜನ" ಎಂಬ ಮುಖವಾಡ ಧರಿಸಿದ ದುರ್ಜನಸರ್ಕಾರದ ಅನುದಾನಕ್ಕೆ ಕಾಯದೆ ಸ್ವಂತ ಖರ್ಚಿನಲ್ಲಿ ಕಾಲುವೆ ದುರಸ್ತಿಗೆ ಮುಂದಾದ ಎಚ್.ಡಿ. ರೇವಣ್ಣಹೈಕೋರ್ಟ್‌ನಿಂದ ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಹಗರಣಕ್ಕೆ ಎಸ್‌ಐಟಿ ತನಿಖೆಗೆ ಆದೇಶಆಲಮಟ್ಟಿ ಜಲಾಶಯ ಎತ್ತರ ಹೆಚ್ಚಳ: ಯುಕೆಪಿ ಹಂತ-3ರ ಭೂಸ್ವಾಧೀನ ಪ್ರಕ್ರಿಯೆಗೆ ಚುರುಕುವ್ಯಾಪಕ ಭ್ರಷ್ಟಾಚಾರ: ಕಾಮಗಾರಿಗಳ ಶ್ವೇತಪತ್ರ ಹೊರಡಿಸಲು ಆಂಜನೇಯ ಆಗ್ರಹ‘ಗೌರವಯುತ ಲಂಚ’: ಕಾಂಗ್ರೆಸ್ ಸರ್ಕಾರದ ಹೊಸ 'ಪ್ರಜಾಸೇವಾ ಶುಲ್ಕ' ಎಂದು ಆರ್. ಅಶೋಕ್ಸ್ವಪಕ್ಷೀಯರ ಆಕ್ರೋಶವೇ ಕಾಂಗ್ರೆಸ್ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ: ಆರ್. ಅಶೋಕ್ ವಾಗ್ದಾಳಿ