ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಆಯೋಜಿಸಲಾಗಿದ್ದ ಕಬ್ಬು ಬೆಳೆಗಾರರ ಸಭೆಯಲ್ಲಿ ರಾಜ್ಯ ರೈತ ಸಂಘದ ಚೂನಪ್ಪ ಪೂಜಾರಿ ಹಾಗೂ ಕೋಡಿಹಳ್ಳಿ ಚಂದ್ರಶೇಖರ ಬಣಗಳ ಕಾರ್ಯಕರ್ತರ ನಡುವೆ ತೀವ್ರ ಗೊಂದಲ ಉಂಟಾಗಿ, ಪರಸ್ಪರ ಹೊಡೆದಾಟ ನಡೆದಿದೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಕ್ಕರೆ ಕಾರ್ಖಾನೆಗಳ ಮಾಲೀಕರ ಜೊತೆ ಸಭೆ ಮುಗಿಸಿ ನಿರ್ಮಿತ ಸ್ಥಳಕ್ಕೆ ತೆರಳಿದ ಬಳಿಕ, ಸಂಜೆ ರೈತ ಮುಖಂಡರ ಸಭೆ ಆರಂಭವಾಯಿತು. ಸಭೆಯ ಆರಂಭದಲ್ಲೇ ಚೂನಪ್ಪ ಪೂಜಾರಿ ಮಾತನಾಡಿ, "ಟನ್ ಕಬ್ಬಿಗೆ ಕಾರ್ಖಾನೆಗಳಿಂದ 4,500 ರೂ. ದರ ಹಾಗೂ ರಾಜ್ಯ ಸರ್ಕಾರದಿಂದ 1,000 ರೂ. ಪ್ರೋತ್ಸಾಹಧನ ಸೇರಿ ಒಟ್ಟು 5,500 ರೂ. ನಿಗದಿಗೆ ಒತ್ತಾಯಿಸಲಾಗುವುದು" ಎಂದರು. ಆದರೆ, ಇದನ್ನು ತಪ್ಪಾಗಿ ಗ್ರಹಿಸಿದ ಕೋಡಿಹಳ್ಳಿ ಬಣದವರು, "5,500 ರೂ. ಬದಲಿಗೆ 4,500 ರೂ.ಗೆ ಏಕೆ ಒಪ್ಪುತ್ತಿದ್ದೀರಾ?" ಎಂದು ಆಕ್ಷೇಪಿಸಿ, ವೇದಿಕೆಯಿಂದ ಕೆಳಗಿಳಿಯುವಂತೆ ಪಟ್ಟು ಹಿಡಿದು ಚೀರಾಡ ತೊಡಗಿದರು.
ಚೂನಪ್ಪ ಪೂಜಾರಿ ಅವರು ಪರಿಸ್ಥಿತಿ ಸ್ಪಷ್ಟಪಡಿಸಲು ಯತ್ನಿಸಿದರೂ ಗದ್ದಲ ಹತೋಟಿಗೆ ಬರಲಿಲ್ಲ. ಮಾತಿನ ಚಕಮಕಿ ಜೋರಾದಾಗ ಮೈಕ್ ಕಸಿಯುವ ಯತ್ನ ನಡೆಯಿತು. ಈ ನಡುವೆ ನೀರಿನ ಗಾಜಿನ ಗ್ಲಾಸ್ ತೂರಿದ ಪರಿಣಾಮ ಇಬ್ಬರು ಕಾರ್ಯಕರ್ತರ ಎದೆಗೆ ಗಾಯಗಳಾಗಿವೆ. ಶಾಸಕ ದರ್ಶನ್ ಪುಟ್ಟಣ್ಣಯ್ಯ ಗಲಾಟೆ ತಡೆಯಲು ಮನವಿ ಮಾಡಿದರೂ ಪರಿಸ್ಥಿತಿ ಶಮನಗೊಳ್ಳಲಿಲ್ಲ. ಅಂತಿಮವಾಗಿ ಪೊಲೀಸರು ಮಧ್ಯಪ್ರವೇಶಿಸಿ, ಗಲಾಟೆ ಮಾಡಿದವರನ್ನು ಸಭಾಂಗಣದಿಂದ ಹೊರಗೆ ಕಳುಹಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.
ಚೂನಪ್ಪ ಪೂಜಾರಿ ಸ್ಪಷ್ಟನೆ:
"ನಾನು 4,500 ರೂ. ಮೂಲ ಬೆಲೆ ಹಾಗೂ 1,000 ರೂ. ಪ್ರೋತ್ಸಾಹ ಧನ ಸೇರಿ 5,500 ರೂ. ಬೆಲೆ ಕೇಳೋಣ ಎಂದು ಸ್ಪಷ್ಟವಾಗಿ ಹೇಳಿದ್ದೆ. ಆದರೆ ಕೆಲವರು ಸಭೆಯನ್ನು ಉದ್ದೇಶಪೂರ್ವಕವಾಗಿ ಹಾಳು ಮಾಡಲು ಮತ್ತು ಗಲಾಟೆ ಸೃಷ್ಟಿಸಲು ಬಂದಿದ್ದರು" ಎಂದು ಚೂನಪ್ಪ ಪೂಜಾರಿ ಘಟನೆಯ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.




