ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರಿಗೆ ಮೊಬೈಲ್ ಮೂಲಕ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿರುವ ಘಟನೆ ವರದಿಯಾಗಿದೆ. ಈ ಸಂಬಂಧ ಆರೋಪಿಗಳನ್ನು ಕೂಡಲೇ ಬಂಧಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ಅವರು ಶಿವಮೊಗ್ಗ ಎಸ್ಪಿ ನಿಖಿಲ್ ಅವರಿಗೆ ಅಧಿಕೃತವಾಗಿ ಮನವಿ ಸಲ್ಲಿಸಿದ್ದಾರೆ.
ಅಕ್ಟೋಬರ್ 17 ರಂದು ರಾತ್ರಿ ಅನ್ಯಕೋಮಿನ ಇಬ್ಬರು ವ್ಯಕ್ತಿಗಳು ಪ್ರತ್ಯೇಕ ಮೊಬೈಲ್ ಸಂಖ್ಯೆಗಳಿಂದ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ರಿಜ್ವಾನ್ ಬೇಗ್ ಎಂಬಾತ ಅಂದು ರಾತ್ರಿ 8:49 ರ ಸುಮಾರಿಗೆ (ಮೊಬೈಲ್ ಸಂಖ್ಯೆ: 7019994981) ಹಾಗೂ ಡಿಜಿಟಲ್ ಫರಾನ್ ರಶೀದ್ ಎಂಬಾತ ಅದೇ ರಾತ್ರಿ 10:49 ರ ಸುಮಾರಿಗೆ (ಮೊಬೈಲ್ ಸಂಖ್ಯೆ: 9723658527) ಕರೆ ಮಾಡಿ ವೈಯಕ್ತಿಕವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಬೆದರಿಕೆಗಳಿಂದ ತಮಗೂ ಹಾಗೂ ತಮ್ಮ ಕುಟುಂಬಕ್ಕೂ ಅಪಾಯವಿದ್ದು, ದುಷ್ಟ ವ್ಯಕ್ತಿಗಳನ್ನು ಗುರುತಿಸಿ ಕಠಿಣ ಕ್ರಮ ಜರುಗಿಸಬೇಕು ಮತ್ತು ಸೂಕ್ತ ಭದ್ರತೆ ಕಲ್ಪಿಸಬೇಕು ಎಂದು 'ರಾಷ್ಟ್ರಭಕ್ತ ಬಳಗ'ದ ಮುಖಂಡರೊಂದಿಗೆ ತೆರಳಿ ಎಸ್ಪಿಗೆ ದೂರು ನೀಡಲಾಗಿದೆ. ದೂರು ಸ್ವೀಕರಿಸಿರುವ ಎಸ್ಪಿ ನಿಖಿಲ್ ಅವರು ಈ ಕುರಿತು ಸಮಗ್ರ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.
ಸಿನಿಮಾ ನೋಡುತ್ತಿದ್ದಾಗ ಬಂದ ಆಘಾತಕಾರಿ ಕರೆಗಳು:
ಎಸ್ಪಿಗೆ ದೂರು ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕೆ.ಎಸ್. ಈಶ್ವರಪ್ಪ, "ನಾನು ಕುಟುಂಬದವರ ಜೊತೆ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸುತ್ತಿದ್ದೆ. ಆ ಸಂದರ್ಭದಲ್ಲಿ ಮೊದಲು 7019994981 ಸಂಖ್ಯೆಯಿಂದ ಕರೆ ಬಂದಿತು. ಕರೆ ಮಾಡಿದ ವ್ಯಕ್ತಿ 'ನೀನು ಈಶ್ವರಪ್ಪನೇ, ಮಾಜಿ ಡಿಸಿಎಂ ಅವರಾ?' ಎಂದು ಪ್ರಶ್ನಿಸಿದ. ನಾನು ಹೌದು ಎಂದಾಗ ಆತ ಏಕಾಏಕಿ ನಿಂದಿಸಲು ಶುರು ಮಾಡಿದ. ಚಿತ್ರಮಂದಿರದಲ್ಲಿದ್ದ ಕಾರಣ ನನಗೆ ಸರಿಯಾಗಿ ಧ್ವನಿ ಕೇಳಿಸುತ್ತಿರಲಿಲ್ಲ. 'ನಾನು ಥಿಯೇಟರ್ನಲ್ಲಿದ್ದೇನೆ, ಆಮೇಲೆ ಕರೆ ಮಾಡಿ' ಎಂದರೂ ಬಿಡದೆ ಬೈಯುತ್ತಾ ಫೋನ್ ಕಟ್ ಮಾಡಿದ" ಎಂದು ವಿವರಿಸಿದರು.
"ಇದಾದ ಎರಡು ಗಂಟೆಗಳ ಬಳಿಕ ಮತ್ತೊಬ್ಬ ವ್ಯಕ್ತಿ 982358527 ನಂಬರ್ನಿಂದ ಕರೆ ಮಾಡಿ, 'ನೀವು ಜಮೀರ್ ಅಹಮದ್ ಅವರ ಬಗ್ಗೆ ಏನೇನು ಮಾತನಾಡಿದ್ದೀರಿ, ನಾನು ನಿಮಗೆ ದಾಖಲೆ ಕೊಡುತ್ತೇನೆ' ಎಂದ. ನಾನು ದಾಖಲೆ ಕೊಡಿ ಎಂದೆ, ಆಗ ಆತನೂ ಕೂಡ ಫೋನ್ ಕಟ್ ಮಾಡಿದ. ಈ ಇಬ್ಬರು ವ್ಯಕ್ತಿಗಳು ನನಗೆ ಬೆದರಿಕೆ ಹಾಕುವ ರೀತಿಯಲ್ಲೇ ಮಾತನಾಡಿದ್ದು, ತಕ್ಷಣವೇ ಇವರನ್ನು ಪತ್ತೆ ಹಚ್ಚಿ ಬಂಧಿಸಬೇಕು" ಎಂದು ಆಗ್ರಹಿಸಿದರು.
ಹಿಂದೆಯೂ ಬೆದರಿಕೆ ಬಂದಿತ್ತು: ತಮಗೆ ಈ ಹಿಂದೆಯೂ ಹಲವು ಬಾರಿ ಬೆದರಿಕೆಗಳು ಬಂದಿದ್ದು, ಆ ಸಂದರ್ಭದಲ್ಲೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿಕೊಳ್ಳಲಾಗಿತ್ತು. ಆದರೆ ಇದುವರೆಗೂ ಆರೋಪಿಗಳನ್ನು ಬಂಧಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಈ ಬಾರಿಯಾದರೂ ಪೊಲೀಸರು ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.
ಸರ್ಕಾರದಿಂದ ಮತ್ತೊಮ್ಮೆ ಭದ್ರತೆ ಕೋರುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ಭದ್ರತೆ ಬಗ್ಗೆ ನಾನು ಸರ್ಕಾರದ ಬಳಿ ಕೇಳುವುದಿಲ್ಲ. ಈ ಹಿಂದೆ ಮನವಿ ಮಾಡಿಕೊಂಡಿದ್ದೆ, ಈಗ ಪದೇ ಪದೆ ಭದ್ರತೆ ಕೇಳುವುದಿಲ್ಲ" ಎಂದು ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ರಾಷ್ಟ್ರಭಕ್ತ ಬಳಗದ ಪ್ರಮುಖರು ಉಪಸ್ಥಿತರಿದ್ದರು.




