Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ಬಡತನ, ಸಿರಿತನ, ಮತ್ತೆ ಬಡತನ ಹೀಗೆ ಬದುಕಿನ ಹಲವು ಮುಖಗಳನ್ನು ನೋಡಿದ್ದೇನೆ

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
"ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ" ದತ್ತಾತ್ರೇಯ ರಾಮಚಂದ್ರ ಬೇಂದ್ರೆ........

21ನೆಯ ಶತಮಾನದಲ್ಲಿ ಕಾಲು ಶತಮಾನ ಮುಗಿದಿದೆ. ಅಂದರೆ 2025 ಪ್ರಾರಂಭವಾಗಿದೆ. ಅದಕ್ಕೆ ಸ್ವಾಗತ ಕೋರುತ್ತಾ, ಎಲ್ಲರಿಗೂ ಇಂಗ್ಲಿಷ್ ಕ್ಯಾಲೆಂಡರ್ ನ ಹೊಸ ವರ್ಷದ ಶುಭಾಶಯಗಳನ್ನು ಹೇಳುತ್ತಾ........

1969 ರಲ್ಲಿ ಹುಟ್ಟಿದ ನಾನು, 20 ನೆಯ ಶತಮಾನದ 31 ವರ್ಷಗಳು, 21 ನೆಯ ಶತಮಾನದ 24 ವರ್ಷಗಳನ್ನು ಈ ನೆಲದಲ್ಲಿ ಭಾರತೀಯ ಕನ್ನಡಿಗನಾಗಿ ಅನುಭವಿಸಿದ್ದೇನೆ.......

ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ, ಪತ್ರಿಕೋದ್ಯಮದಲ್ಲಿ ಡಿಪ್ಲೋಮೋ, ಚಲನಚಿತ್ರ ಅಭಿನಯದಲ್ಲಿ ಡಿಪ್ಲೋಮೋ ಮಾಡಿದ್ದೇನೆ......

ಸುಮಾರು 50 ವರ್ಷಗಳಷ್ಟು ದೀರ್ಘಕಾಲದಿಂದ ಕನ್ನಡದ ಪ್ರಮುಖ ದಿನಪತ್ರಿಕೆಗಳು ಮತ್ತು ವಾರಪತ್ರಿಕೆಗಳು ಹಾಗೂ ರಾಷ್ಟ್ರೀಯ ಮಟ್ಟದ ಕೆಲವು ಪತ್ರಿಕೆಗಳನ್ನು ಸತತವಾಗಿ ಓದುತ್ತಾ ಬಂದಿದ್ದೇನೆ......

ಅಲ್ಲಲ್ಲಿ ಹರಿದ ಚಡ್ಡಿಯಿಂದ ಸೂಟು ಬೂಟಿನವರೆಗೆ, ಕಿತ್ತುಹೋದ ಹವಾಯಿ ಚಪ್ಪಲಿಯಿಂದ ಅತ್ಯುತ್ತಮ ದರ್ಜೆಯ ಶೂಗಳನ್ನು ಧರಿಸಿದ್ದೇನೆ.....

ರಸ್ತೆಯೇ ಇಲ್ಲದ ಸಣ್ಣ ಊರಿನಿಂದ ಸ್ವಿಟ್ಜರ್ಲ್ಯಾಂಡ್ ನ ಆಲ್ಪ್ಸ್ ಪರ್ವತದ  ತುದಿಯವರೆಗೆ ಸಾಕಷ್ಟು ಭೂ ಭಾಗವನ್ನು ಸುತ್ತಿದ್ದೇನೆ.........

ಕನ್ಯಾಕುಮಾರಿಯ ಆ ತುತ್ತ ತುದಿಯಿಂದ, ಕಾಶ್ಮೀರದ ಲೇಹ್ ಲಡಾಕ್ ಬಳಿಯ ಅತಿ ಎತ್ತರದ ಪ್ಯಾಂಗಾಂಗ್ ಸರೋವರದವರೆಗೆ, ಬೀದರ್ ನ ವನಮಾರ್ಪಳ್ಳಿಯಿಂದ ಚಾಮರಾಜನಗರದ ಕೊನೆಯವರೆಗೆ, ಅನೇಕ ಭೂಪ್ರದೇಶಗಳನ್ನು ನೋಡಿದ್ದೇನೆ.......

ಚಿಕ್ಕ ಮಳೆನೀರು ಸೋರುವ ಗುಡಿಸಲಿನಿಂದ ಶ್ರೀಮಂತ ತ್ರಿಪ್ಲೆಕ್ಸ್ ಮನೆಯಲ್ಲಿ, ಕೊನೆಗೆ ಈಗ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇನೆ.......

ಬಡತನ, ಕೆಳ ಮಧ್ಯಮ ವರ್ಗ, ಸಿರಿತನ, ಮತ್ತೆ ಬಡತನ ಹೀಗೆ ಬದುಕಿನ ಹಲವು ಮುಖಗಳನ್ನು ನೋಡಿದ್ದೇನೆ.....

ಹಸಿವಿನಿಂದ ಬಳಲುತ್ತಾ ರಾಗಿ ಮುದ್ದೆಗಾಗಿ ಪರಿತಪಿಸುತ್ತಾ, ವಿಶ್ವದ ಶ್ರೀಮಂತ ಕ್ರೂಸ್ ನಲ್ಲಿ ಪ್ರಯಾಣಿಸಿ ಸೆವೆನ್ ಸ್ಟಾರ್ ಹೋಟೆಲ್ ಶೈಲಿಯ ಭಕ್ಷ್ಯ ಭೋಜನ ಸವಿದಿದ್ದೇನೆ......

ಎತ್ತಿನಗಾಡಿ, ಕುದುರೆ ಟಾಂಗಾ ದಿಂದ ಹಿಡಿದು ವಿಮಾನದವರೆಗೆ ಪ್ರಯಾಣ ಮಾಡಿದ್ದೇನೆ.... ಸಮುದ್ರದೊಳಗೆ ಪ್ಯಾರಿಸ್ ನಿಂದ ಲಂಡನ್ನಿನವರೆಗೆ ಪ್ರತಿಷ್ಠಿತ ಯೂರೋ ಟ್ರೈನಿನಲ್ಲಿ ಪ್ರಯಾಣಿಸಿದ್ದೇನೆ...... ಮಗನ ಹುಟ್ಟು, ತಂದೆಯ ಸಾವನ್ನು ತದೇಕಚಿತ್ತದಿಂದ ಗಮನಿಸಿದ್ದೇನೆ..... ಜೀವ ಕೊಟ್ಟ ಗೆಳೆಯರು ಉಂಟು, ಬೆನ್ನಿಗೆ ಇರಿದು ಹಿತೈಷಿಗಳು ಉಂಟು..... ಪ್ರೀತಿ ಪ್ರೇಮ ಪ್ರಣಯದ ಉತ್ತುಂಗ ತಲುಪಿದ್ದು ಉಂಟು, ದ್ವೇಷ ಅಸೂಯೆ ವಿರಹಗಳಿಂದ ನರಳಿದ್ದೂ ಉಂಟು.......

ಸ್ಫಟಿಕದಂತ ಶುದ್ಧ ನೀರನ್ನು ಕುಡಿದು ದಣಿವಾರಿಸಿಕೊಂಡಿದ್ದೇನೆ, ಹಾಗೆಯೇ ಮಲಿನ ಯುಕ್ತ ಅತ್ಯಂತ ಕೊಳಚೆ ನೀರನ್ನು ಸೇವಿಸಿ ಸತ್ತವರ ಸುದ್ದಿಗಳನ್ನು ಗಮನಿಸುತ್ತಿದ್ದೇನೆ.....

ಶುದ್ಧ ಆಮ್ಲಜನಕದ ಗಾಳಿಯ ಆಹ್ಲಾದಕರ ಅನುಭವದೊಂದಿಗೆ ಅಶುದ್ಧ, ಅಪಾಯಕಾರಿ, ಧೂಳಿನ ಕಣಗಳ ಗಾಳಿ ಸೇವಿಸಿ  ರೋಗಗ್ರಸ್ಥನೂ ಆಗಿದ್ದೇನೆ.......

 ಆಹಾರದ ಅಮೃತತ್ವವನ್ನು ಸವಿದಿದ್ದೇನೆ, ಜೊತೆಗೆ ವಿಷಯುಕ್ತ, ರಾಸಾಯನಿಕ ಆಹಾರವನ್ನೂ ಸೇವಿಸಿ ಅನಾರೋಗ್ಯಕ್ಕೂ ಒಳಗಾಗಿದ್ದೇನೆ.....

ಎಣ್ಣೆಯ ಬುಡ್ಡಿ ದೀಪವನ್ನು ಉಪಯೋಗಿಸಿಕೊಂಡು ಓದಿದ್ದೇನೆ, ಈಗ ಜಗಮಗಿಸುವ ಲೇಸರ್ ಬೆಳಕಿನ ಕಿರಣಗಳನ್ನು ನೋಡುತ್ತಿದ್ದೇನೆ......

ಮೂಕಿ ಚಿತ್ರಗಳಿಂದ 70 ಎಂಎಂ ಸಿನಿಮಾಗಳವರೆಗೆ, ರಾತ್ರಿ ನೋಡುತ್ತಿದ್ದ ನಾಟಕಗಳಿಂದ, ಯೂಟ್ಯೂಬ್ ಡಿಜಿಟಲ್ ಸಿನಿಮಾಗಳವರೆಗೆ ಮನರಂಜನೆಯ ವಿವಿಧ ಮಜಲುಗಳನ್ನು ವೀಕ್ಷಿಸಿದ್ದೇನೆ........

ಸಾಂಪ್ರದಾಯಿಕ ಹಾರ್ಮೋನಿಯಂ, ಶಹನಾಯಿಗಳಿಂದ ಅತ್ಯಾಧುನಿಕ ಡಿಜಿಟಲ್ ವಾದ್ಯಗಳನ್ನು, ಅದರ ಸಂಗೀತವನ್ನು ಆಲಿಸಿದ್ದೇನೆ....... ರಾಜಕೀಯದ ಅನೇಕ ಏಳುಬೀಳುಗಳನ್ನು ನೋಡುತ್ತಾ ಬೆಳೆದಿದ್ದೇನೆ......

ಅತ್ಯಂತ ತ್ಯಾಗಮಯಿ ಮೌಲ್ಯಗಳನ್ನು, ಅತ್ಯಂತ ವಿಶ್ವಾಸ ದ್ರೋಹಿ ಕ್ರೂರ ರಾಜಕೀಯ ನಡೆಗಳನ್ನು ನೋಡಿದ್ದೇನೆ......

ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರಗಳನ್ನೇ ನಡುಗಿಸಿದ ಬೃಹತ್ ಚಳುವಳಿಗಳನ್ನು, ಎಷ್ಟೇ ಅನ್ಯಾಯವಾದರೂ ಪ್ರತಿಭಟಿಸದ ನರಸತ್ತ, ನಿರ್ವೀಯ ಯುವ ಜನಾಂಗವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ.....

ಕಣ್ಣಿಗೆ ಕಾಣುವ ಅಂತರದಲ್ಲಿ ಭೀಕರ ಅಪಘಾತಗಳನ್ನು, ಕೊಲೆಗಳನ್ನು, ಅತ್ಯಾಚಾರದ ಘಟನೆಗಳನ್ನು, ಮನುಷ್ಯ ಜನಾಂಗ ಸಹಿಸಲು ಸಾಧ್ಯವಾಗದ ನೋವುಗಳನ್ನು  ಕಾಣುತ್ತಲೇ ಬಂದಿದ್ದೇನೆ.....

ಚಿಲ್ಲರೆ ಕಾಸಿಗೆ ಸಿಗುತ್ತಿದ್ದ ಕಳ್ಳಬಟ್ಟಿ ಸಾರಾಯಿಯಿಂದ ಲೀಟರ್ಗೆ 50 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ವಿದೇಶಿ ಮದ್ಯದವರೆಗೆ ನೋಡಿದ್ದೇನೆ.....

ಚಿಕ್ಕ ಗೂಡಂಗಡಿಯಿಂದ ಮಲೇಷಿಯಾದ ಟೈಮ್ ಸ್ಕ್ವೇರ್ ನಂತಹ ಬೃಹತ್ ಮಾಲ್ ಅನ್ನು ನೋಡಿಕೊಂಡು ಬಂದಿದ್ದೇನೆ......

ಪ್ರತಿ ಹೆಣ್ಣು ತಾಯಿ ಸಮಾನ ಎನ್ನುವ ಮನಸ್ಥಿತಿಯಿಂದ, ಥೈಲ್ಯಾಂಡಿನಲ್ಲಿ ಹೆಣ್ಣನ್ನೇ ಭೋಗಿಸಲು ನೇರವಾಗಿ ದುಡ್ಡು ಕೊಟ್ಟು ಕೊಳ್ಳುವ ಮಾರಾಟಕ್ಕೆ ಲಭ್ಯವಿರುವ ಹಂತದ ಪರಿಸ್ಥಿತಿಯನ್ನು ಗಮನಿಸಿದ್ದೇನೆ......

ಉಚಿತವಾಗಿಯೇ ಜಮೀನು ದಾನ ಮಾಡುತ್ತಿದ್ದ ಕಾಲದಿಂದ ಒಂದು ಸ್ಕ್ವೇರ್ ಫೀಟ್ಗೆ ಒಂದು ಲಕ್ಷದವರೆಗೂ ಬೆಲೆ ಬಾಳುವ ಭೂಮಿಯ ವ್ಯಾಪಾರವನ್ನು ನೋಡಿದ್ದೇನೆ‌......

ಉಚಿತ ಊಟದಿಂದ, ಸಾವಿರಾರು ರೂಪಾಯಿ ಬೆಲೆ ಬಾಳುವ ಬಫೆಟ್ ಊಟದವರೆಗೂ ಇರಬಹುದಾದ ಅಜಗಜಾಂತರ ವ್ಯತ್ಯಾಸವನ್ನು ಗಮನಿಸಿದ್ದೇನೆ....... ಉಚಿತ ವಿಶ್ರಾಂತಿ ಗೃಹದಿಂದ, ದಿನಕ್ಕೆ ಲಕ್ಷಾಂತರ ಬೆಲೆಬಾಳುವ ವಸತಿಗೃಹಗಳನ್ನು ನೋಡಿದ್ದೇನೆ...... ಮೌಂಟ್ ಎವರೆಸ್ಟ್ ಏರಲು ತೇನ್ಸಿಂಗ್ ನೋರ್ಗೆ 29 ಸಲ ಪ್ರಯತ್ನಿಸಿದ್ದು, ಎಡ್ಮಂಡ್ ಹಿಲರಿ ಅವರ ಜೊತೆ ಯಶಸ್ವಿಯಾಗಿದ್ದು, ಇದೀಗ ಮೌಂಟ್ ಎವೆರೆಸ್ಟ್ ನ ತುತ್ತ ತುದಿಯಲ್ಲಿ ಅದನ್ನು ತಲುಪಲು ಸರತಿಯಲ್ಲಿ ಸಾಗುತ್ತಿರುವ ದೃಶ್ಯಗಳು ಇನ್ನೂ ಕಣ್ಣಮುಂದಿದೆ ...... ಗರ್ಭಾವಸ್ಥೆಯಲ್ಲಿಯೇ ತೀರಿಕೊಂಡ ಮಗುವಿನಿಂದ, 110 ವರ್ಷಕ್ಕೂ ಹೆಚ್ಚು ಕಾಲ ಬದುಕಿದ ವ್ಯಕ್ತಿಗಳನ್ನು ನೋಡಿದ್ದೇನೆ.......

ಎಲ್ಲಾ ದುಶ್ಚಟಗಳ ದಾಸರಾಗಿಯೂ  90 ವರ್ಷಕ್ಕೂ ಹೆಚ್ಚು ಬದುಕಿದವರು, ಯಾವುದೇ ದುರಭ್ಯಾಸಗಳಿಲ್ಲದೆ ಅತ್ಯಂತ ಸಂಭಾವಿತ ವ್ಯಕ್ತಿಗಳು 30/40 ವರ್ಷಕ್ಕೇ ತೀರಿಕೊಂಡಿದ್ದನ್ನು ನೋಡಿದ್ದೇನೆ.....

ಹೊಸವರ್ಷವೆಂದರೆ ಮಂದಿರ, ಮಸೀದಿ, ಚರ್ಚುಗಳಲ್ಲಿ ಪ್ರಾರ್ಥನೆ, ಹೊಸ ಬಟ್ಟೆ, ಒಳ್ಳೆಯ ಸಂಕಲ್ಪಗಳ ಯೋಚನೆ, ಕೆಟ್ಟ ಅಭ್ಯಾಸಗಳಿಂದ ಬಿಡುಗಡೆ ಎಂಬ ಮನಸ್ಥಿತಿಯಿಂದ, ಹೊಸ ವರ್ಷವೆಂದರೆ ಕುಡಿದು ತೂರಾಡಿ ಅಸಭ್ಯ ವರ್ತನೆ ಎನ್ನುವ ಮನಸ್ಥಿತಿಗೆ ತಲುಪಿರುವುದನ್ನು ನೋಡಿದ್ದೇನೆ......

ಹಸಿವಿನಿಂದ ಸಾಯುವವರನ್ನು ನೋಡಿದ್ದೇನೆ, ಇತ್ತೀಚಿಗೆ ಅತಿಯಾದ ಆಹಾರ ಸೇವನೆಯಿಂದ ಸಾಯುತ್ತಿರುವವರನ್ನು ನೋಡುತ್ತಿದ್ದೇನೆ.....
ಹೋಟೆಲುಗಳಲ್ಲಿ ಹಿರಿಯರ ಮುಂದೆ ಕಾಫಿ ಕುಡಿಯಲೂ ಸಂಕೋಚ ಪಡುತ್ತಾ ಕುಡಿಯುತ್ತಿದ್ದ ಯುವಕರನ್ನು ನೋಡಿದ್ದೇನೆ
, ಇತ್ತೀಚೆಗೆ ಬಾರ್ ಗಳಲ್ಲಿ ಮಹಿಳೆಯರು ಸಹ ಬಹಿರಂಗವಾಗಿ ಸಿಗರೇಟ್ ಸೇದುತ್ತಾ ಮದ್ಯಪಾನ ಮಾಡುವುದನ್ನು ನೋಡುತ್ತಿದ್ದೇನೆ.....

ನಡೆದು ಹೋಗಿ ಸುದ್ದಿ ಮುಟ್ಟುಸುತ್ತಿದ್ದ ಕಾಲದಿಂದ, ಇಂಟರ್ನೆಟ್  ಬೆಳವಣಿಗೆಯೊಂದಿಗೆ ಒಂದೇ ಕ್ಷಣದಲ್ಲಿ ಇಡೀ ಜಗತ್ತಿಗೆ ತಲುಪಬಹುದಾದ ಇ-ಮೇಲ್ ಸೌಕರ್ಯವನ್ನು ನೋಡುತ್ತಿದ್ದೇವೆ......

ಹಣವಿಲ್ಲದೇ ಎಲ್ಲವೂ ನಡೆಯುತ್ತಿದ್ದ ಸಮಯವನ್ನೂ, ಹಣದಿಂದಲೇ ಎಲ್ಲವೂ ನಡೆಯುತ್ತಿರುವ ಕಾಲವನ್ನೂ ಗಮನಿಸುತ್ತಿದ್ದೇನೆ.......ಹೀಗೆ ದಿನಗಳು, ತಿಂಗಳಗಳು, ವರ್ಷಗಳು ಉರಳುತ್ತಾ ಸಾಗುತ್ತಿದೆ. ಪರಿವರ್ತನೆ ಜಗದ ನಿಯಮ. ಈ ಪರಿವರ್ತನೆಯ ಹಾದಿಯಲ್ಲಿ ನಾವು ಸಾಗುತ್ತಿದ್ದೇವೆ........ಬದಲಾವಣೆಯ ಬದುಕಿನೆಡೆಗೆ ಹೊಸ ಮೆಟ್ಟಿಲು ಹತ್ತಲು ಹೊಸ ಸಂಕಲ್ಪದೊಡನೆ ಮುನ್ನಡೆಯಲು ಈ ದಿನದಲ್ಲಿ ಒಂದು ಹೆಜ್ಜೆ ಇಡುತ್ತಾ.......ತೃಪ್ತಿಯೇ ನಿತ್ಯ ಹಬ್ಬ.....ದೀಪದಿಂದ ದೀಪವ ಹಚ್ಚಬೇಕು ಮಾನವ..........

 ಸೂರ್ಯನ ಸುತ್ತಲೂ ಭೂಮಿ ಸುತ್ತುವ 365 ದಿನ ಮತ್ತು ತನ್ನ ಕಕ್ಷೆಯಲ್ಲಿ ತಾನೇ ಸುತ್ತಲು ತೆಗೆದುಕೊಳ್ಳುವ  24 ಗಂಟೆಗಳಲ್ಲಿ ನಮ್ಮ ಮೇಲೆ ಆಗುವ ನೆರಳು ಬೆಳಕಿನ ಆಟವನ್ನು ಒಂದು ವರ್ಷ ಮತ್ತು ಒಂದು ದಿನ  ಎಂದು ಅನುಕ್ರಮವಾಗಿ ಗುರುತಿಸಲಾಗುತ್ತದೆ.......

ಪಾಶ್ಚಿಮಾತ್ಯರು  ಜನವರಿ 1 ನ್ನು ವರ್ಷದ ಪ್ರಾರಂಭವೆಂತಲೂ ಡಿಸೆಂಬರ್ 31 ನ್ನು ಕೊನೆಯ ದಿನ ಎಂತಲೂ ಪರಿಗಣಿಸುತ್ತಾರೆ.....

ಒಂದೊಂದು ನಾಗರಿಕತೆಯಲ್ಲಿ ಒಂದೊಂದು ದಿನವನ್ನು ಪ್ರಾರಂಭದ ದಿನವಾಗಿ ಗುರುತಿಸಲಾಗಿದೆ. ಭಾರತೀಯ ಹಿಂದೂ ಪಂಚಾಂಗದ ಪ್ರಕಾರ ಚೈತ್ರ ಮಾಸದ ಪ್ರಾರಂಭದ ದಿನವನ್ನು ಹೊಸ ವರ್ಷ ಎಂತಲೂ, ಫಾಲ್ಗುಣದ ಕೊನೆಯ ದಿನವನ್ನು ಅಂತ್ಯ ಎಂತಲೂ ಕರೆಯಲಾಗುತ್ತದೆ....

ಸೃಷ್ಟಿಯ ಸಹಜ ಕ್ರಿಯೆಯನ್ನು ಯಾರು ಏನೇ ಕರೆದುಕೊಳ್ಳಲ್ಲಿ ಅಂತಹ ವಿಶೇಷವೇನು ಇಲ್ಲ. ಆದರೆ ರೂಢಿಗತವಾಗಿ ಯುವ ಸಮೂಹ ಕ್ಯಾಲೆಂಡರ್ ನ ಜನವರಿ 1 ಹೊಸ ವರ್ಷದ ಸ್ವಾಗತ ಸಮಾರಂಭವಾಗಿ ಆಚರಿಸುತ್ತಾರೆ. ಸಂಭ್ರಮಕ್ಕೆ ಯಾವ ದಿನವಾದರೇನು....

ನೇಸರನ ಕಿರಣಗಳು, ಮಾಗಿಯ ಹಿಮ ಬಿಂದುಗಳನ್ನು ಛೇದಿಸುತ್ತಾ,ಗಿಡಮರ ಬಳ್ಳಿಗಳನ್ನು ಹಾದು,ಹಚ್ಚಹಸುರಿನ ಹುಲ್ಲನ್ನು ಸ್ಪರ್ಶಿಸಿ, ಇಬ್ಬನಿಯ ಜೊತೆಗೂಡಿ ಪ್ರತಿಫಲನ ಹೊಂದಿ, ಧೂಳಿನ ಕಣಗಳನ್ನು ಭೇದಿಸಿ, ಕಿಟಕಿಯ ಸರಳುಗಳೊಳಗೆ ಹರಿದು, ಕಣ್ಣ ರೆಪ್ಪೆಯ ಬಳಿ ಸರಿದಾಗ, ಉದಯವಾಗುತ್ತದೆ,....
2025...ಆದರೆ
, ಇದೇನಿದು. ಹೊಸ ವರ್ಷದ ಆಚರಣೆಯೆಂದರೆ ದುರ್ಘಟನೆಯೇ, ಯುದ್ದವೇ, ಗಂಭೀರ ವಿಷಯವೇ ? ಪೋಲೀಸ್ ಬಂದೋಬಸ್ತ್ ಮತ್ತು ಮುನ್ನೆಚ್ಚರಿಕೆ ನೋಡಿದರೆ ಯಾರೋ ಅನಾಗರಿಕರೋ, ದರೋಡೆಕೋರರೋ ಹೊಸ ವರ್ಷ ಆಚರಿಸಲು ಅಲ್ಲಿ ಸೇರುವಂತಿರುತ್ತದೆ.....

ಕುಡಿದು ತೂರಾಡಿ ಅಸಭ್ಯವಾಗಿ ವರ್ತಿಸಿ ಹೊಸ ವರ್ಷ ಸ್ವಾಗತಿಸುವುದಾದರೆ ನಮ್ಮ ಸಮಾಜದ ಯುವಕ ಯುವತಿಯರ ಮನೋವೈಕಲ್ಯದ ಬಗ್ಗೆ ಮರುಕ ಉಂಟಾಗುತ್ತದೆ. ಒಂದು ಸಂಭ್ರಮವನ್ನು ಇತರರ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದೆ ಸಂಯಮದ ರೀತಿ ನೀತಿಗಳಂತೆ ಆಚರಿಸಲು ಸಾಧ್ಯವಾಗದಿದ್ದರೆ ಅದನ್ನು ಏನೆಂದು ಅರ್ಥಮಾಡಿಕೊಳ್ಳುವುದು. ಇದು ನಾಚಿಕೆಗೇಡು. ಹೊಸ ವರ್ಷದ ಸ್ವಾಗತ ಉನ್ಮಾದದಿಂದ ಆಗಬಾರದು. ಅದೊಂದು ಹೊಸ ಉತ್ಸಾಹದ ಚಿಲುಮೆಯಂತಿರಬೇಕು.

ಅದಕ್ಕಾಗಿ..........ಹೊಸ ಎತ್ತರಕ್ಕೆ ಏರಿಸಬೇಕಿದೆ ನಮ್ಮ ಚಿಂತನೆಗಳನ್ನು........ ವಿಷಯ ಯಾವುದೇ ಇರಲಿ, ಅದನ್ನು ಸಮಗ್ರ ದೃಷ್ಟಿಕೋನದಿಂದ, ಸಮಷ್ಟಿ ಪ್ರಜ್ಞೆಯಿಂದ ವಿಮರ್ಶಿಸಬೇಕಿದೆ.... ಯೋಚಿಸುವ ಮನಸ್ಸನ್ನು ವಿಶಾಲಗೊಳಿಸಿಕೊಳ್ಳಬೇಕಿದೆ...ಮಂಥನದ ಸಮಯದಲ್ಲಿ ಪ್ರಶಾಂತತೆ ಕಾಪಾಡಬೇಕಿದೆ.... ನಿರ್ಧಾರ ಮಾಡುವ ಮೊದಲು ವಿಷಯದ ಆಳಕ್ಕೆ ಇಳಿಯಬೇಕಿದೆ.....ವಿಷಯ ಅರಿಯಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ.....

ಸಭ್ಯತೆ - ಸೌಜನ್ಯತೆ ಮೈಗೂಡಿಸಿಕೊಳ್ಳಬೇಕಿದೆ. ಆಗ ಮೂಡುವ ಅರಿವಿನಿಂದ..... ಪ್ರಕೃತಿಯ ಮಡಿಲಿನಿಂದ ಪ್ರೀತಿಯನ್ನು ಬೊಗಸೆಯಿಂದ ಮೊಗೆದು ಸ್ವಲ್ಪ ಸ್ವಲ್ಪವೇ ಹಂಚೋಣ. ನಮ್ಮೊಳಗಡಗಿರುವ ಅರಿಷಡ್ವರ್ಗಗಳ ಮೇಲೆ ಸ್ವಲ್ಪ ಸ್ವಲ್ಪವೇ ನಿಯಂತ್ರಣ ಸಾಧಿಸೋಣ.

ಒಟ್ಟು ಬದುಕಿನ ಘನತೆಯನ್ನು ಸ್ವಲ್ಪ ಸ್ವಲ್ಪವೇ ಎತ್ತರಕ್ಕೇರಿಸಿಕೊಳ್ಳುತ್ತಾ ಸಾರ್ಥಕತೆಯತ್ತಾ ಸಾಗೋಣ... " ಹೊಸ ವರುಷ ಎಂಬುದೇನಿಲ್ಲ ಅರಿತವಗೆ,..." " ಕಳೆದುಕೊಳ್ಳುವುದು ಏನೂ ಇಲ್ಲ, ಪಡೆದುಕೊಳ್ಳುವುದೇ ಎಲ್ಲವೂ......... " " ಎಲ್ಲವೂ ವಿಫಲವಾದಾಗ ತಾಳ್ಮೆಯು ಸಫಲವಾಗುತ್ತದೆ..... " ಶುಭಾಶಯಗಳು. ಎಲ್ಲರಿಗೂ ಒಳ್ಳೆಯದಾಗಲಿ...
ಲೇಖನ-ವಿವೇಕಾನಂದ. ಎಚ್. ಕೆ. 9844013068.........

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು