ಚಂದ್ರವಳ್ಳಿ ನ್ಯೂಸ್, ಹೊಳೆನರಸೀಪುರ:
ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯಲ್ಲಿರುವ ತಮ್ಮ ಕುಲದೇವತೆ ಹಾಗೂ ಮನೆ ದೇವರಾದ ಶ್ರೀ ದೇವೇಶ್ವರ ಸ್ವಾಮಿ ಸನ್ನಿಧಿಗೆ ಪ್ರಮುಖ ನಾಯಕರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಸಹೋದರ, ಮಾಜಿ ಸಚಿವ ಹೆಚ್.ಡಿ. ರೇವಣ್ಣ ಹಾಗೂ ಜೆಡಿಎಸ್ ವಿಧಾನ ಪರಿಷತ್ ಶಾಸಕಾಂಗ ಪಕ್ಷದ ನಾಯಕ ಎಸ್.ಎಲ್. ಭೋಜೇಗೌಡ ಅವರೊಂದಿಗೆ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ನಾಯಕರು, ನಾಡಿನ ಜನತೆಯ ಒಳಿತಿಗಾಗಿ, ರಾಜ್ಯದಲ್ಲಿ ಸುಖ, ಶಾಂತಿ, ನೆಮ್ಮದಿ ಮತ್ತು ಸಮೃದ್ಧಿ ಸದಾಕಾಲ ನೆಲೆಸುವಂತೆ ಭಗವಂತನಲ್ಲಿ ವಿಶೇಷವಾಗಿ ಪ್ರಾರ್ಥಿಸಿ ಅರಿಕೆ ಮಾಡಿಕೊಳ್ಳಲಾಯಿತು ಎಂದು ತಿಳಿಸಿದ್ದಾರೆ.
ಮಾವಿನಕೆರೆ ಶ್ರೀ ರಂಗನಾಥ ಸ್ವಾಮಿ ದರ್ಶನ: ಹರದನಹಳ್ಳಿಯ ಪೂಜೆಯ ಬಳಿಕ, ನಾಯಕರು ಹೊಳೆನರಸೀಪುರ ತಾಲ್ಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರವಾದ ಮಾವಿನಕೆರೆ ಶ್ರೀ ರಂಗನಾಥ ಸ್ವಾಮಿ ದೇವಾಲಯಕ್ಕೂ ಭೇಟಿ ನೀಡಿದರು. ಹೆಚ್.ಡಿ. ಕುಮಾರಸ್ವಾಮಿ ಹಾಗೂ ಹೆಚ್.ಡಿ. ರೇವಣ್ಣ ಅವರು ಎಸ್.ಎಲ್. ಭೋಜೇಗೌಡರೊಂದಿಗೆ ರಂಗನಾಥ ಸ್ವಾಮಿಯ ದರ್ಶನ ಪಡೆದು, ದೇವಸ್ಥಾನದಲ್ಲಿ ಇತರೆ ಗಣ್ಯರು ಮತ್ತು ಅಭಿಮಾನಿಗಳೊಡನೆ ಸಾಂಪ್ರದಾಯಿಕ ಪೂಜಾ ವಿಧಿ-ವಿಧಾನಗಳಲ್ಲಿ ಭಾಗಿಯಾದರು.




