Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ಲಂಕೇಶ್ ಕೇವಲ ಒಬ್ಬ ವ್ಯಕ್ತಿಯಲ್ಲ ಅವರೊಂದು ದೈತ್ಯ ಶಕ್ತಿ

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪಿ. ಲಂಕೇಶ್ ಎಂಬುವುದು ಕೇವಲ ಒಂದು ಹೆಸರಲ್ಲ. ಅವರೊಂದು ದೈತ್ಯ ಶಕ್ತಿ, ಕರ್ನಾಟಕದಲ್ಲಿ ಜರುಗಿದ ಹಲವು ವಿದ್ಯಮಾನಗಳಿಗೆ ಅವರು ಸಾಕ್ಷಿ ಎಂದು ಶಿವಮೊಗ್ಗದ ಪ್ರಾಧ್ಯಾಪಕ ಬಿ.ಎಲ್.ರಾಜು ಅಭಿಪ್ರಾಯಪಟ್ಟರು. 


ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಪಿ.ಲಂಕೇಶ್ ಹಾಗೂ ಪ್ರಸ್ತುತ ಸಾಂಸ್ಕೃತಿಕ  ವಿದ್ಯಮಾನದ ಕುರಿತು ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಕರ್ನಾಟಕದ 20ನೇ ಶತಮಾನದ ಕೊನೆಯ ಎರಡು ದಶಕಗಳನ್ನು ಅತ್ಯಂತ ಗಾಢವಾಗಿ ಪ್ರಭಾವಿಸುವಂಹವರು ಪಿ.ಲಂಕೇಶ್. ಕರ್ನಾಟಕದ ರಾಜಕಾರಣ, ಸಂಸ್ಕೃತಿ, ಚರಿತ್ರೆ, ಜ್ಞಾನ  ಸೇರಿದಂತೆ ಅನೇಕ ವಿದ್ಯಮಾನಗಳನ್ನು ಕರ್ನಾಟಕದಲ್ಲಿ ಪ್ರಭಾವಿಸಿದವರು ಲಂಕೇಶ್ ಎಂದು ಹೇಳಿದರು.

ಲಂಕೇಶ್ ಅವರು ಪತ್ರಕರ್ತರು ಮಾತ್ರವಲ್ಲದೇ ಸ್ವತಃ ಕವಿ, ನಾಟಕಕಾರ, ಸಿನಿಮಾ ನಿರ್ದೇಶಕ, ಕಾದಂಬರಿಕಾರ ಆಗಿದ್ದ ಅವರು ಕರ್ನಾಟಕದ ಎರಡು ದಶಕಗಳನ್ನು ದೊಡ್ಡಮಟ್ಟದಲ್ಲಿ ಪ್ರಭಾವಿಸಿದವರು. ಪಿ.ಲಂಕೇಶ್ ಅವರ ಲಂಕೇಶ್ ಪತ್ರಿಕೆ ಓದುತ್ತಿರುವವರಿಗೆ ಅಂದಿನ ದಿನಮಾನಗಳಲ್ಲಿ ವಿಶಿಷ್ಟವಾದ ಸ್ಥಾನವಿತ್ತು. ಲಂಕೇಶ್ ಪತ್ರಿಕೆ ಓದುವವರು ಪ್ರಜ್ಞಾವಂತರೂ ಎಂಬ ಇಮೇಜ್ ಕೂಡ ಇತ್ತು. ಲಂಕೇಶ್ ಪತ್ರಿಕೆಯ ಶೀರ್ಷಿಕೆಯ ಮೇಲ್ಭಾಗದಲ್ಲಿ ರಂಜನೆ, ಬೋಧನೆ, ಪ್ರಚೋಧನೆ ಹಾಗೂ ಶೀರ್ಷಿಕೆಯ ಕೆಳಭಾಗದಲ್ಲಿ ಜಾಣ-ಜಾಣೆಯರ ಪತ್ರಿಕೆ ಎಂಬುದಾಗಿತ್ತು. ಒಂದು ಪತ್ರಿಕೆಯನ್ನು ಓದುಗರು ತಮ್ಮ ಜತೆಗೆ ಗುರುತಿಸಿಕೊಂಡು, ಪತ್ರಿಕೆ ಜತೆಗೆ ತಮ್ಮನ್ನು ಸಮೀಕರಿಸಿಕೊಂಡ ಕಾಲಘಟ್ಟವೂ ಹೌದು ಎಂದು ಹೇಳಿದರು.

ಅನೇಕ ಪ್ರಜ್ಞಾವಂತರನ್ನು, ಸಾಹಿತಿಗಳನ್ನು ಜೋಡಿಸಿದ್ದು ಲಂಕೇಶ್ ಪತ್ರಿಕೆ. ಅಂತಹ ವಿಶಿಷ್ಟ ಹಾಗೂ ಮಹತ್ತರವಾದ ಕೆಲಸ ಮಾಡಿದೆ. 1980ರಲ್ಲಿ ಜೂನ್ 08ರಂದು ಲಂಕೇಶ್ ಪತ್ರಿಕೆ ಕಪ್ಪು-ಬಿಳುಪಿನಲ್ಲಿ  ಸುಮಾರು 20 ವರ್ಷಗಳ   ಕಾಲ ಯಾವುದೇ ಜಾಹೀರಾತುಗಳು ಇಲ್ಲದೇ, ಜಾಹೀರಾತಿನ ಅಂಗಿಲ್ಲದೆ, ನಿರ್ಭೀತವಾಗಿ, ನಿಷ್ಠುರವಾಗಿ ಕರ್ನಾಟಕದ ಬದುಕುನ್ನು ರೂಪಿಸಿದ ಪತ್ರಿಕೆ. ಲಂಕೇಶ್ ಅವರು ಕರ್ನಾಟಕದ ರಾಜಕಾರಣವನ್ನು ನೇರ-ನಿಷ್ಠುರವಾಗಿ ಟೀಕಿಸುವ, ವಿಮರ್ಶಿಸುವ ಹಾಗೂ ಪರಿಶೀಲಿಸುವ ಕೆಲಸ ಮಾಡಿದರು.

ಮುಖ್ಯಮಂತ್ರಿ, ಮಂತ್ರಿ ಸೇರಿದಂತೆ ಯಾವುದೇ ರಾಜಕಾರಣಿ, ಅಧಿಕಾರಿಗಳಿರಲಿ ನಿರ್ಭೀತವಾಗಿ ಅವರ ಎಲ್ಲ ಕರ್ಮಕಾಂಡಗಳನ್ನು ಬಯಲಿಗೆಳೆದವರು. ಸರ್ಕಾರಗಳನ್ನು ಪ್ರಭಾವಿಸುವಷ್ಟರ ಮಟ್ಟಿಗೆ, ಜನರಿಗೆ ವಿವೇಕವನ್ನು ನೀಡುತ್ತಿದ್ದರು. ಕರ್ನಾಟಕದ ಅಧಿಕೃತ ವಿರೋಧ ಪಕ್ಷವಾಗಿ, ವಿರೋಧ ಪಕ್ಷಗಳ ಸ್ಥಾನವನ್ನು  ಲಂಕೇಶ್ ಪತ್ರಿಕೆ ತುಂಬಿದೆ. ಸರ್ಕಾರವನ್ನು ಅಧಿಕಾರಕ್ಕೆ ತರುವುದು, ಅಧಿಕಾರಕ್ಕೆ ಬಂದ ಕೂಡಲೇ ವಿರೋಧವಾಗಿ ಕೆಲಸ ಮಾಡುವುದು. ಅಧಿಕಾರದಲ್ಲಿ ಇಲ್ಲದಿರುವವರ ಪರವಾಗಿ, ಅಧಿಕಾರದ ವಿರುದ್ಧವಾಗಿ ಲಂಕೇಶ್ ಪತ್ರಿಕೆ ಕೆಲಸ ಮಾಡಿದೆ. ರಾಜಕಾರಣ ನಿಂತ ನೀರಾಗಬಾರದು. ಅದು ನಿರಂತರತೆ ಮತ್ತು ಸದಾ ಜಂಗಮಸ್ಥಿತಿಯಲ್ಲಿರಬೇಕು ಎಂಬ ಉದ್ದೇಶ ಲಂಕೇಶ್ ಅವರದ್ದಾಗಿತ್ತು ಎಂದು ಹೇಳಿದರು. 

ಲೇಖಕರ ಸೃಷ್ಠಿಕರ್ತ ಲಂಕೇಶ್: ಪತ್ರಕರ್ತ ಹಾಗೂ ಲೇಖಕರಾದ ಪಿ.ಲಂಕೇಶ್ ಅವರು ಬಿ.ಟಿ.ಜಾಹ್ನವಿ, ಬಿ.ಟಿ.ಲಲಿತಾ ನಾಯ್ಕ್, ಸಾರಾ ಅಬೂಬ್‍ಕರ್ ಸೇರಿದಂತೆ ಬಹಳಷ್ಟು ಲೇಖಕರನ್ನು ಸೃಷ್ಠಿ ಮಾಡಿದರು. ಮೊಗಳ್ಳಿ ಗಣೇಶ್, ಸಿದ್ದಲಿಂಗಯ್ಯ, ದೇವನೂರು ಮಹಾದೇವಯ್ಯ ಅವರು ಸಹ ಲಂಕೇಶ್ ಪತ್ರಿಕೆಯಲ್ಲಿ ಬರೆಯಲು ಶುರು ಮಾಡಿದರು. ಲಂಕೇಶ್ ಪತ್ರಿಕೆ ಕೇವಲ ರಾಜಕೀಯಕ್ಕೆ ಮಾತ್ರ ಸೀಮಿತವಾಗಿರದೇ ಸಂಸ್ಕøತಿ, ಸಾಹಿತ್ಯದ ವಿಮರ್ಶೆಯೂ ಕೂಡ ಇತ್ತು. ಬರಹದಲ್ಲಿ ಮಾನವೀಯತೆ, ನಿಷ್ಠುರತೆಯನ್ನು ನಿರೀಕ್ಷೆ ಮಾಡುತ್ತಿದ್ದರು. ಜಾತಿ, ಧರ್ಮದ ಗಡಿಯನ್ನು ಮೀರಿ ಬರೆಯುವ ವಾತಾವರಣ ನಿರ್ಮಾಣ ಮಾಡಿದ್ದರು.  ಅನಂತಮೂರ್ತಿ ಸೇರಿದಂತೆ ಕರ್ನಾಟಕದ ಬಹಳ ದೊಡ್ಡ ಲೇಖಕರು ಹಾಗೂ ಸಣ್ಣ ಲೇಖಕರವರೆಗೂ ಸಹ ಲಂಕೇಶ್ ಅವರ ಕುಲುಮೆಯಲ್ಲಿ ಪರೀಕ್ಷೆಗೆ ಒಳಪಟ್ಟಿದ್ದಾರೆ ಎಂದು ಹೇಳಿದರು.

ಪಿ.ಲಂಕೇಶ್ ಅವರು ಅಧಿಕಾರ ಕೇಂದ್ರಕ್ಕೆ ಮುಖಾಮುಖಿಯಾಗಿ ನಿಂತವರು. ಅಂದು ಲಂಕೇಶ್ ಅವರು ಪಟ್ಟಾಭದ್ರರ ವಿರುದ್ಧ, ಜಗದ್ಗುರುಗಳ ವಿರುದ್ಧ, ರಾಜಕಾರಣಿಗಳ ವಿರುದ್ಧ, ಭೂ ಮಾಲೀಕರ ವಿರುದ್ಧ ನಿರಂತರ ಹಾಗೂ ನಿರ್ಭೀತರಾಗಿ ಮಾತನಾಡುತ್ತಾರೆ.  ಆದರೆ ಇಂದಿನ ದಿನಮಾನಗಳಲ್ಲಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಕೇಂದ್ರಕ್ಕೆ ಮುಖಾಮುಖಿಯಾಗಲು ಸಾಧ್ಯವೇ ಇಲ್ಲದಂತಾಗಿದೆ.



ಲಂಕೇಶ್ ಪತ್ರಿಕೆಯಿಂದ ನಾವು ಅಷ್ಟೆಲ್ಲಾ ಪ್ರಭಾವಿತರಾದರೂ, ಲಂಕೇಶ್ ಅವರನ್ನು ಓದಿ, ನೆಚ್ಚಿಕೊಂಡು, ಪ್ರಜ್ಞಾವಂತರಾದ ನಾವುಗಳು ಲಂಕೇಶ್ ಅವರ ಪ್ರಜ್ಞಾವಂತಿಕೆ, ನಿಷ್ಠುರತೆ ನಮ್ಮ ತಲೆಮಾರುಗಳಿಗೆ ಮುಂದುವರೆಯಲಿಲ್ಲ ಎಂಬ ಪ್ರಶ್ನೆ ಕಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಯಾವುದೋ ಅನುಕೂಲ, ಪ್ರಶಸ್ತಿಗಾಗಿ, ಬಹುಮಾನಕ್ಕಾಗಿ ಸಾಂಸ್ಕøತಿಕ ಲೋಕದಲ್ಲಿ ಹಪಹಪಿಸುತ್ತಾರೆ. ರಾಜಕಾರಣದಲ್ಲಿ ಇಂದಿಗೂ ಒಬ್ಬ ವೈ.ಕೆ.ರಾಮಯ್ಯ, ದೇವರಾಜ್, ಅರಸು, ನಜೀರ್ ಸಾಬ್, ಎಂ.ಪಿ.ಪ್ರಕಾಶ್ ಅಂತಹ ತತ್ವಬದ್ಧ ರಾಜಕಾರಣಿ ಮತ್ತು ಜನಪರವಾದ ರಾಜಕಾರಣಿ ಕರ್ನಾಟಕದಲ್ಲಿ ಇಲ್ಲವಾಗಿದೆ. ಇಂದಿನ ಯಾವ ರಾಜಕಾರಣಿಗಳಿಗೂ ಸಹ ಕನಿಷ್ಟ ವೇದಿಕೆ ಮೇಲೆ ನಿಂತು, ತನ್ನ ಎದುರುಗಡೆ ಇರುವ ಜನರ ನಿರೀಕ್ಷೆಗಳೇನು ಎಂಬುದನ್ನು ಅರ್ಥಮಾಡಿಕೊಂಡು ನಾಲ್ಕು ಸಾಲುಗಳನ್ನು ಹಾಡುವುದಕ್ಕೂ ಬರುವುದಿಲ್ಲ ಅಂತಹ ರಾಜಕಾರಣಿಗಳು ಕರ್ನಾಟಕವನ್ನು ಆಳ್ವಿಕೆ ಮಾಡುತ್ತಿದ್ದಾರೆ.

ಪ್ರಜ್ಞೆ ಇಲ್ಲದ  ರಾಜಕಾರಣಿಗಳು, ಅನಕ್ಷರಸ್ಥ ರಾಜಕಾರಣಿಗಳು ಕರ್ನಾಟಕದ ಅಧಿಕಾರ ಕೇಂದ್ರ ನಿಯಂತ್ರಿಸುತ್ತಿದ್ದಾರೆ. ನಾವುಗಳು ಅಂತಹ ರಾಜಕಾರಣಿಗಳಿಗೆ ಮತ ಹಾಕಿ, ಅಧಿಕಾರಕ್ಕೆ ತರುತ್ತಿದ್ದೇವೆ. ಅಂದು ಇಂತಹರನ್ನು ಅಧಿಕಾರಕ್ಕೆ ತನ್ನಿ ಎಂದು ಲಂಕೇಶ್ ಪತ್ರಿಕೆಯ ಮೂಲಕ ಲಂಕೇಶ್ ಬೆಂಬಲಿಸುವ ರೀತಿಯಲ್ಲಿ ಆ  ತರಹದ ನಿಷ್ಠುರವಾದ ಕೆಲಸ ಯಾವುದೇ ಒಂದು ಪತ್ರಿಕೆ ಮಾಡಲು ಸಾಧ್ಯವಾಗುತ್ತಿಲ್ಲ. ಲಂಕೇಶ್ ಒಂದು ವಿದ್ಯಮಾನವಾಗಿ 21ನೇ ಶತಮಾನಕ್ಕೆ ಮುಂದುವರೆಯಬೇಕಾಗಿತ್ತೋ ಅದು ಮುಂದುವರೆಯಲಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು. 

ಕಥೆಗಾರ ಡಾ.ಗಂಗಾಧರಯ್ಯ ಮಾತನಾಡಿ, ಲಂಕೇಶ್ ಅವರ ಪತ್ರಿಕೆ ಓದಿನ ಹುಚ್ಚು ಹಿಡಿಸಿದ ಪತ್ರಿಕೆ. ಇದು ಕೇವಲ ಪತ್ರಿಕೆ ಮಾತ್ರವಾಗಿರದೇ ಸಿನಿಮಾ, ಕ್ರೀಡೆ, ರಾಜಕಾರಣ, ಟೀಕೆ-ಟಿಪ್ಪಣಿ ಸೇರಿದಂತೆ ಅನೇಕ ವಿಷಯಗಳನ್ನು ಸಹ ಹೇಳುತ್ತಿತ್ತು ಎಂದು ತಿಳಿಸಿದ ಅವರು, ನಾನು ಕನ್ನಡದಲ್ಲಿ ವರ್ಷಕ್ಕೊಮ್ಮೆ ಮತ್ತೆ ಮತ್ತೆ ಓದುವ ಲೇಖಕರರು ಪಿ.ಲಂಕೇಶ್, ತೇಜಸ್ವಿ ಹಾಗೂ ಕುವೆಂಪು. ಅವರ ಜೀವನದೃಷ್ಠಿ, ಭಾಷೆ, ನಿರೂಪಣೆ ಬಹಳ ಮುಖ್ಯ ಕಾರಣವಾಗಿದೆ ಎಂದು ಹೇಳಿದರು.

ಲೋಹಿಯಾ ಅವರ ಆಲೋಚನೆಗಳನ್ನು, ತನ್ನ ಬದುಕು ಮತ್ತು ಬರಹದಲ್ಲಿ ರೂಢಿಸಿಕೊಂಡ ಬಹಳ ದೊಡ್ಡ ಲೇಖಕರು ಲಂಕೇಶ್. ಬರಹದಂತೆ ಬದುಕಿ ತೋರಿಸಿದ  ಅವರು, ಅತ್ಯಂತ ಸರಳವಾದ ಭಾಷೆಯಲ್ಲಿ ಅತ್ಯಂತ ಸಂಕೀರ್ಣವಾದುದನ್ನು ಹೇಳಿಲಿಕ್ಕೆ ಸಾಧ್ಯವಾದುದು ಲಂಕೇಶ್ ಅವರಿಗೆ ಮಾತ್ರ ಎಂದು ಹೇಳಿದರು.

ಪಿ.ಲಂಕೇಶ್ ಅವರಿಗೆ ಜ್ಞಾನಪೀಠ ಪ್ರಶಸ್ತಿ ಬರಬೇಕಿತ್ತು. ಜ್ಞಾನಪೀಠ ಪ್ರಶಸ್ತಿ ಲಭಿಸಿದ್ದರೆ ಮಕ್ಕಳು ಹೆಚ್ಚು ಅವರ  ಸಾಹಿತ್ಯ ಅಧ್ಯಯನ ಮಾಡಲು ಅನುಕೂಲವಾಗುತ್ತಿತ್ತು.  ಜ್ಞಾನಪೀಠ ಪ್ರಶಸ್ತಿ ಬಾರದೇ ಇರುವುದು ಅವರಿಗೆ ಆದ ನಷ್ಟ ಅಲ್ಲ. ಅದು ಕನ್ನಡ ಸಾಹಿತ್ಯಕ್ಕೆ ಆದ ನಷ್ಟ ಎಂದು ಅಭಿಪ್ರಾಯಪಟ್ಟ ಅವರು, ಲಂಕೇಶ್ ಅವರ ಸಾಹಿತ್ಯ ವಿಶ್ವವಿದ್ಯಾಲಯಗಳಲ್ಲಿ ಇನ್ನೂ ಸರಿಯಾಗಿ ತಲುಪಿಲ್ಲ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದಲ್ಲಿ ಹೆಚ್ಚು ಲಂಕೇಶ್ ಅವರ ಸಾಹಿತ್ಯ ಬಳಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸರ್ಕಾರಿ ಕಲಾ ಕಾಲೇಜು ಕನ್ನಡ ಸ್ನಾತಕೋತ್ತರ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಜೆ.ಕರಿಯಪ್ಪ ಮಾಳಿಗೆ, ಗೆಳೆಯರ ಬಳಗದ ಗೌನಹಳ್ಳಿ ಗೋವಿಂದಪ್ಪಸಾಹಿತಿ ಪರಮೇಶ್ವರಪ್ಪ ಕುದುರಿ, ಪಿಹೆಚ್‍ಡಿ ಸಂಶೋಧನಾರ್ಥಿ ಬಿ.ಪಿ.ಸಂತೋಷ್ ಕುಮಾರ್ ಬೆಳಗಟ್ಟ, ಸೇರಿದಂತೆ ಮತ್ತಿತರರು ಇದ್ದರು.

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು