ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬಳ್ಳಾಪುರ ತಾಲೂಕಿನ ವಿವಿಧ ಭಾಗಗಳಲ್ಲಿ ಇಂದು ಬೆಳಿಗ್ಗೆ ಲಘು ಭೂಕಂಪನ ಸಂಭವಿಸಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ದೃಢಪಡಿಸಿದೆ.
ಅಕ್ಟೋಬರ್ 23ರ ಶುಕ್ರವಾರ ಬೆಳಿಗ್ಗೆ 9:01ರ ಸುಮಾರಿಗೆ ಈ ಭೂಕಂಪನ ದಾಖಲಾಗಿದ್ದು, ರಿಕ್ಟರ್ ಮಾಪಕದಲ್ಲಿ 3.0 ರಷ್ಟು ತೀವ್ರತೆ ದಾಖಲಾಗಿದೆ.
ಕಂಪನದ ಕೇಂದ್ರಬಿಂದು: ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ತಿಮ್ಮೋಜನಹಳ್ಳಿ ಗ್ರಾಮದಿಂದ ಉತ್ತರಕ್ಕೆ ಸುಮಾರು 0.5 ಕಿ.ಮೀ ದೂರದಲ್ಲಿ, ಭೂಮಿಯ ಅಡಿಯಲ್ಲಿ 10 ಕಿ.ಮೀ ಆಳದಲ್ಲಿ ಈ ಕಂಪನದ ಕೇಂದ್ರಬಿಂದು ಪತ್ತೆಯಾಗಿದೆ.
ಸಾರ್ವಜನಿಕರಿಗೆ ಆತಂಕ ಬೇಡ: ಈ ಕುರಿತು ಮಾಹಿತಿ ನೀಡಿರುವ ಕೆಎಸ್‌ಎನ್‌ಡಿಎಂಸಿ ನಿರ್ದೇಶಕರು, "ಭೂಕಂಪನದ ತೀವ್ರತೆಯು ತೀರಾ ಕಡಿಮೆಯಿರುವುದರಿಂದ ಸಾರ್ವಜನಿಕರು ಅಥವಾ ಆಸ್ತಿಪಾಸ್ತಿಗೆ ಯಾವುದೇ ರೀತಿಯ ಹಾನಿ ಉಂಟಾಗುವುದಿಲ್ಲ. ಕೇಂದ್ರಬಿಂದುವಿನಿಂದ ಸುಮಾರು 20 ರಿಂದ 30 ಕಿ.ಮೀ ಸುತ್ತಳತೆಯ ವ್ಯಾಪ್ತಿಯಲ್ಲಿ ಮಾತ್ರ ಸಣ್ಣ ಪ್ರಮಾಣದ ಕಂಪನದ ಅನುಭವವಾಗಿರಬಹುದು. ಈ ಪ್ರದೇಶವು ಸೆಸ್ಮಿಕ್ ಝೋನ್-II (Seismic Zone II) ವ್ಯಾಪ್ತಿಗೆ ಬರುವುದರಿಂದ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
ಸ್ಥಳೀಯರ ಪ್ರತಿಕ್ರಿಯೆ: ತಿಮ್ಮೋಜನಹಳ್ಳಿ: ಈ ಭಾಗದಲ್ಲಿ ನಮಗೆ ಯಾವುದೇ ಭೂಮಿ ನಡುಗಿದ ಅನುಭವವಾಗಿಲ್ಲ ಹಾಗೂ ಗ್ರಾಮದಲ್ಲಿ ಯಾವುದೇ ಹಾನಿಯೂ ಸಂಭವಿಸಿಲ್ಲ ಎಂದು ಸ್ಥಳೀಯ ಗ್ರಾಮಸ್ಥರಾದ ದೇವರಾಜು ತಿಳಿಸಿದ್ದಾರೆ.
ಲಘುಮೇನಹಳ್ಳಿ: ತಿಮ್ಮೋಜನಹಳ್ಳಿಯ ಸಮೀಪದಲ್ಲೇ ಇರುವ ಲಘುಮೇನಹಳ್ಳಿಯಲ್ಲಿ ಕೆಲ ಕಾಲ ಭೂಕಂಪನದ ಅನುಭವವಾಗಿದೆ. ಮನೆಗಳ ಮೇಲ್ಚಾವಣಿ ಕಂಪಿಸಿದ ಅನುಭವವಾಯಿತು ಎಂದು ಅಲ್ಲಿನ ಗ್ರಾಮಸ್ಥರು ಹಂಚಿಕೊಂಡಿದ್ದಾರೆ. ಸದ್ಯ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದ್ದು, ಯಾವುದೇ ಅನಾಹುತಗಳು ವರದಿಯಾಗಿಲ್ಲ.




