Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
International News

ಸುಭಾಷ್ ಚಂದ್ರ ಬೋಸ್ ಬೇಕಾದರೆ ಗಮನಿಸಿ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸುಭಾಷ್ ಚಂದ್ರ ಬೋಸ್...ಜನವರಿ 23—1897...ಬೇಕಾದರೆ ಗಮನಿಸಿ..
ಯಾವ ಮಾಧ್ಯಮಗಳು ಬಹುಶಃ ಇಂದು ಸುಭಾಷ್ ಚಂದ್ರ ಬೋಸ್ ಅವರನ್ನು ನೆನಪಿಸಿಕೊಂಡು ಒಂದೆರಡು ಗಂಟೆಗಳ ಅವರ ವ್ಯಕ್ತಿತ್ವ ಬಿಂಬಿಸುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದಿಲ್ಲ. ಯುವ ಪೀಳಿಗೆಗೆ ಸ್ವಾತಂತ್ರ್ಯ ಹೋರಾಟದ ತ್ಯಾಗ - ಮಹತ್ವ ತಿಳಿಸುವ ಪ್ರಯತ್ನ  ಮಾಡುವುದಿಲ್ಲ. ಅವರಲ್ಲಿ ಕೆಲವರು ಯಾವ ಸಿನಿಮಾ ನಟಿ ಗರ್ಭಿಣಿಯಾಗಿದ್ದಾರೆ ಎಂಬ ಹುಡುಕಾಟದಲ್ಲಿ ಇರುತ್ತಾರೆ. ಆದರೆ ನಾವುಗಳು ಸುಭಾಷ್ ಅವರನ್ನು ಮರೆಯುವುದು ಬೇಡ......

 ಈ. ವಿಷಯದಲ್ಲಿ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದ ನಮ್ಮ ತಂದೆಯವರ ಬಗ್ಗೆ ನನಗೊಂದು ಹೆಮ್ಮೆ. ಜನವರಿ 12 ಸ್ವಾಮಿ ವಿವೇಕಾನಂದರ ಜನ್ಮದಿನ - ಜನವರಿ 23 ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನ. ನನ್ನ ಹೆಸರು ವಿವೇಕಾನಂದ ನನ್ನ ಒಡಹುಟ್ಟಿದ ಅಣ್ಣನ ಹೆಸರು ‌ಸುಭಾಷ್......

ಸ್ವಾತಂತ್ರ್ಯ ಹೋರಾಟದ ಸ್ಪೂರ್ತಿಯ ನೆನಪಿನಲ್ಲಿ ಬಹುಶಃ ಅವರು ಈ ಹೆಸರುಗಳನ್ನು ತಮ್ಮ ಇಬ್ಬರೂ ಮಕ್ಕಳಿಗೆ ಇಟ್ಟಿರಬಹುದು ಎಂಬ ಊಹೆ ನನ್ನದು......ಮತ್ತೆ ಮತ್ತೆ ನೆನಪಾಗುವ ಕ್ರಾಂತಿಕಾರಿ ನಾಯಕ ಸುಭಾಷ್ ಚಂದ್ರ ಬೋಸ್......ಭಾರತ ಸ್ವಾತಂತ್ರ್ಯ ಹೋರಾಟದ ಕೆಲವೇ ಪ್ರಮುಖ ನಾಯಕತ್ವಗಳಲ್ಲಿ ಬೋಸ್ ಸಹ ಒಬ್ಬರು......ಆಗಿನ ಅತ್ಯುನ್ನತ ಓದಿನ ಐಸಿಎಸ್ ಪರೀಕ್ಷೆ ದಿಕ್ಕರಿಸಿದ ಸ್ವಾತಂತ್ರ್ಯ ಪ್ರೇಮಿ.....

ಮಹಾತ್ಮ ಗಾಂಧಿಯವರ ಅಹಿಂಸೆಯ ಪ್ರತಿಪಾದನೆಯ ವಿರುದ್ಧ ಸೈನಿಕ ಶಕ್ತಿ ಪ್ರತಿಪಾದಿಸಿ ಒಂದಷ್ಟು  ಜನಪ್ರಿಯತೆ ಗಳಿಸಿದ ವೀರ ಯೋಧ......ಜಗತ್ತು ಕಂಡ ನರಹಂತಕ ಹಿಟ್ಲರ್ ಸಹಕಾರ ಪಡೆಯಲು ಪ್ರಯತ್ನಿಸಿ ತಪ್ಪು ದಾರಿ ಹಿಡಿದ ಆತುರಗಾರ....

ಭಾರತದ ಸ್ವಾತಂತ್ರ್ಯದ ಮೊದಲ ರಾಷ್ಟ್ರ ಧ್ವಜವನ್ನು ತನ್ನ ಆಜಾದ್ ಹಿಂದ್ ಫೌಜ್ ( I N A ) ಎಂಬ ಸೈನ್ಯದ ಮೂಲಕ ರಂಗೂನ್ ನಲ್ಲಿ ಹಾರಿಸಿ ಸಂಭ್ರಮ ಪಟ್ಟ ಧೀರೋದಾತ್ತ.........ಸ್ವಾಮಿ ವಿವೇಕಾನಂದರ ಭಾಷಣಗಳಿಂದ ಪ್ರೇರಿತರಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡ ಅಮರ ಜೀವಿ.........

ನತದೃಷ್ಟ ನೇತಾಜಿ.......ನಮ್ಮ ಸ್ವಾತಂತ್ರ್ಯ ಹೋರಾಟದ ಅತ್ಯಂತ ನತದೃಷ್ಟ ವ್ಯಕ್ತಿ ಸುಭಾಷ್ ಚಂದ್ರ ಬೋಸ್. ಗಾಂಧಿ ನಂತರದ ಮಹತ್ವದ ವ್ಯಕ್ತಿಯೂ ಸಹ......

ನೆಹರು ಮತ್ತು ಬೋಸರ ಆಯ್ಕೆಯಲ್ಲಿ ಗಾಂಧಿ ತಮ್ಮ ಅಜ್ಞಾಪಾಲಕರು - ಸೌಮ್ಯ ಸ್ವಭಾವದವರು - ಸೂಕ್ಷ್ಮ ಮತಿಗಳು  ಆದ ನೆಹರು ಅವರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ......

ಒಂದಷ್ಟು ಆಕ್ರಮಣಕಾರಿಯೂ ದುಡುಕು ಸ್ವಭಾವದವರೂ ಆದ ಸುಭಾಷರು ಸಹಜವಾಗಿ ಗಾಂಧಿಯವರ ಅಸಹನೆ, ಅಸಮಾಧಾನ ಮತ್ತು ನಿರ್ಲಕ್ಷ್ಯಕ್ಕೆ ಒಳಗಾಗುತ್ತಾರೆ. ಅದು ಆ ಕ್ಷಣದ ಸರಿಯಾದ ಆಯ್ಕೆ ಇರಬಹುದು........

ಗಾಂಧಿಯವರ ಅಹಿಂಸೆಗೆ ವಿರುದ್ದವಾಗಿ " ಸ್ವಾಭಿಮಾನದ ರಕ್ಷಣೆಗಾಗಿ, ಈ ನೆಲದ ಉಳಿವಿಗಾಗಿ " ಆಕ್ರಮಣದ - ಕೆಚ್ಚೆದೆಯ ಸೈನಿಕ ಹೋರಾಟ ಮಾಡಿದವರು ನೇತಾಜಿ.......

 ಗಾಂಧಿಯಂತ ಅತ್ಯಂತ ಪ್ರಬಲ ಮತ್ತು ಆಗಿನ ಬಹುತೇಕ ಜನರ ಆರಾಧ್ಯದೈವವಾಗಿದ್ದ, ತಮ್ಮ ಚಿಂತನೆಗಳಿಂದ ಇಡೀ ದೇಶವನ್ನೇ ಆಕ್ರಮಿಸಿದ್ದ ವ್ಯಕ್ತಿಯ ಇಷ್ಟಕ್ಕೆ ವಿರುಧ್ಧವಾಗಿ ಎರಡು ಬಾರಿ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಅಧ್ಯಕ್ಷರಾದುದು ಬೋಸರ  ಅಪಾರ ಸಂಘಟನಾ ಸಾಮರ್ಥ್ಯಕ್ಕೆ ಸಾಕ್ಷಿ.......

ಗಾಂಧಿಯ ಅಹಿಂಸಾ ಹೋರಾಟವನ್ನು ಜನರೆಲ್ಲಾ ಒಪ್ಪಿದ್ದ ಸಂದರ್ಭದಲ್ಲಿ ಭಾರತ ರಾಷ್ಟ್ರೀಯ ಸೈನ್ಯವನ್ನು ( INA)   ಕಟ್ಟಿ ಬ್ರಿಟೀಷರ ವಿರುದ್ಧ ಹೋರಾಡಿ ಆರಂಭದಲ್ಲಿ ಒಂದಷ್ಟು ಯಶಸ್ಸು ಗಳಿಸಿದ್ದು ಅಮೋಘ ಸಾಧನೆ.......

ಇಲ್ಲಿ ಒಂದು ವಿಪರ್ಯಾಸವೆಂದರೆ, ಗಾಂಧಿ ತನ್ನ ನಂಬಿಕೆಗೆ ವಿರುದ್ಧವಾಗಿ ಎರಡನೇ ಮಹಾಯುದ್ಧದಲ್ಲಿ ಭಾರತೀಯ ಸೈನ್ಯವನ್ನು ಬ್ರಿಟೀಷರ ಪರವಾಗಿ ಹೋರಾಟಕ್ಕಿಳಿಸಿದ ಸಂದರ್ಭದಲ್ಲಿ, ನೇತಾಜಿಯವರು ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಮತ್ತು ಜಪಾನಿನ ಸಹಕಾರದ ನಿರೀಕ್ಷೆಯಲ್ಲಿ ಅದೇ ಬ್ರಿಟೀಷರ ವಿರುದ್ಧ ಹೊಸ ಸೈನ್ಯ ಕಟ್ಟಿ ಹೋರಾಡುತ್ತಿದ್ದರು. ಬೋಸರ ಅತ್ಯಂತ ಉತ್ಸಾಹದ ಆದರೆ ಬಹುದೊಡ್ಡ ತಪ್ಪು ನಿರ್ಧಾರ  ಇದಾಗಿತ್ತು.

ಭಾರತದ ಸ್ವಾತಂತ್ರ್ಯ ಹೋರಾಟಕ್ಕಾಗಿ ನಿಷ್ಕಲ್ಮಶ ಹೃದಯದ ನೇತಾಜಿಯವರ ಈ ನಿರ್ಧಾರ ಎಂದು ಸಮರ್ಥಿಸಬಹುದಾದರೂ, ಯಾವುದೇ ರೀತಿಯಾದರು ನಮಗೆ ಸ್ವಾತಂತ್ರ್ಯ ಲಭಿಸುವುದು ಮುಖ್ಯ ಎಂದು ಹೇಳಿಕೊಳ್ಳಬಹುದಾದರೂ, ವಿಶ್ವ ಕಂಡ ಅತ್ಯಂತ ಕ್ರೂರ ನರ ರಾಕ್ಷಸ ಹಿಟ್ಲರನ ಸಹಾಯ ಪಡೆಯಲು ಪ್ರಯತ್ನಿಸುವುದು ಅತ್ಯಂತ ಕೆಟ್ಟ ನಿರ್ಧಾರ, ಅಲ್ಲದೆ ಅಂದಿನ ಮಹಾಯುದ್ಧದ ಪ್ರಬಲ ಮಿತ್ರರಾಷ್ಟ್ರಗಳ ವಿರುದ್ಧದ ದುರ್ಬಲ ಶತ್ರು ರಾಷ್ಟ್ರಗಳ ಸೋಲು ಖಚಿತ ಎಂಬುದನ್ನು ಅರ್ಥಮಾಡಿಕೊಳ್ಳಲು ಸುಭಾಷರು ವಿಫಲರಾಗುತ್ತಾರೆ.

ಮನುಷ್ಯ ಸಹಜ ಅಹಂನಿಂದಾಗಿ ಗಾಂಧೀಜಿಯವರಿಗೆ ನೇತಾಜಿಯವರ ಬಗ್ಗೆ ಇದಕ್ಕಾಗಿ ಇನ್ನೂ  ಹೆಚ್ಚಿನ ಬೇಸರ ಕೋಪ ಉಂಟು ಮಾಡಿರಬಹುದು. ಅಲ್ಲದೆ ಇದೇ ಸಮಯದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಮಹಮದ್ ಆಲಿ ಜಿನ್ನಾ ಅವರು ತಮ್ಮ ಸಮುದಾಯಗಳ ತುಳಿತಕ್ಕೊಳಗಾದ ಜನರ ಪರವಾಗಿ ದೇಶದ ಸ್ವಾತಂತ್ರ್ಯಕ್ಕಿಂತ ಹೆಚ್ಚಾಗಿ ತೊಡಗಿಸಿಕೊಂಡಿದ್ದರಿಂದ ಈ ಬೃಹತ್ ಹೋರಾಟದ ಒತ್ತಡ ಗಾಂಧಿಯವರಲ್ಲಿ ಸುಭಾಷರ ನಡೆಗಳು ಮತ್ತಷ್ಟು ಅಸಮಾಧಾನ ಸೃಷ್ಟಿಸಿರುವ ಸಾಧ್ಯತೆ ಇದೆ.ಗಾಂಧಿ ಮತ್ತು ಭೋಸರ ನಡುವಿನ ಬಹುದೊಡ್ಡ ವ್ಯತ್ಯಾಸ.....ಗಾಂಧಿ " ಗುರಿ ಮತ್ತು ಮಾರ್ಗ ಎರಡೂ ಮುಖ್ಯ. ಉತ್ತಮ ಗುರಿ ತಲುಪಲು ಉತ್ತಮ ಮಾರ್ಗವೂ ಮುಖ್ಯ "

 ಭೋಸ್ " ಉತ್ತಮ ಗುರಿಯ ಸಾಧನೆಗಾಗಿ ಮತ್ತು ನಮ್ಮ ರಕ್ಷಣೆಗಾಗಿ ಯಾವುದೇ ಮಾರ್ಗವಾದರೂ ಸರಿ. ಗುರಿ ತಲುಪುವುದು ಮುಖ್ಯ. "

ಗಾಂಧಿಯ ಯಶಸ್ಸು ಭೋಸರ ವಿಫಲತೆ ಇಲ್ಲಿಯೇ ಅಡಗಿದೆ. ಮಾರ್ಗ ತಪ್ಪಾಗಿದ್ದರೆ ಗುರಿ ತಲುಪುವುದು ಕಷ್ಟ. ತಲುಪಿದರೂ ಅದು ತಾತ್ಕಾಲಿಕ ಮತ್ತು ದೀರ್ಘಕಾಲದಲ್ಲಿ ಅಪಾಯಕಾರಿ.

ಇತಿಹಾಸದ ಸತ್ಯಗಳು ಏನೇ ಇರಲಿ, ನೇತಾಜಿ  ನೆಲದ - ಸ್ವಾಭಿಮಾನದ ರಕ್ಷಣೆಗಾಗಿ ಹೋರಾಡುವ ವಿಶ್ವದ ಎಲ್ಲ ಸಮುದಾಯಗಳ ಸ್ಪೂರ್ತಿಯ ಸಂಕೇತ.

ಆದರೆ  ಬೋಸರ  ದುರಾದೃಷ್ಟ ಕೇವಲ ಇಷ್ಟಕ್ಕೇ ನಿಲ್ಲುವುದಿಲ್ಲ. ವಿಧಿಯೂ ಕೂಡ ಅವರ ವಿರುಧ್ಧವಾಗಿ ನಡೆದು ವಿಮಾನ ಅಪಫಾತದಲ್ಲಿ ಅಕಾಲಿಕವಾಗಿ ನಿಧನರಾಗುತ್ತಾರೆ. ನಂತರ ಅವರ ಮನಸ್ಥಿತಿಗೆ ಒಂದಷ್ಟು ಭಿನ್ನರಾಗಿದ್ದ ಜವಹರಲಾಲ್ ನೆಹರು ದೇಶದ ಚುಕ್ಕಾಣಿ ಹಿಡಿಯುತ್ತಾರೆ. ಅವರೂ ನೇತಾಜಿಯವರ ಸಾಧನೆಗಳನ್ನು ನಿರ್ಲಕ್ಷಿಸುತ್ತಾರೆ.

ಇತಿಹಾಸ ಈ ರೀತಿಯ ಅನೇಕ ಘಟನೆಗಳನ್ನು ತನ್ನ ಒಡಲಲ್ಲಿ ಅಡಗಿಸಿಕೊಂಡಿದೆ. ನೇತಾಜಿಯವರ ಸಾವಿನ ಬಗ್ಗೆ ಅನೇಕ ಬಗೆಹರಿಯದ  ಅನುಮಾನಗಳ ಹುತ್ತ ಕಟ್ಟಿಕೊಂಡಿದೆ. ಈಗಿನ ಸಂಕೀರ್ಣ ರಾಜಕೀಯ ಸಂದರ್ಭದಲ್ಲಿ ಅದಕ್ಕೆ ನಿಜವಾದ ಉತ್ತರ ಸಿಗುವುದಿಲ್ಲ. ಒಬ್ಬರಿಗೊಬ್ಬರ ಕೆಸರೆರಚಾಟದಲ್ಲಿ ಸತ್ಯ ಸಮಾಧಿಯಾಗಿದೆ. ಆದರೂ ಬದುಕಿನ ಅನುಭವದಿಂದ ಮತ್ತು ಆಗಿನ ಇತಿಹಾಸದ ಪುಟಗಳನ್ನು ಅವಲೋಕಿಸಿದಾಗ ಸಿಗುವ ಉತ್ತರ,

ಸುಭಾಷರು ಗೃಹ ಬಂಧನದಿಂದ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿ ವಿಮಾನ ಅಪಘಾತದಲ್ಲಿ ಮೃತರಾದರು ಎಂಬುದು ಬಹುತೇಕ ಸತ್ಯ.

ಇದನ್ನು ಒಪ್ಪದವರ ಅತಿದೊಡ್ಡ ಅನುಮಾನ - ಊಹೆ ನೇತಾಜಿಯವರನ್ನು ಬ್ರಿಟೀಷರೆ ಮೋಸದಿಂದ ಕೊಲೆ ಮಾಡಿರಬಹುದು ಎಂದಾಗಬಹುದು. ಇದನ್ನು ಹೊರತುಪಡಿಸಿ ಬೋಸರು ಸ್ವಾತಂತ್ರ್ಯ ನಂತರವೂ ತಲೆ ಮರೆಸಿಕೊಂಡು ಬದುಕಿದ್ದರು, ನೆಹರು ಮತ್ತು ಬ್ರಿಟೀಷರ ಭಯದಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿಲ್ಲ ಎಂಬುದು ಕಪೋಲಕಲ್ಪಿತ. ಈ ರೀತಿಯ ಅಭಿಪ್ರಾಯಗಳು ಧೀರೋದಾತ್ತ ಸಮರ ಸೇನಾನಿ ಸುಭಾಷ್ ಚಂದ್ರ ಬೋಸರಿಗೆ ನಾವು ಮಾಡುವ ಅವಮಾನವಾಗುತ್ತದೆ. ಬ್ರಿಟಿಷರ ಆಡಳಿತಕ್ಕೆ ಹೆದರದ ನೇತಾಜಿ ನೆಹರು ಅವರಿಗೆ ಹೆದರುತ್ತಾರೆ ಎಂಬುದು ಹಾಸ್ಯಾಸ್ಪದ.

ಜನಪ್ರಿಯತೆಯನ್ನು ಪಕ್ಕಕ್ಕಿಟ್ಟು ವಾಸ್ತವವಾಗಿ ಯೋಚಿಸಿದರೆ ಮೃದು ಸ್ವಭಾವದವರಿಗೆ ಗಾಂಧಿಯ ಅಹಿಂಸೆ ಆದರ್ಶವಾದರೆ , ಆಕ್ರಮಣಕಾರಿ ಮನಸ್ಥಿತಿಯವರಿಗೆ ನೇತಾಜಿಯವರು ಕೆಚ್ಚದೆಯ ಹೋರಾಟ ಮಾರ್ಗದರ್ಶನವಾಗಿದೆ. ಮಾರ್ಗ ಭಿನ್ನವಾದರೂ ರಾಷ್ಟ್ರಪ್ರೇಮ ಮಾತ್ರ ಇಬ್ಬರಲ್ಲೂ ಅನುಕರಣೀಯ..ನೇತಾಜಿ ನಿಮಗಿದೋ ಹುಟ್ಟುಹಬ್ಬದ ಶುಭಾಶಯಗಳು.................ಲೇಖನ-ವಿವೇಕಾನಂದ. ಎಚ್. ಕೆ.9844013068.......

 

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚಿತ್ರದುರ್ಗ: 25,000 ರೂ. ಲಂಚ ಪಡೆಯುತ್ತಿದ್ದ ಉಪವಿಭಾಗಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ಲೋಕಾಯುಕ್ತ ಬಲೆಗೆಪಶ್ಚಿಮಘಟ್ಟ ಸಂರಕ್ಷಣೆ: ಕಸ್ತೂರಿ ರಂಗನ್ ವರದಿ ಸ್ಯಾಟಲೈಟ್ ಮ್ಯಾಪಿಂಗ್ ಒಪ್ಪಲು ಸಾಧ್ಯವಿಲ್ಲ; ಬಿ.ಕೆ.ಹರಿಪ್ರಸಾದ್ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣ: ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶಶಾಸಕ ಎಸ್. ಸುರೇಶ್ ಕುಮಾರ್ ಅವರು "ಸಜ್ಜನ" ಎಂಬ ಮುಖವಾಡ ಧರಿಸಿದ ದುರ್ಜನಸರ್ಕಾರದ ಅನುದಾನಕ್ಕೆ ಕಾಯದೆ ಸ್ವಂತ ಖರ್ಚಿನಲ್ಲಿ ಕಾಲುವೆ ದುರಸ್ತಿಗೆ ಮುಂದಾದ ಎಚ್.ಡಿ. ರೇವಣ್ಣಹೈಕೋರ್ಟ್‌ನಿಂದ ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಹಗರಣಕ್ಕೆ ಎಸ್‌ಐಟಿ ತನಿಖೆಗೆ ಆದೇಶಆಲಮಟ್ಟಿ ಜಲಾಶಯ ಎತ್ತರ ಹೆಚ್ಚಳ: ಯುಕೆಪಿ ಹಂತ-3ರ ಭೂಸ್ವಾಧೀನ ಪ್ರಕ್ರಿಯೆಗೆ ಚುರುಕುವ್ಯಾಪಕ ಭ್ರಷ್ಟಾಚಾರ: ಕಾಮಗಾರಿಗಳ ಶ್ವೇತಪತ್ರ ಹೊರಡಿಸಲು ಆಂಜನೇಯ ಆಗ್ರಹ‘ಗೌರವಯುತ ಲಂಚ’: ಕಾಂಗ್ರೆಸ್ ಸರ್ಕಾರದ ಹೊಸ 'ಪ್ರಜಾಸೇವಾ ಶುಲ್ಕ' ಎಂದು ಆರ್. ಅಶೋಕ್ಸ್ವಪಕ್ಷೀಯರ ಆಕ್ರೋಶವೇ ಕಾಂಗ್ರೆಸ್ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ: ಆರ್. ಅಶೋಕ್ ವಾಗ್ದಾಳಿ